Site icon Vistara News

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

Winter Food Tips

ಚಳಿಗಾಲದಲ್ಲಿ (winter food tips) ಬಾಯಿಚಪಲ ಹೆಚ್ಚು. ಎಷ್ಟೇ ಕಡಿಮೆ ತಿನ್ನಬೇಕು ಎಂದುಕೊಂಡರೂ, ಮನಸ್ಸು ತಡೆಯದೆ ನಮ್ಮದೇ ವ್ರತವನ್ನು ನಾವು ಮುರಿಯುತ್ತೇವೆ. ಇಷ್ಟು ತಿನ್ನುವುದು ಒಳ್ಳೆಯದಲ್ಲ ಎಂದು ಅಂದುಕೊಂಡರೂ, ಚಳಿ ಹೆಚ್ಚು ತಿನ್ನುವಂತೆ ಮಾಡುತ್ತದೆ. ಬಿಸಿಬಿಸಿ ಬಜ್ಜಿ ಬೋಂಡಾಗಳು, ಸಿಹಿತಿನಿಸುಗಳು, ಮನೆಯಲ್ಲಿ ಗರಮಾಗರಂ ಚಹಾ, ರಸ್ತೆಬದಿಯಲ್ಲಿ ಕಂಡ ಬಿಸಿಬಿಸಿ ಜಿಲೇಬಿ, ಹೀಗೆ ಒಂದೇ ಎರಡೇ, ನಾನಾ ಆಸೆಗಳು, ಚಳಿಗಾಲದಲ್ಲಿ ಗರಿಗೆದರಿ ಬಿಡುತ್ತವೆ. ಆರೋಗ್ಯದ ದೃಷ್ಟಿಯಿಂದ ಕೆಲವು ಆಸೆಗಳನ್ನು ಬಿಡಲೇಬೇಕಾಗುತ್ತದೆ, ನಿಜ. ಆದರೆ, ನಾವು ಅಷ್ಟೂ ನಿರಾಸೆಗೊಳ್ಳಬೇಕಿಲ್ಲ. ಚಳಿಗಾಲದಲ್ಲಿ ದೇಹವನ್ನು ಬಿಸಿ ಮಾಡುವ ಕೆಲವು ಸಿಹಿತಿನಿಸುಗಳನ್ನು ಮಾಡಿ ಅಥವಾ ಕೊಂಡು ತಿನ್ನಬಹುದು. ಚಳಿಗಾಲಕ್ಕೆಂದೇ ವಿಶೇಷವಾಗಿರುವ ಅವುಗಳನ್ನು ತಿನ್ನುವುದರಿಂದ ದೇಹ ಬೆಚ್ಚಗೂ ಇರುತ್ತದೆ, ನಮ್ಮ ಆಸೆಯೂ ನೆರವೇರಿ, ದೇಹ ಮನಸ್ಸಿಗೂ ಸಮಾಧಾನವಾಗುತ್ತದೆ. ಬನ್ನಿ, ಚಳಿಗಾಲದಲ್ಲಿ ತಿನ್ನಲೇಬೇಕಾದ ದೇಹವನ್ನು ಬೆಚ್ಚಗಿಡುವ ಸಿಹಿತಿನಿಸುಗಳು ಯಾವುವು ಎಂಬುದನ್ನು ನೋಡೋಣ.

ಗೋಂದಿನ ಲಡ್ಡು

ಗೋಂದು, ಮರದಿಂದ ಸ್ರವಿಸಲ್ಪಡುವ ಅಂಟು. ಸಿಹಿತಿನಿಸುಗಳನ್ನು ಮಾಡಲು ಅಂಟಿಗಾಗಿ ಬಳಸುತ್ತಾರೆ. ಈ ಅಂಟಿನದೇ ಲಡ್ಡನ್ನು ಮಾಡಿ ತಿಂದರೆ ಹೇಗೆ ಹೇಳಿ. ಹೌದು, ಗೋಂದಿನ ಲಡ್ಡು ಬಲು ರುಚಿ. ದೇಹಕ್ಕೂ ಒಳ್ಳೆಯದು. ಗೋಧಿ ಹುಡಿ, ತುಪ್ಪ, ಒಣ ಬೀಜಗಳ ಜೊತೆಗೆ ಗೋಂದನ್ನೂ ಹಾಕಿ ಮಾಡುವ ಈ ಲಡ್ಡು ಚಳಿಗಾಲಕ್ಕೆ ದೇಹ ಬೆಚ್ಚಗಿಡಲು ಹೇಳಿ ಮಾಡಿಸಿದ ಲಡ್ಡು.

ಒಣಹಣ್ಣುಗಳ ಲಡ್ಡು

ದ್ರಾಕ್ಷಿ, ಬಾದಾಮಿ, ಗೋಡಂಬಿ, ಖರ್ಜೂರ ಸೇರಿದಂತೆ ಬಗೆಬಗೆಯ ಒಣಹಣ್ಣುಗಳು ಹಾಗೂ ಬೀಜಗಳನ್ನು ಹಾಕಿ ಮಾಡುವ ಲಡ್ಡು ಚಳಿಗಾಲಕ್ಕೆ ಬಹಳ ಒಳ್ಳೆಯದು. ಆರೋಗ್ಯಕ್ಕೂ ಹಾನಿಯಿಲ್ಲದ, ಸಕ್ಕರೆಯನ್ನೂ ಸೇರಿಸದೆ ಮಾಡಬಹುದಾದ ಈ ಲಡ್ಡನ್ನು ಯಾವ ಸಂದೇಹವೂ ಇಲ್ಲದೆ ತಿನ್ನಬಹುದು. ಇದು ದೇಹವನ್ನು ಬೆಚ್ಚಗೂ, ಗಟ್ಟಿಯಾಗಿಯೂ ಇಡುತ್ತದೆ.

ಗೋಧಿ ಹಲ್ವಾ

ಪಂಜಾಬಿಗಳ ಅತ್ಯಂತ ಪ್ರಸಿದ್ಧ ಸಿಹಿತಿನಿಸಿದು. ಗೋಧಿ ಹುಡಿಯಿಂದ ಮಾಡುವ ಈ ಹಲ್ವಾವನ್ನು ಪ್ರಸಾದವಾಗಿಯೂ ನೀಡಲಾಗುತ್ತದೆ. ಶಕ್ತಿ ನೀಡುವ, ದೇಹವನ್ನೂ ಬೆಚ್ಚಗಿಡುವ ಸಿಹಿತಿನಿಸಿದು.

ಎಳ್ಳುಂಡೆ

ಎಳ್ಳು ಉಷ್ಣಾಹಾರ. ಚಳಿಗಾಲಕ್ಕೆ ಎಳ್ಳು ತಿನ್ನಲೇಬೇಕು. ಸಾಕಷ್ಟು ಕ್ಯಾಲ್ಶಿಯಂ ಹಾಗೂ ಬಹುತೇಕ ಎಲ್ಲ ಪೋಷಕಾಂಶಗಳನ್ನೂ ಹೊಂದಿರುವ ಎಳ್ಳನ್ನು ಉಂಡೆ ಮಾಡಿ ಚಳಿಗಾಲದಲ್ಲಿ ತಿನ್ನುವುದು ಸಾಮಾನ್ಯ. ಬೆಲ್ಲದ ಪಾಕದಲ್ಲಿ ಎಳ್ಳನ್ನು ಉಂಡೆಗಟ್ಟಿ ಮಾಡುವ ಈ ಸರಳ ಸಿಹಿತಿಂಡಿ ಬಹಳ ಒಳ್ಳೆಯದು. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಇದನ್ನು ತಿನ್ನಲೇಬೇಕು!

ಕ್ಯಾರೆಟ್‌ ಹಲ್ವಾ

ಚಳಿಗಾಲದ ಇನ್ನೊಂದು ತಿನ್ನಲೇಬೇಕಾದ ಪ್ರಸಿದ್ಧ ಸಿಹಿತಿನಿಸು. ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಕ್ಯಾರೆಟ್ಟನ್ನು ತಿರಿದು ಹಲ್ವಾ ಮಾಡುವುದೆಂದರೆ ಅದೊಂದು ಸಂಪ್ರದಾಯ. ದೇಹವನ್ನು ಇವು ಬೆಚ್ಚಗೂ ಇಡುತ್ತವೆ. ಪೋಷಕಾಂಶಗಳಿಂದಲೂ ಸಮೃದ್ಧ.

ಹೆಸರುಬೇಳೆ ಹಲ್ವಾ

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮಾಡುವ ಇನ್ನೊಂದು ಹಲ್ವಾ ಹೆಸರುಬೇಳೆ ಹಲ್ವಾ. ಇದೂ ಕೂಡಾ ದೇಹವನ್ನು ಬೆಚ್ಚಗಿಡುವ ಗುಣವನ್ನು ಹೊಂದಿದೆ. ಸಾಕಷ್ಟು ಪ್ರೊಟೀನ್‌ ಹೊಂದಿರುವ ಈ ಸಿಹಿತಿನಿಸು ಚಳಿಗಾಲಕ್ಕೆ ಒಳ್ಳೆಯದು.

ಖರ್ಜೂರದ ಬರ್ಫಿ

ಖರ್ಜೂರದ ಯಾವುದೇ ಬಗೆಯ ಸಿಹಿತಿನಿಸನ್ನು ತಿನ್ನಲು ಚಳಿಗಾಲ ಸಕಾಲ. ಇದರಲ್ಲಿ ಹೇರಳವಾಗಿ ಕಬ್ಬಿಣಾಂಶವಿದ್ದು ಸಾಕಷ್ಟು ಉಷ್ಣ ಪ್ರಕೃತಿಯನ್ನೂ ಹೊಂದಿದೆ. ದೇಹ ಗಟ್ಟಿಮುಟ್ಟಾಗಲು ಇದು ಒಳ್ಳೆಯದು. ಚಳಿಗಾಲದಲ್ಲಿ ಖರ್ಜೂರದ ವಿವಿಧ ಸಿಹಿತಿನಿಸು ಮಾಡಿ ಅಥವಾ ಹಾಗೆಯೇ ತಿನ್ನುವುದು ಒಳ್ಲೆಯದು.

ಚಿಕ್ಕಿ/ಗಜ್ಜಕ್

ಚಳಿಗಾಲದಲ್ಲಿ ಸಾಮಾನ್ಯವಾಗುತ್ತರಭಾರತದಲ್ಲಿ ಬಹುತೇಕ ಎಲ್ಲರೂ ಮರೆಯದೆ ತಿನ್ನುವ ಸರಳ ಸಿಹಿತಿನಿಸು. ಬೆಲ್ಲದ ಪಾಕದಲ್ಲಿ ಹಾಕಿದ ನೆಲಗಡಲೆ, ಬೀಜಗಳು ಹಾಗೂ ಎಳ್ಳಿನಿಂದ ಈ ಸಿಹಿತಿನಿಸನ್ನು ಮಾಡುತ್ತಾರೆ. ದೇಹವನ್ನು ಬೆಚ್ಚಗಿಡುವ ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸಿಹಿತಿನಿಸಿದು.

ಇದನ್ನೂ ಓದಿ: Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

Exit mobile version