ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬದ ಸಂಭ್ರಮಕ್ಕೆ ವೆರೈಟಿ ಕಸವು ಸೀರೆಗಳು ಎಂಟ್ರಿ ನೀಡಿದ್ದು, ಟ್ರೆಂಡಿಯಾಗಿವೆ. ಹಬ್ಬದ ಡ್ರೆಸ್‌ಕೋಡ್ ಎಂದೇ ಗುರುತಿಸಲಾಗುವ ಈ ಕಸವು ಸೀರೆಗಳು ಇದೀಗ ಕೇರಳ ಮಾತ್ರವಲ್ಲ, ಇತರೆಡೆಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಮಹಿಳೆಯರ ಮನ ಗೆದ್ದಿವೆ.
ಶ್ವೇತವರ್ಣದ ಸೀರೆಗಳಿವು
“ಕೇರಳದ ಹಬ್ಬ ಓಣಂ, ಇದೀಗ ಕೇವಲ ಕೇರಳಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರೇ ಹಬ್ಬಗಳಂತೆ ಈ ಆಚರಣೆಯನ್ನು ಸೆಲೆಬ್ರೇಟ್ ಮಾಡುವವರು ಪ್ರಪಂಚದಾದ್ಯಂತ ಹೆಚ್ಚಾಗಿದ್ದಾರೆ. ಈ ಹಬ್ಬದಂದು ಹೆಣ್ಣುಮಕ್ಕಳು ಶ್ವೇತ ವರ್ಣದ ಗೋಲ್ಡನ್ ಬಾರ್ಡರ್ ಇರುವಂತಹ ಕಸವು ಸೀರೆ ಉಟ್ಟು ಸಂಭ್ರಮಿಸುವುದು ತೀರಾ ಕಾಮನ್. ಹಬ್ಬದ ಡ್ರೆಸ್‌ಕೋಡ್‌ನಲ್ಲಿ ಸೇರಿಹೋಗಿರುವ ಈ ಸೀರೆಯು ಪ್ರತಿ ಸೀರೆ ಪ್ರಿಯ ಮಹಿಳೆಯರ ಕಲೆಕ್ಷನ್‌ನಲ್ಲಿ ಒಂದಾಗಿದೆʼʼ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ರಾಧಿಕಾ.
ಕೇರಳದ ಸೀರೆ
ಹಬ್ಬಗಳು ಬಂತೆಂದರೆ ಸಾಕು ಸೀರೆಗಳ ಖರೀದಿ ಆರಂಭವಾಗುತ್ತದೆ. ಸೀರೆ ಭಾರತದ ಸಾಂಪ್ರದಾಯಿಕ ಉಡುಗೆಯಾದರೂ ಭೌಗೋಳಿಕ, ಸಾಂಪ್ರದಾಯಿಕವಾಗಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಸೀರೆಗಳು, ಅದನ್ನು ಉಡುವ ಸ್ಟೈಲ್‌ಗಳು ಬೇರೆಯದೇ ಆಗಿರುತ್ತದೆ. ದೇವರ ನಾಡು ಎಂದು ಖ್ಯಾತಿ ಪಡೆದಿರುವ ಕೇರಳದಲ್ಲಿ ಹೆಚ್ಚು ಮಹತ್ವವಿರುವುದು ಶ್ವೇತವರ್ಣದ ಸೀರೆಗಳಿಗೆ. ಇಲ್ಲಿನ ಸಾಂಪ್ರದಾಯಿಕ ಸೀರೆ ಕೇರಳ ಕಸವು ಸೀರೆ. ಬಿಳಿ ಬಣ್ಣದ ಸೀರೆಗೆ ಗೋಲ್ಡನ್ ಕಲರ್ ಝರಿ ಇರುವ ಈ ಸೀರೆ ನೋಡಲು ಅತ್ಯಂತ ಆಕರ್ಷಕ. ರಾಯಲ್ ಲುಕ್ ನೀಡುವುದರೊಂದಿಗೆ ಎಲ್ಲೆಡೆ ನಿಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ವೈವಿಧ್ಯಮಯ ಕಸವು ಸೀರೆ
ಕಸವು ಸೀರೆಗಳಲ್ಲಿ ಹಲವಾರು ವಿಧದ ಡಿಸೈನ್‌ಗಳು ಲಭ್ಯವಿದೆ. ಗೋಲ್ಡನ್ ಕಲರ್ ಝರಿ ಮಾತ್ರವಲ್ಲದೆ ಅವುಗಳಲ್ಲಿ ಹಲವಾರು ರೀತಿಯ ಎಂಬ್ರಾಯ್ಡರಿ ಬಾರ್ಡರ್‌ನ ಸೀರೆಗಳು ಮನಮೋಹಕವಾಗಿರುತ್ತವೆ. ಕಲರ್ ಝರಿ ಪ್ರಿಂಟ್ ಸೀರೆ, ಕಸವು ಸೀರೆ ವಿತ್ ವೆನ್ನಕೃಷ್ಣನ್ ಎಂಬ್ರಾಯ್ಡರಿ, ಕೇರಳ ಸಿಂಪಲ್ ಝರಿ ಕಸವು, ಪಿಕಾಕ್ ಎಂಬ್ರಾಯ್ಡರಿ ಕಸವು, ಫ್ಯಾಬ್ರಿಕ್ ಪ್ರಿಂಟ್ ಡಿಸೈನ್ ಕಸವು, ಸಿಲ್ವರ್ ಎಂಬ್ರೋಸ್, ಕಸವು ಫುಲ್ ಟಿಶ್ಯೂ ಎಂಬೋಸಿಂಗ್, ವಲ್ಲಿಪ್ರಿಂಟ್, ಎಂಬ್ರಾಯಿಡರಿ ಫ್ಲೀಟ್ ಸೀರೆ, ಫ್ಲವರ್ ಪ್ರಿಂಟ್, ರಾಧಾ ಕೃಷ್ಣ ಪ್ರಿಂಟ್, ಸಿಲ್ವರ್ ಕಸವು ಸೀರೆಗಳು ದೊರೆಯುತ್ತವೆ.
ಕಸವು ಸೀರೆ ಪ್ರಿಯರಿಗೆ ಒಂದಿಷ್ಟು ಸಲಹೆಗಳು:
– ಸೀರೆಯ ಬಾರ್ಡರ್ ಕಲರ್‌ನ ಬ್ಲೌಸ್ ಧರಿಸಿ, ನೋಡಲು ಸುಂದರವಾಗಿ ಕಾಣುತ್ತದೆ.
– ಬಂಗಾರದ ಅಥವಾ ಗೋಲ್ಡ್ ಕಲವರಿಂಗ್ ಜ್ಯುವೆಲರಿ ಧರಿಸಿದಲ್ಲಿ ಆಕರ್ಷಕವಾಗಿ ಕಾಣುತ್ತದೆ.
– ಉಡುವ ಮುನ್ನ ಐರನಿಂಗ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)