ಬೆಂಗಳೂರು: ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ (Health Tips Kannada) ಮಂದಿ ಏನೆಲ್ಲ ಸರ್ಕಸ್ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು (foods to get rid of acne) ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.
ಹಾಲು
ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್ ಐಜಿಎಫ್-1 ಹಾಗೂ ಬೊವಿನ್ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.
ಇದನ್ನೂ ಓದಿ: Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?
ಅಯೋಡಿನ್
ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್ ಮಾಡಬಹುದು.
ಹೆಚ್ಚು ಗ್ಲಿಸೆಮಿಕ್ ಇಂಡೆಕ್ಸ್ ಇರುವ ಆಹಾರಗಳು
ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್ ಸಿರಪ್, ಮೈದಾ, ಸಕ್ಕರೆ, ರಿಫೈನ್ಡ್ ಧಾನ್ಯಗಳು, ಸಾಸ್ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.
ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ
ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್, ಓಯ್ಸ್ಟರ್, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್ ಇವೆ.
ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.