Site icon Vistara News

Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು!

coconuts

ಭಾರತದಲ್ಲಿ ಏನೇ ಶುಭ ಕಾರ್ಯಗಳಿದರೂ ಅಲ್ಲಿ ತೆಂಗಿನಕಾಯಿಗೆ (Coconuts) ವಿಶೇಷ ಪ್ರಾಧಾನ್ಯತೆ. ಅದಕ್ಕೇ ತೆಂಗಿನಕಾಯಿಯನ್ನು ದೇವರ ಹಣ್ಣೆಂದು ಪರಿಗಣಿಸಲಾಗುತ್ತದೆ. ಕಲ್ಪವೃಕ್ಷ ನೀಡಿದ ಫಲವಿದು. ಸಮೃದ್ಧಿಯ ಸಂಕೇತ ಈ ತೆಂಗಿನಕಾಯಿ. ಸಂಪ್ರದಾಯ, ಆಚರಣೆಗಳಿಗೆ ತೆಂಗಿನಕಾಯಿಯ ಮಹತ್ವ ಇದ್ದಷ್ಟೇ ಇದರಿಂದ ಆರೋಗ್ಯಕ್ಕೂ, ಆಹಾರವಾಗಿಯೂ (health tips) ಅಷ್ಟೇ ಮಹತ್ವವಿದೆ. ಇದು ರುಚಿಯಷ್ಟೇ ಅಲ್ಲ, ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ಒಂದು ಸಂಪೂರ್ಣ ಆಹಾರ.

ಆಗಾಗ ಹಬ್ಬ ಹರಿದಿನ, ಅಥವಾ ದೇವಸ್ಥಾನದ ಹಣ್ಣುಕಾಯಿ, ಪೂಜೆ ಪುನಸ್ಕಾರ ಎಂಬ ನಾನಾ ಕಾರಣಗಳಿಂದ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ರಾಶಿ ಒಡೆದ ತೆಂಗಿನಕಾಯಿಗಳು ಶೇಖರಣೆಯಾಗಿ ಬಿಡುತ್ತದೆ. ಬಹಳಷ್ಟು ದಿನ ಇಟ್ಟರೆ ಹಾಳಾಗುತ್ತದೆ ಎಂದೋ, ಇಷ್ಟು ಪೋಷಕಾಂಶಗಳಿರುವ ತೆಂಗಿನಕಾಯಿಯನ್ನು ವ್ಯರ್ಥವಾಗಿ ಹಾಳು ಮಾಡಲು ಬಿಡಲು ಮನಸ್ಸಾಗದೆ, ಕೆಲವೊಮ್ಮೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಅಕ್ಕಪಕ್ಕದ ಮನೆಯವರಿಗೆ ಕೊಟ್ಟೂ ಮನೆಯಲ್ಲಿ ಮಿಕ್ಕಿ, ಫ್ರಿಡ್ಜ್‌ನಲ್ಲೂ ಜಾಗ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಬರುತ್ತವೆ. ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ (food tips) ಉಪಯೋಗಕರವಾಗಿ ಬಳಸಬಹುದು (Coconut Use) ಎಂಬುದನ್ನು ನೋಡೋಣ, ಬನ್ನಿ.

1. ತೆಂಗಿನಕಾಯಿ ಚಟ್ನಿ: ದಕ್ಷಿಣ ಭಾರತೀಯರು ನಾವು. ಚಟ್ನಿಯಿಲ್ಲದೆ, ದೋಸೆಯೋ, ಇಡ್ಲಿಯೋ, ಊಟವೋ ಆದರೂ ಮುಂದುವರಿಯೋದು ಕಷ್ಟ. ಹಾಗಾಗಿ, ತೆಂಗಿನಕಾಯಿ ಇದ್ದರೆ ಚಟ್ನಿ ಮಾಡು ಎಂದು ಸಲಹೆ ನೀಡುವುದು ಖಂಡಿತವಾಗಿಯೂ ಹಾಸ್ಯಾಸ್ಪದವೇ. ಆದರೆ, ತೆಂಗಿನಕಾಯಿ ಹೆಚ್ಚಿದ್ದಾಗ ಚಟ್ನಿ ಮಾಡದೆ ಇರುವುದನ್ನೂ ತಪ್ಪಿಸಲಾರಿರಿ. ಕೊಬ್ಬರಿಯಾಗಿದ್ದರೆ, ಅಂದರೆ ಒಣಗಿದ್ದರೆ, ಅದರ ತುರಿಯನ್ನು ಹುರಿದು ಚಟ್ನಿ ಪುಡಿ ಮಾಡಿ ಬಹಳ ದಿನಗಳ ಕಾಲ ಕೆಡದೆ ಇಟ್ಟುಕೊಂಡು ನಿತ್ಯವೂ ಬಳಸುತ್ತಿರಬಹುದು.

2. ಕೋಕೋನಟ್‌ ರೈಸ್‌ (ತೆಂಗಿನಕಾಯಿ ಅನ್ನ): ತೆಂಗಿನಕಾಯಿಯನ್ನು ತುರಿದು ಅದಕ್ಕೆ, ಕೊತ್ತಂಬರಿ, ಜೀರಿಗೆ, ಕರಿಬೇವು ಹಾಗೂ ಗೋಡಂಬಿ ಹಾಕಿ ಒಗ್ಗರಣೆ ಹಾಕಿ, ಅನ್ನದ ಜೊತೆಗೆ ಮಿಕ್ಸ್‌ ಮಾಡಿ ಕೋಕನೆಟ್‌ ರೈಸ್‌ ಮಾಡಿಯೂ ಬೆಳಗಿನ ಉಪಹಾರಕ್ಕೋ, ಮಧ್ಯಾಹ್ನದೂಟಕ್ಕೂ ಮಾಡಿ ತಿನ್ನಬಹುದು. ತೆಂಗಿನೆಣ್ನೆಯ ಒಗ್ಗರಣೆ ಇದಕ್ಕೆ ಇನ್ನೂ ರುಚಿ.

3. ತೆಂಗಿನಕಾಯಿ ಹಾಲು: ತೆಂಗಿನಕಾಯಿಯಿಂದ ಹಾಲು ತೆಗೆದಿಡಿ. ಈ ಹಾಲನ್ನು ಹಲವು ಅಡುಗೆಗಳಿಗೆ ಬಳಸಬಹುದು. ಸೂಪ್‌, ಕರಿಗಳು, ಸಿಹಿತಿನಿಸುಗಳು, ಡೈರಿ ಫ್ರೀ ವೇಗನ್‌ ತಿನಿಸುಗಳು, ಸ್ಮೂದಿಗಳು, ಪಾಯಸ ಇತ್ಯಾದಿಗಳನ್ನು ಮಾಡಲು ಬಳಸಬಹುದು.

4. ತೆಂಗಿನಕಾಯಿ ಸಿಹಿತಿನಿಸುಗಳು: ತೆಂಗಿನಕಾಯಿ ಬರ್ಫಿ, ಮೋದಕ, ಖೀರು, ಲಡ್ಡು ಸೇರಿದಂತೆ ನಾನಾ ಬಗೆಯ ಸಿಹಿತಿನಿಸುಘಲನ್ನೂ ತೆಂಗಿನಕಾಯಿಯಿಂದ ಮಾಡಬಹುದು.

5. ತೆಂಗಿನಕಾಯಿ ಸಾಂಬಾರು/ಕರಿ: ತೆಂಗಿನಕಾಯಿ ಹಾಕಿ ಸಾಂಬಾರು ಪುರಿಯ ಜೊತೆ ಸೇರಿಸಿ ರುಬ್ಬಿ ಮಾಡಿದ ಸಾಂಬಾರು, ಕರಿಯನ್ನೂ ಮಾಡಬಹುದು. ಮಲೆನಾಡು, ಕರಾವಳಿ ಶೈಲಿಯ ಈ ಅಡುಗೆ ರುಚಿಯಲ್ಲಿ ಬಹಳ ಮುಂದು.

6. ಬೇಕ್‌ ಮಾಡಿ: ನೀವು ಬೇಕಿಂಗ್‌ ಪ್ರಿಯರಾಗಿದ್ದರೆ ತೆಂಗಿನಕಾಯಿ ಮಫಿನ್‌ಗಳು, ಕೇಕ್‌ಗಳು, ಕುಕ್ಕೀಸ್‌ಗಳು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

ಅಂದಹಾಗೆ, ತೆಂಗಿನಕಾಯಿಯಿಂದ ತೂಕ ಹೆಚ್ಚಾಗುತ್ತದೆ ಎಂದುಕೊಂಡು ಅದನ್ನು ದೂರವಿಟ್ಟಿದ್ದೀರಾ? ಹಾಗಾದರೆ ಒಮ್ಮೆ ನೀವು ಯೋಚಿಸಬೇಕು. 2006 ಜೂನ್‌ನಲ್ಲಿ ಸಿಲೋನ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ತೆಂಗಿನಕಾಯಿಯಲ್ಲಿರುವ ಕೊಬ್ಬಿನ ಅಂಶ ದೇಹ ಸೇರಿ ಅಲ್ಲಿ ಕೊಬ್ಬಾಗಿಯೇ ಶೇಖರಣೆಯಾಗುವುದಿಲ್ಲವಂತೆ. ಬದಲಾಗಿ, ಇದು ಹಸಿವನ್ನು ನಿಯಂತ್ರಿಸಿ ಆಗಾಗ ಏನಾದರೂ ತಿನ್ನಬೇಕು ಎಂಬ ಮನೋಕಾಮನೆಯನ್ನು ನಿಯಂತ್ರಿಸುತ್ತದಂತೆ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಇರುವುದು ಹೌದಾದರೂ ಇದು ಎಚ್‌ಡಿಎಲ್‌ ಕೊಲೆಸ್ಟೆರಾಲ್‌ ಅಂದರೆ ಒಳ್ಳೆಯ ಕೊಬ್ಬಿಗೆ ಪ್ರೋತ್ಸಾಹ ನೀಡುತ್ತದೆ. ಆದರೆ, ಅತಿಯಾಗಿ ತೆಂಗಿನಕಾಯಿ ಸೇವನೆಯೂ ಒಳ್ಳೆಯದಲ್ಲ, ನಿಜ. ತೆಂಗಿನಕಾಯಿ ತತ್‌ಕ್ಷಣದ ಶಕ್ತಿವರ್ಧಕವೂ ಹೌದು. ಇದು ದೇಹದಲ್ಲಿ ಕೂಡಲೇ ಖನಿಜಗಳು ಹಾಗೂ ಪೋಷಕಾಂಶಗಳನ್ನು ನೀಡಿ ಶಕ್ತಿ ನೀಡುತ್ತದೆ. ಆಯುರ್ವೇದದ ಪ್ರಕಾರ ತೆಂಗಿನಕಾಯಿ ಒತ್ತಡ ನಿವಾರಕ. ಜೀರ್ಣಕ್ರಿಯೆಗೆ ಸಹಾಯಕ. ಅಷ್ಟೇ ಅಲ್ಲ, ದೇಹದ ಒಟ್ಟೂ ಆರೋಗ್ಯಕ್ಕೆ ಪೂರಕವಾದ ಆಹಾರ. ಹಾಗಾಗಿ ತೆಂಗಿನಕಾಯಿ ಬಳಸದೆ ವ್ಯರ್ಥಮಾಡಿ ಎಸೆಯದಿರಿ. ಆರೋಗ್ಯಕರವಾಗಿ ಬಳಸಿ.

ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

Exit mobile version