Site icon Vistara News

Mayonnaise Side Effects: ಮಯೋನೀಸ್‌ ಯಾಕೆ ಕೆಟ್ಟದ್ದು ಗೊತ್ತೇ? ಮಯೋನೀಸ್‌ಗೆ ಪರ್ಯಾಯ ಯಾವುದು ತಿಳಿಯಿರಿ!

Mayonnaise Side Effects

ಸ್ಯಾಂಡ್‌ವಿಚ್‌ ಆಥವಾ ಬರ್ಗರ್‌ ಅನ್ನು ಮಯೋನೀಸ್‌ ಇಲ್ಲದೆ ಒಮ್ಮೆ ಊಹೆ ಮಾಡಿ ನೋಡಿ! ಮಯೋನೀಸ್‌ ಇಲ್ಲದೆ ಸ್ಯಾಂಡ್‌ವಿಚ್‌ ಅಥವಾ ಬರ್ಗರ್‌ನ ರುಚಿ ಹೆಚ್ಚುವುದು ಹೇಗೆ ತಾನೇ ಸಾಧ್ಯ ಎಂದು ಖಂಡಿತ ಪ್ರತಿಯೊಬ್ಬರೂ ಹೇಳಬಹುದು. ಯಾಕೆಂದರೆ, ಇವಿಲ್ಲದೆ ಅವಿಲ್ಲ. ಮಯೋನೀಸ್‌ ಇಲ್ಲದೆ ಸ್ಯಾಂಡ್‌ವಿಚ್‌ ಅಥವಾ ಬರ್ಗರ್‌ ಇಲ್ಲ ಎಂಬಷ್ಟು ಅವುಗಳ ಸಂಬಂಧ ಗಟ್ಟಿಯಾಗಿದೆ ನಿಜ. ಆದರೆ, ಈ ಮಯೋನೀಸ್‌ ಎಂಬುದು ಅತ್ಯಂತ ಅನಾರೋಗ್ಯಕರ (mayonnaise side effects) ಆಹಾರಗಳ ಪೈಕಿ ಅಗ್ರಸ್ಥಾನ ಎಂಬುದು ನಿಮಗೆ ಗೊತ್ತೇ?
ಹೌದು.

ಅನಾರೋಗ್ಯಕರ ಆಹಾರ

ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಬಳಸುವ ಅತ್ಯಂತ ಹೆಚ್ಚು ಅನಾರೋಗ್ಯಕರ ಆಹಾರ ಎಂದರೆ ಅದು ಮಯೋನೀಸ್‌. ಮಕ್ಕಳಿಗೆ ಅತಿ ಹೆಚ್ಚಾಗಿ ಅಮ್ಮಂದಿರು ಸ್ಯಾಂಡ್‌ವಿಚ್‌ ಮೂಲಕ ಕೊಡುವ ಆಹಾರವಿದು. ಹೆಚ್ಚು ಕೊಬ್ಬು ಇರುವ ಅತ್ಯಂತ ಹೆಚ್ಚು ಕ್ಯಾಲರಿ ಇರುವ ಪೋಷಕಾಂಶರಹಿತ ಆಹಾರವೂ ಕೂಡಾ ಇದುವೇ. ಅಮೆರಿಕನ್‌, ಇಟಾಲಿಯನ್‌ ಹಾಗೂ ಮೆಕ್ಸಿಕನ್‌ ಸೇರಿದಂತೆ ಹಲವು ಬಗೆಯ ಆಹಾರಗಳಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ವಸ್ತು ಈ ಮಯೋನೀಸ್‌.
ಬಾಯಿ ಚಪ್ಪರಿಸುವ ರುಚಿಯಿರುವ ಈ ಮಯೋನೀಸ್‌ ಮಾಡುವುದಾದರೂ ಹೇಗೆ ಅಂತೀರಾ? ಹೇರಳ ಪ್ರಮಾಣದಲ್ಲಿ ಎಣ್ಣೆ, ಮೊಟ್ಟೆಯ ಹಳದಿ ಲೋಳೆ ಹಾಗೂ ನಿಂಬೆರಸ ಅಥವಾ ವಿನೆಗರ್‌ ಬಳಸಿ ಇದನ್ನು ಮಾಡಲಾಗುತ್ತದೆ. ರುಚಿಗಾಗಿ ಸ್ವಲ್ಪವೇ ಸ್ವಲ್ಪ ಬಿಳಿ ಸಾಸಿವೆ ಸೇರಿಸುತ್ತಾರೆ. ಉಪ್ಪು, ಕರಿಮೆಣಸು, ಅಥವಾ ಮಸಾಲೆಗಳೂ ಸ್ವಲ್ಪ ಸೇರಿಸಲ್ಪಡುತ್ತವೆ. ಇದನ್ನು ಚೆನ್ನಾಗಿ ಬ್ಲೆಂಡ್‌ ಮಾಡಿದಾಗ ಈ ದಪ್ಪನೆಯ ಮೆಯೋನೀಸ್‌ ಆಗುತ್ತದೆ. ಕೇವಲ ಒಂದು ಚಮಚದಷ್ಟು ಮಯೋನೀಸ್‌ನಲ್ಲಿಯೇ 94 ಕ್ಯಾಲರಿಗಳಿವೆ ಎಂದರೆ, ಊಹಿಸಿ. ಅನಗತ್ಯ ಯಾವುದೇ ಪೋಷಕಾಂಶಗಳಿಲ್ಲದ ಖಾಲಿ ಕ್ಯಾಲರಿಗಳನ್ನು ಹೊಟ್ಟೆಗೆ ಹಾಕಿದಂತೆ ಇದು. ಅದರ ಜೊತೆಗೆ ಅನಗತ್ಯ ಕೊಬ್ಬೂ ಕೂಡಾ.ಇಷ್ಟೇ ಅಲ್ಲ.

ಬ್ಯಾಕ್ಟಿರಿಯಾ ಅಪಾಯ

ಬಹಳಷ್ಟು ಸಾರಿ ಮೆಯೋನೀಸನ್ನು ಸರಿಯಾಗಿ ಸಂರಕ್ಷಿಸಿಡದ ಕಾರಣ ಅದರಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯೂ ಆಗುತ್ತದಂತೆ. ಹಾಗಾಗಿ ಈ ಬಗ್ಗೆಯೂ ಜಾಗರೂಕತೆ ವಹಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಪ್ರಿಸರ್ವೇಟಿವ್‌ಗಳನ್ನು ಹಾಕಿದ ಬ್ರ್ಯಾಂಡ್‌ಗಳ ಮಯೋನೀಸ್‌ಗೆ ಹೀಗಾಗುವ ಸಂಭವ ಕಡಿಮೆ ಇದ್ದರೂ, ಹಲವೆಡೆ,ಬ್ರ್ಯಾಂಡ್‌ರಹಿತ, ಕಡಿಮೆ ದರದ ಮಯೋನೀಸ್‌ಗಳಲ್ಲಿ ಇಂತಹ ಅಪಾಯ ಹೆಚ್ಚು.
ಹಾಗಾದರೆ, ಮಯೋನೀಸ್‌ ಪ್ರಿಯರು ಏನು ಮಾಡಬೇಕು ಎಂದು ನೀವು ಮರು ಪ್ರಶ್ನೆ ಹಾಕಬಹುದು. ಮಯೋನೀಸ್‌ಗೆ ಬದಲಾಗಿ ಸ್ಯಾಂಡ್‌ವಿಚ್‌, ಬರ್ಗರ್‌ಗಳನ್ನು ರುಚಿಯಾಗಿ ಹೇಗೆ ತಿನ್ನುವುದು ಎಂದು ಕೇಳಬಹುದು. ಪ್ರಯತ್ನಿಸಿದರೆ, ದಾರಿ ಕಷ್ಟವೇನಿಲ್ಲ. ಕಡಿಮೆ ಕ್ಯಾಲರಿಯ ಮೆಯೋನೀಸ್‌ ಮೊರೆ ಹೋಗಬಹುದು. ಅಥವಾ, ಮಯೋನೀಸ್‌ ಅನ್ನು ಎಣ್ಣೆ ರಹಿತವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಅಥವಾ ಮಯೋನೀಸ್‌ ಬದಲು ಚೀಸ್‌ ಬಳಸಬಹುದು.
ಒಂದು ಬಟ್ಟೆಯಲ್ಲಿ ಮೊಸರನ್ನು ಹಾಕಿ ಅದರ ನೀರನ್ನು ಸಂಪೂರ್ಣವಾಗಿ ಹಿಂಡಿ ತೆಗೆದು. ಅದಕ್ಕೆ ನೆನೆಸಿದ ಗೋಡಂಬಿಯನ್ನು ಹಾಕಿ, ಒಂದು ಎಸಳು ಬೆಳ್ಳುಳ್ಳಿಯನ್ನೂ ಹಾಕಿ ಮಿಕ್ಸಿಯಲ್ಲಿ ರುಬ್ಬಿ ತೆಗೆದರೆ ಆ ಪೇಸ್ಟ್‌ ಅನ್ನು ಮಕ್ಕಳಿಗೆ ಮಯೋನೀಸ್‌ನಂತೆ ಸ್ಯಾಂಡ್‌ವಿಚ್‌ಗೆ ಬಳಬಹುದು. ಇದು ಉತ್ತಮ ಪರ್ಯಾಯ ಉಪಾಯ ಕೂಡಾ. ಮಕ್ಕಳಿಗೆ ಆಗಾಗ ಮಾಡಿಕೊಡುವಾಗ ಆದಷ್ಟೂ ಮಾರುಕಟ್ಟೆಯಲ್ಲಿ ಸಿಗುವ ಮೆಯೋನೀಸ್‌ ಬಿಟ್ಟು ಇಂತಹ ಮನೆಯಲ್ಲೇ ಮಾಡಿದ ಪರ್ಯಾಯಗಳನ್ನು ಬಳಸುವ ಮೂಲಕ ಅಥವಾ ಚೀಸ್‌, ಹಾಲಿನ ಕೆನೆ ಅಥವಾ ಪನೀರ್‌ ಬಳಸುವ ಮೂಲಕ ಮಕ್ಕಳ ಹೊಟ್ಟೆಗೆ ಇವು ಸೇರದಂತೆ ತಡೆಯಬಹುದು.

ಇದನ್ನೂ ಓದಿ: Best Food Cities In The World: ವಿಶ್ವದ ಟಾಪ್‌ 100 ಬೆಸ್ಟ್‌ ಆಹಾರದ ನಗರಗಳ ಪಟ್ಟಿಯಲ್ಲಿ ಭಾರತದ ಐದು ನಗರಗಳು!

Exit mobile version