Site icon Vistara News

Hing benefits | ಅಡುಗೆಮನೆಯಲ್ಲೇ ಇರುವ ನಿಮ್ಮ ಆಪತ್‌ಬಾಂಧವ ಇಂಗು

hing uses

ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ರುಚಿ ಎನ್ನುವ ಅಜ್ಜಿಕಾಲದ ಗಾದೆಯನ್ನು ನಾವೆಲ್ಲ ಕೇಳಿದವರೇ. ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ಕೆಲವು ಸಾಮಗ್ರಿಗಳ ಪೈಕಿ ಇಂಗು ಸಹ ಒಂದು. ಗಾದೆಯೇ ಸೂಚಿಸುವಂತೆ, ಅಡುಗೆಯನ್ನು ರುಚಿಗಟ್ಟಿಸಲು ಬೇಕೇಬೇಕಾದ ವಸ್ತುವಿದು. ಭಾರತ, ಪಾಕಿಸ್ತಾನ, ಇರಾನ್‌ ಮತ್ತು ಅಫ್ಘಾನಿಸ್ತಾನಗಳಲ್ಲಿ ಪೊದರಿನಂತೆ ಬೆಳೆಯುವ ಒಂದು ಜಾತಿಯ ಹಳದಿ ಮಿಶ್ರಿತ ಹಸಿರು ಗಿಡಗಳಿಂದ ದೊರೆಯುವ ಅಂಟು ಈ ಇಂಗು. ಭಾರತೀಯ ಸೂಪಶಾಸ್ತ್ರದಲ್ಲಿ ಇಂಗಿಲ್ಲದೆ ಅಡುಗೆಯಿಲ್ಲ ಎನ್ನುವಷ್ಟು ಪ್ರಚಲಿತವಿರುವ ಈ ವಸ್ತು, ಹಲವಾರು ಔಷಧೀಯ ಪದ್ಧತಿಗಳಲ್ಲಿ ಚಿಕಿತ್ಸೆಗೆ ಬಳಸಲ್ಪಡುತ್ತದೆ. ಮನೆಮದ್ದಾಗಿ ನಾನಾ ಸಮಸ್ಯೆಗಳಿಗೆ ಸಮಾಧಾನ ನೀಡುತ್ತಿದೆ.

ಪಚನಕಾರಿ: ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಇಂಗೇ ಮದ್ದು. ಅಸಿಡಿಟಿ, ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಇದರಿಂದಾಗಿ ಹೊಟ್ಟೆ ನೋವು, ಹೊಟ್ಟೆಯ ಸಣ್ಣಪುಟ್ಟ ಸೋಂಕುಗಳಿಗೂ ಇದು ಪರಿಹಾರವಾಗಬಲ್ಲದು. ಪಚನಕ್ರಿಯೆಯನ್ನು ಸರಾಗಗೊಳಿಸುವ ಈ ಸಾಮರ್ಥ್ಯದಿಂದಾಗಿ, ತೂಕ ಇಳಿಸುವವರು ಇಂಗನ್ನು ಧಾರಾಳವಾಗಿ ಬಳಸಬಹುದು.

ಶ್ವಾಸನಾಳದ ಸಮಸ್ಯೆಗಳು: ಶಿಲೀಂಧ್ರ ನಿರೋಧಕ, ವೈರಸ್‌ ನಾಶಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣವಿರುವ ಇಂಗನ್ನು, ನೆಗಡಿ, ಕೆಮ್ಮು, ಅಸ್ತಮಾ, ಬ್ರಾಂಕೈಟಿಸ್‌, ನ್ಯುಮೋನಿಯಾ, ನಾಯಿಕೆಮ್ಮು ಮುಂತಾದ ಶ್ವಾಸನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಕಟ್ಟಿದ ಕಫದಿಂದ ಎದೆ ಬಿಗಿಯುವ ಅನುಭವವನ್ನು ಕಡಿಮೆ ಮಾಡಿ, ಉಸಿರಾಟವನ್ನು ಸರಾಗ ಮಾಡುವ ಸಾಮರ್ಥ್ಯ ಇದಕ್ಕಿದೆ.

ಫಲವಂತಿಕೆ ಹೆಚ್ಚಳ: ಮಹಿಳೆ ಮತ್ತು ಪುರುಷರಿಬ್ಬರಲ್ಲೂ ಫಲವಂತಿಕೆ ಹೆಚ್ಚಳಕ್ಕೆ ಇಂಗು ಬಳಕೆಯಲ್ಲಿದೆ. ಮಹಿಳೆಯರಲ್ಲಿ ಪ್ರೊಜೆಸ್ಟಿರಾನ್‌ ಚೋದಕವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಕಾಮೋತ್ತೇಜಕ ಗುಣವೂ ಈ ವಸ್ತುವಿಗಿದೆ.

ಹೃದಯಕ್ಕೆ ಕ್ಷೇಮ: ರಕ್ತ ನೀರಾಗಿಸುವ ಸತ್ವವನ್ನು ಇಂಗು ಹೊಂದಿದೆ. ಹೆಚ್ಚಿನ ಪ್ರಮಾಣದ ಪೊಟಾಶಿಯಂ ಹೊಂದಿರುವ ಈ ಅಂಟು, ರಕ್ತದೊತ್ತಡವನ್ನೂ ಕಡಿಮೆ ಮಾಡಬಲ್ಲದು. ಹೀಗೆ ರಕ್ತ ಹೆಪ್ಪುಗಟ್ಟದಂತೆ ತಡೆದು, ರಕ್ತದೊತ್ತಡವನ್ನೂ ಕಡಿಮೆ ಮಾಡುವ ಇಂಗಿನ ಸತತ ಬಳಕೆಯಿಂದ ಪಾರ್ಶ್ವವಾಯು ಮತ್ತು ಹೃದ್ರೋಗಗಳನ್ನು ದೂರವಿಡಲು ಸಹಾಯವಾಗುತ್ತದೆ.

ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

ಹೊಟ್ಟೆನೋವು ಶಮನ: ಮಹಿಳೆಯರಿಗೆ ಮುಟ್ಟಿನ ಸಂದರ್ಭಗಳಲ್ಲಿ ಬರುವ ಹೊಟ್ಟೆನೋವು ಶಮನಕ್ಕೆ ಇಂಗು ಉಪಯೋಗವಾಗುತ್ತದೆ. ಅಂದರೆ, ರಕ್ತ ತಿಳಿಗೊಳಿಸುವುದರಿಂದ ಕಿಬ್ಬೊಟ್ಟೆಯಲ್ಲಿನ ತೀಕ್ಷ್ಣ ನೋವು ಕಡಿಮೆ ಮಾಡುತ್ತದೆ. ಪ್ರೊಜೆಸ್ಟಿರಾನ್‌ ಹಾರ್ಮೋನು ಉತ್ಪತ್ತಿ ಮಾಡುವುದರಿಂದ, ಅನಿಯಮಿತ ಋತುಸ್ರಾವದ ತೊಂದರೆಯನ್ನೂ ನಿವಾರಿಸಬಲ್ಲದು. ಆದರೆ ಗರ್ಭಿಣಿಯರು ಇಂಗಿನ ಬಳಕೆಯನ್ನು ಮಿತವಾಗಿ ಮಾಡಲು ಆಯುರ್ವೇದ ಸೂಚಿಸುತ್ತದೆ.

ತಲೆನೋವಿಗೆ: ತಲೆಯಲ್ಲಿ ಸಿಡಿಯುವಂಥ ಶೂಲೆಯಿದ್ದರೆ ಅದನ್ನು ನಿವಾರಿಸಬಲ್ಲದು ಇಂಗು. ಉರಿಯೂತ ತಗ್ಗಿಸಲು ಸಮರ್ಥವಾಗಿರುವ ಈ ಅಂಟು, ಒತ್ತಡ ನಿವಾರಣೆಗೂ ಸೈ. ಹಾಗಾಗಿ ಮೈಗ್ರೇನ್‌ನಿಂದ, ಒತ್ತಡದಿಂದ ಕಾಣಿಸಿಕೊಳ್ಳುವ ತಲೆಶೂಲೆಯನ್ನು ಕಡಿಮೆ ಮಾಡಲು ಇಂಗಿನ ನೆರವು ಪಡೆಯಬಹುದು.

ಕೀಟಗಳ ಕಡಿತಕ್ಕೆ: ಕೆಲವು ಜಾತಿಯ ಕೀಟಗಳ ಕಡಿತ ಅಥವಾ ಕುಟುಕು ಅತೀವ ನೋವು ತರಬಲ್ಲದು. ಕಡಿತದ ನಂಜು ತಗ್ಗುವವರೆಗೆ ತೀಕ್ಷ್ಣ ನೋವು ಕಾಡುತ್ತಲೇ ಇರುತ್ತದೆ. ಉರಿಯೂತ ತಗ್ಗಿಸುವುದರ ಜೊತೆಗೆ ನೋವು ನಿವಾರಣೆಯ ಸಾಧ್ಯತೆಯನ್ನೂ ಹೊಂದಿರುವ ಇಂಗು ಈಗಲೂ ಉಪಕಾರಿ. ಬೆಳ್ಳುಳ್ಳಿಯೊಂದಿಗೆ ಇಂಗನ್ನು ಅರೆದು, ಕೀಟ ಕಚ್ಚಿದ ಜಾಗಕ್ಕೆ ನೇರವಾಗಿ ಲೇಪಿಸುವುದು ಒಳ್ಳೆಯ ಉಪಶಮನ ನೀಡುತ್ತದೆ.

ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

Exit mobile version