Site icon Vistara News

Deepavali 2023: ಈ ದೀಪಾವಳಿಗೆ ಪರ್ಫೆಕ್ಟ್‌ ಲಡ್ಡುಗಳನ್ನು ಮಾಡಬೇಕೇ? ಹಾಗಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ!

laddu

ದೀಪಾವಳಿ (Deepavali 2023) ಆರಂಭ ಆಗಿಯೇಬಿಟ್ಟಿತು. ಏನಾದರೊಂದು ಸಿಹಿತಿಂಡಿ ಮನೆಯಲ್ಲೇ ಮಾಡಬೇಕು ಎಂಬ ಬಯಕೆಯೇ. ಸುಲಭವಾಗಿ ಲಡ್ಡು ಮಾಡಬಹುದು ಎಂದುಕೊಂಡು ಗಡಿಬಿಡಿಯಲ್ಲಿ ಲಡ್ಡು ಲಡ್ಡಿನಂತೆ ಕಾಣುವ ಹಾಗೂ ಆಗದೆ ಇದ್ದರೆ ಎಷ್ಟು ಬೇಸರವಾಗಿಬಿಡುತ್ತದೆ ಎಂಬುದು ಇಂಥ ಪರಿಸ್ಥಿತಿ ಎದುರಿಸಿದವರಿಗಷ್ಟೇ ಗೊತ್ತಿರುತ್ತದೆ. ಲಡ್ಡು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ, ಸರಿಯಾಗಿ ಮಾಡಿದರಷ್ಟೇ, ಲಡ್ಡಿನಂತೆ ಉಂಡೆ ಕಟ್ಟಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಲಡ್ಡಿಯ ಹುಡಿಯನ್ನೇ ತಿನ್ನಬೇಕಷ್ಟೆ. ಹಾಗಾದರೆ ಬನ್ನಿ, ಈ ಬಾರಿಯ ದೀಪಾವಳಿಗೆ ಪರ್ಫೆಕ್ಟ್‌ ಲಡ್ಡನ್ನು ಮಾಡಿ ಸಂಭ್ರಮಿಸಿ.

೧. ನೀವು ಯಾವುದರ ಲಡ್ಡನ್ನೇ ಮಾಡಿ, ಆದರೆ, ಲಡ್ಡು ಮಾಡುವ ಮುನ್ನ ಆ ಸಾಮಗ್ರಿಗಳನ್ನು ಸರಿಯಾಗಿ ಹುರಿದುಕೊಳ್ಳುವುದು ಬಹಳ ಮುಖ್ಯ. ಕೆಲವು ಮಂದಿ ಹೆಚ್ಚು ಉರಿಯಲ್ಲಿ ಹುರಿಯಲು ಹೊರಟು, ಸುಟ್ಟುಬಿಡುತ್ತಾರೆ. ಕಪ್ಪಾದ ಸಾಮಗ್ರಿಗಳಲ್ಲಿ ಲಡ್ಡು ಮಾಡಿದರೆ, ರುಚಿಯಾದೀತೇ ಹೇಳಿ. ಹೀಗಾಗಿ ಪರ್ಫೆಕ್ಟಾಗಿ ಹುರಿಯುವುದು ಅತಿ ಮುಖ್ಯವಾದ ಕೆಲಸ. ಕಡಲೆಹಿಟ್ಟನ್ನು ಹೆಚ್ಚು ಉರಿಯಲ್ಲಿ ಹುರಿದುಕೊಂಡರೆ ಅದು ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲ ಒಣಕಲಾಗುತ್ತದೆ. ರುಚಿಯೂ ಬದಲಾಗುತ್ತದೆ. ಗೋಧಿಗಿಟ್ಟು, ಅಥವಾ ಯಾವುದೇ ಕಾಳುಗಳಿರಲಿ, ಹುರಿದುದು ಸ್ವಲ್ಪ ಹೆಚ್ಚೇ ಆದರೂ ಲಡ್ಡಿನ ರುಚಿ ಸೇರಿದಂತೆ ಎಲ್ಲವೂ ಬದಲಾಗುತ್ತದೆ. ಅದಕ್ಕಾಗಿ, ಕೊಂಚವೂ ಒಲೆಯಿಂದ ಆಚೀಚೆ ಓಡಾಡದೆ, ಅಲ್ಲೇ ನಿಂತು ಬಾಣಲೆಯೊಳಗಿರುವುದನ್ನು ಸೌಟಿನಲ್ಲಿ ಮಗುಚುತ್ತಾ, ಮಂದ ಉರಿಯಲ್ಲಿ ತಾಳ್ಮೆಗೆಡದೆ, ಹುರಿಯಬೇಕು. ಇದು ಬಹಳ ಮುಖ್ಯವಾದ ಘಟ್ಟ.

೨. ಇನ್ನೂ ಕೆಲವರು ಹುರಿಯುವ ಕೆಲಸಕ್ಕೇ ಹೋಗುವುದಿಲ್ಲ. ಹುರಿಯದೆ ಹಸಿ ಹಿಟ್ಟಿನಲ್ಲೇ ಲಡ್ಡು ಮಾಡುತ್ತಾರೆ. ಇದೂ ಕೂಡಾ ತಪ್ಪು ವಿಧಾನ. ಇದರಿಂದ ಲಡ್ಡು ರುಚಿಯಾಗುವುದಿಲ್ಲ ಅಷ್ಟೇ ಅಲ್ಲ, ಲಡ್ಡಿನ ಉಂಡೆಗಟ್ಟಲೂ ಕೂಡಾ ಸಾಧ್ಯವಾಗುವುದಿಲ್ಲ. ಸರಿಯಾದ ವಿಧಾನದಲ್ಲಿ ಪರ್ಫೆಕ್ಟಾಗಿ ಹುರಿದ ಹಿಟ್ಟಿನಿಂದ ಪರ್ಫೆಕ್ಟ್‌ ಉಂಡೆ ಮಾಡಬಹುದು. ಬಳಸಿದ ವಸ್ತುಗಳಲ್ಲಿರುವ ನೈಸರ್ಗಿಕ ಎಣ್ಣೆಯಂಶವೂ ಉಂಡೆಗಟ್ಟಲು ಸಹಾಯ ಮಾಡುತ್ತದೆ.

೩. ಲಡ್ಡಿನ ಜೊತೆಗೆ ಒಣದ್ರಾಕ್ಷಿ, ಗೋಡಂಬಿ ಅಥವಾ ಇತರ ಬೀಜಗಳು ಹಾಗೂ ಒಣಹಣ್ಣುಗಳನ್ನು ಸೇರಿಸುವ ಸಂದರ್ಭ ಬಹಳಷ್ಟು ಮಂದಿ ಅವುಗಳನ್ನು ಹುರಿದುಕೊಳ್ಳುವುದಿಲ್ಲ. ಇದು ಅವುಗಳ ರುಚಿಯನ್ನು ಕಡಿಮೆ ಮಾಡುತ್ತದೆ. ಸರಿಯಾದ ರುಚಿ ಬರಲು ಒಣಹಣ್ಣು ಹಾಗೂ ಬೀಜಗಳನ್ನು ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಇದನ್ನು ಈಗಾಗಲೇ ಹುರಿದು ಇಟ್ಟಿರುವ ಇತರ ಪದಾರ್ಥಗಳ ಜೊತೆಗೆ ಸೇರಿಸಿಕೊಳ್ಳಬೇಕು. ಇತರ ಯಾವುಧೇ ಮಸಾಲೆಗಳನ್ನು ಇದಕ್ಕೆ ಸೇರಿಸುತ್ತಿದ್ದರೂ ಹುರಿದುಕೊಳ್ಳುವುದು ಅತ್ಯಂತ ಮುಖ್ಯ.

೪. ಸಕ್ಕರೆಯನ್ನು ಹಾಗೆಯೇ ಸೇರಿಸುವ ಬದಲು ಸಕ್ಕರೆ ಪುಡಿಯನ್ನಾಗಿ ಮಾಡಿಕೊಂಡು ಸೇರಿಸಿದರೆ ಕೆಲಸ ಸುಲಭ ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಸಕ್ಕರೆ ಬೇಗ ಕ್ಯಾರಮೆಲ್‌ನಂತೆ ಕರಗಿಕೊಂಡು ಸುಟ್ಟುಹೋಗುವ ಸಾಧ್ಯತೆಗಳೂ ಇವೆ. ಹಾಗಾಗಿ ಸಾಮಾನ್ಯ ಸಕ್ಕರೆಯನ್ನೇ ಸೇರಿಸಿ, ಅದು ನಿಧಾನವಾಘಿ ಪಾಖದ ಹದಕ್ಕೆ ಬರಲಿ.

೫. ಸಕ್ಕರೆ ಪಾಕವನ್ನು ತುಂಬ ದಪ್ಪ ಅಥವಾ ತುಂಬ ತೆಳುವಾಗಿ ಮಾಡಿಕೊಳ್ಳುವುದು ಕೂಡಾ ಉಂಡೆಗಟ್ಟಲು ಸಾಧ್ಯವಾಗದೆ ಇರುವುದಕ್ಕೆ ಇನ್ನೊಂದು ಕಾರಣ. ಸಕ್ಕರೆ ಪಾಕದ ಹದ ಸರಿಯಾಗಿದ್ದರಷ್ಟೇ ಉಂಡೆ ಸರಿಯಾಗುತ್ತದೆ.

೬. ಅತಿಯಾಗಿ ತುಪ್ಪ ಸೇರಿಸುವುದು ಕೂಡಾ ಎಲ್ಲರೂ ಮಾಡುವ ಇನ್ನೊಂದು ತಪ್ಪು. ತುಪ್ಪ ಸೇರಿಸಿದ ಲಡ್ಡು ಘಮದಲ್ಲಿ ಸ್ವರ್ಗದಂತಿರುತ್ತದೆ ಎಂಬುದು ನಿಜವೇ ಆಗಿದ್ದರೂ, ಅತಿಯಾಗಿ ತುಪ್ಪ ಸೇರಿಸಿದರೆ, ಮಿಶ್ರಣ ಹೆಚ್ಚು ಮೆತ್ತಗಾಗಿ ಉಂಡೆ ಗಟ್ಟಿಯಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಡಿಮೆ ತುಪ್ಪದಿಂದ ಆರಂಭಿಸುವುದು ಒಳ್ಳೆಯದು. ಈ ಎಲ್ಲ ಸಣ್ಣಪುಟ್ಟ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ನೀವು ಸುಲಭವಾಗಿ ಅದ್ಭುತ ಲಡ್ಡುಗಳನ್ನೇ ಮಾಡಬಹುದು. ತಪ್ಪುಗಳು ಸಣ್ಣಪುಟ್ಟವೇ ಆಗಿದ್ದರೂ ಪರಿಣಾಮ ಬೀರುವುದು ಅಂತಿಮವಾಗಿ ಲಡ್ಡಿನ ಮೇಲೆಯೇ ಆಗಿರುವುದರಿಂದ ತಾಳ್ಮೆಯಿಂದ ಈ ಎಲ್ಲ ಕ್ರಮಗಳನ್ನು ಅನುಸರಿಸಿಕೊಂಡು ಪರ್ಫೆಕ್ಟಾಗಿ ಲಡ್ಡುಗಳನ್ನು ಮಾಡಿ! ದೀಪಾವಳಿಗೆ ಸಿಹಿ ಹಂಚಿ ಸಂಭ್ರಮಿಸಿ!

ಇದನ್ನೂ ಓದಿ: Pav Bhaji Recipe: ಆರೋಗ್ಯಕರ ರೀತಿಯಲ್ಲೇ ಪಾವ್‌ ಬಾಜಿಯನ್ನೂ ಮಾಡಿ ತಿನ್ನಬಹುದು ಗೊತ್ತೇ? ಇಲ್ಲಿವೆ ಟಿಪ್ಸ್!

Exit mobile version