ತೂಕ ಇಳಿಸುವ ಪ್ರಕ್ರಿಯೆ (weight loss) ಎಂಬುದೇ ಒಂದು ಪಯಣ. ಪ್ರಯಾಣವೊಂದರ ಹಾಗೆಯೇ, ಇಲ್ಲಿ ಎಷ್ಟೇ ಓದಿಕೊಂಡರೂ ಆ ಪ್ರಕ್ರಿಯೆಗೆ ಇಳಿದಾಗಲೇ ನಾವು ಮಾಡುವ ತಪ್ಪುಗಳು ಅರಿವಿಗೆ ಬರುವುದು ಹಾಗೂ ಹೊಸ ಹೊಸ ಅನುಭವಗಳಾಗುವುದು. ತೂಕ ಇಳಿಸುವುದೆಂದರೆ ಅದು ನಾಲಿಗೆಯ ಚಪಲಗಳನ್ನೆಲ್ಲ ಬಿಡುವುದು ಎಂಬ ಮನೋಭಾವನೆಯೂ ಹಲವರಲ್ಲಿದೆ. ಆದರೆ, ನಾಲಿಗೆಗೆ ಬೇಕಾದ ರುಚಿಯನ್ನು ನೀಡುತ್ತಲೂ ತೂಕದ ಮೇಲೆ ಗಮನ ಹರಿಸಿಕೊಂಡು ದೇಹದ ಒಳ್ಳೆಯದನ್ನೇ ಬಯಸುವ ಅದ್ಭುತ ಪಯಣವನ್ನೂ ನಾವು ಮನಸ್ಸು ಮಾಡಿದರೆ ಮಾಡಬಹುದು. ಹೀಗೆ, ತೂಕ ಇಳಿಸುವತ್ತ ಗಮನ ಹರಿಸಿಕೊಂಡು ಪೋಷಕಾಂಶಯುಕ್ತ ಆಹಾರದ ವಿಚಾರಕ್ಕೆ ಬಂದಾಗ ದಿಢೀರ್ ನೆರವಿಗೆ ಬರುವ ಆಹಾರಗಳ ಪೈಕಿ ಓಟ್ಸ್ (oats diet) ಕೂಡಾ ಒಂದು.
ಓಟ್ಸ್ ಎಂದರೆ, ಅಯ್ಯೋ ಎಂದು ಮೂಗು ಮುರಿವ ಮಂದಿಯೇ ಹೆಚ್ಚು. ಓಟ್ಸ್ ಕೆಲವು ದಿನಗಳಲ್ಲಿ ಬೋರಾಗಿಬಿಡುತ್ತದೆ, ತಿನ್ನಲು ಮನಸೇ ಬರುವುದಿಲ್ಲ ಎಂಬ ದೂರುಗಗಳೂ ಸಹಜ. ಆದರೆ, ಓಟ್ಸ್‌ನಲ್ಲಿಯೂ ರುಚಿಕಟ್ಟಾದ ಅಡುಗೆ ಮಾಡಬಹುದು. ಬೆಳಗಿನ ಉಪಹಾರಕ್ಕೆ ಓಟ್ಸ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಓಟ್ಸ್‌ನಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹೊಟ್ಟೆ ತುಂಬಿಸುವ ಆಯ್ಕೆ. ಇದರಿಂದಾಗಿ ಆಗಾಗ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಅತಿಯಾಗಿ ತಿನ್ನುವ ಬಯಕೆಯೂ ಹತೋಟಿಗೆ ಬರುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸುವಿಕೆಗೆ ಮುಖ್ಯವಾಗಿ ಬೇಕಾದ ಪ್ರೊಟೀನ್ ಕೂಡಾ ಇದರಲ್ಲಿದ್ದು ಇದು ಮಾಂಸಖಂಡಗಳನ್ನು ಟೋನ್ ಮಾಡಿ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಹಾಗಾದರೆ, ಓಟ್ಸ್‌ನನ್ನು ಬೆಳಗಿನ ಉಪಹಾರದಲ್ಲಿ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.
೧. ಓಟ್ಸ್, ಬಾದಾಮಿ ಹಾಗೂ ಬಾಳೆಹಣ್ಣಿನ ದಲಿಯಾ: ಓಟ್ಸ್ ದಲಿಯಾ ಓಟ್ಸ್‌ನಲ್ಲಿ ಮಾಡಬಹುದಾದ ಅತ್ಯಂತ ಸಾಮಾನ್ಯ ಉಪಹಾರ. ಆದರೆ, ಬಹುತೇಕರು ಇದಕ್ಕೆ ಸಕ್ಕರೆಯನ್ನೂ ಹಾಕಿ, ಆರೋಗ್ಯಕ್ಕೆ ಸಿಗಬಹುದಾ ಪ್ರಯೋಜನವನ್ನೂ ಹೊಸಕಿ ಹಾಕಿಬಿಡುತ್ತಾರೆ. ಆದರೆ ಈ ದಲಿಯಾ ಹಾಗಲ್ಲ. ಇಲ್ಲಿ, ಬೇಕಾದಷ್ಟು ಓಟ್ಸ್ ತೆಗೆದುಕೊಂಡು ಅದನ್ನು ನೀರಿನಲ್ಲಿ ಐದರಿಂದ ಹತ್ತು ನಿಮಿಷ ಬೇಯಿಸಿ. ಇದಕ್ಕೆ ಬಿಸಿ ಮಾಡಿದ ಹಾಲು ಸೇರಿಸಿ. ನೀರಿನಲ್ಲಿ ಹತ್ತು ನಿಮಿಷ ನೆನೆಸಿದ ಚಿಯಾ ಬೀಜಗಳು, ಬಾದಾಮಿ, ಕತ್ತರಿಸಿದ ಬಾಳೆಹಣ್ಣು, ಒಂದು ಚಮಚ ಜೇನುತುಪ್ಪ, ಚಿಟಿಕೆ ಚೆಕ್ಕೆ ಪುಡಿ, ಒಂದೆರಡು ಖರ್ಜೂರ ಸೇರಿಸಿ, ಒಲೆಯಿಂದ ಕೆಳಗಿಳಿಸಿ. ಅತ್ಯಂತ ರುಚಿಕರ ಹಾಗೂ ಅಷ್ಟೇ ಪೋಷಕಾಂಶಯುಕ್ತ ಓಟ್ಸ್ ದಲಿಯಾ ರೆಡಿ.
ಇದನ್ನೂ ಓದಿ: Food Tips: ಹಣ್ಣುಗಳನ್ನು ಕೆಡದಂತೆ ತಾಜಾ ಆಗಿ ಕಾಪಾಡಿಕೊಳ್ಳುವುದು ಹೇಗೆ?
೨. ಓಟ್ಸ್- ಬಟಾಣಿ ದೋಸೆ: ದೋಸೆಯೆಂಬ ತಿಂಡಿ ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದ್ದು. ನಿತ್ಯದ ಒಂದೇ ಬಗೆಯ ದೋಸೆಗಿಂತ ಬೇರೆ ದೋಸೆಯನ್ನು ಹೀಗೆ ಪ್ರಯತ್ನಿಸಬಹುದು. ಓಟ್ಸ್ ನೆನೆಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಇಂಗು, ಜೀರಿಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಹಸಿ ಬಟಾಣಿ, ತುರಿದ ಶುಂಠಿ ಸೇರಿಸಿ ಬಾಡಿಸಿಕೊಂಡು ಹಿಟ್ಟಿಗೆ ಸೇರಿಸಿ ದೋಸೆ ಹುಯ್ಯಿರಿ.
೩. ಓಟ್ಸ್ ಪಾನ್‌ಕೇಕ್: ಕೇವಲ ತೂಕ ಇಳಿಸುವವರಿಗಷ್ಟೇ ಅಲ್ಲ, ಮಕ್ಕಳಿಗೂ ಆಸಕ್ತಿಕರ ಅಷ್ಟೇ ಆರೋಗ್ಯಕರ ಬೆಳಗಿನ ತಿಂಡಿಯ ಆಯ್ಕೆಯಿದು. ಮೈದಾದ ಪಾನ್‌ಕೇಕ್ ಮಾಡುವ ಬದಲು, ಆರೋಗ್ಯಕರ ಓಟ್ಸ್ ಪಾನ್ ಕೇಕ್ ಇದು. ಓಟ್ಸ್ ನೆನೆಹಾಕಿ ಮಜ್ಜಿಗೆ ಸೇರಿಸಿ ರುಬ್ಬಿಟ್ಟುಕೊಳ್ಳಿ. ಹುಳಿ ಬಂದ ಈ ಹಿಟ್ಟಿಗೆ ಮೊಟ್ಟೆಯನ್ನೂ ಸೇರಿಸಿ ಕಲಸಿಕೊಳ್ಳಬಹುದು. ಮೊಟ್ಟೆ ತಿನ್ನದವರು ಇದನ್ನು ಬಿಡಬಹುದು. ಇದನ್ನು ಪಾನ್‌ಕೇಕ್‌ನಂತೆ ತವಾದ ಮೇಲೆ ಹುಯ್ಯಿರಿ. ಮಕ್ಕಳಿಗೆ ರುಚಿಗೆ ಬೇಕಿದ್ದರೆ ಹಿಟ್ಟಿಗೆ ಸಕ್ಕರೆ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!