Site icon Vistara News

Green Tea: ಗ್ರೀನ್‌ ಟೀ ಕುಡಿಯುವ ಮಂದಿ ಈ ತಪ್ಪುಗಳನ್ನು ಮಾಡಬೇಡಿ!

green tea

ಬಹಳಷ್ಟು ಮಂದಿ ಕಾಫಿ, ಚಹಾದಂತಹ ಪೇಯಗಳನ್ನು ಬಿಟ್ಟು ಗ್ರೀನ್‌ ಟೀ (Green Tea) ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರು ತೂಕ ಇಳಿಸುವ ಪಣ ತೊಟ್ಟು ಗ್ರೀನ್‌ ಟೀ ಕುಡಿಯಲಾರಂಭಿಸುತ್ತಾರೆ. ಗ್ರೀನ್‌ ಟೀ ದೇಹಕ್ಕೆ ಒಳ್ಳೆಯದು ನಿಜವೇ. ಆದರೆ, ಬಹಳಷ್ಟು ಮಂದಿ ತಾವು ಮಾಡುವ ತಪ್ಪುಗಳ ಮೂಲಕ ಗ್ರೀನ್‌ ಟೀಯಿಂದ ನಿಜವಾಗಿ ದಕ್ಕಬಹುದಾದ ಪೋಷಕಾಂಶಗಳು ದಕ್ಕದೇ ಇರಬಹುದು. ಹಾಗಾದರೆ ಬನ್ನಿ, ಗ್ರೀನ್‌ ಟೀಯನ್ನು ಕುಡಿಯುವವರು ಈ ಯಾವೆಲ್ಲ ತಪ್ಪುಗಳನ್ನು ಮಾಡಬಾರದು (health tips) ಎಂಬುದ್ನು ನೋಡೋಣ ಬನ್ನಿ.

1. ಖಾಲಿ ಹೊಟ್ಟೆಯಲ್ಲಿ ಕುಡಿಯುವುದು: ಬಹಳಷ್ಟು ಮಂದಿ ಮಾಡುವ ತಪ್ಪು ಇದೇ. ಎಲ್ಲರೂ, ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಚಹಾದ ಜಾಗಕ್ಕೆ ಗ್ರೀನ್‌ ಟೀ ತಂದರೆ, ಮುಗೀತು, ನಾವು ಆರೋಗ್ಯದ ಕಹಳೆ ಊದಿದಂತೆಯೇ ಎಂದುಕೊಂಡರೆ ಅದು ತಪ್ಪು. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿ ನಮ್ಮ ಯಥಾವತ್‌ ಚಹಾದ ಬದಲಿಗೆ ಗ್ರೀನ್‌ ಟೀ ಕುಡಿದರೆ, ಅದು ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕೆಂದೇನಿಲ್ಲ.ಕೆಲವರಿಗೆ ಅದು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನೂ ತಂದೊಡ್ಡಬಹುದು. ಹಾಗಾಗಿ, ಜೀರ್ಣದ ತೊಂದರೆಗಳನ್ನು ಆಹ್ವಾನಿಸುವುದಕ್ಕೆ ಬದಲಾಗಿ ಗ್ರೀನ್‌ ಟೀ ಕುಡಿವ ಮೊದಲು ಏನಾದರೂ ತಿನ್ನುವುದು ಒಳ್ಳೆಯದು.

2. ಅತಿಯಾಗಿ ಕುಡಿಯುವುದು: ಗ್ರೀನ್‌ ಟೀ ಒಳ್ಳೆಯದು ಎಂದುಕೊಂಡು ಕೆಲವರು ಗ್ರೀನ್‌ ಟೀಯನ್ನೇ ಅತಿಯಾಗಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ನಿಮಗೆ ಗೊತ್ತಿರಬಹುದು. ಅತಿಯಾಗಿ ಗ್ರೀನ್‌ ಟೀ ಕುಡಿಯುವುದರಿಂದ ನಿದ್ರಾಹೀನತೆ, ಒತ್ತಡ, ಹಾಗೂ ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಬಹುದು. ಗ್ರೀನ್‌ ಟೀಯನ್ನೂ ಕೂಡಾ ದಿನಕ್ಕೆ ಎರಡರಿಂದ ಮೂರು ಕಪ್‌ಗಿಂತ ಹೆಚ್ಚು ಕುಡಿಯದಿರಿ.

3. ರಾತ್ರಿ ಕುಡಿಯುವುದು: ಗ್ರೀನ್‌ ಟೀ ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಗ್ರೀನ್‌ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ರಾತ್ರಿಯಾದ ಮೇಲೆ ಗ್ರೀನ್‌ ಟೀ ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಇದು ನಿದ್ರಾಹೀನತೆಯಂಥ ಸಮಸ್ಯೆಯನ್ನೂ ತರಬಹುದು. ಹಾಗಾಗಿ ರಾತ್ರಿ ಮಲಗುವುದಕ್ಕಿಂತ ಮೊದಲ ಎರಡರಿಂದ ಮೂರು ಗಂಟೆಗಳ ಸಮಯದಿಂದಲೇ ಆದಷ್ಟೂ ಗ್ರೀನ್‌ ಟೀ ಕುಡಿಯದಿರುವುದು ಒಳ್ಳೆಯದು.

4. ಊಟವಾದ ತಕ್ಷಣ ಕುಡಿಯುವುದು: ಗ್ರೀನ್‌ ಟೀಯನ್ನು ಊಟವಾದ ತಕ್ಷಣ ಕುಡಿಯುವುದು ಕೂಡಾ ಕೆಲವರು ಮಾಡುವ ತಪ್ಪು. ಹೀಗೆ ಮಾಡುವುದರಿಂದ ನಾವು ಉಂಡ ಆಹಾರದಿಂದ ಕಬ್ಬಿಣಾಂಶ ಹೀರಿಕೊಳ್ಳುವುದಕ್ಕೆ ತಡೆಯುಂಟಾಗುತ್ತದೆ. ಇದರಿಂದ ನಿಧಾನವಾಗಿ ಅನೀಮಿಯಾದಂತಹ ಸಮಸ್ಯೆಯೂ ಎದುರಾಗಬಹುದು. ಹಾಗಾಗಿ ಊಟದ ನಂತರ ಸುಮಾರು ಒಂದು ಗಂಟೆ ಬಿಟ್ಟು ಗ್ರೀನ್‌ ಟೀ ಕುಡಿಯಬಹುದಂತೆ.

ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್‌!

5. ಕುದಿಯುವ ನೀರು ಬಳಸುವುದು: ಹೌದು ಇದು ನಿಮಗೆ ಆಶ್ಚರ್ಯ ತರಿಸಬಹುದು. ಆದರೆ ಸತ್ಯ. ಕುದಿಯುತ್ತಿರುವ ನೀರಿನಲ್ಲಿ ಗ್ರೀನ್‌ ಟೀ ಮಾಡಿ ಕುಡಿಯುವುದರಿಂದ ಗ್ರೀನ್‌ ಟೀಯಲ್ಲಿನ ಅಗತ್ಯ ಪೋಷಕಾಂಶಗಳು ನಷ್ಟವಾಗುತ್ತದಂತೆ. ಹಾಗಾಗಿ, ಕುದಿಸಿಟ್ಟ ನೀರಿಗೆ ಗ್ರೀನ್‌ ಟೀ ಬ್ಯಾಗ್‌ ಅಥವಾ ಪುಡಿ ಹಾಕಿ, ಸೋಸಿಕೊಂಡು ಕುಡಿಯಬಹುದು.

6. ಔಷಧಿಯೊಂದಿಗೆ ಸೇವಿಸುವುದು: ಕೆಲವು ಔಷಧಿಗಳ ಜೊತೆ ಗ್ರೀನ್‌ ಟೀ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಔಷಧಿ ಸೇವಿಸುವ ಮಂದಿ ವೈದ್ಯರ ಬಳಿ ಗ್ರೀನ್‌ ಟೀ ಸೇವಿಸಬಹುದೋ ಎಂದು ಕೇಳಿ ಕುಡಿಯಿರಿ.

7. ಬಳಸಿದ ಬ್ಯಾಗ್‌ಗಳನ್ನೇ ಬಳಸುವುದು: ಗ್ರೀನ್‌ ಟೀಯ ಬಳಸಿದ ಬ್ಯಾಗ್‌ಗಳನ್ನು ಎಸೆಯಲು ಮನಸ್ಸಾಗದೆ ಮತ್ತೆ ಉಪಯೋಗ ಮಾಡುವುದು ಕೂಡಾ ಕೆಲವರು ಅನುಸರಿಸುವ ಯತ್ನ. ಆದರೆ, ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಏಕಪ್ರಕಾರದಲ್ಲಿ ದೊರೆಯದು.

ಇದನ್ನೂ ಓದಿ: Food Tips: ಗರಿಗರಿ ಫ್ರೆಂಚ್‌ ಫ್ರೈಸ್‌ ಮನೆಯಲ್ಲೇ ಮಾಡಲು ಇಲ್ಲಿವೆ ಪಂಚಸೂತ್ರಗಳು!

Exit mobile version