ಹೇಳಿ ಕೇಳಿ ಈಗ ಹಣ್ಣುಗಳ ಸುಗ್ಗಿ. ಚಳಿಗಾಲ ಮುಗಿದು ವಸಂತ ಕಾಲ ಬರುವ ಈ ಸಮಯದಲ್ಲಿ ಹೂಗಳೂ ಅರಳಿ ನಳನಳಿಸುವ ಜೊತೆಗೆ ಮಾರುಕಟ್ಟೆ ತುಂಬ ಥರವೇಹಾರಿ ಹಣ್ಣುಗಳು. ಕಪ್ಪು, ಹಸಿರು ಬಣ್ಣಗಳ ದ್ರಾಕ್ಷಿಗಳು, ಸ್ಟ್ರಾಬೆರಿ, ರಸ್ಬೆರಿ, ಕಿತ್ತಳೆ, ಜ್ಯೂಸಿಯಾಗಿರುವ ಕಿನ್ನೋ ಸೇರಿದಂತೆ ಎಲ್ಲ ಕಾಲದಲ್ಲೂ ಸಿಗುವ ಹಣ್ಣುಗಳೂ ಸೇರಿ ಮಾರುಕಟ್ಟೆ ಬಣ್ಣಬಣ್ಣಗಳಿಂದ ಕಂಗೊಳಿಸುತ್ತಿರುತ್ತದೆ. ಮಕ್ಕಳ ಡಬ್ಬಿಗೆ, ನಮಗೆ, ಬಿಡುವಾದ ಹೊತ್ತಿನಲ್ಲಿ ತಿನ್ನಲು, ಹಿರಿಯರಿಗೆ ಎಂದೆಲ್ಲ ಯೋಚಿಸಿ ನಾವು ಆದಷ್ಟೂ ಆರೋಗ್ಯಕರ ಹಣ್ಣುಗಳನ್ನೇ ತಿನ್ನುವುದು ಕೂಡಾ ಒಳ್ಳೆಯದಲ್ಲವೇ ಎಂದುಕೊಂಡು ಕೆಜಿಗಟ್ಟಲೆ ಹಣ್ಣನ್ನು ಮನೆಗೆ ತರುತ್ತೇವೆ. ಮಕ್ಕಳಿಗೂ, ಹಿರಿಯರಿಗೂ ಕೊಟ್ಟು ನಾವೂ ತಿನ್ನುತ್ತೇವೆ. ಆಹಾ ಎಂಥಾ ಸಿಹಿ ರುಚಿಯ ಹಣ್ಣುಗಳು ಎಂದು ಸವಿದು ಚಪ್ಪರಿಸಿ ತಿನ್ನುತ್ತೇವೆ. ಆರೋಗ್ಯಕರವಾದದ್ದನ್ನೇ ನಾವು ಸೇವಿಸಿದ್ದೇವೆ ಎಂಬ ತೃಪ್ತಿಯೂ ನಮ್ಮದು. ಆದರೆ, ತಿನ್ನುವ ಮೊದಲು ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಆರೋಗ್ಯಕರವಾದದ್ದನ್ನೇ ನಿಜವಾಗಿಯೂ ತಿಂದಿದ್ದೇವಾ ಎಂದು ಒಮ್ಮೆ ಹೆಗಲು ಮುಟ್ಟಿ ನೋಡಬೇಕಾದ ಸಂದರ್ಭ ಈಗಿದೆ. ಹಾಗಾದರೆ, ಬನ್ನಿ, ಹಣ್ಣುಗಳನ್ನು ತಿನ್ನುವ ಮೊದಲು ಯಾವ ಎಚ್ಚರ ನಮಗಿರಬೇಕು (Best Ways To Clean Fruit) ಎಂಬುದನ್ನು ನೋಡೋಣ.
ಹಣ್ಣುಗಳನ್ನು ತಿನ್ನುವ ಮೊದಲು ಕೇವಲ ನೀರಿಗೊಡ್ಡಿ ತೊಳೆದರೆ ಸಾಲದು ಚೆನ್ನಾಗಿ ತೊಳೆಯುವುದು ನಮಗೆ ಗೊತ್ತಿರಬೇಕು. ಹೌದು. ಹಣ್ಣುಗಳನ್ನು ತಿನ್ನುವಾಗ ಕಾಡುವ ಬಹು ದೊಡ್ಡ ಪ್ರಶ್ನೆ ಎಂದರೆ, ನಾವು ತಿನ್ನುತ್ತಿರುವ ಹಣ್ಣು ರಾಸಾಯನಿಕ ಮುಕ್ತವಾಗಿದೆಯೇ? ನಾನು ತೊಳೆದಿರುವುದು ಅದರ ಮೇಲಿರುವ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೊಳೆಯುವಲ್ಲಿ ಯಶಸ್ವಿಯಾಗಿದೆಯೇ ಎಂದು. ಯಾಕೆಂದರೆ, ಕೇವಲ ಸುಮ್ಮನೆ ನೀರಿಗೊಮ್ಮೆ ಹಿಡಿದು ತೊಳೆಯುವ ಶಾಸ್ತ್ರ ಮಾಡಿ ತಿಂದರೆ, ಅಥವಾ ತೊಳೆಯದೇ ತಿಂದರೆ, ಅವುಗಳ ಮೇಲ್ಮೈಯಲ್ಲಿರುವ ಕೀಟನಾಶಕಗಳು, ರಸಾಯನಿಕಗಳು, ಧೂಳು ಎಲ್ಲವೂ ನಮ್ಮ ಹೊಟ್ಟೆ ಸೇರುತ್ತವೆ. ಸ್ಟ್ರಾಬೆರ್ರಿಗಳು, ಇತರ ಬೆರ್ರಿ ಹಣ್ಣುಗಳು, ದ್ರಾಕ್ಷಿ ಹಣ್ಣುಗಳಲ್ಲಿ ಹೆಚ್ಚು ಕೀಟನಾಶಕ ಸಿಂಪಡಿಸಲ್ಪಟ್ಟರುತ್ತದೆಯಂತೆ. ಮುಖ್ಯವಾಗಿ ದ್ರಾಕ್ಷಿ ಹಣ್ಣಿನ ಬೆಳೆಗೆ ಅತ್ಯಂತ ಹೆಚ್ಚು ಕೀಟನಾಶಕಗಳು ಸಿಂಪಡಣೆಯಾಗಿರುತ್ತದೆ. ಹೀಗಾಗಿ ಅವುಗಳನ್ನು ತಿನ್ನುವ ಮೊದಲು ಸಾಕಷ್ಟು ಎಚ್ಚರಿಗೆ ವಹಿಸಬೇಕು.
ಸ್ಟ್ರಾಬೆರ್ರಿ ಹಣ್ಣನ್ನು ಹೆಚ್ಚು ದಿನಗಳ ಕಾಲ ತೇವಾಂಶದಲ್ಲಿ ಇಡುವುದರಿಂದ ಅದರ ಮೇಲ್ಮೈಯಲ್ಲಿ ಫಂಗಸ್ ಬೆಳೆಯುವ ಸಂದರ್ಭಗಳಿರುತ್ತವೆ. ಇವು ಕಣ್ಣಿಗೆ ಕಾಣದೆ ಇರುವ ಸಾಧ್ಯತೆಗಳೂ ಕೆಲವೊಮ್ಮೆ ಇರುತ್ತವೆ. ಇವುಗಳನ್ನು ತಿನ್ನುವುದರಿಂದ ಈ ಫಂಗಸ್ ಹೊಟ್ಟೆ ಸೇರಿಕೊಂಡು ಗಂಟಲ ಇನ್ಫೆಕ್ಷನ್, ಶೀತ, ನೆಗಡಿ, ಮತ್ತಿತರ ಸಮಸ್ಯೆಗಳೂ ಬರಬಹುದು. ಹಾಗಾದರೆ ಬನ್ನಿ, ಯಾವೆಲ್ಲ ಕ್ರಮಗಳಿಂದ ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬಹುದು ನೋಡೋಣ.
ಉಪ್ಪುನೀರು
ಎಲ್ಲಕ್ಕಿಂತ ಸುಲಭವಾಗಿ ತೊಳೆಯುವ ಕ್ರಮ ಎಂದರೆ, ಕನಿಷ್ಟ 20 ನಿಮಿಷಗಳ ಕಾಲ ದ್ರಾಕ್ಷಿಯಂತಹ ಹಣ್ಣುಗಳನ್ನು ಉಪ್ಪು ನೀರಿನಲ್ಲಿ ಮುಳುಗಿಸಿ ಇಡುವುದು. ನೀರಿಗೆ ಉಪ್ಪು ಹಾಕಿಟ್ಟು ಅದರಲ್ಲಿ ದ್ರಾಕ್ಷಿಯನ್ನು ಅದ್ದಿಟ್ಟು ನಂತರ ಹರಿಯುವ ನೀರಿನಲ್ಲಿ ತೊಳೆದುಕೊಂಡರೆ, ದ್ರಾಕ್ಷಿ ತಿನ್ನಬಹುದು. ಅಥವಾ ಯಾವುದೇ ಹಣ್ಣನ್ನು ಹೀಗೆ ತೊಳೆದು ತಿನ್ನಬಹುದು.
ವಿನೆಗರ್
ಉಪ್ಪುನೀರಿನ ವಿಧಾನ ಬೇಡವೆಂದರೆ ಬೇರೆ ತೊಳೆಯುವ ವಿಧಾನಗಳೂ ಇವೆ. ವಿನೆಗರ್ ಹಾಗೂ ನೀರಿನ ಮಿಶ್ರಣದಲ್ಲಿಯೂ ತೊಳೆಯಬಹುದು. ನೀರು ಹಾಗೂ ವಿನೆಗರ್ ಅನ್ನು 3:1 ಅನುಪಾತದಲ್ಲಿ ಬೆರೆಸಿ ಅದರಲ್ಲಿ ಹಣ್ಣನ್ನು 10ರಿಂದ 15 ನಿಮಿಷಗಳ ಕಾಲ ತೊಳೆಯಬೇಕು.
ಬೇಕಿಂಗ್ ಸೋಡಾ
1:3ರ ಅನುಪಾತದಲ್ಲಿ ಬೇಕಿಂಗ್ ಸೋಡಾ ಹಾಗೂ ನೀರನ್ನು ಬೆರೆಸಿ ಈ ಮಿಶ್ರಣದಲ್ಲಿ 10ರಿಂದ 15 ನಿಮಿಷಗಳ ಕಾಲ ಹಣ್ಣನ್ನು ಮುಳುಗಿಸಿ ತೊಳೆದು ಸ್ವಚ್ಛಗೊಳಿಸಬಹುದು.
ಫ್ರುಟ್ ವಾಶ್ ಅಥವಾ ವೆಜ್ಜೀ ವಾಶ್
ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ರುಟ್ ವಾಶ್ ಲಿಕ್ವಿಡ್ ಮೂಲಕವೂ ತೊಳೆಯಬಹುದು. ಮಾರುಕಟ್ಟೆಯಲ್ಲಿ ರೆಡಿಮೇಡ್ ಆಗಿ ಸಿಗುವ ಇಂತಹ ವಾಶ್‌ಗಳನ್ನು ಬಳಸುವ ಸಂದರ್ಭದಲ್ಲಿ ಅವುಗಳಲ್ಲಿ ಬರೆದಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಂಡು, ಅವರು ಹೇಳಿದ ಪ್ರಮಾಣದಲ್ಲೇ ಲಿಕ್ವಿಡ್ ಅನ್ನು ನೀರಿನ ಜೊತೆಗೆ ಹಾಖಿ ತೆಳುವಾಗಿಸಿ ಆಮೇಲೆ ಬಳಸಿ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!