Site icon Vistara News

Chilli story | ಸ್ವರ್ಗಕ್ಕೆ ಕಿಚ್ಚು ಹಚ್ಚುವ ಮೆಣಸಿನ ಕಾಯಿಯ ಪುರಾಣ

chilli

ಬಂದಿರುವುದು ಚಳಿಗಾಲ. ಬಿಸಿ ಕಾಫಿ, ಖಾರ ತಿನಿಸುಗಳು ಮತ್ತು ಬೆಚ್ಚಗಿನ ವಸ್ತುಗಳು ಈ ದಿನಗಳಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ನಾಲಿಗೆಯಲ್ಲಿ ನೀರೂರಿಸುವ ಬಿಸಿ ಬಜ್ಜಿ-ಬೋಂಡಾಗಳು ಚಳಿ-ಮಳೆಯಲ್ಲಿ ಹೆಚ್ಚಿನ ಆಸಕ್ತರನ್ನು ಸೆಳೆಯುತ್ತವೆ. ನಮ್ಮಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ದೇಶಗಳ ಸೂಪಶಾಸ್ತ್ರಗಳಲ್ಲಿ ಒಂದಿಲ್ಲೊಂದು ರೀತಿಯ ಮಸಾಲೆಗಳು ಮತ್ತು ಖಾರ ಬಳಸುವ ಪದ್ಧತಿಯಿದೆ. ಕೆಲವೊಮ್ಮೆಯಂತೂ ಖಾರವಿಲ್ಲದ ಕ್ಯಾಪ್ಸಿಕಂ ಜಾತಿಯ ಮೆಣಸುಗಳನ್ನೇ ಒಂದು ಅಡುಗೆಯಾಗಿ ಅಟ್ಟುವ ಪದ್ಧತಿಯೂ ಕೆಲವು ಪಾಕವಿಧಾನಗಳಲ್ಲಿ ಇದೆ. ಹಾಗಾದರೆ ನಾಲಿಗೆಯಲ್ಲಿ ನೀರೂರಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಈ ಮೆಣಸಿನ ಪೂರ್ವಾಪರದ ಬಗ್ಗೆ ಒಂದಿಷ್ಟು ಜಿಜ್ಞಾಸೆ ಮಾಡಬಹುದಲ್ಲ.

ಮೆಣಸಿನ ಕಾಯಿಯ ಮೂಲ ದಕ್ಷಿಣ ಅಮೇರಿಕಾ ಖಂಡ. ಸುಮಾರು ೬,೦೦೦ ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕಾ ಮತ್ತು ಮೆಕ್ಸಿಕೊ ಭಾಗಗಳಲ್ಲಿ ಇದನ್ನು ಬಳಕೆಗಾಗಿ ಬೆಳೆಯುತ್ತಿದ್ದ ಪುರಾವೆಗಳಿವೆಯಂತೆ. ಕ್ರಿ.ಶ. ೧೪೯೨ರ ಸುಮಾರಿಗೆ ಕ್ರಿಸ್ಟೋಫರ್‌ ಕೊಲಂಬಸ್‌ ಜೊತೆಗೆ ಮೆಣಸಿನ ಕಾಯಿಗಳೂ ಪ್ರಪಂಚ ಪರ್ಯಟನೆಗೆ ಹೊರಟವು ಎಂಬ ವಾದವಿದೆ. ಹಾಗೆ ತಿರುಗಾಟಕ್ಕೆ ಹೊರಟ ಪ್ರಾಚೀನ ಜಾತಿಯ ಮೆಣಸಿನ ಕಾಯಿಗಳ ಬದಲು ಈಗ ಸಾಕಷ್ಟು ಜಾತಿ-ಉಪಜಾತಿಗಳು ವಿಶ್ವದೆಲ್ಲೆಡೆಯಲ್ಲಿ ಲಭ್ಯವಿವೆ. ವಾಸ್ಕೊ-ಡ-ಗಾಮಾನ ಜೊತೆಗೆ ಇವು ಭಾರತಕ್ಕೆ ಕಾಲಿರಿಸಿದವು. ಅದಕ್ಕೂ ಮುನ್ನ ಭಾರತದಲ್ಲಿ ದೇಶೀಯವಾಗಿ ಬೆಳೆಯುತ್ತಿದ್ದುದು ಕಾಳುಮೆಣಸುಗಳು ಮಾತ್ರ.

ಒಂದು ಅಂದಾಜಿನ ಪ್ರಕಾರ, ೩೦ ಲಕ್ಷ ಟನ್‌ ಮೆಣಸಿಕ ಬೆಳೆ ಜಾಗತಿಕ ಮಾರುಕಟ್ಟೆಗೆ ಬರುತ್ತಿದ್ದು, ಸುಮಾರು ೪೦೦ ಕೋಟಿ ಅಮೆರಿಕನ್‌ ಡಾಲರ್‌ನ ವಹಿವಾಟು ಈ ಪುಟ್ಟ ಕಾಯಿಗಳಿಗಿದೆ. ಇದರಲ್ಲಿ ಶೇ. ೨೫ರಷ್ಟು ಬೆಳೆ ಮಾರುಕಟ್ಟೆಗೆ ಬರುವುದು ಭಾರತದಿಂದ. ಮೆಣಸಿನ ಕಾಯಿಯ ಘಾಟು ಅತಿಹೆಚ್ಚು ಬರುವುದು ಆಂಧ್ರಪ್ರದೇಶದಲ್ಲಿ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.

ಕಿಚ್ಚು ಹಚ್ಚುವುದೇಕೆ?: ಮೆಣಸಿನ ಕಾಯಿಗಳಲ್ಲಿರುವ ಕ್ಯಾಪ್ಸೈಸಿನ್‌ ಎಂಬ ರಾಸಾಯನಿಕ ಇದಕ್ಕೆಲ್ಲಾ ಕಾರಣ. ನಮ್ಮ ನಾಲಿಗೆಯಲ್ಲಿರುವ TRPV1 ಎಂಬ ಗ್ರಾಹಕಗಳನ್ನು ಈ ರಾಸಾಯನಿಕ ಚೋದಿಸುತ್ತದೆ. ಈ ಗ್ರಾಹಕಗಳ ಪ್ರಧಾನ ಕೆಲಸ ನಮಗೆ ಬಿಸಿಯ ಅನುಭವವನ್ನು ತಿಳಿಸುವುದು. ಅಂದರೆ ಬಾಯಿ ಸುಡುವುದರಿಂದ ನಮ್ಮನ್ನು ಎಚ್ಚರಿಸುವುದು ಇವುಗಳ ಕೆಲಸ. ಆದರೆ ಬಿಸಿಯಲ್ಲದೆಯೇ, ಖಾರದ ರುಚಿಯೂ ಈ ಗ್ರಾಹಕಗಳನ್ನು ಚೋದಿಸುತ್ತವೆ. ಹಾಗಾಗಿ ಬಿಸಿಯಾಗಿ ಬಾಯಿ ಸುಟ್ಟರೂ ಅಥವಾ ಖಾರವಾದರೂ ಅಂತಿಮವಾಗಿ ಬರುವುದು ಉರಿಯ ಸಂವೇದನೆ. ಹಾಗೊಮ್ಮೆ ಮೆಣಸು ತಿಂದಾಗ ನಾಲಿಗೆಗೆ ಬರುವ ಉರಿಯ ಸಂವೇದನೆ ಹೋಗಲಾಡಿಸಲು ನೀರು ಪ್ರಯೋಜನವಿಲ್ಲ. ಸಿಹಿಯ ರುಚಿ ಸ್ವಲ್ಪ ಪ್ರಯೋಜನವಾಗುತ್ತದೆ. ಆದರೆ ಹಾಲು ಅಥವಾ ಮೊಸರು ಖಾತ್ರಿಯಾಗಿ ಬಾಯಿಯಲ್ಲಿರುವ ಮೆಣಸಿನ ಉರಿ ಶಮನ ಮಾಡುತ್ತವೆ.

ಹಾಗೆಂದು ಎಲ್ಲಾ ಖಾರವೂ ಒಂದೇ ಅಲ್ಲ. ಬಿಸಿಯನ್ನು ಅಳೆಯುವುದಕ್ಕೆ ಮಾಪಕ ಇರುವಂತೆಯೇ ಖಾರವನ್ನು ಅಳೆಯುವುದಕ್ಕೂ ಮಾಪಕವಿದೆ. ೧೯೧೨ರಲ್ಲಿ ವಿಲ್ಬರ್‌ ಸ್ಕೊವಿಲ್ಲೆ ಎಂಬ ಔಷಧಶಾಸ್ತ್ರಜ್ಞ ಮೆಣಸಿನ ಕಾಯಿಗಳ ಖಾರಕ್ಕೆಂದೇ ಮಾಪಕವೊಂದನ್ನು ಅಭಿವೃದ್ಧಿ ಪಡಿಸಿದ. ಅದನ್ನು ಸ್ಕೊವಿಲ್ಲೆ ಹೀಟ್‌ ಸ್ಕೇಲ್‌ ಎನ್ನಲಾಗುತ್ತದೆ. ಖಾರವೇ ಇಲ್ಲದ ದಪ್ಪ ಮೆಣಸಿನ ಕಾಯಿ ಈ ಮಾಪಕದಲ್ಲಿ ೦ಯಲ್ಲಿದ್ದರೆ, ಪಿಜ್ಝಾಗಳಲ್ಲಿ ಉಪಯೋಗಿಸುವ ಹಾಲಪೆನೊ ಪೆಪ್ಪರ್‌ಗಳು ೨.೫ ಸಾವಿರದಿಂದ ೧೦ ಸಾವಿರವರೆಗೂ ಇರಬಹುದು. ನಮ್ಮ ಭಾರತೀಯ ಮೆಣಸುಗಳು ಬಹುತೇಕ ೫೦ ಸಾವಿರದ ಮೇಲೆಯೇ ಪ್ರಾರಂಭವಾಗುತ್ತವೆ ಈ ಮಾಪಕದಲ್ಲಿ! ಅದರಲ್ಲೂ ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ‌ʻಭೂತ್ ಜಲೋಕಿಯʼ ಎಂಬ ಕಿಚ್ಚು ಖಾರದ ಮೆಣಸು ವಿಶ್ವದಲ್ಲೇ ಭಯಂಕರ ಖಾರದ್ದು ಎಂದು ೨೦೦೭ರಲ್ಲಿ ಗಿನ್ನೆಸ್‌ ಪುಸ್ತಕ ಸೇರಿದೆಯಂತೆ. ಇವುಗಳಿಗೆ ಸ್ಕೊವಿಲ್ಲೆ ಮಾಪಕದಲ್ಲಿ ಜಾಗ ಇದೆಯೋ ಇಲ್ಲವೋ!

ಇದನ್ನೂ ಓದಿ | Kiwi benefits | ಕಿವಿ ಹಣ್ಣುಗಳ ಬಗ್ಗೆ ಕೆಲವು ಕಿವಿಮಾತು

ಮನುಷ್ಯರು ಮಾತ್ರವಲ್ಲ: ಈ ಪರಿ ಖಾರ ತಿನ್ನುವ ಪ್ರಾಣಿಯೆಂದರೆ ಮಾನವ ಮಾತ್ರವೇ ಇರಬಹುದು. ಹಾಗೆಂದು ಮೆಣಸಿನ ಕಾಯಿ ತಿನ್ನುವ ಬೇರೆ ಪ್ರಾಣಿಗಳೂ ಇವೆ. ಆದರೆ ಅವುಗಳಿಗೆಲ್ಲಾ ಇದೇ ರೀತಿಯಲ್ಲಿ ಖಾರದ, ಉರಿ ಹತ್ತುವ ಸಂವೇದನೆ ಆಗುತ್ತದೆಯೇ ಎಂಬುದು ಪ್ರಶ್ನೆ. ಇಲಿ, ಅಳಿಲುಗಳಂಥ ಕೆಲವು ಸಣ್ಣ ಸಸ್ತನಿಗಳಲ್ಲಿ ಖಾರ ಗ್ರಹಿಸುವ ಸಾಮರ್ಥ್ಯವಿದೆ. ಹಾಗಾಗಿ ಅವು ಖಾರದ ಮೆಣಸುಗಳನ್ನು ತಿನ್ನುವುದಿಲ್ಲ. ಕೆಲವು ಹಕ್ಕಿಗಳು ಪ್ರೀತಿಯಿಂದಲೇ ಮೆಣಸು ತಿನ್ನುತ್ತವೆ. ಆದರೆ ಇವುಗಳಿಗೆ ಖಾರದ ಸಂವೇದನೆ ಆಗುವುದಿಲ್ಲ. ಅವು ಸಸ್ತನಿಗಳಂತೆ ಬೀಜಗಳನ್ನು ಅಗಿಯದೆಯೇ ನುಂಗಿ, ದೂರದೂರದವರೆಗೆ ಬೀಜಪ್ರಸಾರ ಮಾಡಲು ನೆರವಾಗುತ್ತವೆ.

ಆರೋಗ್ಯದ ಮೇಲೆ: ಇದರ ಪರಿಣಾಮವಿದೆ. ಆಹಾರದ ಬಣ್ಣ, ರುಚಿ ಮತ್ತು ಘಮ ಹೆಚ್ಚಿಸುವುದು ಇವುಗಳ ಪ್ರಧಾನ ಕೆಲಸ. ಆದರೆ ಕೆಲವು ಹುಚ್ಚು ಖಾರದ ಮೆಣಸುಗಳು ಹೊಟ್ಟೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಪೈಲ್ಸ್‌ ಅಥವಾ ಹೆಮರಾಯ್ಡ್ಸ್‌ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗೆಂದು ಕಡಿಮೆ ಖಾರದ ಮೆಣಸುಗಳನ್ನು ಒಂದು ಹದದಲ್ಲಿ ಬಳಸಿದರೆ ಜೀರ್ಣಾಂಗವನ್ನು ಚುರುಕುಗೊಳಿಸಬಹುದು. ತೂಕ ಇಳಿಕೆಗೆ ಮತ್ತು ಹೃದಯದ ಆರೋಗ್ಯಕ್ಕೆ ಪೂರಕವಾಗಬಹುದು. ಕೆಲವು ರೀತಿಯ ನೋವುಗಳ ಶಮನಕ್ಕೆ ಮೆಣಸನ್ನು ಔಷಧಿಯಾಗಿಯೂ ಬಳಸಲಾಗುತ್ತದೆ. ಚೋದ್ಯವೆಂದರೆ, ಮೆಣಸಿನಕಾಯಿ ಅಡುಗೆಯಲ್ಲಿ ಬಳಸುವುದು ಗೊತ್ತಿರುವಂಥದ್ದೇ. ಆದರೆ ಮೆಣಸಿನ ಫ್ಲೇವರ್‌ ಐಸ್‌ಕ್ರೀಂ ಸಹ ಲಭ್ಯವಿದೆ ಎಂದರೆ ಭಾರತೀಯರಿಗೆ ಮೆಣಸಿನ ಘಮ ಮತ್ತು ರುಚಿ ಎಷ್ಟು ಪ್ರಿಯ ಎಂಬುದು ತಿಳಿಯಬಹುದು.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

Exit mobile version