ಆಹಾರ/ಅಡುಗೆ
Coconut Use: ಪೂಜೆ, ಹಬ್ಬ ಹರಿದಿನಗಳಲ್ಲಿ ಸಿಕ್ಕ ರಾಶಿ ತೆಂಗಿನಕಾಯಿಯನ್ನು ಹೀಗೆಲ್ಲಾ ಬಳಸಬಹುದು!
ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ ಉಪಯೋಗಕರವಾಗಿ ಬಳಸಬಹುದು ಎಂಬುದನ್ನು ನೋಡೋಣ, ಬನ್ನಿ.
ಭಾರತದಲ್ಲಿ ಏನೇ ಶುಭ ಕಾರ್ಯಗಳಿದರೂ ಅಲ್ಲಿ ತೆಂಗಿನಕಾಯಿಗೆ (Coconuts) ವಿಶೇಷ ಪ್ರಾಧಾನ್ಯತೆ. ಅದಕ್ಕೇ ತೆಂಗಿನಕಾಯಿಯನ್ನು ದೇವರ ಹಣ್ಣೆಂದು ಪರಿಗಣಿಸಲಾಗುತ್ತದೆ. ಕಲ್ಪವೃಕ್ಷ ನೀಡಿದ ಫಲವಿದು. ಸಮೃದ್ಧಿಯ ಸಂಕೇತ ಈ ತೆಂಗಿನಕಾಯಿ. ಸಂಪ್ರದಾಯ, ಆಚರಣೆಗಳಿಗೆ ತೆಂಗಿನಕಾಯಿಯ ಮಹತ್ವ ಇದ್ದಷ್ಟೇ ಇದರಿಂದ ಆರೋಗ್ಯಕ್ಕೂ, ಆಹಾರವಾಗಿಯೂ (health tips) ಅಷ್ಟೇ ಮಹತ್ವವಿದೆ. ಇದು ರುಚಿಯಷ್ಟೇ ಅಲ್ಲ, ಪೋಷಕಾಂಶಗಳಿಂದಲೂ ಸಮೃದ್ಧವಾಗಿರುವ ಒಂದು ಸಂಪೂರ್ಣ ಆಹಾರ.
ಆಗಾಗ ಹಬ್ಬ ಹರಿದಿನ, ಅಥವಾ ದೇವಸ್ಥಾನದ ಹಣ್ಣುಕಾಯಿ, ಪೂಜೆ ಪುನಸ್ಕಾರ ಎಂಬ ನಾನಾ ಕಾರಣಗಳಿಂದ ನಮ್ಮ ಮನೆಗಳಲ್ಲಿ ಕೆಲವೊಮ್ಮೆ ರಾಶಿ ಒಡೆದ ತೆಂಗಿನಕಾಯಿಗಳು ಶೇಖರಣೆಯಾಗಿ ಬಿಡುತ್ತದೆ. ಬಹಳಷ್ಟು ದಿನ ಇಟ್ಟರೆ ಹಾಳಾಗುತ್ತದೆ ಎಂದೋ, ಇಷ್ಟು ಪೋಷಕಾಂಶಗಳಿರುವ ತೆಂಗಿನಕಾಯಿಯನ್ನು ವ್ಯರ್ಥವಾಗಿ ಹಾಳು ಮಾಡಲು ಬಿಡಲು ಮನಸ್ಸಾಗದೆ, ಕೆಲವೊಮ್ಮೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಅಕ್ಕಪಕ್ಕದ ಮನೆಯವರಿಗೆ ಕೊಟ್ಟೂ ಮನೆಯಲ್ಲಿ ಮಿಕ್ಕಿ, ಫ್ರಿಡ್ಜ್‌ನಲ್ಲೂ ಜಾಗ ಇಲ್ಲ ಎಂಬ ಪರಿಸ್ಥಿತಿ ಕೆಲವೊಮ್ಮೆ ಬರುತ್ತವೆ. ಈಗ ಸಾಲು ಸಾಲು ಹಬ್ಬಗಳು ರೆಡಿಯಾಗಿರುವಾಗ ಮುಂಚೆಯೇ, ಈಗೆ ಶೇಖರಣೆಯಾಗುವ ತೆಂಗಿನಕಾಯಿಯನ್ನು ಹೇಗೆ (food tips) ಉಪಯೋಗಕರವಾಗಿ ಬಳಸಬಹುದು (Coconut Use) ಎಂಬುದನ್ನು ನೋಡೋಣ, ಬನ್ನಿ.
1. ತೆಂಗಿನಕಾಯಿ ಚಟ್ನಿ: ದಕ್ಷಿಣ ಭಾರತೀಯರು ನಾವು. ಚಟ್ನಿಯಿಲ್ಲದೆ, ದೋಸೆಯೋ, ಇಡ್ಲಿಯೋ, ಊಟವೋ ಆದರೂ ಮುಂದುವರಿಯೋದು ಕಷ್ಟ. ಹಾಗಾಗಿ, ತೆಂಗಿನಕಾಯಿ ಇದ್ದರೆ ಚಟ್ನಿ ಮಾಡು ಎಂದು ಸಲಹೆ ನೀಡುವುದು ಖಂಡಿತವಾಗಿಯೂ ಹಾಸ್ಯಾಸ್ಪದವೇ. ಆದರೆ, ತೆಂಗಿನಕಾಯಿ ಹೆಚ್ಚಿದ್ದಾಗ ಚಟ್ನಿ ಮಾಡದೆ ಇರುವುದನ್ನೂ ತಪ್ಪಿಸಲಾರಿರಿ. ಕೊಬ್ಬರಿಯಾಗಿದ್ದರೆ, ಅಂದರೆ ಒಣಗಿದ್ದರೆ, ಅದರ ತುರಿಯನ್ನು ಹುರಿದು ಚಟ್ನಿ ಪುಡಿ ಮಾಡಿ ಬಹಳ ದಿನಗಳ ಕಾಲ ಕೆಡದೆ ಇಟ್ಟುಕೊಂಡು ನಿತ್ಯವೂ ಬಳಸುತ್ತಿರಬಹುದು.
2. ಕೋಕೋನಟ್ ರೈಸ್ (ತೆಂಗಿನಕಾಯಿ ಅನ್ನ): ತೆಂಗಿನಕಾಯಿಯನ್ನು ತುರಿದು ಅದಕ್ಕೆ, ಕೊತ್ತಂಬರಿ, ಜೀರಿಗೆ, ಕರಿಬೇವು ಹಾಗೂ ಗೋಡಂಬಿ ಹಾಕಿ ಒಗ್ಗರಣೆ ಹಾಕಿ, ಅನ್ನದ ಜೊತೆಗೆ ಮಿಕ್ಸ್ ಮಾಡಿ ಕೋಕನೆಟ್ ರೈಸ್ ಮಾಡಿಯೂ ಬೆಳಗಿನ ಉಪಹಾರಕ್ಕೋ, ಮಧ್ಯಾಹ್ನದೂಟಕ್ಕೂ ಮಾಡಿ ತಿನ್ನಬಹುದು. ತೆಂಗಿನೆಣ್ನೆಯ ಒಗ್ಗರಣೆ ಇದಕ್ಕೆ ಇನ್ನೂ ರುಚಿ.
3. ತೆಂಗಿನಕಾಯಿ ಹಾಲು: ತೆಂಗಿನಕಾಯಿಯಿಂದ ಹಾಲು ತೆಗೆದಿಡಿ. ಈ ಹಾಲನ್ನು ಹಲವು ಅಡುಗೆಗಳಿಗೆ ಬಳಸಬಹುದು. ಸೂಪ್, ಕರಿಗಳು, ಸಿಹಿತಿನಿಸುಗಳು, ಡೈರಿ ಫ್ರೀ ವೇಗನ್ ತಿನಿಸುಗಳು, ಸ್ಮೂದಿಗಳು, ಪಾಯಸ ಇತ್ಯಾದಿಗಳನ್ನು ಮಾಡಲು ಬಳಸಬಹುದು.
4. ತೆಂಗಿನಕಾಯಿ ಸಿಹಿತಿನಿಸುಗಳು: ತೆಂಗಿನಕಾಯಿ ಬರ್ಫಿ, ಮೋದಕ, ಖೀರು, ಲಡ್ಡು ಸೇರಿದಂತೆ ನಾನಾ ಬಗೆಯ ಸಿಹಿತಿನಿಸುಘಲನ್ನೂ ತೆಂಗಿನಕಾಯಿಯಿಂದ ಮಾಡಬಹುದು.
5. ತೆಂಗಿನಕಾಯಿ ಸಾಂಬಾರು/ಕರಿ: ತೆಂಗಿನಕಾಯಿ ಹಾಕಿ ಸಾಂಬಾರು ಪುರಿಯ ಜೊತೆ ಸೇರಿಸಿ ರುಬ್ಬಿ ಮಾಡಿದ ಸಾಂಬಾರು, ಕರಿಯನ್ನೂ ಮಾಡಬಹುದು. ಮಲೆನಾಡು, ಕರಾವಳಿ ಶೈಲಿಯ ಈ ಅಡುಗೆ ರುಚಿಯಲ್ಲಿ ಬಹಳ ಮುಂದು.
6. ಬೇಕ್ ಮಾಡಿ: ನೀವು ಬೇಕಿಂಗ್ ಪ್ರಿಯರಾಗಿದ್ದರೆ ತೆಂಗಿನಕಾಯಿ ಮಫಿನ್‌ಗಳು, ಕೇಕ್‌ಗಳು, ಕುಕ್ಕೀಸ್‌ಗಳು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.
ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್ ಇಡ್ಲಿ ಮಾಡಲು ಪಂಚಸೂತ್ರಗಳು!
ಅಂದಹಾಗೆ, ತೆಂಗಿನಕಾಯಿಯಿಂದ ತೂಕ ಹೆಚ್ಚಾಗುತ್ತದೆ ಎಂದುಕೊಂಡು ಅದನ್ನು ದೂರವಿಟ್ಟಿದ್ದೀರಾ? ಹಾಗಾದರೆ ಒಮ್ಮೆ ನೀವು ಯೋಚಿಸಬೇಕು. 2006 ಜೂನ್‌ನಲ್ಲಿ ಸಿಲೋನ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ತೆಂಗಿನಕಾಯಿಯಲ್ಲಿರುವ ಕೊಬ್ಬಿನ ಅಂಶ ದೇಹ ಸೇರಿ ಅಲ್ಲಿ ಕೊಬ್ಬಾಗಿಯೇ ಶೇಖರಣೆಯಾಗುವುದಿಲ್ಲವಂತೆ. ಬದಲಾಗಿ, ಇದು ಹಸಿವನ್ನು ನಿಯಂತ್ರಿಸಿ ಆಗಾಗ ಏನಾದರೂ ತಿನ್ನಬೇಕು ಎಂಬ ಮನೋಕಾಮನೆಯನ್ನು ನಿಯಂತ್ರಿಸುತ್ತದಂತೆ. ತೆಂಗಿನಕಾಯಿಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುವುದು ಹೌದಾದರೂ ಇದು ಎಚ್‌ಡಿಎಲ್ ಕೊಲೆಸ್ಟೆರಾಲ್ ಅಂದರೆ ಒಳ್ಳೆಯ ಕೊಬ್ಬಿಗೆ ಪ್ರೋತ್ಸಾಹ ನೀಡುತ್ತದೆ. ಆದರೆ, ಅತಿಯಾಗಿ ತೆಂಗಿನಕಾಯಿ ಸೇವನೆಯೂ ಒಳ್ಳೆಯದಲ್ಲ, ನಿಜ. ತೆಂಗಿನಕಾಯಿ ತತ್‌ಕ್ಷಣದ ಶಕ್ತಿವರ್ಧಕವೂ ಹೌದು. ಇದು ದೇಹದಲ್ಲಿ ಕೂಡಲೇ ಖನಿಜಗಳು ಹಾಗೂ ಪೋಷಕಾಂಶಗಳನ್ನು ನೀಡಿ ಶಕ್ತಿ ನೀಡುತ್ತದೆ. ಆಯುರ್ವೇದದ ಪ್ರಕಾರ ತೆಂಗಿನಕಾಯಿ ಒತ್ತಡ ನಿವಾರಕ. ಜೀರ್ಣಕ್ರಿಯೆಗೆ ಸಹಾಯಕ. ಅಷ್ಟೇ ಅಲ್ಲ, ದೇಹದ ಒಟ್ಟೂ ಆರೋಗ್ಯಕ್ಕೆ ಪೂರಕವಾದ ಆಹಾರ. ಹಾಗಾಗಿ ತೆಂಗಿನಕಾಯಿ ಬಳಸದೆ ವ್ಯರ್ಥಮಾಡಿ ಎಸೆಯದಿರಿ. ಆರೋಗ್ಯಕರವಾಗಿ ಬಳಸಿ.
ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?
ಆರೋಗ್ಯ
Pav Bhaji Recipe: ಆರೋಗ್ಯಕರ ರೀತಿಯಲ್ಲೇ ಪಾವ್ ಬಾಜಿಯನ್ನೂ ಮಾಡಿ ತಿನ್ನಬಹುದು ಗೊತ್ತೇ? ಇಲ್ಲಿವೆ ಟಿಪ್ಸ್!
ನಮ್ಮಿಷ್ಟದ ತಿನಿಸು ಪಾವ್ ಬಾಜಿಯನ್ನು ಆಗಾಗ ಗಿಲ್ಟ್ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಲು ಮನೆಯಲ್ಲೇ ಅದನ್ನು ಮಾಡಿಕೊಳ್ಳುವ (pav bhaji recipe) ರೀತಿ ಇಲ್ಲಿದೆ.
ಪಾವ್‌ಬಾಜಿ (pav bhaji) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಸರು ಕೇಳಿದೊಡನೆಯೇ ಬಾಯಲ್ಲಿ ನೀರೂರುತ್ತದೆ ಎಂಬುದು ನಿಜವೇ. ಕರಗಿ ನೀರಾಗುವ ಬೆಣ್ಣೆಯಲ್ಲಿ ಬಿಸಿ ಬಿಸಿ ಪಾವ್ ಜೊತೆಗೆ ಬಾಜಿಯನ್ನು ಸವಿಯುವ ಸುಖ ಯಾಕೆ ಬೇಡವೆನ್ನಲಿ ಎಂದು ಯಾರೇ ಆದರೂ ಹೇಳಿಯಾರು. ಯಾಕೆಂದರೆ, ಪಾವ್‌ಬಾಜಿ ಭಾರತದ ಅತ್ಯಂತ ಪ್ರಸಿದ್ಧ ಸ್ಟ್ರೀಟ್‌ಫುಡ್‌ಗಳಲ್ಲಿ ಒಂದು. ಆದರೆ, ಆರೋಗ್ಯದ ವಿಚಾರದಲ್ಲಿ ಮಾತ್ರ ಇದು ಯಾವಾಗಲೂ ಹಿಂದೆಯೇ. ಸುರಿಸುರಿದು ಹಾಕುವ ಬೆಣ್ಣೆ, ಮೈದಾದಿಂದ ಮಾಡಿದ ಪಾವ್‌ನಲ್ಲಿ ಹೊಟ್ಟೆ ತುಂಬಿಸಿಕೊಂಡ ಮೇಲೆ, ʻಅಯ್ಯೋ, ಆರೋಗ್ಯದ ಕಾಳಜಿಯನ್ನು ನನಗೇಕೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಹಾರದ ಮೇಲೆ ನನಗೇಕೆ ನಿಗಾ ಇಡಲು ಸಾಧ್ಯವಾಗುತ್ತಿಲ್ಲ, ತೂಕ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆಯಲ್ಲಾʼ ಎಂಬ ಗಿಲ್ಟ್ ಅನುಭವಿಸುವ ಪ್ರಸಂಗವೂ ಬರುತ್ತದೆ. ಇಂತಹ ನಮ್ಮಿಷ್ಟದ ತಿನಿಸು ಪಾವ್ ಬಾಜಿಯನ್ನು ಆಗಾಗ ಗಿಲ್ಟ್ ರಹಿತವಾಗಿ ಆರೋಗ್ಯಕರ ರೀತಿಯಲ್ಲೇ ತಿನ್ನುತ್ತಾ, ಆರೋಗ್ಯದ ಕಾಳಜಿಯ ಜೊತೆಗೂ ರಾಜಿ ಮಾಡಿಕೊಳ್ಳದೆ ಖುಷಿಯಾಗಿರಬಹುದು (pav bhaji recipe) ಎಂಬುದನ್ನು ನೋಡೋಣ ಬನ್ನಿ.
1. ಪಾವ್ ಬಾಜಿಯನ್ನು ಮನೆಯಲ್ಲೇ ಮಾಡಿ. ಇದನ್ನು ಮನೆಯಲ್ಲಿ ಮಾಡುವುದರಿಂದ ರುಚಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗ ಬರಲಾರದು. ಯಾಕೆಂದರೆ, ಅಂತಹ ಇದನ್ನು ಮಾಡುವುದು ಕಠಿಣವೇನಲ್ಲ. ಹೀಗೆ ಮನೆಯಲ್ಲೇ ಪಾವ್‌ಬಾಜಿಯನ್ನು ಮಾಡುವ ಸಂದರ್ಭ ಪಾವ್‌ಗೆ ಮಾತ್ರ ಸುರಿಸುರಿದು ಬೆಣ್ಣೆ ಹಾಕಬೇಡಿ. ಕೊಂಚ ಬೆಣ್ಣೆ ಹಾಕಿ. ಯಾಕೆಂದರೆ ಇದರಲ್ಲಿ ರಾಶಿಗಟ್ಟಲೆ ಸುರಿಯುವ ಬೆಣ್ಣೆಯಲ್ಲಿಯೇ ಅತ್ಯಂತ ಹೆಚ್ಚು ಕ್ಯಾಲರಿ ಹಾಗೂ ಕೊಬ್ಬು ನಿಮ್ಮ ಹೊಟ್ಟೆ ಸೇರಿ ತೂಕ ಹೆಚ್ಚಳವಾಗಲು ಕಾಣಿಕೆ ನೀಡುತ್ತದೆ. ಹಾಗಾಗಿ, ಮುಂದಿನ ಬಾರಿ ಪಾವ್‌ಬಾಜಿ ಮಾಡುವಾಗ ಬೆಣ್ಣೆಯ ಮೇಲೆ ನಿಯಂತ್ರಣ ಇರಲಿ.
2. ಬಾಜಿ ಮಾಡುವ ಸಂದರ್ಭ ಎಷ್ಟು ಸಾಧ್ಯವೋ ಅಷ್ಟು ತರಕಾರಿಗಳನ್ನು ಹಾಕಿ. ಇದು ತರಕಾರಿಗಳಿಂದ ಸಮೃದ್ಧವಾಗಿರಲಿ. ಬಗೆಬಗೆಯ ತರಕಾರಿಗಳು ಬಾಜಿಯ ರುಚಿ ಹೆಚ್ಚಿಸುತ್ತದೆ. ಕ್ಯಾರೆಟ್, ಬೀನ್ಸ್, ಬಟಾಣಿ, ಕ್ಯಾಪ್ಸಿಕಂ ಎಲ್ಲವೂ ಸಾಕಷ್ಟು ಪೋಷಕಾಂಶಗಳನ್ನು ಹೊತ್ತಿವೆ. ಕಡಿಮೆ ಆಲೂಗಡ್ಡೆ ಬಳಸಿ. ಆಲೂಗಡ್ಡೆಯ ಬದಲಾಗಿ ಸಿಹಿಗೆಣಸು ಇತ್ಯಾದಿಗಳನ್ನೂ ಟ್ರೈ ಮಾಡಬಹುದು.
3. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪಾವ್ ಮೈದಾದಲ್ಲಿ ಮಾಡಲ್ಪಟ್ಟಿರುತ್ತದೆ. ಮೈದಾದಿಂದ ಆರೋಗ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ, ಬದಲಾಗಿ ಹಾನಿಯೇ ಹೆಚ್ಚಿದೆ ಎಂಬುದನ್ನು ಪದೇ ಪದೇ ವಿವರಿಸಿ ಹೇಳಬೇಕಾಗಿಲ್ಲ. ಹೀಗಾಗಿ. ಸಾಮಾನ್ಯ ಜಾಗಗಳಿಂದ ಪಾವ್ ತರುವ ಬದಲು, ಆದಷ್ಟೂ ಗೋಧಿಯಿಂದ ಮಾಡಿದ ಪಾವ್ ಸಿಕ್ಕರೆ ಅವನ್ನು ಕೊಂಡು ತನ್ನಿ. ಆ ಮೂಲಕ ಕಿಂಚಿತ್ ನಿಮ್ಮ ಗಿಲ್ಟ್ ಅನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.
4. ಅತಿಯಾದ ಉಪ್ಪು ಸೇರಿಸಬೇಡಿ. ಉಪ್ಪು ರುಚಿಗೆ ತಕ್ಕಷ್ಟು ಹಿತಮಿತವಾಗಿರಲಿ. ಹೆಚ್ಚು ಉಪ್ಪು ಒಳ್ಳೆಯದಲ್ಲ ಎಂಬುದೂ ನಿಮಗೆ ತಿಳಿದಿದೆ. ಹೀಗಾಗಿ, ಬೇಕಾದರೆ, ಆಮೇಲೆ ಉಪ್ಪು ಸೇರಿಸುವ ಅವಕಾಶ ಇದ್ದೇ ಇದೆ ಎಂಬ ಸತ್ಯವನ್ನು ನಂಬಿ. ನಿಂಬೆಹಣ್ಣು, ಹಸಿ ಈರುಳ್ಳಿ ಇವೆಲ್ಲ ಜೊತೆಗಿರುವಾಗ ಉಪ್ಪೂ ಕೂಡಾ ಹೆಚ್ಚು ಬೇಕಾಗುವುದಿಲ್ಲ.
5. ಪಾವ್‌ಬಾಜಿಯ ಜೊತೆಗೆ ಸಲಾಡ್ ಕೂಡಾ ಇಟ್ಟಿರಿ. ಅಂದರೆ, ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಸೌತೆಕಾಯಿ ಇತ್ಯಾದಿಗಳು ಜೊತೆಗೆ ಇಟ್ಟುಕೊಂಡಾಗ, ಅವುಗಳ ಮೂಲಕ ಆರೋಗ್ಯಕರ ಆಹಾರವೂ ಹೊಟ್ಟೆ ಸೇರುತ್ತದೆ. ಜೊತೆಗೆ ಸಲಾಡ್ ತಿನ್ನುವುದರಿಂದ ಹೊಟ್ಟೆ ಬೇಗ ತುಂಬಿದಂತಾಗಿ, ಹೆಚ್ಚು ಪಾವ್ ಹಾಕಿಸಿಕೊಳ್ಳುವುದೂ ತಪ್ಪುತ್ತದೆ. ಹೊಟ್ಟೆಯೂ ತುಂಬುತ್ತದೆ. ಹಾಗಾಗಿ, ಕೇವಲ ಪಾವ್ ತಿಂದು ಹೊಟ್ಟೆ ತುಂಬಿಸಿಕೊಂಡೆ ಎಂಬ ಗಿಲ್ಟ್ ಕೂಡಾ ದೂರಾಗುತ್ತದೆ.
ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?
ಆಹಾರ/ಅಡುಗೆ
Food Habits: ಈ ಖ್ಯಾತ ಬಿಲಿಯನೇರ್‌ಗಳು ಹೊಟ್ಟೆಗೇನು ತಿನ್ನುತ್ತಾರೆ ಗೊತ್ತೇ?
ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!
ಬಿಲಿಯನೇರ್ (billionaire) ವಾರನ್ ಬಫೆಟ್ (warren buffet) ಅವರ ಜೀವನ ಸಾಧನೆ ಅನೇಕರಿಗೆ ಸ್ಪೂರ್ತಿದಾಯಕ ಕಥೆಯಾಗಿರಬಹುದು. ಇಲಾನ್ ಮಸ್ಕ್ (Elon Musk) ಅವರ ಐಷಾರಾಮಿ ಜೀವನಶೈಲಿ ನೋಡಿ ನೀವು ಹುಬ್ಬೇರಿಸಬಹುದು. ಬಿಲ್ ಗೇಟ್ಸ್ (Bill gates) ಎಂಬ ಹೆಸರು ಕೇಳಿದೊಡನೆ ರೋಮಾಂಚನವಾಗಬಹುದು. ಆದರೆ ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!
ಹೌದು. 93ರ ಹರೆಯದ ವಾರೆನ್ ಬಫೆಟ್ ಏನೆಲ್ಲ ತಿನ್ನುತ್ತಾರೆ ಎಂದು ನೀವು ತಿಳಿದರೆ ಹೌಹಾರುತ್ತೀರಿ. ಅದೂ ಈ ಇಳಿ ವಯಸ್ಸಿನಲ್ಲಿ! 2015ರಲ್ಲಿ ಫಾರ್ಚೂನ್ ಪ್ರಕಟಿಸಿದ ವಿಶೇಷ ವರದಿ, ವಾರನ್ ಬಫೆಟ್ ಅವರ ಆಹಾರ ಶೈಲಿಯ ಬಗೆಗೂ ಬೆಳಕು ಚೆಲ್ಲಿತ್ತು. ಅದರ ಪ್ರಕಾರ, ಬಫೆಟ್ ಅವರು ಪ್ರತಿ ನಿತ್ಯ ಐದು ಕ್ಯಾನ್ ಕೋಕ್ ಕುಡಿಯುತ್ತಾರಂತೆ! ಬಫೆಟ್ ಅವರು ಅತ್ಯಂತ ಖುಷಿಯ, ತನ್ನಿಚ್ಛೆಯ ಆಹಾರವನ್ನು ತಿನ್ನಲು ಇಷ್ಟಪಡುವವರಾಗಿದ್ದು, ಬದುಕಿದರೆ, ಬೇಕಾದಂತೆ ತಿಂದುಂಡು ಸಂತೋಷವಾಗಿ ಜೀವಿಸಬೇಕು ಎಂದವರು ಅಭಿಪ್ರಾಯಿಸಿದ್ದರು.
ಅದರ ಪ್ರಕಾರ, ಅವರು ದಿನಕ್ಕೆ ಐದು ಕ್ಯಾನ್ ಕೋಕ್ ಕುಡಿದರೆ, ವಾರದಲ್ಲಿ ಎರಡು ಬಾರಿ ಚಿಕನ್ ನಗ್ಗೆಟ್ಸ್ ತಿನ್ನುತ್ತಿದ್ದರಂತೆ. ಅಷ್ಟೇ ಅಲ್ಲ. ನಿತ್ಯವೂ ಊಟದ ನಂತರ ಐಸ್ ಕ್ರೀಂ ತಿನ್ನುವುದೂ ಕೂಡಾ ಅವರಿಗೆ ಬಲು ಪ್ರಿಯವಾದ ಅಭ್ಯಾಸವಂತೆ. ಹಗಲು ಹೊತ್ತಿನಲ್ಲಿ ಮೂರು ಕ್ಯಾನ್ ಕೋಕ್ ಕುಡಿದು ಮುಗಿಸಿದರೆ, ರಾತ್ರಿ ಎರಡು ಕ್ಯಾನ್ ಕೋಕ್ ಖಾಲಿ ಮಾಡುತ್ತಾರಂತೆ.
ನನ್ನ ದೇಹದ ಕಾಲು ಭಾಗ ಕೋಕಾಕೋಲಾದಿಂದ ಆವೃತವಾಗಿದೆ ಎಂದವರು ತನ್ನನ್ನೇ ತಾನು ತಮಾಷೆ ಮಾಡಿಕೊಂಡಿದ್ದರು. ಅವರ ಪ್ರತಿನಿತ್ಯದ ಕ್ಯಾಲರಿ ಶೇಕಡಾ 25 ಭಾಗ ಕೋಕ್ ಆವರಿಸಿದೆಯಂತೆ. ಕೋಕ್ ಇಲ್ಲದೆ ಅವರ ಜೀವನವೇ ಇಲ್ಲ ಎಂಬಷ್ಟು ಕೋಕ್ ದಾಸನಾಗಿದ್ದಾರಂತೆ ಬಫೆಟ್. ಅಷ್ಟರಮಟ್ಟಿಗೆ ಇವರು ಕೋಕಾಕೋಲಾ ಕಂಪನಿಯಲ್ಲಿ ತಾನು ಹೊಂದಿರುವ ಶೇಕಡಾ ಒಂಭತ್ತರಷ್ಟು ಶೇರುಗಳಿಗೆ ನ್ಯಾಯವನ್ನೂ ಸಲ್ಲಿಸುತ್ತಾರೆ!
ಕೇವಲ ಕೋಕ್ ಅಷ್ಟೇ ಅಲ್ಲ. ಸಾಕಷ್ಟು ಉಪ್ಪಿನಂಶವಿರುವ ಆಲೂಗಡ್ಡೆಯ ಸ್ಟಿಕ್‌ನಂತಹ ಕುರುಕಲು ಎಂದರೂ ಇವರಿಗೆ ಪಂಚಪ್ರಾಣವಂತೆ.
ಕಳೆದ ಎಪ್ರಿಲ್‌ನಲ್ಲಿ ಸಂದರ್ಶನವೊಂದರಲ್ಲೂ ಅವರು ಹೇಳಿದ್ದು ಇದನ್ನೇ. ʻನನ್ನ ಬಳಿ ಯಾರಾದರೂ ಬಂದು, ನೀವು ಬ್ರೊಕೋಲಿ ಹಾಗೂ ಇತರ ಆರೋಗ್ಯಕರ ಕೆಲವು ಆಹಾರಗಳನ್ನು ಶಿಸ್ತಾಗಿ ತಿನ್ನುತ್ತಿದ್ದರೆ ನೀವು ಹೆಚ್ಚು ಕಾಲ ಬದುಕಬಲ್ಲಿರಿ ಎಂದರೆ ನಾನು ಅವರಲ್ಲಿ, ನನ್ನ ಕೊನೆಯ ಆ ಹೆಚ್ಚುವರಿ ವರ್ಷಗಳನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ, ಆದರೆ, ನನ್ನಿಷ್ಟದ ತಿನಿಸುಗಳನ್ನು ನನಗೆ ತಿನ್ನಲು ಬಿಡಿ ಎಂದುಬಿಡುವೆʼ ಎಂದಿದ್ದರು.
ʻನಾನು ಆರು ವರ್ಷದವನಿದ್ದಾಗಲೇ, ನನಗೆ ಇಷ್ಟ ಬಂದ ಎಲ್ಲವನ್ನೂ ತಿನ್ನುತ್ತಿದ್ದೆ. ತಿನ್ನುವ ಈ ಕೆಲಸ ನನ್ನನ್ನು ಖುಷಿಪಡಿಸುತ್ತಿತ್ತು. ನನ್ನ ಪ್ರಕಾರ, ಜೀವನದಲ್ಲಿ ಸಂತೋಷವೆಂಬುದು ಬಹಳ ಮುಖ್ಯ. ದೀರ್ಘಾಯುಸ್ಸಿಗೆ ಈ ಸಂತೋಷವೂ ಬಹಳ ಮುಖ್ಯವಾಗುತ್ತದೆ. ಫಡ್ಜ್ ಸಂಡೇಸ್ ತಿನ್ನುವುದರಿಂದಲೋ, ಕೋಕ್ ಕುಡಿಯುವುದರಿಂದಲೋ ನನಗೆ ಆ ಸಂತೋಷ ಸಿಗುತ್ತದೆʼ ಎಂದವರು ತನ್ನ ಆಹಾರಶೈಲಿಯನ್ನು ಸಮರ್ಥಿಸಿಕೊಂಡಿದ್ದರು.
ಪ್ರಪಂಚದಲ್ಲಿ ಕೇವಲ ಬಫೆಟ್ ಒಬ್ಬರೇ ಈ ರೀತಿಯ ವಿಚಿತ್ರ ಆಹಾರಾಭ್ಯಾಸಗಳನ್ನು ಹೊಂದಿದವರಲ್ಲ. ಈ ಪಟ್ಟಿಗೆ ಹಲವರು ಸೇರುತ್ತಾರೆ. ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ದಿನಕ್ಕೆ 20 ಕಪ್ ಚಹಾ ಕುಡಿಯುತ್ತಾರಂತೆ. ಜೆಫ್ ಬೆಝೋ ಅವರ ಬೆಳಗ್ಗಿನ ಉಪಹಾರದಲ್ಲಿ ಆಕ್ಟೋಪಸ್ ಜೊತೆಗೆ ಸದಾ ಆಲೂಗಡ್ಡೆಯ ಚಿಪ್ಸ್ ಇರುತ್ತದಂತೆ. ಖ್ಯಾತ ಹೂಡಿಕೆದಾರ ಮಾರ್ಕ್ ಕ್ಯೂಬನ್ ಬೆಳಗ್ಗಿನ ಉಪಹಾರಕ್ಕೆ ಸದಾ ಕುಕ್ಕೀಸ್ ತಿನ್ನುತ್ತಾರಂತೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರತಿ ದಿನ ಮೂರರಿಂದ ನಾಲ್ಕು ಕ್ಯಾನ್ ಡಯಟ್ ಕೋಕ್ ಕುಡಿಯುತ್ತಾರಂತೆ. ಅಷ್ಟೇ ಅಲ್ಲ, ಅವರಿಗೆ ಚೀಸ್ ಬರ್ಗರ್ ಎಂದರೆ ಪಂಚಪ್ರಾಣವಂತೆ. ಎಲಾನ್ ಮಸ್ಕ್ ಅವರು ಪ್ರತಿದಿನ ಬೆಳಗ್ಗೆ ಡೋನಟ್ ಮಾತ್ರ ಉಪಹಾರವಾಗಿ ತಿನ್ನುತ್ತಾರೆ!
ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್ ಇಡ್ಲಿ ಮಾಡಲು ಪಂಚಸೂತ್ರಗಳು!
ಆರೋಗ್ಯ
National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?
ಕೆಲವರು ರಾತ್ರಿ ಬೇಗ ಊಟ ಮಾಡುತ್ತಾರೆ. ಕೆಲವರು ಉಪವಾಸ (Nutrition Awareness) ಮಾಡುತ್ತಾರೆ. ಕೆಲವರು ತಡ ರಾತ್ರಿ ಊಟ ಮಾಡಿ ಮಲಗುತ್ತಾರೆ. ಯಾವುದು ಸರಿ? ಈ ಲೇಖನ ಓದಿ.
ರಾತ್ರಿಯೂಟ ಬೇಕೆ-ಬೇಡವೇ? ಮಾಡಿದರೂ ಎಷ್ಟು ಪ್ರಮಾಣದಲ್ಲಿ? ಎಷ್ಟು ಹೊತ್ತಿಗೆ ಊಟ ಮಾಡಿದರೆ ಸರಿ ಅಥವಾ ತಪ್ಪು? ಇಂಥ ಹಲವಾರು ವಿಷಯಗಳ (dinner myths) ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ದಿನದ ಕೆಲಸವನ್ನೆಲ್ಲಾ ಮುಗಿಸಿ, ಮಲಗುವ ಮೊದಲು ದೇಹಕ್ಕೇನು ಬೇಕು (Nutrition Awareness) ಎಂಬ ಕೆಲವು ಮಾಹಿತಿಗಳಿವು.
ದಿನಕ್ಕೆ ಒಂದೆರಡೇ ಹೊತ್ತು ಉಣ್ಣುವವರು ಯೋಗಿಗಳೆನಿಸಿದರೆ, ಮೂರು ಹೊತ್ತು ಉಣ್ಣುವವರು ರೋಗಿಗಳು ಎನ್ನುತ್ತದೆ ಹಳೆಯ ಗಾದೆ. ಆದರೆ ಕಾಲ ಬದಲಾಗುತ್ತಿದ್ದಂತೆ ನಮ್ಮ ಅಗತ್ಯಗಳೂ ಬದಲಾಗುತ್ತಿವೆ. ಹಾಗಾಗಿ ಮೂರೂ ಹೊತ್ತು ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ಬೆಳಗಿನ ತಿಂಡಿಗೆ ಇರುವ ನಿಯಮವು ರಾತ್ರಿಯೂಟಕ್ಕೆ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ಒಂದೊಂದು ಹೊತ್ತಿನ ಆಹಾರಕ್ಕೂ ಒಂದೊಂದು ಕಲ್ಪನೆಗಳು (ಅಥವಾ ಮಿಥ್ಯೆಗಳು) ಥಳುಕು ಹಾಕಿಕೊಂಡಿವೆ. ಹಾಗಾದರೆ ರಾತ್ರಿಯೂಟಕ್ಕೆ (dinner myths) ಅಂಟಿಕೊಂಡಿರುವ ಮಿಥ್ಯೆಗಳೇನು?
ರಾತ್ರಿಯೂಟ ಬೇಗ ಮಾಡಬೇಕು
ಈ ಮಾತನ್ನು ಮಿಥ್ಯೆ ಎಂದರೆ ರಾತ್ರಿ ಹನ್ನೊಂದು ಗಂಟೆಗೆ ಊಟ ಮಾಡುವವರು ಪಾರ್ಟಿ ಮಾಡಿಯಾರು! ವಿಷಯ ಅದಲ್ಲ. ಆದರೆ ರಾತ್ರಿ ಬೇಗ ಊಟ ಮಾಡುವ ಆತುರದಲ್ಲಿ ಸಂಜೆ ಏಳರೊಳಗೆ ತಿನ್ನುವುದು ಸಮಸ್ಯೆಗೆ (dinner myths) ಮೂಲವಾಗಬಹುದು. ಸಾಮಾನ್ಯವಾಗಿ ಒಂದು ಹೊತ್ತಿನಿಂದ ಇನ್ನೊಂದು ಹೊತ್ತಿನ ಊಟಕ್ಕೆ ಅಥವಾ ತಿಂಡಿಗೆ ಮೂರರಿಂದ ನಾಲ್ಕು ತಾಸುಗಳ ಅಂತರ ಇರಬೇಕೆಂಬುದು ನಿಯಮ. ಅಂದರೆ, ಬೆಳಗ್ಗೆ ಎಂಟಕ್ಕೆ ತಿಂಡಿ ತಿಂದರೆ, ಮಧ್ಯಾಹ್ನ 12ರ ಸುಮಾರಿಗೆ ಊಟ, ಸಂಜೆ 4ರ ಆಜೂಬಾಜು ತಿಂಡಿ, ರಾತ್ರಿ ಎಂಟಕ್ಕೆ ಊಟ, 10ರ ಎಡ-ಬಲಕ್ಕೆ ನಿದ್ದೆ- ಇದು ಆದರ್ಶದ ಸ್ಥಿತಿ. ಇದನ್ನೆಷ್ಟು ಪಾಲಿಸಲಾಗುತ್ತದೆ ಎನ್ನುವ ಆಧಾರ ಮೇಲೆ ನಮ್ಮ ಊಟದ ಸಮಯ ಮಿತಿಗಳನ್ನು ನಿರ್ಧರಿಸಿಕೊಳ್ಳಬಹುದು. ಅಂದರೆ, ರಾತ್ರಿ 12ಕ್ಕೆ ಮಲಗುವವರು ನೀವಾಗಿದ್ದರೆ, 9ಕ್ಕಿಂತ ಮೊದಲೇ ಊಟ ಮಾಡಿದರೆ ನಡುರಾತ್ರಿಗೆ ಹಸಿವಾಗುವುದು ಖಚಿತ. ಹಾಗಾಗಿ ರಾತ್ರಿಯೂಟದ ಸಮಯವನ್ನು ನೀವು ಮಲಗುವ ಸಮಯಕ್ಕಿಂತ 2-3 ತಾಸು ಮೊದಲು ಮಾಡಿದರೆ ಸಾಕು.
ರಾತ್ರಿಯೂಟ ಲಘುವಾಗಿರಬೇಕು
ಇದನ್ನೂ ಮಿಥ್ಯೆ ಎಂದರೆ ವಿವಾದಕ್ಕೆ ಎಡೆಯಾದೀತು. ನಿಜ, ರಾತ್ರಿಯೂಟ ಹೊಟ್ಟೆಬಿರಿ ತಿನ್ನುವುದು ಸರಿಯಲ್ಲ. ಆದರೆ ರಾತ್ರಿಯೂಟ ಲಘುವಾಗಬೇಕೆಂಬ ಉದ್ದೇಶದಿಂದ ಕೇವಲ ಸೂಪ್, ಸಲಾಡ್ ತಿನ್ನುವವರೆಷ್ಟೋ ಮಂದಿ. ತೀರಾ ಕಡಿಮೆ ಉಣ್ಣುವುದು ಅಥವಾ ಕ್ಯಾಲರಿ ಕಡಿಮೆ ಇರುವಂಥ ಆಹಾರ ತಿನ್ನುವುದರಿಂದ ರಾತ್ರಿ ಹಸಿವಾಗಿ ನಿದ್ದೆ ಬಾರದೆ ಇರಬಹುದು. ಬೆಳಗ್ಗೆ ಏಳುವಷ್ಟರಲ್ಲಿ ಹಸಿವಾಗಿ ತಲೆನೋವು, ಸುಸ್ತು ಕಾಣಿಸಬಹುದು. ಇದರಿಂದ ಮಾರನೇ ದಿನದ ಕೆಲಸಗಳು ಏರುಪೇರಾಗಬಹುದು; ಅಥವಾ ರಾತ್ರಿಯ ಹಸಿವು ತಣಿಸಲು ಸಿಕ್ಕಿದ್ದೆಲ್ಲಾ ತಿನ್ನುವ ಅಗತ್ಯವೂ ಬರಬಹುದು. ಹೀಗಾಗಬಾರದೆಂದರೆ ರಾತ್ರಿ ಊಟವೂ ಹದವಾಗಿರಬೇಕು; ಹೆಚ್ಚೂ ಅಲ್ಲ- ಕಡಿಮೆಯೂ ಅಲ್ಲ. ಊಟ ಚಿಕ್ಕದಾದರೂ ಸಮತೋಲಿತವಾಗಿರಬೇಕು- ಕೇವಲ ಸಲಾಡ್ ಅಲ್ಲ.
ರಾತ್ರಿಯೂಟ ಮಾಡಿದರೆ ತೂಕ ಹೆಚ್ಚುತ್ತದೆ
ಅದರಲ್ಲೂ ಪಿಷ್ಟ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ದೇಹ ಊದಿಕೊಳ್ಳುತ್ತದೆ ಎಂಬ ಕಲ್ಪನೆ ಢಾಳಾಗಿದೆ. ದಿನವಿಡೀ ದುಡಿದು ದಣಿದ ದೇಹಕ್ಕೆ ವಿಶ್ರಾಂತಿಯ ಹೊತ್ತಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವುದು ಅಗತ್ಯ. ಇಡೀ ದಿನದ ಕೆಲಸಗಳಿಗೆ ಇಂಧನ ಬೇಕೆಂಬ ಉದ್ದೇಶದಿಂದ ಬೆಳಗಿನ ತಿಂಡಿಯನ್ನು ತಿಂದಂತೆಯೇ, ರಾತ್ರಿಯೂ ಸರಿಯಾದ ಸತ್ವಗಳನ್ನು ಒದಗಿಸಬೇಕು. ದೇಹದಲ್ಲಿ ಹೆಚ್ಚಿನ ರಿಪೇರಿ ಕೆಲಸಗಳು ನಡೆಯುವುದು ರಾತ್ರಿಯ ಸಮಯದಲ್ಲಿ. ದೇಹದ ಹೆಚ್ಚಿನ ಕೆಲಸಗಳು ನಿಂತು, ದೊರೆಯುವ ಶಕ್ತಿಯನ್ನೆಲ್ಲಾ ರಿಪೇರಿ ಕೆಲಸಕ್ಕೆ ದೇಹ ಬಳಸಬಹುದು ಎನ್ನುವಾಗ ಊಟವನ್ನೇ ಮಾಡದಿದ್ದರೆ ಹೇಗೆ?
ರಾತ್ರಿ ತಿನ್ನುವ ಆಹಾರವೆಲ್ಲಾ ಕೊಬ್ಬಾಗಿ ಪರಿವರ್ತನೆಯಾಗುತ್ತದೆ
ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಾತ್ರಿಯೂಟ ಮಾಡುವ ವಾಡಿಕೆ ಒಳ್ಳೆಯದೆ. ಹಾಗೆಂದು ರಾತ್ರಿ ತಿಂದಿದ್ದೆಲ್ಲಾ ಕೊಬ್ಬಾಗಿ ಶೇಖರವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಹೆಚ್ಚಿನ ಆಧಾರಗಳು ಇದ್ದಂತಿಲ್ಲ. ಆದರೆ ರಾತ್ರಿಯ ಊಟವನ್ನು ಸರಿಯಾಗಿ ಮಾಡದೆ, ನಡುರಾತ್ರಿ ಹಸಿವಾಗಿ, ಅಡುಗೆಮನೆ ನುಗ್ಗಿ ಸಿಕ್ಕಿದ ಕುರುಕಲುಗಳನ್ನೆಲ್ಲಾ ತಿಂದರೆ ಕೊಬ್ಬು ಶೇಖರವಾಗುವುದು ಹೌದು. ಹಾಗಾಗಿ ರಾತ್ರಿಯ ಕಳ್ಳ ಹಸಿವೆಗೆ ಕಡಿವಾಣ ಹಾಕಲು, ಪ್ರೊಟೀನ್ ಜೊತೆಗೆ ತರಕಾರಿ, ಇಡಿ ಧಾನ್ಯಗಳಂಥ ಸಂಕೀರ್ಣ ಪಿಷ್ಟಗಳನ್ನು ರಾತ್ರಿಯೂಟಕ್ಕೆ ಸೇವಿಸಿ.
ರಾತ್ರಿಯೂಟ ಬಿಡುವುದು ಒಳ್ಳೆಯದೆ?
ಎಲ್ಲೊ ಒಂದು ಏಕಾದಶಿಗೆ ರಾತ್ರಿಯೂಟ ಬಿಟ್ಟರೆ ದೊಡ್ಡದಲ್ಲ; ದಿನವೂ ಏಕಾದಶಿಯಾದರೆ ಕಷ್ಟ! ರಕ್ತದೊತ್ತಡ, ಸಕ್ಕರೆಮಟ್ಟಗಳೆಲ್ಲಾ ಕ್ರಮೇಣ ಏರುಪೇರಾಗುತ್ತವೆ. ಜೀರ್ಣಾಂಗಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹದ ಚಯಾಪಚಯ ವ್ಯತ್ಯಾಸವಾಗಿ ಕೊಬ್ಬು ಶೇಖರಣೆ ಆದರೂ ಅಚ್ಚರಿಯಿಲ್ಲ. ಅದರಲ್ಲೂ ತೂಕ ಇಳಿಸುವ ಉದ್ದೇಶದಿಂದ ರಾತ್ರಿಯೂಟ ಬಿಟ್ಟರಂತೂ, ಫಲಿತಾಂಶ ವ್ಯತಿರಿಕ್ತವಾಗಬಹುದು. ಪೋಷಕಾಂಶಗಳ ಕೊರತೆಯೂ ಕಾಡಬಹುದು. ರಾತ್ರಿಯೂಟ ಬೇಕು- ಬೇಕೇಬೇಕು.
ಇದನ್ನೂ ಓದಿ: National Nutrition Week 2023 : ಸಿರಿ ಧಾನ್ಯಗಳ ಉತ್ತೇಜನಕ್ಕೇ ಮೀಸಲು ಐಐಎಂಆರ್ ಸಂಸ್ಥೆ
ಆರೋಗ್ಯ
National Nutrition Week 2023: ಮಕ್ಕಳಿಗೆ ಸಿರಿಧಾನ್ಯದ ಆಹಾರ ಕೊಡಬಹುದೆ?
ಸಿರಿ ಧಾನ್ಯಗಳು (National Nutrition Week 2023) ಇಂದು ವ್ಯಾಪಕವಾಗಿ ಜನಪ್ರಿಯವಾಗುತ್ತಿವೆ. ಆರೋಗ್ಯಕರ ಜೀವನದಲ್ಲಿ ಸಿರಿ ಧಾನ್ಯಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆದರೆ ಪುಟ್ಟ ಮಕ್ಕಳಿಗೆ ಸಿರಿ ಧಾನ್ಯ ಕೊಡಬಹುದೆ? ಇದರಿಂದ ಅಡ್ಡ ಪರಿಣಾಮ ಏನಾದರು ಇದೆಯೆ? ಈ ಕುರಿತ ಮಾಹಿತಿ ಇಲ್ಲಿದೆ.
ಸಿರಿಧಾನ್ಯ ಆರೋಗ್ಯಕ್ಕೆ ಒಳ್ಳೆಯದು. ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳ (National Nutrition Week 2023) ಬಳಕೆ ಅತ್ಯಂತ ಹೆಚ್ಚಾಗಿತ್ತು. ತದನಂತರದಲ್ಲಿ ಗೋಧಿ ಮತ್ತು ಅಕ್ಕಿಯ ಬಳಕೆ ಹೆಚ್ಚಾಯಿತು. ಆದರೆ ಇಂದಿಗೂ ಹೆಚ್ಚಿನ ಪೌಷ್ಟಿಕಾಂಶ ಬೇಕೆಂದರೆ ಸಿರಿಧಾನ್ಯ ಬಳಕೆ ಮಾಡಬೇಕು ಎನ್ನುತ್ತದೆ ಆಹಾರ ಶಾಸ್ತ್ರ. ಸಿರಿಧಾನ್ಯ ಬಳಕೆಯಿಂದ ಮಧುಮೇಹ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ತೂಕ ಇಳಿಸಿಕೊಳ್ಳುವವರೆಗೆ ಅನೇಕ ರೀತಿಯಲ್ಲಿ ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಂದ ಹಾಗೆ ಈ ಸಿರಿಧಾನ್ಯಗಳನ್ನು ಮಕ್ಕಳಿಗೆ ಕೊಡಬಹುದೇ ಎನ್ನುವ ಅನುಮಾನ ಎಲ್ಲರಲ್ಲೂ ಇರುತ್ತದೆ.
ನಿಧಾನವಾಗಿ ಆರಂಭಿಸಿ
ಶಿಶುಗಳಿಗೆ ಕನಿಷ್ಠ 6-8 ತಿಂಗಳುಗಳವರೆಗೆ ತಾಯಿಯ ಹಾಲನ್ನು ಕೊಡಬೇಕು. ನಂತರದ ದಿನಗಳಲ್ಲಿ ಅವರಿಗೆ ಸ್ವಲ್ಪಮಟ್ಟಿಗಿನ ಘನ ಆಹಾರವನ್ನು ಕೊಡಬಹುದು. ಆ ಸಮಯದಲ್ಲಿ ನೀವು ಅವರಿಗೆ ಸಿರಿಧಾನ್ಯ ಕೊಡುವ ಅಭ್ಯಾಸವನ್ನು ಆರಂಭಿಸಬಹುದು. ಸಿರಿಧಾನ್ಯ ಕೊಡಬಹುದು ಎಂದ ಮಾತ್ರಕ್ಕೆ ಒಮ್ಮೆಲೆ ಕೇವಲ ಸಿರಿಧಾನ್ಯಗಳನ್ನೇ ಕೊಡುವುದು ತಪ್ಪಾಗುತ್ತದೆ. ಮಕ್ಕಳಿಗೆ ಯಾವುದೇ ಆಹಾರವನ್ನಾದರೂ ನಿಧಾನವಾಗಿ ಅಭ್ಯಾಸ ಮಾಡಿಸಬೇಕು. ಮೊದಲು ಚಮಚದಷ್ಟು ಆಹಾರವನ್ನು ತಿನಿಸಿ, ನಂತರದ ದಿನಗಳಲ್ಲಿ ಅದನ್ನು ಜಾಸ್ತಿ ಮಾಡುತ್ತಾ ಹೋಗಬೇಕು. ಅದೇ ರೀತಿಯಲ್ಲಿ ಸಿರಿಧಾನ್ಯದ ಅಭ್ಯಾಸವನ್ನು ಕೂಡ ನಿಧಾನವಾಗಿ ಆರಂಭಿಸಿ.
ವೈದ್ಯರ ಸಲಹೆ ಕೇಳಿ
ಸಿರಿಧಾನ್ಯ ಅಭ್ಯಾಸ ಮಾಡಿಸುವುದಕ್ಕೂ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ. ಸಿರಿಧಾನ್ಯವು ಉತ್ತಮ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಅಯೋಡಿನ್ ಕೊರತೆಯಿದ್ದರೆ ಅಥವಾ ಥೈರಾಯ್ಡ್‌ನಂತಹ ಕಾಯಿಲೆಯಿದ್ದರೆ ಅಂತಹ ಮಕ್ಕಳಿಗೆ ಸಿರಿಧಾನ್ಯ ಕೊಡುವುದು ಸೂಕ್ತವಾಗಿರುವುದಿಲ್ಲ. ಹಾಗಾಗಿ ನೀವು ಸಿರಿಧಾನ್ಯದ ಅಭ್ಯಾಸ ಮಾಡಿಸುವುದಕ್ಕೂ ಮೊದಲು ವೈದ್ಯರಿಂದ ಸಲಹೆಯನ್ನು ತಪ್ಪದೇ ಪಡೆದುಕೊಳ್ಳಿ. ಸಿರಿಧಾನ್ಯ ಆರೋಗ್ಯಕ್ಕೆ ಅತ್ಯಂತ ಉತ್ತಮ ಆಹಾರವೇ ಆಗಿದ್ದರೂ ಕೆಲವೊಮ್ಮೆ ವೈದ್ಯರು ನಿರ್ದಿಷ್ಟ ಕಾರಣಗಳಿಂದಾಗಿ ಅದನ್ನು ಮಕ್ಕಳಿಗೆ ನೀಡುವುದು ಬೇಡ ಎನ್ನುವ ಸಾಧ್ಯತೆಯೂ ಇರುತ್ತದೆ.
ಇದರ ಜತೆ ಹಣ್ಣುಗಳೂ ಇರಲಿ
ಸಿರಿಧಾನ್ಯ ಒಳ್ಳೆಯದು ಎನ್ನುವ ಮಾತ್ರಕ್ಕೆ ಶಿಶುಗಳಿಗೆ ಅಥವಾ ಬೆಳೆಯುವ ಮಕ್ಕಳಿಗೆ ಅದನ್ನೇ ಕೊಡುವುದು ಸೂಕ್ತವಲ್ಲ. ಕೆಲವು ಸಿರಿಧಾನ್ಯಗಳು ಅತ್ಯಂತ ಉಷ್ಣಾಂಶವನ್ನು ಹೊಂದಿರುತ್ತವೆ. ಅಂತವನ್ನು ಪ್ರತಿನಿತ್ಯ ಮಕ್ಕಳಿಗೆ ಕೊಡುವುದರಿಂದ ಮಕ್ಕಳಲ್ಲಿ ಬೇರೆ ರೀತಿಯ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ನೀವು ಸಿರಿಧಾನ್ಯದ ಜತೆ ಬೇರೆ ಬೇರೆ ರೀತಿಯ ಹಣ್ಣುಗಳು, ತರಕಾರಿ, ಗೋಧಿ, ಅಕ್ಕಿಯ ಖಾದ್ಯಗಳನ್ನೂ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಗಂಜಿ ರೀತಿಯಲ್ಲಿ ಕೊಡಿ
ಚಿಕ್ಕ ಮಕ್ಕಳಿಗೆ ನೀವು ಸಿರಿಧಾನ್ಯವನ್ನು ಅಂಬಲಿ ಅಥವಾ ಗಂಜಿ ರೀತಿಯಲ್ಲಿ ಮಾಡಿ ತಿನ್ನಿಸಬಹುದು. ಮಕ್ಕಳು ಸ್ವಲ್ಪ ದೊಡ್ಡವರಾಗಿ ಘನ ಆಹಾರವನ್ನು ತಿನ್ನುವಂತವರಾದ ಮೇಲೆ ಅವರಿಗೆ ರಾಗಿ ರೊಟ್ಟಿ, ಸಿರಿಧಾನ್ಯಗಳ ದೋಸೆ ಹೀಗೆ ತರೇವಾರು ಖಾದ್ಯಗಳನ್ನು ಸಿರಿಧಾನ್ಯಗಳಿಂದ ಮಾಡಿಕೊಡಬಹುದು.
ಭಾರತದಲ್ಲಿ ಸಿಗುವ ಸಿರಿಧಾನ್ಯಗಳು
ವಿಶ್ವದಾದ್ಯಂತ ಒಟ್ಟು 60ಕ್ಕೂ ಅಧಿಕ ಜಾತಿಯ ಸಿರಿಧಾನ್ಯಗಳನ್ನು ಬೆಳೆದು ಆಹಾರದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಪ್ರಮುಖವಾಗಿ ಎಂಟು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಅವುಗಳೆಂದರೆ ಜೋಳ, ರಾಗಿ, ನವಣೆ, ಅರ್ಕಾ, ಸಾಮೆ, ಸಜ್ಜೆ, ಬರಗು ಮತ್ತು ಊದಲು. ಈ ಸಿರಿಧಾನ್ಯಗಳನ್ನು ಪೂರ್ವಜರ ಕಾಲದಿಂದಲೂ ಭಾರತದಲ್ಲಿ ಬಳಸಲಾಗುತ್ತಿದೆ.
ಸಿರಿಧಾನ್ಯಗಳ ಉಪಯೋಗವೇನು?
ಜೋಳ
ಜೋಳವು ಹೆಚ್ಚು ಪ್ರೋಟೀನ್, ಫೈಬರ್, ರಂಜಕ, ಪೊಟ್ಯಾಶಿಯಂ, ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಕೂಡ ಇರುತ್ತದೆ.
ರಾಗಿ
ರಾಗಿಯು ಹೆಚ್ಚಾಗಿ ಕ್ಯಾಲ್ಶಿಯಂ ಮತ್ತು ಕಬ್ಬಿಣಾಂಶವನ್ನು ಹೊಂದಿರುತ್ತದೆ. ಇದನ್ನು ಗಂಜಿ ರೂಪದಲ್ಲಿ ಶಿಶುಗಳಿಗೆ ಮತ್ತು ತಾಯಂದಿರಿಗೆ ನೀಡುವುದು ಉತ್ತಮ.
ನವಣೆ
ಇದು ಅತ್ಯಧಿಕ ಖನಿಜಾಂಶ ಹೊಂದಿರುವ ಸಿರಿಧಾನ್ಯವಾಗಿದೆ. ಪ್ರೋಟೀನ್ ಕೂಡ ಸಮೃದ್ಧವಾಗಿರುವ ಇದು ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ. ಹಾರ್ಮೋನ್ ಅಸಮತೋಲನವನ್ನು ಸರಿಪಡಿಸುವಲ್ಲೂ ಇದು ಸಹಾಯಕಾರಿ.
ಅರ್ಕಾ
ಇದರಲ್ಲಿ ಹೆಚ್ಚಿನ ನಾರಿನಾಂಶವಿರುತ್ತದೆ. ಇದು ಮಧುಮೇಹವಿರುವವರಿಗೆ ಸೂಕ್ತ ಆಹಾರ. ಇದನ್ನು ಕಿಚಡಿ ರೂಪದಲ್ಲಿ ಅಥವಾ ಪೊಂಗಲ್ ಮಾಡಿಕೊಂಡು ಸೇವಿಸಬಹುದು.
ಸಾಮೆ
ಅತ್ಯಧಿಕ ಕೊಬ್ಬಿನಾಂಶ ಹೊಂದಿರುವ ಸಿರಿಧಾನ್ಯ ಇದಾಗಿದೆ. ಪ್ರೋಟೀನ್ ಸಮೃದ್ಧವಾಗಿರುವ ಇದನ್ನು ದೋಸೆ ಮಾಡಿಕೊಂಡು ತಿನ್ನಬಹುದು.
ಸಜ್ಜೆ
ಪ್ರೋಟೀನ್ ಮತ್ತು ಶಕ್ತಿಯ ಅಂಶವನ್ನು ಹೊಂದಿರುವ ಇದು ಗೋಧಿಗಿಂತ ಆರು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಇದನ್ನು ರೊಟ್ಟಿ, ಗಂಜಿ ಮಾಡಬಹುದು.
ಬರಗು
ಪ್ರೋಟೀನ್ ಅಧಿಕವಿರುವ ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ. ಈ ಸಿರಿಧಾನ್ಯದಿಂದಲೂ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಕೊಡಬಹುದಾಗಿದೆ.
ಊದಲು
ಈ ಸಿರಿಧಾನ್ಯದಲ್ಲಿ ಫೈಬರ್ ಅಂಶ ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಈ ಸಿರಿಧಾನ್ಯ ಹೆಚ್ಚು ಬಳಕೆಯಲ್ಲಿ ಇಲ್ಲವಾದರೂ ಇದರಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಿ, ಸೇವಿಸಬಹುದಾಗಿದೆ.
ಇದನ್ನೂ ಓದಿ: National Nutrition Week 2023: ಸತ್ವಯುತ ಆಹಾರಗಳನ್ನು ಎಷ್ಟು ಸುಲಭವಾಗಿ ಮಾಡಬಹುದು ನೋಡಿ!
-
ಪ್ರಮುಖ ಸುದ್ದಿ12 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ3 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ9 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕಲೆ/ಸಾಹಿತ್ಯ23 hours ago
Painting: ಕೇವಲ 328 ರೂ.ಗೆ ಖರೀದಿಸಿದ ಪೇಂಟಿಂಗ್ 1.5 ಕೋಟಿ ರೂಪಾಯಿಗೆ ಹರಾಜು!
-
ಕರ್ನಾಟಕ22 hours ago
Honey Bee Attack: ಶವ ಸಂಸ್ಕಾರಕ್ಕೆಂದು ಹೋದವರ ಮೇಲೆ ಹೆಜ್ಜೇನು ದಾಳಿ; 10 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
-
ಗ್ಯಾಜೆಟ್ಸ್6 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಆರೋಗ್ಯ15 hours ago
Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!