ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಲು ಬೇಕು ಅನಿಸುವುದು ಸಹಜ. ಇಂತಹ ಸಮಯದಲ್ಲಿ ಬಿಸಿಬಿಸಿಯಾಗಿ, ರುಚಿಯಾಗಿ ಜೊತೆಗೆ ಆರೋಗ್ಯಕರವಾಗಿಯೂ ಕಾಣುವ ಕೆಲವೇ ಕೆಲವು ತಿನಿಸುಗಳ ಪೈಕಿ ಥಟ್ಟನೆ ನೆನಪಾಗುವುದು ಜೋಳ. ಜೋಳದ ತೆನೆಯನ್ನು ಹಾಗೆಯೇ ಬೆಂಕಿಯಲ್ಲಿ ಸುಟ್ಟು ತಿನ್ನುವ ಮಜಾವೇ ಬೇರೆ. ಹೊರಗೆ ಕಾಲಿಟ್ಟರೆ ರಸ್ತೆಬದಿಯಲ್ಲಿ ಒಂದಿಷ್ಟು ಜೋಳದ ತೆನೆಗಳನ್ನಿಟ್ಟುಕೊಂಡು ರುಚಿಯಾದ ಜೋಳ ಸುಟ್ಟು ಕೊಡುತ್ತಾರೆ. ಸುಮ್ಮನೆ ಪಾರ್ಕಿನಲ್ಲಿ ಕೂರುವಾಗಲೋ, ರಸ್ತೆಯುದ್ದಕ್ಕೂ ಹಸಿವಾಗಿ ನಡೆಯುವಾಗಲೋ, ಬಸ್ಸಿಗಾಗಿ, ಮೆಟ್ರೋಗಾಗಿ ಕಾಯುವಾಗಲೋ, ಕೆರೆ ಬದಿಯಲ್ಲಿ ಸುಮ್ಮನೆ ಸಂಗಾತಿಯ ಹೆಗಲಿಗೆ ತಲೆಯಿಟ್ಟು ಕೂತಿರುವಾಗಲೋ ಈ ಬಿಸಿಬಿಸಿ ಜೋಳವನ್ನು ತಿನ್ನುವುದರಿಂದ ಸಿಕ್ಕುವ ಖುಷಿ ಅಪರಿಮಿತವೇ. ಇಂತಹ ರುಚಿಯಾದ ಜೋಳವನ್ನು ಮನೆಯಲ್ಲೂ ನಾವು ಮಾಡಬಹುದಲ್ಲ ಎಂದುಕೊಂಡು ಜೋಳ ಸುಟ್ಟರೆ ಆರಂಭದಲ್ಲಿ ಈ ಪ್ರಯತ್ನ ಕೈಕೊಡುವುದೇ ಹೆಚ್ಚು. ಸುಟ್ಟರಾಯಿತಲ್ಲ, ಅದೇನು ಬ್ರಹ್ಮವಿದ್ಯೆಯೇ ಎಂದು ಕೇಳಬೇಡಿ. ಇಲ್ಲಿ, ಜೋಳವನ್ನು ಸುಡುವುದಷ್ಟೇ ಅಲ್ಲ, ಅದೇ ರುಚಿಯೂ ನಮಗೆ ಬೇಕು. ಸುಟ್ಟ ಕೂಡಲೇ, ಸ್ಟ್ರೀಟ್ ಸ್ಟೈಲ್ ಜೋಳದ ರುಚಿ ಬರದು. ಬನ್ನಿ, ಸರಿಯಾದ ಕ್ರಮದಲ್ಲಿ, ಸ್ಟ್ರೀಟ್ ಸ್ಟೈಲ್ ಸುಟ್ಟ ಜೋಳ (ಭುಟ್ಟಾ) ಮಾಡವ ಬಗೆಯನ್ನು ನೋಡೋಣ. ಅದೇ ರುಚಿ ಪಡೆಯಲು ಬೇಕಾದ ಕೆಲವು (Hot Corn Recipe ) ಸರಳ ಕ್ರಮಗಳನ್ನು ತಿಳಿಯೋಣ.
- ಸುಟ್ಟ ಜೋಳದ ರುಚಿ, ಯಾವಾಗಲೂ ಅದಕ್ಕೆ ಬಳಸುವ ಮಸಾಲೆಯಲ್ಲಿಯೂ ಅಡಗಿದೆ. ಸಾಮಾನ್ಯವಾಗಿ ಸುಟ್ಟ ಜೋಳಕ್ಕೆ ಚಾಟ್ ಮಸಾಲದ ಜೊತೆಗೆ ಕೆಂಪುಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಸವರಲಾಗುತ್ತದೆ. ನೀವು ಈ ಮಸಾಲೆಯನ್ನು ಹೊರಗಡೆಯಿಂದ ಕೊಂಡು ತಂದು ಬಳಸುತ್ತೀರಾದರೆಸರಿ, ನೀವೇ ಮನೆಯಲ್ಲಿ ಈ ಮಸಾಲೆಯನ್ನು ಅರೆದು ಸಿದ್ಧಪರಿಸಿದರೆ, ಘಮ, ತಾಜಾತನ ಹಾಗೂ ರುಚಿ ಎಲ್ಲವೂ ಹೆಚ್ಚು. ಖಂಡಿತವಾಗಿ ಇದು ನಿಮ್ಮ ಶ್ರಮ ಹಾಗೂ ಸಮಯವನ್ನು ಬೇಡುತ್ತದೆ.
- ಜೋಳದ ತೆನೆಯನ್ನು ಸುಡುವಾಗ ಸಾಮಾನ್ಯವಾಗಿ ಹೊರಗಡೆ ಬೀದಿಬದಿಯಲ್ಲಿ ಇದ್ದಿಲಿನ ಒಲೆಯಲ್ಲಿ ಸುಡುವುದು ಜಾಸ್ತಿ. ಆದರೆ, ಮನೆಯಲ್ಲಿ ನಾವು ಸುಡುವಾಗ ನೇರವಾಗಿ ಗ್ಯಾಸ್ನ ಒಲೆಯಲ್ಲಿ ಇಡುತ್ತೇವೆ. ಇಂತಹ ಸಂದರ್ಭ ಇದು ಕೆಲವೊಮ್ಮೆ ಹೆಚ್ಚಾಗುವುದು ಅಥವಾ ಕಡಿಮೆಯಾಗುವ ಸಂಭವ ಹೆಚ್ಚು. ಗ್ಯಾಸ್ನ ಒಲೆಯ ತೀಕ್ಷ್ಣತೆ ಹೆಚ್ಚು. ಗ್ಯಾಸ್ನ ಒಲೆಯಲ್ಲಿ ಸುಡುವಾಗ ಎಲ್ಲ ಬದಿಯನ್ನು ನಿಯಮಿತವಾಗಿ ತಿರುಗಿಸಿ ಸುಡುತ್ತಾ ಬನ್ನಿ. ಆಗ ಎಲ್ಲ ಬದಿಯೂ ಸರಿಯಾಗಿ ಸುಡುತ್ತದೆ.
- ಬದಿಗಳೆಲ್ಲ ಸ್ವಲ್ಪ ಕಪ್ಪಾಗುವ ಹಾಗೆ ಸುಟ್ಟ ಮೇಲೆ, ಬೆಣ್ಣೆಯನ್ನು ಸವರಿ. ಬೆಣ್ಣೆ ಸವರಿದ ಜೋಳಕ್ಕೆ ಆಹಾ ಎಂಬ ರುಚಿ.
- ಬೆಣ್ಣೆ ಸವರಿದ ಮೇಲೆ ಜೋಳವನ್ನು ನೀವು ರೆಡಿ ಮಾಡಿದ ಮಸಾಲೆಯ ಮೇಲೆ ಹೊರಳಿಸಿ. ಅಥವಾ ಕೈಯಿಂದ ಮಸಾಲೆಯನ್ನು ತೆಗೆದು ಚಿಮುಕಿಸಿ. ಎಲ್ಲ ಬದಿಗಳಿಗೂ ಮಸಾಲೆ ತಲುಪಲಿ. ನಿಮ್ಮ ರುಚಿಗೆ ಅನುಗುಣವಾಗಿ ಬೇಕಾದಷ್ಟು ಮಸಾಲೆ ಹಾಕಿಕೊಳ್ಳಬಹುದು.
- ಇಲ್ಲಿಗೇ ಮುಗಿಯಲಿಲ್ಲ. ಈಗ ಈ ಮಸಾಲೆಯುಕ್ತ ಜೋಳದ ತೆನೆಯ ಮೇಲೆ ನಿಂಬೆಹಣ್ಣಿನ ರಸವನ್ನು ಹಿಂಡಿ. ನಿಂಬೆಹಣ್ಣಿನ ಹುಳಿ ರುಚಿಯೂ ಸುಟ್ಟ ಜೋಳದ ಜೊತೆಗೆ ಸೇರಿಕೊಂಡರೆ ಸಿಗುವ ರುಚಿಯ ಮುಂದೆ ಬೇರಾವುದೂ ನಿಲ್ಲದು. ಅಂಥ ಸ್ವರ್ಗ ಸಮಾನ ರುಚಿಯ ಹಬೆಯಾಡುವ ಬಿಸಿ ಜೋಳವನ್ನು ಕೈಯಲ್ಲಿ ಹಿಡಿದು, ಬಾಲ್ಕನಿಯಲ್ಲಿ ಮಳೆ ನೋಡುತ್ತಾ ತಿನ್ನಲು ಕೂತರೆ, ಇನ್ನೇನು ಬೇಕು ಹೇಳಿ. ಮಳೆಯಲ್ಲಿ ಸುಖವನ್ನು ಕಾಣಲು ಇದಕ್ಕಿಂತ ಸುಲಭವಾದ ಪರ್ಫೆಕ್ಟ್ ಉಪಾಯ ಇನ್ನೊಂದಿಲ್ಲ.
ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!