Site icon Vistara News

Ghee Testing Method: ನಾವು ತಿನ್ನುವ ತುಪ್ಪ ಶುದ್ಧವಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ವಿಧಾನ

Ghee Testing Method

ಭಾರತೀಯ ಅಡುಗೆಮನೆಯಲ್ಲಿ ತುಪ್ಪದ ಸ್ಥಾನ ಬಹುಮುಖ್ಯವಾದುದು. ಪ್ರತಿಯೊಬ್ಬರೂ, ತಮ್ಮ ನಿತ್ಯದ ಆಹಾರದಲ್ಲಿ ತುಪ್ಪವನ್ನು ಒಂದಿಲ್ಲೊಂದು ಬಗೆಯಲ್ಲಿ ಸೇವಿಸುತ್ತಾರೆ. ಭಾರತೀಯ ಶೈಲಿಯ ಸಾಕಷ್ಟು ಅಡುಗೆಗಳಿಗೆ ತುಪ್ಪವನ್ನು ಹಾಕಿದರಷ್ಟೇ ಅದರ ನಿಜವಾದ ರುಚಿ, ಘಮ ಪಡೆಯುತ್ತದೆ. ದೋಸೆಗೆ, ಪರಾಠಾಕ್ಕೆ, ಬಗೆಬಗೆಯ ಖಾದ್ಯಗಳಿಗೆ, ಅನ್ನಕ್ಕೆ ಕಲಸಿಕೊಳ್ಳಲು, ಸಿಹಿತಿಂಡಿಗಳಿಗೆ ಹೀಗೆ ತುಪ್ಪ ಒಂದಿಲ್ಲೊಂದು ಬಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ತುಪ್ಪದ ಹಿತಮಿತವಾದ ಬಳಕೆ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದನ್ನೂ ಮಾಡುತ್ತದೆ. ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬನ್ನು ಪೂರೈಕೆ ಮಾಡುವ ತುಪ್ಪವನ್ನು ಇತ್ತೀಚೆಗಿನ ದಿನಗಳಲ್ಲಿ ಜನರು ಮತ್ತೆ ಬಳಸುವತ್ತ ಮುಖ ಮಾಡಲು ತೊಡಗಿದ್ದಾರೆ. ತುಪ್ಪದಲ್ಲಿರುವ ಪೋಷಕಾಂಶಗಳ ನಿಜವಾದ ಲಾಭವನ್ನು ಅರಿತುಕೊಂಡು ಅನೇಕರು ಸ್ವಲ್ಪ ತುಪ್ಪವನ್ನು ನಿತ್ಯವೂ ಆಹಾರದಲ್ಲಿ ಬಳಸುವುದನ್ನು ಆರಂಭಿಸಿ ಅದರಿಂದ ಫಲ ಕಂಡವರೂ ಇದ್ದಾರೆ. ಆಯುರ್ವೇದವೂ ಕೂಡಾ ಇದನ್ನು ಪುಷ್ಟೀಕರಿಸುತ್ತದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಿಂದಲೂ ಕೂಡಾ ತುಪ್ಪದ ಬೇಡಿಕೆ ಹೆಚ್ಚುತ್ತಲೂ ಇದೆ. ಬೇಡಿಕೆ ಹೆಚ್ಚಾದಂತೆ ಪೂರೈಕೆಯೂ ಹೆಚ್ಚಲೇಬೇಕು. ಅಗ್ಗದ ತುಪ್ಪಗಳು, ಕಲಬೆರಕೆಯ ತುಪ್ಪಗಳು ಮಾರುಕಟ್ಟೆಯನ್ನು ಪ್ರವೇಶಿಸಿ ದೇಸೀ ತುಪ್ಪಕ್ಕೂ ಸೆಡ್ಡು ಹೊಡೆಯುತ್ತಿವೆ. ಖಂಡಿತವಾಗಿ ಕಲಬೆರಕೆಯಾದ ತುಪ್ಪದಿಂದ ಆರೋಗ್ಯದ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ. ಹೀಗೆ ಮೋಸ ಹೋಗುವ ಗ್ರಾಹಕರು ಅನೇಕ. ಹಾಗಾದರೆ ಬನ್ನಿ, ಕಲಬೆರಕೆಯಾಗಿಲ್ಲದ, ಒಳ್ಳೆಯ ಶುದ್ಧ ತುಪ್ಪವನ್ನು ಕಂಡು ಹಿಡಿಯುವುದು (Ghee Testing Method) ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಎಫ್‌ಎಸ್‌ಎಸ್‌ಎಐ ಪ್ರಕಾರ, ಸಾಮಾನ್ಯವಾಗಿ ತುಪ್ಪಕ್ಕೆ ಬೆರೆಸುವ ಕಲಬೆರಕೆ ವಸ್ತುಗಳೆಂದರೆ ವೆಜಿಟೆಬಲ್‌ ಆಯಿಲ್, ಪ್ರಾಣಿಗಳ ಕೊಬ್ಬು, ಖನಿಜಗಳ ಕೊಬ್ಬು, ಹಾಗೂ ಸ್ಟಾರ್ಚ್.‌ ಇಂತಹ ಕೊಬ್ಬುಗಳನ್ನು ತುಪ್ಪಕ್ಕೆ ಸೇರಿಸುವುದರಿಂದ ಬೀಟಾ ಸೈಟೋಸ್ಟೆರಾಲ್‌ ಹಾಗೂ ಕೊಲೆಸ್ಟೆರಾಲ್‌ಗಳ ಮಟ್ಟ ಏರಿಕೆಯಾಗುತ್ತದೆ. ಅಷ್ಟೇ ಅಲ್ಲ, ಇವು ತುಪ್ಪದಿಂದ ಲಭಿಸಬಹುದಾದ ಎಲ್ಲ ಆರೋಗ್ಯಕರ ಲಾಭಗಳನ್ನೂ ಸರ್ವನಾಶ ಮಾಡುತ್ತದೆ. ಇದರಿಂದ ನಮಗೆ ತುಪ್ಪದ ಲಾಭಗಳು ದಕ್ಕುವುದಿಲ್ಲ. ಬದಲಾಗಿ ಆ ಕೊಬ್ಬಿನ ಸೇವನೆಯ ಅಡ್ಡ ಪರಿಣಾಮಗಳು ಆರೋಗ್ಯದ ಮೇಲಾಗುತ್ತದೆ.
ಹಾಗಾದರೆ ಇಂತಹ ತುಪ್ಪ ನಮ್ಮ ಹೊಟ್ಟೆ ಸೇರದಂತೆ ನಾವು ತಡೆಯುವುದು ಸಾಧ್ಯವಿಲ್ಲವೇ? ಮಾರುಕಟ್ಟೆಯಲ್ಲಿ ಕಂಡ ಜಾಹಿರಾತನ್ನು ನಂಬಿ ತಂದ ನಾವು ಮೂರ್ಖರಾದೆವೇ? ಇದರ ಪರೀಕ್ಷೆ ಹೇಗೆ ಏಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಕೆಳಗಿನ ವಿಧಾನಗಳಿಂದ ತುಪ್ಪದ ಶುದ್ಧತೆಯನ್ನು ನೀವು ಪರೀಕ್ಷಿಸಬಹುದು.

ಮೇಲ್ಮೈ ಪರೀಕ್ಷೆ

ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ಹಾದನ್ನು ಚೆನ್ನಾಗಿ ಉಜ್ಜಿಕೊಳ್ಳಿ. ತುಪ್ಪ ನಿಮ್ಮ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪ. ನಿಮ್ಮ ಅಂಗೈಯಲ್ಲಿ ಏನಾದರೂ ಘನ ವಸ್ತು ಹಾಗೆಯೇ ಉಳಿದಿದೆ, ಪೂರ್ತಿಯಾಗಿ ತುಪ್ಪ ಕರಗಿಲ್ಲ ಎಂದರೆ ನೀವು ತಂದ ತುಪ್ಪದಲ್ಲಿ ಕಲಬೆರಕೆಯಿದೆ ಎಂದರ್ಥ.

ಉಷ್ಣತೆಯ ಪರೀಕ್ಷೆ

ಒಂದು ಚಮಚ ತುಪ್ಪವನ್ನು ಹಾಗೆಯೇ ಗ್ಯಾಸ್‌ ಸ್ಟವ್‌ ಮೇಲೆ ಹಿಡಿದಾಗ ಅದರ ಮೇಲ್ಮೈಯಲ್ಲಿ ವ್ಯತ್ಯಾಸವಾದರೆ ಹಾಗೂ ಅದು ಹೊಂಬಣ್ಣದಲ್ಲಿ ಕರಗಿದರೆ ಅದು ಶುದ್ಧ ತುಪ್ಪ ಎಂದರ್ಥ. ಬಣ್ಣದಲ್ಲಿ ಅಂಥ ವ್ಯತ್ಯಾಸವಾಗದೆ, ಅದು ತಿಳಿ ಹಳದಿ, ಬಿಳಿ ಬಣ್ಣದಲ್ಲೇ ಇದ್ದರೆ ನೀವು ಅಂಥ ತುಪ್ಪವನ್ನು ಖರೀದಿಸದೇ ಇರುವುದು ಒಳ್ಳೆಯದು.

ಇದನ್ನೂ ಓದಿ: Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ಬಾಟಲ್‌ ಪರೀಕ್ಷೆ

ತುಪ್ಪವನ್ನು ಒಂದು ಪಾರದರ್ಶಕ ಬಾಟಲಿಗೆ ಹಾಕಿಡಿ. ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಈಗ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡರೆ ನಿಮ್ಮ ತುಪ್ಪದಲ್ಲಿ ಕಲಬೆರಕೆಯಾಗಿದೆ ಎಂದು ಅರ್ಥ.
ತುಪ್ಪದ ಆರೋಗ್ಯಕರ ಲಾಭಗಳನ್ನು ಪಡೆಯಲು ಶುದ್ಧ ತುಪ್ಪದ ಬಳಕೆ ಅತ್ಯಗತ್ಯ. ನೀವು ಖರೀದಿಸಿ ತರುವ ತುಪ್ಪದ ಶುದ್ಧತೆಯ ಅರಿವು ನಿಮಗಿರಲಿ.

Exit mobile version