Site icon Vistara News

Cooking Tips: ಪಾಸ್ತಾ, ಮ್ಯಾಕ್ರೋನಿ ಬೇಯಿಸುವಾಗ ಅಂಟುತ್ತವೆಯೋ? ಹಾಗಾದರೆ ಇಲ್ಲಿವೆ ಟಿಪ್ಸ್‌!

Cooking Tips

ಪ್ರತಿಯೊಬ್ಬರ ಮನೆಯ ಅಡುಗೆ ಕೋಣೆಯ ಡಬ್ಬದಲ್ಲೂ ಮ್ಯಾಕ್ರೋನಿ ಎಂಬ ವಸ್ತು ಇದ್ದೇ ಇರುತ್ತದೆ. ಅದರಲ್ಲೂ ಈಗ ಮಕ್ಕಳಿರುವ ಮನೆಗಳಲ್ಲಿ ಮಕ್ಕಳ ಫೇವರಿಟ್‌ ಪಾಸ್ತಾ, ಮ್ಯಾಕ್ರೋನಿ ಇರದಿದ್ದರೆ ಹೇಗೆ? ಸಾಮಾನ್ಯವಾಗಿ ಮೈದಾದಿಂದ ಮಾಡಲ್ಪಟ್ಟಿರುವ ಈ ಮ್ಯಾಕ್ರೋನಿ, ಪಾಸ್ತಾಗಳು ಇದೀಗ, ಇನ್ನಷ್ಟು ಆರೋಗ್ಯಕರ ಮಾದರಿಗಳಲ್ಲಿ ಗೋಧಿ, ಸಿರಿಧಾನ್ಯಗಳಿಂದ ಮಾಡಲ್ಪಟ್ಟಿರುವವೂ ಸಾಕಷ್ಟು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪಾಸ್ತಾವಲ್ಲದೆ, ಸ್ಯಾಂಡ್‌ವಿಚ್‌ಗಳು, ಸೂಪ್‌ಗಳು, ಸಲಾಡ್‌ಗಳಲ್ಲಿಯೂ ಬಳಕೆ ಮಾಡಲ್ಪಡುವ ಇವುಗಳನ್ನು ಬಳಸುವ ಸಂದರ್ಭಗಳಲ್ಲಿ ಬಹಳಷ್ಟು ಮಂದಿ ಎದುರಿಸುವ ಸಮಸ್ಯೆ ಎಂದರೆ, ಇದು ಬೆಂದ ಮೇಲೆ ಕೊಂಚ ಅಂಟಂಟಾಗುವುದು! ಅಂಟಾಗದಂತೆ, ಉದುರುದುರಾಗಿ ಬೇಯಿಸುವುದು ಹೇಗೆ ಎಂಬುದು ಎಲ್ಲರ ಪ್ರಶ್ನೆ. ರುಚಿರುಚಿಯಾದ ಬೆಳಗಿನ ಉಪಹಾರ ಮಾಡಲು ಹೊರಟವರಿಗೆ ಅಂದುಕೊಂಡ ಹಾಗೆ ತಿಂಡಿ ಆಗದಿದ್ದಾಗ, ಛೇ ಅನಿಸುವುದುಂಟು. ಹೀಗೆ ಅಂಟಿಕೊಳ್ಳುವುದರಿಂದ ಬಚವಾಗುವುದು ಹೇಗಪ್ಪಾ ಎಂಬುದು ಹಲವರ ಮಿಲಿಯನ್‌ ಡಾಲರ್‌ ಪ್ರಶ್ನೆ. ಇದಕ್ಕೆ ಉತ್ತರ ತುಂಬ ಸಿಂಪಲ್ಲು. ಕೆಲವು ಸರಳ ಟಿಪ್ಸ್‌ಗಳನ್ನು ಮ್ಯಾಕ್ರೋನಿ ಬೇಯಿಸುವಾಗ ಅನುಸರಿಸಿದರೆ ಸಾಕು. ನಿಮ್ಮ ಪಾಸ್ತಾ, ಮ್ಯಾಕ್ರೋನಿ ನೀವು ಅಂದುಕೊಂಡ ಹಾಗೆ ಬೇಯುತ್ತದೆ. ಬನ್ನಿ, (Cooking Tips) ಅವೇನೆಂದು ನೋಡೋಣ.

ಸಾಕಷ್ಟು ನೀರು ಹಾಕಿ

ಮ್ಯಾಕ್ರೋನಿ ಅಥವಾ ಪಾಸ್ತಾ ಬೇಯಿಸುವಾಗ ನೀವು ಸಾಕಷ್ಟು ನೀರು ಹಾಕಿದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ದಪ್ಪ ತಳವಿರುವ ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ ಬೇಯಿಸಲು ಇಡುವುದು ಇಲ್ಲಿ ಮುಖ್ಯ. ಜೊತೆಗೆ ಮ್ಯಾಕ್ರೋನಿ ಬೇಯುವಾಗ ಉಬ್ಬಿಕೊಳ್ಳಲು ಸಾಕಷ್ಟು ಜಾಗ ಇರುವಂತ ಅಗಲವಾದ ಪಾತ್ರೆಯಲ್ಲಿ ಇದ್ದರೆ ಒಳ್ಳೆಯದು. ಸಾಮಾನ್ಯವಾಗಿ ಮ್ಯಾಕ್ರೋನಿ ಹಾಗೂ ನೀರು 1:2 ಅಳತೆಯಲ್ಲಿರಲಿ.

ಉಪ್ಪು ಹಾಕಿ

ಮ್ಯಾಕ್ರೋನಿಯನ್ನು ಬೇಯಿಸುವಾಗ ನೀರಿಗೆ ಒಂದರ್ಧ ಚಮಚ ಉಪ್ಪು ಹಾಕಿ. ಇದರಿಂದ ಅವುಗಳು ಮ್ಯಾಕ್ರೋನಿಗೆ ಉಪ್ಪಿನ ರುಚಿ ಮಾತ್ರವಲ್ಲ, ಅಂಟಿಕೊಳ್ಳುವುದೂ ತಪ್ಪುತ್ತದೆ.

ಕೈಯಾಡಿಸುತ್ತಿರಿ

ಹೌದು. ಪಾಸ್ತಾ ಅಥವಾ ಮ್ಯಾಕ್ರೋನಿಯನ್ನು ಬೇಯಲು ಬಿಟ್ಟು ಆಗಾಗ ಅಂದರೆ ಕನಿಷ್ಟ ಮೂರ್ನಾಲ್ಕು ಬಾರಿ ಸೌಟಿನಿಂದ ತಿರುಗಿಸಿ. ಒಂದಕ್ಕೊಂದು ಅಂಟುವುದನ್ನು ಅಷ್ಟೇ ಅಲ್ಲ, ತಳಕ್ಕೆ ಅಂಟುವುದನ್ನು ಇದು ತಡೆಯುತ್ತದೆ. ಒಂದಕ್ಕೊಂದು ಅಂಟಿಕೊಂಡಿದ್ದರೆ ಅಲ್ಲೇ ಬಿಡಿಸಿ ಮತ್ತೆ ಕುದಿಯಲು ಬಿಡಿ.

ಅತಿಯಾಗಿ ಬೇಯಿಸಬೇಡಿ

ಹೌದು ಮ್ಯಾಕ್ರೋನಿ ಅಥವಾ ಪಾಸ್ತಾವನ್ನು ಅತಿಯಾಗಿ ಬೇಯಿಸಬೇಡಿ. ಸಾಮಾನ್ಯವಾಗಿ ಇಂತಹುಗಳ ಪ್ಯಾಕಟ್ಟಿನ ಹೊರಗಡೆ ಎಷ್ಟು ಹೊತ್ತು ಬೇಯಿಸಬೇಕೆಂದ ಸೂಚನೆಯಿರುತ್ತದೆ. ಒಮ್ಮೆ ಅವುಗಳ ಮೇಳೆ ಕಣ್ಣಾಡಿಸಿ. ಅಥವಾ ಹಾಗೆ ಬರೆದಿಲ್ಲವಾದರೆ, ಬೇಯಿಸುವಾಗ ಮೂರ್ನಾಲ್ಕು ಬಾರಿ ತಿರುವಿದಾಗ ಬೆಂದಿರುವ ಬಗ್ಗೆ ನಿಮಗೆ ಅರಿವಾಗುತ್ತದೆ. ಹೆಚ್ಚು ಬೇಯಲು ಬಿಟ್ಟರೆ ಅವು ಒಡೆಯುತ್ತದೆ, ತುಂಡಾಗುತ್ತವೆ, ಇಲ್ಲವೇ ಒಂದಕ್ಕೊಂದು ಅಂಟಿಕೊಂಡು ತಮ್ಮ ಆಕಾರವನ್ನು ಕಳೆದುಕೊಳ್ಳುತ್ತವೆ. ಬೇಯವಾಗ ಟೂತ್‌ಪಿಕ್‌ನಲ್ಲಿ ಅಥವಾ ಫೋರ್ಕ್‌ನಲ್ಲಿ ಒಮ್ಮೆ ಚುಚ್ಚಿ ನೋಡಿ, ಬೆಂದಿದೆಯಾ ಎಂದು ಚೆಕ್‌ ಮಾಡಿಕೊಳ್ಳಿ.

ತೊಳೆದುಕೊಳ್ಳಿ

ಯಾವಾಗಲೂ ಪಾಸ್ತಾ, ಮ್ಯಾಕ್ರೋನಿಯಂತಹುಗಳನ್ನು ಒಮ್ಮೆ ಭೇಯಿಸಿದ ಮೇಲೆ, ಅದನ್ನು ಸೋಸಿಕೊಂಡು, ನೀರನ್ನು ತೆಗೆದ ಮೇಲೆ ಮತ್ತೊಮ್ಮೆ, ಹರಿಯುವ ತಣ್ಣೀರಿನಿಂದ ತೊಳೆಯಿರಿ. ತೊಳೆದಾಗ ಅದರಲ್ಲಿರುವ ಅಂಟು ಹೊರಡು ಹೋಗಿ ಬಿಡಿಬಿಡಿಯಾಗುತ್ತದೆ. ಸರಿಯಾಘಿ ನೀರು ಹಾಕಿ ತೊಳೆದುಕೊಂಡು ಮತ್ತೆ ನೀರೆಲ್ಲ ಬಸಿದು ಹೋಗಲುಬಿಟ್ಟ ಮೇಲೆ ಮಸಾಲೆ ಅಥವಾ ಸಾಸ್‌ ಹಾಕಿ ನೀವು ಮಾಡುವ ಕ್ರಮದಲ್ಲಿ ಮ್ಯಾಕ್ರೋನಿ ಅಥವಾ ಪಾಸ್ತಾ ತಯಾರಿಸಿ.
ಈ ಕ್ರಮವನ್ನು ಪಾಲಿಸಿದಲ್ಲಿ ಖಂಡಿತವಾಗಿಯೂ ನೀವು ಮಾಡುವ ಪಾಸ್ತಾ ಅಥವಾ ಮ್ಯಾಕ್ರೋನಿ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಉದುರುದುರಾಗಿ ಚೆನ್ನಾಗಿಯೇ ಆಗುತ್ತದೆ.

Exit mobile version