ಬಹುತೇಕರ ನಿತ್ಯದ ದಿನಚರಿಯಲ್ಲಿ ಚಹಾಕ್ಕೊಂದು ಪ್ರತ್ಯೇಕ ಸ್ಥಾನವಿದೆ. ಭಾರತೀಯರಾದ ನಮಗೆ ದಿನ ಬೆಳಗಾಗುವುದೇ ಚಹಾದಿಂದ. ಬೆಳಗ್ಗೆ ಎದ್ದ ಕೂಡಲೇ, ಬಿಸಿಬಿಸಿ ಹಬೆಯಾಡುವ ಚಹಾ ಕಪ್ ಜೊತೆಗೆ ಕೈಯಲ್ಲೊಂದು ಪತ್ರಿಕೆ ಇದ್ದರೆ ಬೆಳಗಿನ ಅನುಭವ. ಮಸಾಲೆ ಚಹಾ, ಚಳಿಗಾಲದ ಶುಂಠಿ ಹಾಕಿದ ಚಹಾ, ಶೀತಕ್ಕೆ ತುಳಸಿ ಹಾಕಿದ ಚಹಾ, ಏಲಕ್ಕಿ ಚಹಾ ಹೀಗೆ ಚಹಾದಲ್ಲಿ ಬಗೆಬಗೆಯ ವಿಧಗಳಿದ್ದರೂ, ಆಗಾಗ ಹೊಸತೊಂದು ಬಗೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಿನ ದಿನಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ಚಹಾದ ಅಂದಗೆಡಿಸಿದರೆ, ಇನ್ನೂ ಕೆಲವೊಮ್ಮೆ ಹೊಸತೊಂದು ಚಹಾದ ಬಗೆಯು ಗಮನ ಸೆಳೆದು ಎಲ್ಲರೂ ಆ ಸ್ವಲ್ಪ ದಿನಗಳ ಕಾಲ ಆ ಹೊಸ ಚಹಾದ ಮೋಹದಲ್ಲಿ ಬೀಳುತ್ತಾರೆ. ಈಗ ಈ ಹವಾ ಮತ್ತೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿರಿಯಾನಿ ಚಹಾ ಎಂಬ ಹೊಸತೊಂದು ಚಹಾ ಸದ್ದು ಮಾಡುತ್ತಿದೆ. ಭಾರೀ ಸುದ್ದಿಯಲ್ಲಿರುವ ಈ ಟ್ರೆಂಡಿಂಗ್ ಚಹಾದ ಹೆಸರಿನ ಜೊತೆ ಬಿರಿಯಾನಿ ಏಕಿದೆ ಎಂದು ಆಶ್ಚರ್ಯಪಡಬೇಡಿ. ಬಿರಿಯಾನಿ ಹಾಕಿ ಚಹಾದ (Biryani tea) ಕುಲಗೆಡಿಸಿದ್ದಾರೇನೋ ಎಂದು ಮೂಗು ಮುರಿಯುವ ಮುನ್ನ ಈ ಚಹಾದ ವಿಶೇಷ ಏನು ಎಂಬುದನ್ನು ನೋಡಿಕೊಂಡು ಬರೋಣ. ಕೆಲವರಿಗೆ ಇದು ವಾಹ್ ಎನಿಸಿದರೆ, ಇನ್ನೂ ಕೆಲವರಿಗೆ ಅಯ್ಯೋ ಎನಿಸಬಹುದು!
ಚಹಾ ಪುಡಿ ಬೇಕೇಬೇಕು
ಈ ಬಿರಿಯಾನಿ ಚಹಾ ಮಾಡಲು ಚಹಾ ಪುಡಿ ಬೇಕೇಬೇಕು. ನಿಮ್ಮ ಇಷ್ಟದ ಬ್ರ್ಯಾಂಡ್‌ನ ಯಾವುದೇ ಚಹಾಪುಡಿಯನ್ನೂ ನೀವು ಈ ಬಿರಿಯಾನಿ ಚಹಾ ಮಾಡಲು ಬಳಸಬಹುದು. ಒಳ್ಳೆಯ ಸ್ಟ್ರಾಂಗ್ ಫ್ಲೇವರ್ ಇರುವ ಚಹಾಪುಡಿಯನ್ನೇ ಬಳಸಿ. ಯಾಕೆಂದರೆ ಇದು ಚಹಾಕ್ಕೆ ಉತ್ತಮ ಖಡಕ್ ರುಚಿಯನ್ನು ನೀಡುತ್ತದೆ.
ಕೆಲವು ಮಸಾಲೆ ಬಳಸಿ
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಕುದಿಸುವಾಗ ಚಹಾಪುಡಿಯನ್ನು ಹಾಕಿ. ಈ ಚಹಾ ಪುಡಿಯ ಜೊತೆಗೆ ಕೆಲವು ಮಸಾಲೆಗಳನ್ನೂ ಹಾಕಿ. ಕರಿಮೆಣಸು, ಏಲಕ್ಕಿ, ಚೆಕ್ಕೆ, ಸೋಂಪು ಇತ್ಯಾದಿ ಮಸಾಲೆಗಳನ್ನು ಕುಟ್ಟಿ ಮೊದಲೇ ಪುಡಿ ಮಾಡಿಟ್ಟುಕೊಂಡು ಅದನ್ನು ಚಹಾ ಕುದಿಸುವಾಗ ಎರಡು ಮೂರು ಚಿಟಿಕೆಯಷ್ಟು ಅಥವಾ ನಿಮ್ಮ ನಿಮ್ಮ ಘಮಕ್ಕೆ ಅನುಕೂಲವಾಗುವಷ್ಟು ಹಾಕಿ. ಈ ಮಿಶ್ರಣ ಸುಮಾರು ಐದು ನಿಮಿಷಗಳ ಕಾಲ ಕುದಿಯಲಿ.
ಇಲ್ಲಿ ವಿಧಾನ ಭಿನ್ನ
ಈಗ ಇದೆ ಟ್ವಿಸ್ಟ್. ಸಾಮಾನ್ಯವಾಗಿ ಚಹಾ ಕುದಿಯುವಾಗಲೇ ಅದಕ್ಕೆ ಶುಂಠಿಯನ್ನೂ ತುರಿದು ಹಾಕುವುದುಂಟು. ಶುಂಠಿ ಚಹಾ ಮಾಡುವುದೂ ಕೂಡಾ ಇದೇ ಕ್ರಮದಲ್ಲಿ. ಆದರೆ, ಇಲ್ಲಿ ಮಾತ್ರ ವಿಧಾನ ಕೊಂಚ ಭಿನ್ನ. ಇಲ್ಲೀಗ ನೀವು ಶುಂಠಿಯನ್ನು ತುರಿದಿಡಿ. ಕುದಿಸಿದ ಚಹಾವನ್ನು ಕೆಳಗಿಳಿಸಿ ಸೋಸಿಕೊಳ್ಳಿ. ಸೋಸಿದ ಚಹಾಕ್ಕೆ ಈ ಹಸಿ ಶುಂಠಿಯನ್ನು ಮೇಲಿನಿಂದ ಹಾಕಿ. ನಂತರ ನಿಂಬೆಹಣ್ಣನ್ನು ಹಿಂಡಿ. ಬೇಕಿದ್ದರೆ, ಒಂದು ಚಮಚ ಜೇನುತುಪ್ಪವನ್ನೂ ಸೇರಿಸಬಹುದು.
ಒಮ್ಮೆ ಮಾಡಿ ನೋಡಿ
ವಿಶೇಷವೆಂದರೆ ಬಿರಿಯಾನಿ ಚಹಾದ ಕಥೆ ಇಲ್ಲಿಗೇ ಮುಗಿದಿಲ್ಲ. ಶುಂಠಿ, ಜೇನುತುಪ್ಪ ಹಾಕಿ, ನಿಂಬೆಹಣ್ಣು ಹಿಂಡಿದ ಮೇಲೆ ಚಹಾದ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಉದುರಿಸಿ. ಥೇಟ್ ಬಿರಿಯಾನಿಯ ಅಥವಾ ಪುಲಾವ್ ಮೇಲೆ ಉದುರಿಸಿದ ಹಾಗೆ. ಹೊಂಬಣ್ಣದ ಚಹಾದ ಮೇಳೆ ಹಸಿರು ತೋರಣದ ಹಾಗೆ ಈ ಕೊತ್ತಂಬರಿ ಸೊಪ್ಪು ಕಾಣಿಸುತ್ತದೆ. ನೋಡಲು ಅದ್ಭುತವಾಗಿ ಕಾಣುವ ಇದರ ರುಚಿಯೂ ಮಜವಾಗಿದೆ ಎಂದು ಕೆಲವರು ಈಗಾಗಲೇ ಇದರ ಘಮ ಹಾಗೂ ರುಚಿಗೆ ಫಿದಾ ಆಗಿದ್ದಾರೆ. ಆದರೆ, ಇನ್ನೂ ಕೆಲವರು, ಇದ್ಯಾಕೋ ನಮಗೆ ಸರಿ ಹೊಂದುತ್ತಿಲ್ಲ ಎಂದು ಹಳೆಯ ಶೈಲಿಯ ಹಾಲು ಹಾಕಿದ ಚಹಾಕ್ಕೇ ಮರಳಿದ್ದಾರಂತೆ. ನಿಮಗೆ ಹೇಗನಿಸಿತು ಈ ಹೊಸ ಬಿರಿಯಾನಿ ಚಹಾ? ತಡವೇಕೆ, ಒಮ್ಮೆ ಮಾಡಿ ನೋಡಿ!