Site icon Vistara News

Best Food : ವಿದ್ಯಾರ್ಥಿಗಳ ಪಾಲಿನ ಫೈವ್ ಸ್ಟಾರ್ ಹೋಟೆಲ್‌ ಆದಿತ್ಯ ಟಿಫಿನ್ ಸೆಂಟರ್!; ದೋಸೆಗೆ ಕೇವಲ..

Aditya Tiffin Centre Vijayapura

ಚಿತ್ರ, ಬರಹ: ಲಕ್ಷ್ಮೀ ಬಾಗಲಕೋಟಿ

ವಿಜಯಪುರದ ಶಿವಾಜಿ ಸರ್ಕಲ್‌ (Shivaji Circle at Vijayapura) ಹತ್ತಿರ ರೋಡ್‌ ಸೈಡ್‌ ಇರುವ ಆದಿತ್ಯ ಟಿಫಿನ್ ಸೆಂಟರ್ (Aditya Tiffin Centre) ವಿದ್ಯಾರ್ಥಿಗಳ ಪಾಲಿನ ಫೈವ್ ಸ್ಟಾರ್‌ ಹೋಟೆಲ್ (Five Star Hotel)! ಯಾಕೆಂದರೆ ಅತಿ ಕಡಿಮೆ ಬೆಲೆಗೆ‌ ಸಿಗುವ ಇಲ್ಲಿನ ರುಚಿಕರವಾದ ದೋಸೆ (Best food) ಯಾವ ಪೈವ್ ಸ್ಟಾರ್ ಹೋಟೆಲ್‌ನಲ್ಲಿ ಸಿಗುವ ಗರಿಗರಿ ದೋಸೆಗೂ ಕಡಿಮೆ ಇಲ್ಲ!

ಈ ಟಿಫಿನ್‌ ಸೆಂಟರ್‌ನ ಮಾಲೀಕರು ರಾಮೇಗೌಡ ಬಲದಿನ್ನಿ (Ramegowda Baladinni). ಇವರು ವಿಜಯಪುರ ಜಿಲ್ಲೆಯ ಯಾಳವಾರ ಎಂಬ ಹಳ್ಳಿಯವರು. ಮದುವೆಗೂ ಮುಂಚೆ ಉಪ್ಪಿನ ಕಾಯಿ ಮಾರುತ್ತಿದ್ದ ರಾಮೇಗೌಡ ಅವರು ಬಸಮ್ಮ ಅವರನ್ನು ಮದುವೆಯಾದ ನಂತರ ಹೋಟೆಲ್ ಆರಂಭಿಸಿದರು. ಸಂಬಂಧಿಕರು ನಡೆಸಿಕೊಂಡು ಹೊಗುತ್ತಿದ್ದ ಈ ಹೋಟೆಲ್‌ನ್ನು ಅನಾರೋಗ್ಯದ ಕಾರಣದಿಂದ ಮುಚ್ಚುತ್ತೇನೆ ಎಂದಾಗ ಸುರೇಶ ಅವರು ಅದನ್ನೇ ಬಾಡಿಗೆಗೆ ಪಡೆದುಕೊಂಡು ನಡೆಸಿಕೊಂಡು ಹೋಗುತ್ತಿದ್ದಾರೆ.

ಸುಮಾರು 35 ವರ್ಷದ ರಾಮೇಗೌಡ ಅವರಿಗೆ ಇಬ್ಬರು ಮಕ್ಕಳು. ಇನ್ನು ಚಿಕ್ಕವರು, ಶಾಲೆಗೆ ಹೋಗುತ್ತಾರೆ. ರಾಮೇಗೌಡ ಅವರು ಓದಿದ್ದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಮುಂದೆ ವಿದ್ಯೆ ತಲೆಗೆ ಹತ್ತದ ಇರುವ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಕೈಬಿಟ್ಟರು.

ದಿನಪೂರ್ತಿ ಕೆಲಸದಲ್ಲೇ ಮುಳುಗುವ ದಂಪತಿಗೆ ಯಾವ ಸರ್ಕಾರಿ ರಜೆಯೂ ಲೆಕ್ಕಕ್ಕಿಲ್ಲ! ವಾರದ ಏಳು ದಿನಗಳೂ ದೋಸೆ ಪ್ರಿಯರಿಗಾಗಿಯೇ ಓಪನಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲಕರ. ಬೆಳಗ್ಗೆ 5 ಗಂಟೆಗೆ ಆರಂಭವಾಗುವ ಟಿಫಿನ್ ಸೆಂಟರ್ ಮಧ್ಯಾಹ್ನ ಹನ್ನೆರಡು ಗಂಟೆಯ ವರೆಗೆ ತೆರೆದಿರುತ್ತದೆ. ಬೆಳಗ್ಗೆಯಿಂದ ಮಧ್ಯಾಹ್ನ ಎರಡು ಗಂಟೆಯ ವರೆಗೂ ಕೆಲಸ ಮಾಡಿ ಮರುದಿನದ ಕಾರ್ಯಕ್ಕೆ ತಯಾರಿ ನಡೆಸುತ್ತಾರೆ.

ಕೈ ಕೈ ಸೇರಿದರೆ ಚಪ್ಪಾಳೆ ಎನ್ನುವ ನಾಣ್ಣುಡಿಯಂತೆ ದಂಪತಿ ಹೆಗಲಿಗೆ ಹೆಗಲಾಗಿ ಒಟ್ಟಾಗಿ ಹಂಚಿಕೊಂಡು ಕೆಲಸ ಮಾಡುತ್ತಾರೆ. ಇಲ್ಲಿ ಬೇರಾರೂ ಕೆಲಸದವರಿಲ್ಲ. ಎಷ್ಟೇ ಕಷ್ಟವಾದರೂ ಛಲ ಬಿಡದೆ ಕೆಲಸ ಮಾಡುವ ಗುಣ ಅವರದ್ದು. ಒಂದು ದಿನಕ್ಕೆ ಐದು ಸಾವಿರ ರೂ. ಬಂಡವಾಳ ಹಾಕಿದರೆ ಅದರಲ್ಲಿ ಖರ್ಚು ಕಳೆದು ಒಂದೊಂದು ಸಾರಿ ಒಂದು ಸಾವಿರ ಉಳಿಯುತ್ತದೆ. ಅಮಾವಾಸ್ಯೆ, ಹಬ್ಬ ಹರಿದಿನಗಳಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ.

ಬೆಳಗ್ಗೆ ದೋಸೆ ಹಾಕಲು ನಿಂತರೆ ದೋಸೆಯ ಹಿಟ್ಟು ಖಾಲಿ ಆಗುವವರೆಗೂ ಅವರ ಉತ್ಸಾಹ ಕಡಿಮೆ ಆಗುವುದಿಲ್ಲ. ಬರುವ ಗಿರಾಕಿಗಳೆಲ್ಲಾ ದೋಸೆಯನ್ನು ಕೇಳಿಕೊಂಡೇ ಬರುವವರು. ಶಿವಾಜಿ ಸರ್ಕಲ್‌ ಹತ್ತಿರವಿರುವ ಇವರ ಅಡ್ಡಾ ಎಲ್ಲರಿಗೂ ದೋಸೆಯ ಪರಿಮಳದಿಂದಲೇ ತನ್ನತ್ತ ಕರೆಸಿಕೊಳ್ಳುತ್ತದೆ. ಅದರಲ್ಲೂ ಕೆಎಎಸ್, ಐಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ ಇತ್ಯಾದಿ ಪರೀಕ್ಷೆಗೆಂದು ಓದುವ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ಅನ್ನ ನೀಡುವ ದೊರೆಯಾಗಿದ್ದಾರೆ ಈ ದಂಪತಿಗಳು. ಹೀಗಾಗಿ ದಿನ ಬೆಳಗಾದರೆ ಸಾಕು ವಿದ್ಯಾರ್ಥಿಗಳು, ಹಿರಿಯರು, ಕಿರಿಯರೆಲ್ಲರೂ ಇಲ್ಲಿ ಜಮಾಯಿಸುತ್ತಾರೆ.

ಇಷ್ಟೆಲ್ಲ ರುಚಿಕರವಾದ ದೋಸೆಗೆ ರೇಟು ಕೂಡಾ ಚೆನ್ನಾಗಿರಬಹುದು ಅಂತ ನೀವು ಯೋಚನೆ ಮಾಡಿದ್ದರೆ ಅದು ತಪ್ಪು. ಇಲ್ಲಿನ ಐಟಂಗಳ ರೇಟು ಕೇಳಿದರೆ ನೀವೇ ದಂಗಾಗುತ್ತೀರಿ! ಇಷ್ಟೇನಾ ಅಂತ ಹೇಳಿ ಅಲ್ಲಿ ತಿನ್ನೋದಲ್ಲದೆ, ಎರಡು ಪ್ಲೇಟ್‌ ಪಾರ್ಸೆಲ್‌ ಅಂತ ಹೇಳಿಬಿಡುತ್ತೀರಿ!

ಇಲ್ಲಿ ಮಸಾಲಾ ದೋಸೆ, ಸೆಟ್ ದೋಸೆ, ಸಾದಾ ದೋಸೆ, ರವಾ ದೋಸೆ‌ ಎಲ್ಲದಕ್ಕೂ ಬರೀ 10 ರೂ, ಪಡ್ಡು- 10 ರೂ, ಇಡ್ಲಿ ವಡಾ-30 ರೂ., ಚಹಾ- 5 ರೂ, ರೈಸ್‌ ಬಜ್ಜಿ -25, ಪೂರಿ-25 rU. ಹೀಗೆ ನಾನಾ ಬಗೆಯ ತಿಂಡಿಗಳನ್ನು ಕಡಿಮೆ ಬೆಲೆಗೆ ನೀಡುತ್ತಾರೆ.

ಇಲ್ಲಿ ಏನೇ ಐಟಂ ಇದ್ದರೂ ಅಲ್ಲಿಗೆ ಬರುವ ಜನರು ಮೊದಲು ಕೇಳುವುದು ಅಣ್ಣಾ ದೋಸೆ ಕೊಡಿ ಎಂದೆ. ಅದರಲ್ಲೂ ದೋಸೆ ತಿಂದವರೆಲ್ಲ ಅಣ್ಣಾ ದೋಸೆ ಸಖತ್ತಾಗಿದೆ ಎಂದು ಹಾಡಿ ಹೊಗಳುವರೇ! ಇನ್ನು ಕೆಲವು ಅಪರಿಚಿತರು ಅತ್ಯಂತ ದುಬಾರಿ ಯುಗದಲ್ಲಿ ಇಷ್ಟು ಕಡಿಮೆಗೆ ವ್ಯಾಪಾರ ಮಾಡಿದರೆ ನಿಮಗೆ ಲಾಭ ಆಗುತ್ತಾ ಎಂದು ನೇರವಾಗಿಯೇ ಕೇಳುತ್ತಾರೆ. ಲಾಭ ಜಾಸ್ತಿ ಆಗದೆ ಇದ್ದರು ಹಸಿದವರ ಹೊಟ್ಟೆ ತುಂಬಿದೆ ಎನ್ನುವ ಸಂತೋಷವೇ ಸಾಕು ಎನ್ನುತ್ತಾರೆ ರಾಮೇಗೌಡ ದಂಪತಿ.

ಇಲ್ಲಿಗೆ ಬಂದು ದೋಸೆ ತಿಂದ ಮೇಲೆ ಮೋಸ, ಸುಳ್ಳು, ಸುಲಿಗೆ, ಕೆಟ್ಟವರೆ ತುಂಬಿರುವ ಈ ಕಾಲದಲ್ಲಿ ಒಳ್ಳೆಯವರು ಇದ್ದಾರೆ ಎನ್ನುವ ವಾಸ್ತವ ಅರ್ಥವಾಗುತ್ತದೆ, ಮನಸಿಗೆ ನೆಮ್ಮದಿ ನೀಡುತ್ತದೆ. ಜತೆಗೆ ಆಡಂಬರದ ಬದುಕಿಗಿಂತ ನೆಮ್ಮದಿಯ ಬದುಕು ನಮ್ಮದು, ಅಷ್ಟು ಸಾಕು ಎಂಬ ದಂಪತಿ ಮಾತು ಕೇಳಿದರೆ ಹೊಟ್ಟೆ ತುಂಬಿ ಬರುತ್ತದೆ.

ಅದಕ್ಕಿಂತಲೂ ಒಂದು ದೊಡ್ಡ ಮಾತು ಹೇಳುತ್ತಾರೆ ಬಸಮ್ಮ ರಾಮೇಗೌಡ ಬಲದಿನ್ನಿ: ಈ ಹೋಟೆಲ್ ಮೂಲಕವೇ ನಮ್ಮ ಜೀವನ ಸಾಗುತ್ತಿದೆ. ಜನರು ನಾವು ಮಾಡುವ ದೋಸೆ ಇಷ್ಟಪಟ್ಟು ತೃಪ್ತಿಯಿಂದ ತಿಂದು ಥ್ಯಾಂಕ್ಸ್‌ ಹೇಳಿ ಹೊಗುತ್ತಾರೆ. ಅವರ ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ ಅಷ್ಟೇ ಸಾಕು.

Exit mobile version