Site icon Vistara News

ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ

ಭಾರತ ಎಂದರೆ ವೈವಿದ್ಯತೆ. ಅನೇಕತೆಯಲ್ಲಿ ಏಕತೆ. ವೈವಿದ್ಯತೆ ಎನ್ನುವುದು ಧರ್ಮ, ನಂಬಿಕೆ, ಉಡುಪು, ಭಾಷೆಗಷ್ಟೆ ಸೀಮಿತವಾಗಿಲ್ಲ. ಆಹಾರವು ನಮ್ಮ ಸಂಸ್ಕೃತಿಯ ಭಾಗವಾಗಿಯೇ ವೈವಿದ್ಯತೆಯನ್ನೂ ಸರಿದೂಗಿಸಿಕೊಂಡು ಬಂದಿದೆ. ದೇಶ, ಕಾಲಕ್ಕೆ ತಕ್ಕಂತೆ ಇಲ್ಲಿ ಆಹಾರ, ಆಹಾರ ಪದ್ಧತಿ ಬದಲಾಗುತ್ತಲೇ ಇದೆ. ಆದರೂ ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಬಹುತೇಕ ಮೂಲ ಸ್ವರೂಪದಲ್ಲೇ, ಹೆಸರಿನಲ್ಲೇ ಉಳಿದಿರುವ ಸಾಕಷ್ಟು ಆಹಾರಗಳಿವೆ. ಅವುಗಳಲ್ಲಿ ಪ್ರಮುಖ ಐದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಜೇನುತುಪ್ಪ

ಜೇನುತುಪ್ಪವನ್ನು ಸವಿಯುವುದು ಯಾರಿಗೆ ಇಷ್ಟವಿಲ್ಲ? ಜೇನುದುಂಬಿಗಳ ಮೂಲಕ ಸಂಪೂರ್ಣ Ready to Eat ಮಾದರಿಯಲ್ಲಿ ಪ್ರಕೃತಿ ತಯಾರಿಸಿದ ಮೊದಲ ಆಹಾರ ಜೇನುತುಪ್ಪ ! ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅಂಟು ಅಂಟಾದ ಈ ನೈಸರ್ಗಿಕ ಸಿಹಿಯನ್ನು ತಿಂದಷ್ಟು ಮತ್ತೆ ಮತ್ತೆ ಚಪ್ಪರಿಸಿ ತಿನ್ನಬೇಕು ಅನ್ನಿಸುತ್ತದೆ. ಜನರು ಎಷ್ಟು ಸಮಯದಿಂದ ಜೇನುತುಪ್ಪವನ್ನು ಬಳಸುತ್ತಿದ್ದಾರೆಂದು ವಿಜ್ಞಾನಿಗಳಿಗೆ ಖಚಿತವಾಗಿ ತಿಳಿದಿಲ್ಲ. ಸುಮಾರು 40,000 ವರ್ಷಗಳಿಂದ ಜೇನು ನೊಣಗಳು ಮತ್ತು ಜೇನುಗೂಡುಗಳನ್ನು ಚಿತ್ರಿಸುವ ಪ್ಯಾಲಿಯೊಲಿಥಿಕ್ ರಾಕ್ ರೇಖಾಚಿತ್ರಗಳಿವೆ. ಜೇನು ಕೊಯ್ಲಿನ ಪುರಾವೆಗಳು 3,500 ವರ್ಷಗಳ ಹಿಂದಿನವು ಎಂನ್ನುವುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಪಶ್ಚಿಮ ಆಫ್ರಿಕಾದಲ್ಲಿ ಜೇನುಮೇಣವನ್ನು ಸಂಗ್ರಹಿಸಲು ಬಳಸಲಾಗುವ ಕುಂಬಾರಿಕೆ ಕಂಡುಬರುತ್ತದೆ, ಜತೆಗೆ ಆಹಾರವಾಗಿ ಜೇನುತುಪ್ಪವನ್ನು ಸೇವಿಸಲಾಗುತ್ತದೆ. ಜೇನುತುಪ್ಪವನ್ನು ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ. ಜೇನುತುಪ್ಪ ಸೇವನೆಯಿಂದ ಆರೋಗ್ಯಕ್ಕೆ (benefits of honey) ಬಹಳಷ್ಟು ಪ್ರಯೋಜನವಿದೆ.

ಪಾಯಸ(ಖೀರ್‌)

ಖೀರ್ ಭಾರತೀಯ ಮನೆಗಳಲ್ಲಿ ತಯಾರಿಸಲಾಗುವ ಸಾಮಾನ್ಯ ಮತ್ತು ಸುಲಭವಾದ ಸಿಹಿತಿಂಡಿ. ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸಲ್ಪಡುತ್ತದೆ. ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಇದನ್ನು ಅಕ್ಕಿ, ಕಡಲೆಬೇಳೆ, ಹೆಸರುಬೇಳೆ, ಗಸಗಸೆ, ಶ್ಯಾವಿಗೆ, ರವೆ, ಸಬ್ಬಕ್ಕಿ, ಗೋಧಿ, ಒಣಹಣ್ಣು (ಡ್ರೈ ಫ್ರೂಟ್ಸ್) ಮುಂತಾದವುಗಳಿಂದಲೂ ತಯಾರಿಸಲಾಗುತ್ತದೆ. ಭಾರತದಲ್ಲಿ ಹಿಂದೂ ಹಬ್ಬ, ಮುಸ್ಲಿಂ, ಕ್ರಿಶ್ಚಿಯನ್ ಹಬ್ಬಗಳ ಸಮಯದಲ್ಲೂ ಇದೊಂದು ಮುಖ್ಯ ಸಿಹಿ ತಿನಿಸಾಗಿ ಪ್ರಸಿದ್ದವಾಗಿದೆ. ಇದನ್ನು ರುಚಿಗೊಳಿಸಲು ಹಾಲು, ಸಕ್ಕರೆ, ಬೆಲ್ಲ, ಬಾದಾಮಿ, ಏಲಕ್ಕಿ, ಒಣ ಶುಂಠಿ, ಒಣದ್ರಾಕ್ಷಿ, ಗೋಡಂಬಿಯನ್ನು ಬಳಸುತ್ತಾರೆ. ಅಕ್ಕಿಯನ್ನು ಕಬ್ಬು/ಸಕ್ಕರೆಯೊಂದಿಗೆ ಹಾಲಿನಲ್ಲಿ ಕುದಿಸಿ ತಯಾರಿಸಲಾಗುತ್ತದೆ, ಇದರ ಉಲ್ಲೇಖವನ್ನು ‘ಉದ್ಯೋಗ ಪರ್ವ: ಭಗವತ್ ಯಾನದಲ್ಲಿ ಕಾಣಬಹುದು. ಯುಧಿಷ್ಠಿರನಿಗೆ ಪ್ರತಿದಿನವೂ ಪಾಯಸ ಬೇಕಾಗಿತ್ತು ಎಂಬ ಉಲ್ಲೇಖವಿದೆ.

ಸಾಗ್‌

ಸಾಗ್ ಅನ್ನುವ ಚಟ್ನಿ ಪಂಜಾಬ್ ನಲ್ಲಿ ತುಂಬಾ ಫೇಮಸ್. ಪಂಜಾಬಿ ಹೋಟೆಲ್ ಗಳಿಗೆ ಹೋದರೆ ರೊಟ್ಟಿ ಜೊತೆ ಸವಿಯಲು ಈ ಚಟ್ನಿಯನ್ನು ಕೊಡುತ್ತಾರೆ. ಈ ಚಟ್ನಿಯನ್ನು ನಾವು ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಚಪಾತಿ ಜತೆ ತಿನ್ನಲೂ ರುಚಿಯಾಗಿರುತ್ತದೆ. ಸಾಗ್ ಭಾರತದ ಈಶಾನ್ಯ ಭಾಗದಲ್ಲಿ ತಯಾರಿಸಲಾದ ಎಲೆಯ ಪದಾರ್ಥ. ಹಸಿರು ಎಲೆಗಳ ತರಕಾರಿಗಳಾದ ಪಾಲಕ್‌, ಬಸೆಲ್ಲಾ, ಸಾಸಿವೆ ಎಲೆ, ಅಥವಾ ಸಾಗ್ ತಯಾರಿಕೆಯಲ್ಲಿ ಕೊಲಾರ್ಡ್ ಗ್ರೀನ್ಸ್ ಅನ್ನು ಬಳಸಲಾಗುತ್ತದೆ. ಕತ್ತರಿಸಿದ ಹಸಿರು ಎಲೆಗಳ ತರಕಾರಿಗಳನ್ನು ಕುದಿಸಿ ಮೂಲಂಗಿ, ಟೊಮೆಟೊ ಮತ್ತು ಶುಂಠಿ ಸೇರಿದಂತೆ ತರಕಾರಿಗಳು ಇರುತ್ತದೆ. ಮಹಾಭಾರತದಲ್ಲಿ ಕೃಷ್ಣ ಸಾಗ್ ಮತ್ತು ರೊಟ್ಟಿ ತಿನ್ನುವ ಸಂಗತಿ ಉಲ್ಲೇಖವಾಗಿದೆ.

ಲಡ್ಡು

ಲಡ್ಡು ಸಿಹಿ ಪದಾರ್ಥಗಳು ಎಂದರೆ ನಮಗೆಲ್ಲಾ ತುಂಬಾ ಇಷ್ಟ. ಲಾಡು ಎಂತಲೂ ಕರೆಯಲ್ಪಡುವ, ತುಪ್ಪ ಬಳಸಿ ತಯಾರು ಮಾಡಿದ ಲಡ್ಡು ಎಂದರೆ ಬಾಯಲ್ಲಿ ನೀರು ಬರುತ್ತದೆ. ಲಾಡುವಿನಲ್ಲಿ ಕಂಡು ಬರುವ ದ್ರಾಕ್ಷಿ ಮತ್ತು ಗೋಡಂಬಿಗಳು ನಮ್ಮ ಕಣ್ಣು ಕುಕ್ಕಿ ಕೈಬೀಸಿ ಕರೆಯುತ್ತವೆ. ಲಾಡೂವಿನಲ್ಲಿ ರುಚಿಕರವಾದ ಮೋತಿಚೂರ್‌ ಲಡ್ಡು ಜನಪ್ರಿಯ. ಬೂಂದಿಲಾಡನ್ನು ಉಪನಯನ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲಾಡುವಿನ ಇತಿಹಾಸ ಕ್ರಿ. ಪೂ. 300-350 ಕ್ಕೆ ಸಾಗುತ್ತದೆ. ಪ್ರಾಚೀನ ಭಾರತೀಯ ವೈದ್ಯನಾದ ಶುಶ್ರುತನು ಇದನ್ನು ಬಳಸುತ್ತಿದ್ದನೆಂದು ಹೇಳಲಾಗುತ್ತದೆ. ತನ್ನ ರೋಗಿಗಳಿಗೆ ಆಯುರ್ವೇದ ಔಷಧಿಗಳನ್ನು ನೀಡಲು ಸಿಹಿ ಲಾಡೂ ಬಳಸುತ್ತಿದ್ದ. ಔಷಧಗಳನ್ನು ನೀಡಲು ಶುಶ್ರುತನಿಗೆ ಲಾಡು ಸಹಾಯ ಮಾಡಿದರೆ, ರೋಗಿಗಳೂ ಯಾವುದೇ ಹಿಂಜರಿಕೆಯಿಲ್ಲದೆ ಔಷಧದ ಜತೆಗೆ ಲಾಡೂವನ್ನು ಗುಳುಂ ಮಾಡುತ್ತಿದ್ದರಂತೆ.

ಜಿಲೇಬಿ

ಜಿಲೇಬಿ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾದ ದೇಶಗಳಲ್ಲಿ ಜನಪ್ರಿಯವಿರುವ ಒಂದು ಸಿಹಿತಿನಿಸು. ಇದನ್ನು ಸಕ್ಕರೆ ನೀರಿನಲ್ಲಿ ಕುದಿಸಲಾಗುತ್ತದೆ. ಭಗವದ್ಗೀತೆಯಲ್ಲಿ ಈ ಆಹಾರವನ್ನು ಉಲ್ಲೇಖಿಸಲಾಗಿದೆ. ಅಕ್ಕಿ ಹಿಟ್ಟು, ಎಳ್ಳು ಬೀಜಗಳಿಂದ ಮಾಡಿದ, ಕಿವಿಯ ಆಕಾರದ ದೊಡ್ಡ ತಿನಿಸು ಎಂದು ವಿವರಿಸಲಾಗಿದೆ. ಇದನ್ನು ತುಪ್ಪದಲ್ಲಿ ಹುರಿಯಲಾಗುತ್ತದೆ. ಶಾಂತಿ ಪರ್ವದಲ್ಲಿ ಉಲ್ಲೇಖವನ್ನು ಕಂಡುಕೊಳ್ಳಬಹುದು. ಇದು ವಿಶೇಷವಾಗಿ ಇರಾನ್ ಮತ್ತು ಭಾರತೀಯ ಉಪಖಂಡದಲ್ಲಿ ಜನಪ್ರಿಯವಾಗಿದೆ. ಜಲಾಬಿ ಎಂತಲೂ ಕರೆಯಲ್ಪಡುವ ಸಿಹಿ, ಹಿಂದುಗಳಷ್ಟೆ ಅಲ್ಲದೆ ಮುಸ್ಲಿಂ ಸಮುದಾಯದಲ್ಲೂ ಪ್ರಾಮುಖ್ಯತೆ ಪಡೆದಿದೆ. ದಕ್ಷಿಣ ಏಷ್ಯಾದಲ್ಲಿ ವಿಶೇಷವಾಗಿ ರಂಜಾನ್ ಮತ್ತು ದೀಪಾವಳಿಯ ಸಂದರ್ಭಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ:  Puneeth Rajkumar: ಮೌಂಟ್ ಎವರೆಸ್ಟ್​​ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು

Exit mobile version