ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಇದೀಗ ದೀಪಾವಳಿ ಹಬ್ಬದ ಶಾಪಿಂಗ್ ಮೇನಿಯಾ!
ಮುಂಬರುವ ಹಬ್ಬದ ಶಾಪಿಂಗ್ ಕ್ರೇಝ್ ಎಲ್ಲೆಡೆ ಭರ್ಜರಿಯಾಗಿಯೇ ನಡೆಯುತ್ತಿದೆ. ಪ್ರತಿಷ್ಠಿತ ಮಾಲ್‌ಗಳಲ್ಲಿ ಮಾತ್ರವಲ್ಲ, ಶಾಪಿಂಗ್ ಸ್ಟ್ರೀಟ್‌ಗಳಲ್ಲಿ ಚಿಕ್ಕ ಪುಟ್ಟ ಶಾಪ್‌ಗಳಲ್ಲೂ ಶಾಪಿಂಗ್ ಮೇನಿಯಾ ಶುರುವಾಗಿದೆ.
ಇದಕ್ಕೆ ಪೂರಕ ಎಂಬಂತೆ, ದೀಪಾವಳಿ ಸೇಲ್, ಡಿಸ್ಕೌಂಟ್ಸ್, ಎಕ್ಸ್‌ಕ್ಲೂಸಿವ್ ಆಫರ್ಸ್ ಎಲ್ಲೆಡೆ ನೀಡಲಾಗುತ್ತಿದೆ. ಕೋವಿಡ್ ನಂತರದ ದೀಪಾವಳಿಗಳಲ್ಲಿ ಈ ಬಾರಿಯ ಹಬ್ಬದ ಶಾಪಿಂಗ್‌ಗೆ ಜನರು ಸೈ ಎಂದಿದ್ದಾರೆ.
ದೀಪಾವಳಿಗೆ ಗ್ರ್ಯಾಂಡ್ ಎಥ್ನಿಕ್ ವೇರ್‌ಗಳ ಲಗ್ಗೆ
ದೀಪಾವಳಿ ಹಬ್ಬವೆಂದರೇ ಗ್ರ್ಯಾಂಡ್ ಹಬ್ಬ. ಈ ಹಬ್ಬಕ್ಕೆ ಸೂಟ್ ಆಗುವಂತಹ ಎಥ್ನಿಕ್ ಲುಕ್‌ಗೆ ಸಾಥ್ ನೀಡುವ ಹೊಸ ಟ್ರೆಂಡಿ ಡಿಸೈನ್ ಮೆನ್ ಹಾಗೂ ವುಮೆನ್ ಡಿಸೈನರ್ ವೇರ್‌ಗಳು ಕಾಲಿಟ್ಟಿವೆ. ಚಿಕ್ಕ ಮಕ್ಕಳಿಂದಿಡಿದು ಹಿರಿಯರವರೆಗೂ ನಾನಾ ಶೈಲಿಯ ವಿನ್ಯಾಸದ ಟ್ರೆಡಿಷನಲ್ ಡಿಸೈನರ್ ವೇರ್‌ಗಳು ಆಗಮಿಸಿವೆ. ಅದರಲ್ಲೂ ನಾರ್ತ್ ಇಂಡಿಯನ್ ಲುಕ್ ನೀಡುವಂತಹ ಸಲ್ವಾರ್ ಕಮೀಝ್ ಹಾಗೂ ಲೆಹೆಂಗಾಗಳು ಎಕ್ಸ್‌ಕ್ಲೂಸಿವ್ ಡಿಸೈನ್‌ನಲ್ಲಿ ಕಾಲಿಟ್ಟಿವೆ.
ಇನ್ನು ಪುರುಷರಿಗೆ ಗ್ರ್ಯಾಂಡ್ ಲುಕ್ ನೀಡುವ ಯೂನಿಸೆಕ್ಸ್ ಶೆರ್ವಾನಿ, ಕುರ್ತಾ ಕೂಡ ಬಂದಿದೆ. ಅಪ್ಪ-ಮಗನ ಟ್ವಿನ್ನಿಂಗ್ ಡಿಸೈನರ್‌ವೇರ್‌ಗಳು ಈ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡಲು ಸಜ್ಜಾಗಿವೆ.
ಜೋರಾಯ್ತು ಆಭರಣಗಳ ಖರೀದಿ
ದೀಪಾವಳಿಯ ಲಕ್ಷ್ಮಿ ಪೂಜೆಗೆ ಆಭರಣ ಖರೀದಿಸುವವರು ಹೆಚ್ಚು. ಹಾಗಾಗಿ ಎಲ್ಲಾ ಆಭರಣ ಮಳಿಗೆಗಳು ವೆರೈಟಿ ಆಭರಣಗಳನ್ನು ಬಿಡುಗಡೆ ಮಾಡಿವೆ. ಮಕ್ಕಳಿಂದಿಡಿದು ಹಿರಿಯರವರೆಗೂ ಧರಿಸಬಹುದಾದ ಮಲ್ಟಿ ಪರ್ಪಸ್ ಆಭರಣಗಳು ಇಂದು ಟ್ರೆಂಡಿಯಾಗಿವೆ. ಅಷ್ಟು ಮಾತ್ರವಲ್ಲ, ಮಾನಿನಿಯರಿಗೆಂದೇ ನಾನಾ ಡಿಸೈನ್‌ನ ಟ್ರೆಡಿಷನಲ್ ಆಭರಣಗಳು ದೀಪಾವಳಿಗೆ ಎಂಟ್ರಿ ನೀಡಿವೆ.
ಅಲ್ಲದೇ ಆಭರಣದ ಶಾಪ್‌ಗಳು ೧೦ ಗ್ರಾಂ ಬಂಗಾರ ಕೊಂಡಲ್ಲಿ ಇಷ್ಟು ಗ್ರಾಂ ಬೆಳ್ಳಿ ಉಚಿತ ಎಂದೆಲ್ಲಾ ಜಾಹೀರಾತುಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನು ಬೆಳ್ಳಿ ಪೂಜಾ ಸಾಮಗ್ರಿಗಳಿಗೂ ಬೇಡಿಕೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು. ಪೂಜಾ ಸಾಮಗ್ರಿಗಳಲ್ಲೂ ಇದೀಗ ಹೊಸ ವಿನ್ಯಾಸದವು ಬಂದಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಅಷ್ಟ ಲಕ್ಷ್ಮಿ ಮುಖವಾಡಕ್ಕೆ ಹಿಂದೆಗಿಂತಲೂ ಡಿಮ್ಯಾಂಡ್ ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲರಿ ಶಾಪ್ ಒಂದರ ಮಾಲೀಕರು.
ದೀಪಾವಳಿ ಆಫರ್‌ಗಳ ಸುರಿಮಳೆ
ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಗ್ರಾಹಕರು ಸಾಕಷ್ಟು ಆಫರ್‌ಗಳನ್ನು ಪಡೆಯಬಹುದು. ದೊಡ್ಡ ಬ್ರಾಂಡ್‌ಗಳು ನಾನಾ ರೀತಿಯ ಹೊಸ ಪ್ಲಾನ್ ಹಾಗೂ ಇಎಂಐ ಸೌಲಭ್ಯ ನೀಡುತ್ತವೆ. ಇಂತಹ ಸೌಲಭ್ಯಗಳು ಕೇವಲ ದೀಪಾವಳಿ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇದನ್ನು ಚೆಕ್ ಮಾಡಿ ಖರೀದಿ ಮಾಡಬಹುದು.
ಶಾಪಿಂಗ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
ದೀಪಾವಳಿಯಲ್ಲಿ ಎಕ್ಸ್‌ಕ್ಲೂಸಿವ್ ಗ್ರ್ಯಾಂಡ್ ಉಡುಪುಗಳು ಲಭ್ಯ.
ಆಭರಣಗಳನ್ನು ಖರೀದಿಸುವಾಗ ಮೊದಲೇ ಎಲ್ಲಾ ಡಿಟೇಲ್ಸ್ ತಿಳಿದುಕೊಳ್ಳಿ.
ಚಿಕ್ಕ-ಪುಟ್ಟ ವಸ್ತುಗಳಿಗೆ ಕ್ರೆಡಿಟ್ ಕಾರ್ಡ್ ಬಳಸಬೇಡಿ.
ಎಲ್ಲಿ ಏನು ಲಭ್ಯ ಎಂಬುದನ್ನು ಮೊದಲೇ ತಿಳಿದು ಶಾಪಿಂಗ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)