ಪಾಶ್ಚಾತ್ಯ ಬೆಳಗಿನ ಉಪಾಹಾರದ ಶೈಲಿ ಇದಾದರೂ, ಭಾರತೀಯ ಮನೆಗಳಲ್ಲೂ ಇಂದು ಬ್ರೆಡ್ ಸಾಮಾನ್ಯವಾಗಿದೆ. ಗಡಿಬಿಡಿಯಲ್ಲಿ ಆಫೀಸ್ ಹೊರಡುವಾಗ, ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಿರುವಾಗ, ಹೊಟ್ಟೆಗೇನೂ ರುಚಿಸದೆ ಇದ್ದಾಗ, ಮಕ್ಕಳಿಗೆ ರುಚಿರುಚಿಯಾದ ಸ್ಯಾಂಡ್‌ವಿಚ್ ಮಾಡಿಕೊಡಲು, ಹೀಗೆ ಬ್ರೆಡ್ ತಿನ್ನಲು ನಮಗೆ ನಾನಾ ಕಾರಣಗಳು. ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್ ಹೊರಡಲು, ಮಕ್ಕಳಿಗೆ ಟಿಫನ್ ಕಟ್ಟಿಕೊಡಲು ಬ್ರೆಡ್ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಹಾಗಾದರೆ, ನಾವು ನಿತ್ಯವೂ ಬಳಸುವ ಬ್ರೆಡ್‌ನ ಬಗ್ಗೆ, ಅದರಲ್ಲಿ ಬಳಸಲಾದ ವಸ್ತುಗಳ ಬಗ್ಗೆ ನಾವು ಸ್ವಲ್ಪ ಹೆಚ್ಚು ಜಾಗೃತರಾಗಿದ್ದರೆ ನಮ್ಮ ಹೊಟ್ಟೆ ಸೇರಿದ ಬ್ರೆಡ್‌ನ ಗುಣಮಟ್ಟ ನಮಗೆ ತಿಳಿಯುತ್ತದೆ. ಹಾಗಾದರೆ ಬನ್ನಿ, ನೀವು ಬ್ರೆಡ್ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು (Eating Bread) ಎಂಬುದನ್ನು ನೋಡೋಣ.
ಬ್ರೆಡ್ ಕೊಳ್ಳುವಾಗ ಗಮನಿಸಿ
ಬ್ರೆಡ್ ಮಾಡುವ ಸಂದರ್ಭ ಸಕ್ಕರೆ ಹಾಕಿಯೇ ಇರುತ್ತಾರೆ ಎಂಬ ಸತ್ಯ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನಿಜ. ಯಾಕೆಂದರೆ ಬ್ರೆಡ್‌ಗಾಗಿ ಬಳಸುವ ಈಸ್ಟ್ ಅನ್ನು ಆಕ್ಟಿವೇಟ್ ಮಾಡಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೀವು ಯಾವಾಗಲೂ ಬ್ರೆಡ್ ಖರೀದಿಸುವ ಮೊದಲು ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಬ್ರೆಡ್‌ನ ಹಿಂಬದಿಯಲ್ಲಿ ಬರೆದ ಪಟ್ಟಿಯಲ್ಲಿ ಸಕ್ಕರೆ ಎಷ್ಟು ಬಳಸಿದ್ದಾರೆಂದು ಪರೀಕ್ಷಿಸಿ. ಒಂದಲ್ಲ ಒಂದು ವಿಧದಲ್ಲಿ ಕೆಲವೊಮ್ಮೆ ಬೇರೆ ಮೂಲಗಳ ಮೂಲಕವೂ ಸೇರಿಸಲ್ಪಟ್ಟಿರುತ್ತದೆ. ಕೇವಲ ಸಕ್ಕರೆಯಷ್ಟೇ ಅಲ್ಲ, ಎಲ್ಲ ಮೂಲಗಳ ಮೂಲಕ ಸಕ್ಕರೆ ಎಷ್ಟು ಸೇರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ಮಾಡುವ ಬ್ರೆಡ್‌ನಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಅಲ್ಲದೆ, ಕಬ್ಬಿನ ಹಾಲು, ಜೇನುತುಪ್ಪ ಅಥವಾ ಇನ್ನಾವುದೇ ಮೂಲಗಳ ಮೂಲಕವೂ ಸಕ್ಕರೆ ಸೇರಿರಬಹುದು.
ಉಪ್ಪಿನ ಪ್ರಮಾಣ ಎಷ್ಟಿದೆ ನೋಡಿ
ಬ್ರೆಡ್ ಮಾಡುವ ಸಂದರ್ಭ ಅದಕ್ಕಾಗಿ ಬಳಸಿದ ಸಕ್ಕರೆಯಂತೆ ಉಪ್ಪಿನ ಪ್ರಮಾಣವೂ ಗಮನದಲ್ಲಿರಲಿ. ಬ್ರೆಡ್ ಮಾಡಲು ಬಳಸಿದ ವಸ್ತುಗಳ ಪಟ್ಟಿಯಲ್ಲಿ ಉಪ್ಪು ಎಷ್ಟು ಸೇರಿಸಲಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಬಹಳಷ್ಟು ಸಾರಿ ರುಚಿಯನ್ನು ಹೆಚ್ಚಿಸಲು, ಅಗತ್ಯಕ್ಕಿಂತಲೂ ಹೆಚ್ಚು ಉಪ್ಪನ್ನು ಫ್ಯಾಕ್ಟರಿಗಳು ಬಳಸುತ್ತವೆ. ಒಂದು ಅಂದಾಜಿನ ಪ್ರಕಾರ ಸಂಶೋಧನೆಯೊಂದು ಹೇಳಿದಂತೆ ಒಂದು ಬ್ರೆಡ್ ಸ್ಲೈಸ್‌ನಲ್ಲಿ 100ರಿಂದ 200 ಎಂಜಿ ಸೋಡಿಯಂಗಿಂತ ಹೆಚ್ಚಿರಬಾರದು. ಹಾಗಾಗಿ ಇದನ್ನು ಪರೀಕ್ಷೆ ಮಾಡಿಕೊಂಡೇ ಖರೀದಿಸಿ.
ಯಾವ ಪದಾರ್ಥ ಬಳಸಿದ್ದಾರೆ ನೋಡಿ
ಉಪ್ಪು ಹಾಗೂ ಸಕ್ಕರೆಯಷ್ಟೇ ಅಲ್ಲ, ನೀವು ಖರೀದಿಸಿದ ಬ್ರೆಡ್‌ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂದು ನೋಡಿ. ಬಿಳಿಯಾದ ಮೈದಾದ ಬ್ರೆಡ್‌ನ ಬದಲು ಗೋಧಿಯ ಬ್ರೆಡ್ ಬಳಸಿ. ಬಹಳಷ್ಟು ಸಾರಿ ಗೋಧಿಯ ಬ್ರೆಡ್‌ನಲ್ಲೂ ಕಡಿಮೆ ಪ್ರಮಾಣದಲ್ಲಿ ಗೋಧಿ ಬಳಕೆಯಾಗಿರುತ್ತದೆ ಎಂಬ ಸತ್ಯವೂ ನಿಮಗೆ ಗೊತ್ತಿರಲಿ. ಹೀಗಾ ಗಿ ಶೇ.100ರಷ್ಟು ಗೋಧಿ ಅಥವಾ ಹೋಲ್ ವೀಟ್ ಬ್ರೆಡ್ ಎಂದು ಬರೆದಿರುವ ಬ್ರೆಡ್ ಖರೀದಿಸಿ. ಅಥವಾ ಮಲ್ಟಿಗ್ರೈನ್ ಬ್ರೆಡ್ ಖರೀದಿಸಿ.
ತಯಾರಿ ದಿನ ಗಮನಿಸಿ
ಬ್ರೆಡ್ ಖರೀದಿಸುವಾಗ ಎಲ್ಲಕ್ಕಿಂತ ಮೊದಲು ಪರೀಕ್ಷಿಸಬೇಕಾದ್ದು ಅದನ್ನು ತಯಾರಿಸಿದ ದಿನಾಂಕ ಹಾಗೂ ಎಷ್ಟು ದಿನ ಬಳಸಬಹುದೆಂಬ ದಿನಾಂಕ. ದಿನಾಂಕ ಮುಗಿದುಹೋದ ಬ್ರೆಡ್‌ನನ್ನು ಬಳಸಲೇಬೇಡಿ. ಹಾಳಾಗಿರದಂತೆ ಕಂಡರೂ ಬಳಸಬೇಡಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಕೆಲವೊಮ್ಮೆ ಅಂಗಡಿಗಳಲ್ಲಿ ಇಟ್ಟಿರುವ ಬ್ರೆಡ್ ಅನ್ನು ಇಲಿಯೋ, ಕೀಟವೋ ಕಡಿದು ಸಣ್ಣ ತೂತುಗಳೂ ಆಗಿರುತ್ತವೆ. ಗಡಿಬಿಡಿಯಲ್ಲಿ ಖರೀದಿಸುವಾಗ ಇವು ಕಾಣುವುದಿಲ್ಲ. ಹೀಗಾಗಿ, ಬ್ರೆಡ್‌ನ ಪ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖರೀದಿಸುವಾಗಲೇ ಖಚಿತಪಡಿಸಿಕೊಳ್ಳಿ.
ಕೃತಕ ಪ್ರಿಸರ್ವೇಟಿವ್ ಗಮನಿಸಿ
ಬ್ರೆಡ್‌ನಲ್ಲಿ ಬಳಸಲಾದ ಕೃತಕ ಪ್ರಿಸರ್ವೇಟಿವ್‌ಗಳನ್ನು ಗಮನಿಸಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಹೆಚ್ಚು ದಿನ ಉಳಿಯಬಲ್ಲ ಬ್ರೆಡ್‌ಗಳಲ್ಲಿ ಖಂಡಿತವಾಗಿಯೂ ಪ್ರಿಸರ್ವೇಟಿವ್‌ಗಳಿರುತ್ತವೆ.
ನಾರಿನಂಶ ಮುಖ್ಯ
ಬ್ರೆಡ್‌ನಲ್ಲಿ ಎಷ್ಟು ನಾರಿನಂಶ ಇದೆ ಎಂದು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಬ್ರೆಡ್ ಮಾಡಿದ ಮೇಲೆ ನಾರಿನಂಶವನ್ನು ಕಳೆದುಕೊಳ್ಳುತ್ತದೆ. ನಾರಿನಂಶ ಹೆಚ್ಚಿರುವ ಬ್ರೆಡ್ ಯಾವಾಗಲೂ ಉತ್ತಮ ಆಯ್ಕೆ.
ಇದನ್ನೂ ಓದಿ: Baking Powder: ಬೇಕಿಂಗ್ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ