Site icon Vistara News

Best Food Cities In The World: ವಿಶ್ವದ ಟಾಪ್‌ 100 ಬೆಸ್ಟ್‌ ಆಹಾರದ ನಗರಗಳ ಪಟ್ಟಿಯಲ್ಲಿ ಭಾರತದ ಐದು ನಗರಗಳು!

Best Food Cities In The World

ಒಂದೊಂದು ಊರಿಗೂ (best food cities in the world) ಒಂದೊಂದು ರುಚಿ ಇರುತ್ತದೆ. ಅದು ಆಯಾ ಊರಿನ ಸಂಸ್ಕೃತಿ ಹಾಗೂ ಪರಿಸರಕ್ಕೆ ಸಂಬಂಧಿಸಿದ್ದೂ ಆಗಿರುತ್ತದೆ. ಯಾವುದೇ ಹೊಸ ಊರಿಗೆ ನಾವು ಹೋದರೂ, ಎಷ್ಟೇ ತಿರುಗಾಡಿದರೂ, ಆ ಊರಿನ ಊಟದ ಬಗೆಗೂ ಸಾಮಾನ್ಯವಾಗಿ ವಿಶೇಷವಾಗಿ ಆಸಕ್ತಿಯಿರುತ್ತದೆ. ಆ ಊರಿನ ವಿಶೇಷ ಬಗೆಯ ತಿನಿಸುಗಳು, ಊಟದ ಸಂಸ್ಕೃತಿ ಆ ಊರಿನ ಪರಿಚಯವನ್ನು ಮಾಡಿಕೊಡುತ್ತದೆ. ಹಾಗಾಗಿ ಊರಿಗೆಷ್ಟು ಪ್ರಾಮುಖ್ಯವೂ ಆ ಊರಿನ ಊಟಕ್ಕೂ ಇದೆ. ಆ ಊರಿನ ಸ್ಟ್ರೀಟ್‌ ಫುಡ್‌ನಿಂದ ಹಿಡಿದು, ಅಲ್ಲಿನ ಪ್ರಖ್ಯಾತ ರೆಸ್ಟೋರೆಂಟ್‌ಗಳವರೆಗೆ ಎಲ್ಲವೂ ಆ ಊರಿನ ಮಾನದಂಡವೇ ಆಗಿರುತ್ತದೆ. ಈಗೆಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಊರುಗಳ ಬಗೆಬಗೆಯ ಖಾದ್ಯಗಳು ಸುದ್ದಿ ಮಾಡುತ್ತಲೇ ಇರುತ್ತವೆ. ತಿನ್ನುವುದಕ್ಕಾಗಿಯೇ ಹೊಸ ಊರಿಗೆ ಹೋಗುವವರೂ ಇದ್ದಾರೆ.

ಅಧ್ಯಯನ ಹೇಳಿದ್ದೇನು?

ಟೇಸ್ಟ್‌ ಅಟ್ಲಾಸ್‌ ನಡೆಸಿರುವ ಸಮೀಕ್ಷೆಯಲ್ಲಿ ವಿಶ್ವದ ಟಾಪ್‌ 100 ಅತ್ಯುತ್ತಮ ಆಹಾರದ ನಗರಗಳು ಎಂಬ ಪಟ್ಟಿಯಲ್ಲಿ ಭಾರತದ ಐದು ನಗರಗಳು ಸ್ಥಾನ ಪಡೆದಿವೆ. ವಿಶ್ವದ 100 ನಗರಗಳ ಪೈಕಿ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿದ ಭಾರತದ ನಗರಗಳು ಎಂದರೆ ಮುಂಬೈ, ಹೈದರಾಬಾದ್‌, ದೆಹಲಿ, ಚೆನ್ನೈ ಹಾಗೂ ಲಖ್ನೌ! ಹೌದು ಈ ಐದು ನಗರಗಳ ವಿಶ್ವದ ಬೆಸ್ಟ್‌ ತಿನಿಸುಗಳು ಸಿಗುವ ಭಾರತದ ನಗರಗಳು ಎಂಬ ಹೊಸ ಸ್ಥಾನ ಪಡೆದುಕೊಂಡಿವೆ. ಇವುಗಳ ಪೈಕಿ ಮುಂಬೈ ಹಾಗೂ ಹೈದರಾಬಾದ್‌ ಟಾಪ್‌ 50ರ ಪಟ್ಟಿಯೊಳಗೆ ಸ್ಥಾನ ಪಡೆದಿದ್ದು, ಉಳಿದವು ನಂತರದ ಸ್ಥಾನದಲ್ಲಿವೆ. ಮುಂಬೈ 35ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್‌ 39ನೇ ಸ್ಥಾನದಲ್ಲಿದೆ. ದೆಹಲಿ 56ನೇ ಸ್ಥಾನ, ಚೆನ್ನೈ 65ನೇ ಹಾಗೂ ಲಖನೌ 92ನೇ ಸ್ಥಾನದಲ್ಲಿದೆ.
ದೆಹಲಿ ಹಾಗೂ ಮುಂಬೈಯ ಪ್ರಸಿದ್ಧ ಸ್ಟ್ರೀಟ್‌ ಫುಡ್‌ಗಳೆಂದರೆ, ಆಲೂ ಟಿಕ್ಕಿ, ಗೋಲ್‌ಗಪ್ಪೆ, ಪಾಪ್ಡಿ ಚಾಟ್‌, ದಹಿ ಬಲ್ಲ, ಸೇವ್‌ಪುರಿ, ಬೇಲ್‌ ಪುರಿ, ರಗ್ಡಾ ಪ್ಯಾಟೀಸ್‌, ವಡಾ ಪಾವ್‌ ಹಾಗೂ ಪಾವ್‌ ಭಾಜಿ. ಈ ಚಾಟ್‌ಗಳಲ್ಲೂ ವಿವಿಧ ಬಗೆಬಗಳಿದ್ದು ಸಾಮಾನ್ಯವಾಗಿ ಮುಂಬೈ ಹಾಗೂ ದೆಹಲಿಯಲ್ಲಿ ಅದ್ಭುತ ರುಚಿಯನ್ನು ಹೊಂದಿರುತ್ತದೆ. ಇವಲ್ಲದೆ, ಆಲೂ ಪರಾಠಾ, ಚಿಕನ್‌ ಕರಿ, ಬಟರ್‌ ಚಿಕನ್‌, ದಾಲ್‌ ಮಖನಿ ಇತ್ಯಾದಿಗಳೂ ಕೂಡಾ ಈ ಎರಡು ಮೆಟ್ರೋಪಾಲಿಟನ್‌ ನಗರಗಳಲ್ಲಿ ಬಹು ಪ್ರಸಿದ್ಧ.
ಹೈದರಾಬಾದ್‌ನ ಪ್ರಸಿದ್ಧ ಆಹಾರ ಎಂದರೆ ಅದು ಬಿರಿಯಾನಿ.ಬಿರಿಯಾನಿಯ ನಿಜವಾದ ರುಚಿ ಸಿಗಬೇಕಂದರೆ ಹೈದರಾಬಾದ್‌ಗೇ ಹೋಗಬೇಕು. ಇದಲ್ಲದೆ, ಹಲೀಮ್‌, ಚಿಕನ್‌ 65, ಬೋಟಿ ಕಬಾಬ್‌, ಸಮೋಸ, ಪಾಯಾ, ನಿಹಾರಿ ಇತ್ಯಾದಿಗಳೆಲ್ಲವೂ ಹೈದರಾಬಾದ್‌ನಲ್ಲಿ ಅದ್ಭುತ ಸ್ವಾದ ಹೊಂದಿರುತ್ತದೆ.

ದಕ್ಷಿಣ ಭಾರತದ ಅಡುಗೆ

ಇನ್ನು ದಕ್ಷಿಣ ಭಾರತದ ಅಡುಗೆಯ ಪರಿಚಯವಾಗಬೇಕೆಂದರೆ, ರುಚಿಯಾದ ಅಡುಗೆ ಸವಿಯಬೇಕೆಂದರೆ ಅದಕ್ಕೆ ಚೆನ್ನೈಗೆ ಹೋಗಬೇಕು. ಪಣಿಯಾರಂ, ವಡಾ, ಭಾಜಿ, ಪಕೋಡ, ಪುಟ್ಟು, ಫಿಲ್ಟರ್‌ ಕಾಫಿ, ಸುಂಡಲ್‌, ಚಕ್ಕುಲಿ, ಉತ್ತಪ್ಪಂ, ಮಸಾಲೆ ದೋಸೆ, ಇಡ್ಲಿ, ಚಟ್ನಿ, ಅನ್ನದ ಬಗೆಬಗೆಯ ಬಾತ್‌ಗಳು, ಪುಳಿಯೋಗರೆ, ಬಿಸಿಬೇಳೆಬಾತ್‌, ಸಾಂಬರ್‌ ಅನ್ನ ಇತ್ಯಾದಿ ಇತ್ಯಾದಿ ತಿನ್ನಬೇಕೆಂದರೆ ಚೆನ್ನೈಗೇ ಹೋಗಬೇಕು.

ಮೊಘಲ್ ಮಾದರಿ ಅಡುಗೆ

ಇನ್ನು ಲಖನೌ ವಿಚಾರಕ್ಕೆ ಬಂದರೆ ಇಲ್ಲಿ ಮೊಘಲ್‌ ಮಾದರಿ ಅಡುಗೆ ಪ್ರಸಿದ್ಧಿ. ಕಟೋರಿ ಚಾಟ್‌, ರೋಗನ ಜೋಶ್‌, ನಿಹಾರಿ ಕುಲ್ಚಾ, ಖಸ್ತಾ ಕಚೋರಿ, ಶೀರ್ಮಾಲ್‌, ಬನ್‌ ಮಖ್ಖನ್‌ ಚಾಯ್‌, ಮಖ್ಖನ್‌ ಮಲೈ, ಕುಲ್ಫಿ ಫಲೂಡ ಇತ್ಯಾದಿ ಇತ್ಯಾದಿ ನಾನಾ ವಿಶೇಷಗಳು ಲಖನೌನಲ್ಲಿಯೇ ತಿನ್ನಬೇಕು. ಕೆಲವು ರುಚಿಗಳನ್ನು ಆಯಾ ಊರಿನಲ್ಲೇ ತಿಂದರಷ್ಟೇ ರುಚಿ. ಬಿರಿಯಾನಿಯನ್ನು ಇನ್ಯಾವುದೋ ಊರಿನಲ್ಲಿ ತಿಂದರೆ ಅದು ಹೈದರಾಬಾದ್‌ ಬಿರಿಯಾನಿಯ ರುಚಿ ಇರುತ್ತದೋ ಹೇಳಿ!
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇಟಲಿಯ ರೋಮ್‌, ಬೊಲೋನಾ ಹಾಘೂ ನೇಪಲ್ಸ್‌ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ನಂತರ ವಿಯೆನ್ನಾ, ಟೋಕಿಯೋ, ಒಸಾಕಾ, ಹಾಂಗ್‌ಕಾಂಗ್‌, ಟ್ಯುರಿನ್‌, ಗಾಝಿಯಾನ್ತೇಪ್‌, ಬಂಡುಂಗ್‌, ಪೋಜ್ನಾನ್‌, ಸಾನ್‌ ಫ್ರಾನ್ಸಿಸ್ಕೋ, ಜಿನೀವಾಗಳು ಇವೆ.

ಇದನ್ನೂ ಓದಿ: Sleep In The Winter: ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?

Exit mobile version