Site icon Vistara News

Fashion News: ರಾಕಿ ಸಾವಂತ್‌ ಜೊತೆಗೆ ಕನ್ನಡತಿ ರಶ್ಮಿ ರ‍್ಯಾಂಪ್ ವಾಕ್‌

ಕನ್ನಡತಿ ರಶ್ಮಿ ನೋರಾ ಬಾಲಿವುಡ್‌ ನಟಿ ರಾಕಿ ಸಾವಂತ್‌ ಹಾಗೂ ಆದಿಲ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಲರ್‌ಫುಲ್‌ ಲೈಮ್‌ಲೈಟ್‌ನಲ್ಲಿ ಟ್ರೆಂಡಿ ಶಿಮ್ಮರ್‌ ಡಿಸೈನರ್‌ವೇರ್‌ ಧರಿಸಿದ ಗ್ಲಾಮರ್‌ ಮಾಡೆಲ್‌ಗಳು ಒಬ್ಬೊಬ್ಬರ ಹಿಂದೆ ಒಬ್ಬೊಬ್ಬರಂತೆ ರ‍್ಯಾಂಪ್ ಮೇಲೆ ಬಳುಕತ್ತಾ ಹೆಜ್ಜೆ ಹಾಕಿದರು. ಅವಿವಾಹಿತ ಹಾಗೂ ವಿವಾಹಿತ ಮಾಡೆಲ್‌ಗಳು ಈ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು.

ಸುಮಾರು 15 ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಕನ್ನಡತಿ ಮಾಡೆಲ್‌ ರಶ್ಮಿ ನೋರಾ ಶೋ ಸ್ಟಾಪರ್‌ ಆಗಿ ಬಾಲಿವುಡ್‌ ನಟಿ ಹಾಗೂ ಹಿಂದಿ ಬಿಗ್‌ಬಾಸ್‌ ಖ್ಯಾತಿಯ ರಾಕಿ ಸಾವಂತ್‌ ಜೊತೆ ರ‍್ಯಾಂಪ್ ವಾಕ್‌ ಮಾಡಿದ್ದು ವಿಶೇಷವಾಗಿತ್ತು.

ಕ್ಯಾನ್ಸರ್‌ ಪೀಡಿತರ ಸಹಾಯಾರ್ಥ ಪುಣೆಯಲ್ಲಿ ನಡೆದ ರ‍್ಯಾಂಪ್ ಶೋನಲ್ಲಿ ರಾಷ್ಟ್ರದ ನಾನಾ ಕಡೆಯಿಂದ ಮಾಡೆಲ್ ಗಳು ಆಗಮಿಸಿದ್ದರು. ತಮ್ಮದೇ ಆದ ಟ್ರೆಂಡಿ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದರು.

ಹೆಮ್ಮೆಯ ವಿಷಯ

ಕನ್ನಡತಿ, ಮಾಡೆಲ್‌ ರಶ್ಮಿ ನೋರಾ ಮಾತನಾಡಿ “ಬಾಲಿವುಡ್‌ ನಟಿ ರಾಕಿ ಸಾವಂತ್‌ ಜೊತೆ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ್ದು ನನಗೆ ಖುಷಿ ಕೊಟ್ಟಿತು. ಅದರೊಂದಿಗೆ ಬೇರೆ ರಾಜ್ಯದಲ್ಲಿ ಫ್ಯಾಷನ್‌ ವಾಕ್‌ ಮಾಡಿರುವುದು ಅಲ್ಲಿನವರೊಂದಿಗೆ ಬೆರೆತು ಮತ್ತಷ್ಟು ಶೋ ಕುರಿತಂತೆ ತಿಳಿಯಲು ಹಾಗೂ ಕಲಿಯಲು ಸಾಧ್ಯವಾಯಿತು. ಪ್ರತಿ ಫ್ಯಾಷನ್‌ ಶೋಗೂ ತನ್ನದೇ ಆದ ನಾನಾ ಥೀಮ್‌ಗಳಿರುತ್ತವೆ. ಆ ಶೋನಲ್ಲಿ ಪಾಲ್ಗೊಳ್ಳುವಾಗ ನಾನಾ ಬಗೆಯ ವಿಷಯಗಳನ್ನು ಅರಿಯಲು ಸಹಾಯವಾಗುತ್ತದೆ. ಕನ್ನಡಿಗರು ಇತರೆ ರಾಜ್ಯದಲ್ಲಿ ನಡೆಯುವ ಶೋಗಳಲ್ಲಿ ಭಾಗವಹಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ಖುಷಿಯ ವಿಚಾರ ‘ ಎಂದು ಹೇಳಿದರು.

ಇನ್ನು ಬಾಲಿವುಡ್‌ ನಟಿ ರಾಕಿ ಸಾವಂತ್‌ ತಮ್ಮ ಸ್ನೇಹಿತ ಆದಿಲ್‌ನೊಂದಿಗೂ ಹೆಜ್ಜೆ ಹಾಕಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನಂತರ ಮಾತನಾಡಿದ ಅವರು “ಕ್ಯಾನ್ಸರ್‌ ಸಹಾಯಾರ್ಥ ಶೋವೊಂದರಲ್ಲಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿರುವುದು ಖುಷಿಯಾಗಿದೆ. ನನ್ನ ಕಡೆಯಿಂದ ಪುಟ್ಟ ಸಹಾಯಹಸ್ತ. ಅದರಲ್ಲೂ ಒಂದು ಫ್ಯಾಷನ್‌ ಶೋ ಮೂಲಕ ಕ್ಯಾನ್ಸರ್‌ ಪೀಡಿತರಿಗೆ ಸಹಾಯ ಹಸ್ತ ಚಾಚುತ್ತಿರುವುದು ಉತ್ತಮ ಕಾರ್ಯ. ಇದು ಶ್ಲಾಘನೀಯ. ಫ್ಯಾಷನ್‌ ಶೋಗಳು ಕೇವಲ ಗ್ಲಾಮರ್‌ಗೆ ಸೀಮಿತವಾಗದಿರುವುದು ಸಂತಸದ ವಿಷಯ. ಇಂತಹ ಕಾರ್ಯಕ್ರಮಗಳಿಗೆ ನನ್ನ ಸಾಥ್‌ ಸದಾ ಇದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೋ ಮೂಲಕ ನೊಂದ ಪೀಡಿತರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.

ಇದನ್ನೂ ಓದಿ| Weekend Fashion: ಔಟಿಂಗ್‌ಗೆ ಸ್ಟ್ರಾಪ್‌ ಡ್ರೆಸ್‌ ಬೆಸ್ಟ್
…………

Exit mobile version