Site icon Vistara News

ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು

super foods

ಯಾರಿಗೆ ತಾನೇ ಚಿರಯವ್ವನದಿಂದ ಕಂಗೊಳಿಸಲು ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ಕೂಡಾ ವಯಸ್ಸಾದಂತೆ ತನ್ನ ಯೌವನದ ದಿನಗಳನ್ನೇ ನೆನೆಯುತ್ತಾರೆ. ಆದರೆ ಮುಪ್ಪನ್ನು ಯಾರಿಗಾದರೂ ತಪ್ಪಿಸಲು ಸಾಧ್ಯವೇ ಹೇಳಿ? ಆದರೂ, ಚರ್ಮ ಯಾವಾಗಲೂ ಫ್ರೆಶ್‌ ಆಗಿ, ಆರೋಗ್ಯಯುತವಾಗಿ, ಕಳೆಗುಂದದೆ, ನಯವಾಗಿ ಸುಕ್ಕುರಹಿತವಾಗಿರುವಂತೆ ಬಹಳ ಕಾಲ ಇರಲಿ ಎಂದು ಪ್ರತಿಯೊಬ್ಬರಿಗೂ ಅನಿಸದೆ ಇರದು. ಎಲ್ಲವೂ ಸಾಧ್ಯವಾಗದೇ ಇದ್ದರೂ, ಕೆಲವಷ್ಟನ್ನಾದರೂ ಶಿಸ್ತಿನ ಜೀವನದಿಂದ, ಆರೋಗ್ಯಯುತ ಆಹಾರದಿಂದ ಪಡೆಯಲು ಸಾಧ್ಯವಿದೆ.

ನಾವೇನು ತಿನ್ನುತ್ತೇವೋ ಅದು ನಮ್ಮ ಆರೋಗ್ಯದ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ನಮ್ಮ ಚರ್ಮ, ನಮ್ಮ ಕೂದಲು, ಎಲುಬಿನಲ್ಲಿರುವ ಶಕ್ತಿಪಚನಕ್ರಿಯೆ ಪ್ರತಿಯೊಂದೂ ಕೂಡಾ ನಾವು ಸೇವಿಸುವ ಆಹಾರವನ್ನು ಅವಲಂಬಿಸಿವೆ. ಉತ್ತಮ ಆರೋಗ್ಯಕರ ಆಹಾರ ಸೇವಿಸಿದರೆ, ಖಂಡಿತಾ ಆರೋಗ್ಯಯುತ ಜೀವನ ನಡೆಸಬಹುದು. ಹಾಗಾದರೆ, ಮುಪ್ಪಿನ ಲಕ್ಷಣಗಳು ಬೇಗನೆ ನಮ್ಮನ್ನು ಆವರಿಸಿಕೊಳ್ಳದಂತೆ ನಾವು ಯಾವೆಲ್ಲ ಆಹಾರವನ್ನು ನಮ್ಮ ನಿತ್ಯದಲ್ಲಿ ಸೇರಿಸಿಕೊಳ್ಳಬಹುದು ಎಂಬುದನ್ನು ನೋಡೋಣ ಬನ್ನಿ.

೧. ದೊಡ್ಡ ಮೆಣಸಿನಕಾಯಿ: ಹಳದಿ, ಕೆಂಪು ಹಾಗೂ ಹಸಿರು ಬಣ್ಣಗಳಲ್ಲಿ ಆಕರ್ಷಿಸುವ ದೊಡ್ಡ ಮೆಣಸಿನಕಾಯಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ ಹಾಗೂ ಕೆರಾಟಿನಾಯ್ಡ್‌ಗಳನ್ನು ಹೊಂದಿದೆ. ಕೆರಾಟಿನಾಯ್ಡ್‌ಗಳೇ ಈ ತರಕಾರಿಗೆ ಬಣ್ಣ ನೀಡುವ ವಸ್ತುವಾಗಿದ್ದು, ಇದು ವಾತಾವರಣ ನಮ್ಮ ಚರ್ಮಕ್ಕೆ ಬೀರುವ ನೇರ ಪರಿಣಾಮಗಳನ್ನು ಸಾಕಷ್ಟು ತಗ್ಗಿಸುತ್ತದೆ. ಜೊತೆಗೆ ಇದರಲ್ಲಿರುವ ವಿಟಮಿನ್‌ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

೨.ಬ್ಲೂಬೆರಿ: ಬ್ಲೂಬೆರಿಯಲ್ಲಿ ಅತ್ಯಂತ ಕಡಿಮೆ ಕ್ಯಾಲೊರಿ ಇದ್ದು ಹೇರಳವಾಗಿ ವಿಟಮಿನ್‌ ಸಿ, ಕೆ ಹಾಗೂ ಎ ಯನ್ನು ಹೊಂದಿದೆ. ಇದರಲ್ಲಿ ನಾರಿನಂಶ ಹೆಚ್ಚಿದ್ದು ಆಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ ಹತೋಟಿಯಲ್ಲಿಡಬಹುದು.

೩. ಹೂಕೋಸು: ಹೂಕೋಸಿನಲ್ಲಿ ಪ್ರೋಟೀನ್‌, ವಿಟಮಿನ್‌, ಕಬ್ಬಿಣಾಂಶ, ಆಂಟಿ ಆಕ್ಸಿಡೆಂಟ್‌ಗಳು ಹಾಗೂ ನಾರಿನಂಶ ಹೇರಳವಾಗಿರುವುದರಿಂದ ಇದರ ಬಳಕೆ ದೇಹದ ಆರೋಗ್ಯಕ್ಕೆ ಉತ್ತಮ. ಅತೀ ಕಡಿಮೆ ಕ್ಯಾಲೊರಿಯನ್ನು ಹೊಂದಿರುವ ತರಕಾರಿ ಇದಾಗಿದ್ದು ಸರಿಯಾದ ತೂಕವನ್ನು ಕಾಪಾಡಲು ಕೂಡಾ ಸಹಕಾರಿ. ಇದರಲ್ಲಿರುವ ವಿಟಮಿನ್‌ ಸಿ ಚರ್ಮಕ್ಕೆ ಕಾಂತಿಯನ್ನು ನೀಡುವ ಜೊತೆಗೆ ಸಾಕಷ್ಟು ಚರ್ಮದ ತೊಂದರೆಗಳಿಗೆ ಪರಿಹಾರ ನೋಡುತ್ತದೆ. ರಕ್ತದೊತ್ತಡವನ್ನು ಸಮತೋಲನದಲ್ಲಿಡುವುದಲ್ಲದೆ, ಎಲುಬಿನ ಶಕ್ತಿವರ್ಧಕವಾಗಿಯೂ, ಕ್ಯಾನ್ಸರ್‌ ಮತ್ತಿತರ ಮಾರಕ ರೋಗಗಳಿಂದ ದೂರವಿರಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಉತ್ತಮ.

ಇದನ್ನೂ ಓದಿ: ಆಸ್ಟ್ರೇಲಿಯಾ ಮಾಸ್ಟರ್‌ ಶೆಫ್‌ನಲ್ಲಿ ಮಿಂಚಿದ ಭೇಲ್‌ಪುರಿ!

೪. ಪಾಲಕ್/ಬಸಳೆ:‌ ಪಾಲಕ್‌/ಬಸಳೆ ಸೊಪ್ಪು ಒಂದು ಮ್ಯಾಜಿಕ್‌ ಸೊಪ್ಪು. ಅತೀ ಕಡಿಮೆ ಕ್ಯಾಲೊರಿ ಹೊಂದಿರುವ ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನೂ ಪೋಷಕಾಂಶಗಳನ್ನೂ ತನ್ನಲ್ಲಿ ಹೊಂದಿದೆ. ನಾರಿನಂಶ ಹೇರಳವಾಗಿರುವುದರಿಂದ ಪಚನಕ್ರಿಯೆಗೂ ಸಹಕಾರಿ. ಹೂಕೋಸಿನಂತೆಯೇ ಇದರಲ್ಲೂ ಅತೀ ಹೆಚ್ಚು ವಿಟಮಿನ್‌ ಸಿ ಇದ್ದು, ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

೫. ಅವಕಾಡೋ/ಬಟರ್ ಫ್ರುಟ್: ಅವಕಾಡೋ ಒಂದು ವಿಶಿಷ್ಟವಾದ ಹಣ್ಣು. ಅತ್ಯಂತ ಹೆಚ್ಚು ಕ್ಯಾಲೊರಿಯನ್ನು ಹೊಂದಿದ್ದರೂ ಇದೊಂದು ಸೂಪರ್‌ ಫುಡ್‌ ಎನ್ನಬಹುದೇನೋ. ಇದರಲ್ಲಿರುವ ಕೊಬ್ಬಿನಂಶ ದೇಹಕ್ಕೆ ಬೇಕಾದದ್ದು. ಇದು ತನ್ನಲ್ಲಿ ೨೦ ಬಗೆಯ ಪೋಷಕಾಂಶಗಳನ್ನೂ ವಿಟಮಿನ್‌ಗಳನ್ನೂ ಹೊಂದಿರುವುದರಿಂದ ಇದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿದೆ. ವಿಟಮಿನ್‌ ಕೆ, ವಿಟಮಿನ್‌ ಸಿ, ಪೊಟಾಶಿಯಂ, ಫೋಲೇಟ್‌, ವಿಟಮಿನ್‌ ಬಿ೬, ಬಿ೫, ವಿಟಮಿನ್‌ ಇಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.

ಈ ಐದು ನಿಸರ್ಗದತ್ತ ಉಡುಗೊರೆಗಳನ್ನು ದಿನನಿತ್ಯದ ಆಹಾರದಲ್ಲಿ ಬಳಕೆ ಮಾಡುತ್ತಾ ಶಿಸ್ತಿನ ಆಹಾರ ಶೈಲಿಯನ್ನು ಬೆಳೆಸಿಕೊಂಡಲ್ಲಿ, ಖಂಡಿತಾ ನೀವು ನಿಮ್ಮ ಮುಪ್ಪನ್ನು ಮುಂದೂಡಬಹುದು. ವಯಸ್ಸಾದರೂ, ಹೆಚ್ಚಿನ ಆರೋಗ್ಯ ಸಮಸ್ಯೆಗಳಿಲ್ಲದೆ, ಲವಲವಿಕೆಯಿಂದ ನೆಮ್ಮದಿಯ ಜೀವನ ನಡೆಸಬಹುದು.

ಇದನ್ನೂ ಓದಿ: best drink: ಹೊಟ್ಟೆಯ ಆಪ್ತಮಿತ್ರ ಈ ಜಲ್‌ಜೀರಾ!

Exit mobile version