Site icon Vistara News

Dry Seeds: ಒಣ ಬೀಜಗಳನ್ನು ಅಡುಗೆಗೆ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ!

Dry Seeds

ಬೀಜಗಳು ಕೇವಲ ಬೆಳಗಿನ ಹೊತ್ತು ನೆನೆಸಿಟ್ಟು ತಿನ್ನುವ ಅಥವಾ ಸ್ನ್ಯಾಕ್‌ ಟೈಮ್‌ಗೆ ತಿನ್ನುವ ಆಹಾರಗಳಷ್ಟೇ ಅಲ್ಲ. ಅವುಗಳನ್ನು ಸಾಕಷ್ಟು ರೀತಿಯಲ್ಲಿ ಬಗೆಬಗೆಯ ಆಹಾರ ಪದಾರ್ಥಗಳನ್ನು ಮಾಡುವಲ್ಲಿಯೂ ಪ್ರಧಾನ ಪದಾರ್ಥವಾಗಿ ಬಳಸುತ್ತೇವೆ. ಇವುಗಳು ಅನೇಕ ಖಾದ್ಯಗಳ ರುಚಿಯನ್ನು ಹೆಚ್ಚುಸುತ್ತವೆ. ಕೇವಲ ರುಚಿಯಷ್ಟೇ ಅಲ್ಲ, ಆಹಾರದ ಪೋಷಕಾಂಶಗಳ ಮಟ್ಟವನ್ನೂ ಇವು ಏರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅನೇಕ ಬಗೆಯ ಉತ್ತರ ಭಾರತೀಯ ಅಡುಗೆಗಳಲ್ಲಿ, ಸಬ್ಜಿ, ಗ್ರೇವಿಗಳಲ್ಲಿ ಬೀಜಗಳನ್ನು ಅದರ ರುಚಿ ಹಾಗೂ ಸಾಂದ್ರತೆಯನ್ನು ಹೆಚ್ಚು ಮಾಡಲು ಬಳಸಲಾಗುತ್ತದೆ. ಬೀಜಗಳಲ್ಲಿ ಗ್ಲುಟೆನ್‌ ಇಲ್ಲದೇ ಇರುವುದು ಹಾಗೂ ಇವು ಪೋಷಕಾಂಶಗಳಿಂದ ಭರಪೂರವಾಗಿರುವುದು ಕೂಡಾ ಇವುಗಳಿಂದ ಸಿಗುವ ಲಾಭ. ಆದರೆ, ಈ ಬೀಜಗಳನ್ನು ಅಡುಗೆಗೆ ಬಳಸುವ ಸಂದರ್ಭ ಹಲವರು ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಯಾವ ಬಗೆಯಲ್ಲಿ ಇದನ್ನು ಬಳಸಬೇಕು ಎಂಬ ಗೊಂದಲ ಕೆಲವರದ್ದು. ಬನ್ನಿ, ಬೀಜಗಳನ್ನು (dry seeds) ಅಡುಗೆಯಲ್ಲಿ ಬಳಸುವ ಸಂದರ್ಭ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.

ಹೆಚ್ಚು ಹುರಿಯಬೇಡಿ

ಒಣಬೀಜಗಳನ್ನು ಹಾಗೆಯೇ ತಿನ್ನುವುದು ಬಹಳ ರುಚಿ ನಿಜವೇ ಆದರೂ, ಅವುಗಳನ್ನು ಹುರಿದು ತಿನ್ನುವುದರಿಂದ ಇನ್ನಷ್ಟು ರುಚಿಯಾಗುತ್ತದೆ ಎಂಬುದು ಸತ್ಯವೇ ಆಗಿದೆ. ಆದರೆ, ಬೀಜಗಳನ್ನು ಹೆಚ್ಚು ಕಂದು ಬಣ್ಣ ಬರುವಂತೆ ಹುರಿದುಕೊಂಡು ಸೇರಿಸುವುದರಿಂದ ಕೆಲವರಿಗೆ ಹೆಚ್ಚು ರುಚಿಯಾಗುತ್ತದೆ ಎಂಬ ಯೋಚನೆ ಇರಬಹುದಾದರೂ, ಹಾಗೆ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಾಗಿ ಹುರಿದುಬಿಡುವ ಸಂಭವವಿದೆ. ಹಾಗಾದಾಗ ಇದು ಕಹಿರುಚಿಗೆ ತಿರುಗಿಬಿಡುತ್ತದೆ. ಹಾಗಾಗಿ, ಬೀಜಗಳನ್ನು ಹುರಿಯುವಾಗ ಮಂದ ಉರಿಯಲ್ಲಿ ಹುರಿದುಕೊಂಡು ಹೊಂಬಣ್ಣಕ್ಕೆ ತಿರುಗುವಾಗ ತೆಗೆದುಬಿಡಿ. ಅಥವಾ ಸ್ವಲ್ಪವೇ ಸ್ವಲ್ಪ ಹುರಿದುಕೊಂಡು ತೆಗೆದುಬಿಡಿ. ಕಪ್ಪಗಾಗಲು ಬಿಡಬೇಡಿ.

ತಾಜಾ ಆಗಿರಲಿ

ಬೀಜಗಳು ಹಾಳಾಗುವುದಿಲ್ಲವೆಂದು ನೀವಂದುಕೊಂಡರೆ ಅದು ತಪ್ಪು. ತಾಜಾ ಆಗಿ ಬೀಜಗಳನ್ನು ಖರೀದಿಸಿ ಅವುಗಳನ್ನು ಆಗಾಗಲೇ ಬಳಸಿ. ಬಹಳ ಕಾಲ ಡಬ್ಬಗಳಲ್ಲಿ ಹಾಕಿಟ್ಟಾಗ ಅವುಗಳ ತಾಜಾತನ ಕಳೆದುಹೋಗಿ ರುಚಿ ಕೆಡುತ್ತದೆ. ಬೀಜಗಳಲ್ಲಿ ಎಣ್ಣೆಯಂಶ ಹೇರಳವಾಗಿ ಇರುವುದರಿಂದ ಅವುಗಳು ಹೆಚ್ಚು ಕಾಲವಾದರೆ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಆದಷ್ಟೂ ಬೀಜಗಳನ್ನು ಆಗಾಗಲೇ ಬಳಸಿ. ಹೆಚ್ಚು ಬೀಜವಿದ್ದರೆ, ಫ್ರೀಜರ್‌ನಲ್ಲಿ ಶೇಖರಿಸಿಡಿ. ಗಾಳಿಯಾಡದ ಡಬ್ಬಗಳಲ್ಲಿ ಹಾಕಿಡಿ.

ಉಪ್ಪು ಹಾಕಿದ ಬೀಜ ಬಳಕೆ ಬೇಡ

ಉಪ್ಪು ಹಾಕಿದ ಬೀಜಗಳನ್ನು ಆಹಾರ ತಯಾರಿಸುವ ಸಂದರ್ಭ ಬಳಸಬೇಡಿ. ಹಸಿಯಾಗಿರುವ ತಾಜಾ ಬೀಜಗಳನ್ನು ಹಾಗೆಯೇ ಅಥವಾ ನೀವೇ ಹುರಿದುಕೊಂಡು ಬಳಸಿ. ಉಪ್ಪು ಹಾಕಿದ ಬೀಜಗಳನ್ನು ಬಳಸುವುದರಿಂದ ನಿಮ್ಮ ಆಹಾರದಲ್ಲಿ ಉಪ್ಪು ಹೆಚ್ಚಾಗುವ ಸಂಭವವಿದೆ. ಈ ಬಗ್ಗೆ ನಿಮಗೆ ಮೊದಲೇ ಅರಿವಾಗುವುದಿಲ್ಲ.

ಒಟ್ಟಿಗೇ ಹುರಿಯಬೇಡಿ

ಬೇರೆಬೇರೆ ಮಾದರಿಯ ಬೀಜಗಳನ್ನು ಒಟ್ಟಿಗೆ ಹುರಿಯುವ ತಪ್ಪು ಯಾವತ್ತೂ ಮಾಡಬೇಡಿ. ಯಾವುದಾದರೂ ಡಿಶ್‌ ತಯಾರಿಸುವ ಸಂದರ್ಭ ಬಗೆಬಗೆಯ ಬೀಜಗಳನ್ನು ಹಾಕುವ ಸಂದರ್ಭ ಬೇರೆ ಬೇರೆ ಬೇಜಗಳ್ನು ಬೇರೆ ಬೇರೆಯಾಗಿ ಹುರಿಯಿರಿ. ಆಗ, ಬೀಜಗಳನ್ನು ಸರಿಯಾದ ಹದದಲ್ಲಿ ಹುರಿಯಬಹುದು. ಒಂದೊಂದು ಬೀಜ ಬೇಗನೆ ಕಪ್ಪಗಾದರೆ, ಇನ್ನೂ ಕೆಲವಕ್ಕೆ ಹೆಚ್ಚು ಶಾಖ ಹೆಚ್ಚು ಹೊತ್ತು ಬೇಕಾಗುತ್ತದೆ. ಗಡಿಬಿಡಿಯಲ್ಲಿ ಹಾಗೆ ಮಾಡಿ ಆಹಾರವೇ ಕೆಟ್ಟು ಹೋಗಬಹುದು. ನಿಧಾನವಾಗಿ ಒಂದೊಂದನ್ನೇ ಸರಿಯಾದ ಪ್ರಮಾಣದಲ್ಲಿ ಮಂದ ಉರಿಯಲ್ಲಿ ಹುರಿಯಿರಿ.

ಸರಿಯಾಗಿ ನೆನೆಸಿ

ಕೆಲವು ಗ್ರೇವಿಗಳಿಗೆ ಬೀಜಗಳನ್ನು ನೆನೆಸಿಕೊಳ್ಳುವುದು ಒಳ್ಳೆಯದು. ಗಡಿಬಿಡಿಯಲ್ಲಿ ನೆನೆಸದೆ, ಹಾಗೆಯೇ ಅವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಲು ಹೊರಟರೆ ಪರಿಸ್ಥಿತಿ ಕೈಮೀರುತ್ತದೆ. ಹಾಗಾಗಿ ಗ್ರೇವಿ ಮಾಡುವ 30 ನಿಮಿಷ ಮೊದಲೇ ಬೀಜವನ್ನು ಬಿಸಿ ನೀರಿನಲ್ಲಿ ನೆನೆ ಹಾಕಿಡಿ. ಆಗ ಬಹುಬೇಗನೆ ಅವು ಮೆತ್ತಗಾಗುತ್ತವೆ. ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಲು ಸಾಧ್ಯವಾಗುತ್ತದೆ.

Exit mobile version