ವಾಸನೆ ಗಾಢವೇ ಆದರೂ ಬೆಳ್ಳುಳ್ಳಿ ಕಿಚನ್‌ನ ಸೂಪರ್ ಸ್ಟಾರ್. ಅಡುಗೆಗೆ ಒಂದು ವಿಶಿಷ್ಟ ಘಮವನ್ನೂ ರುಚಿಯನ್ನು ಕೊಟ್ಟು ಯಾವುದೇ ಅಡುಗೆಯಲ್ಲಾದರೂ ತನ್ನತನವನ್ನು ಗಾಢವಾಗಿ ಎತ್ತಿ ತೋರಿಸುವ ಗುಣ ಇದಕ್ಕಿದೆ. ಗುಂಪಿನಲ್ಲಿ ಗೋವಿಂದವಾಗದೆ, ಗುಂಪಿನಲ್ಲಿದ್ದೂ ಪ್ರತ್ಯೇಕವಾಗಿ ನಿಲ್ಲುವ ಗುಣ ಇದಕ್ಕಿದೆ. ಇಂತಹ ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೂದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು. ಬನ್ನಿ, ಬೆಳ್ಳುಳ್ಳಿಯನ್ನು ಬಳಸುವಾಗ ನೆನಪಿನಲ್ಲಿಡಬೇಕಾದ ಕೆಲವು ಮುಖ್ಯವಾದ (How To Cook With Garlic) ಅಂಶಗಳು ಇಲ್ಲಿವೆ.
ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವ ಮೊದಲು ತೊಳೆದುಕೊಳ್ಳಿ. ಅಡುಗೆ ಮಾಡುವ ಮೊದಲು ಯಾವುದೇ ತರಕಾರಿ, ಧಾನ್ಯ, ಬೇಳೆ ಕಾಳುಗಳೇ ಇರಲಿ ತೊಳೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರ ಸ್ವಚ್ಛವಾಗಿರುವುದು ಬಹಳ ಮುಖ್ಯ. ಆದರೆ ಬೆಳ್ಳುಳ್ಳಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಲು ಇರುವ ಸುಲಭ ವಿಧಾನ ಎಂದರೆ ಅದನ್ನು ನೀರಿನಲ್ಲಿ ಅರ್ಧ ಗಂಟೆ ನೆನೆ ಹಾಕುವುದು. ಇದರಿಂದ ಸಿಪ್ಪೆ ಸುಲಭವಾಗಿ ಬಿಡಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕತ್ತರಿಸಲು ಸುಲಭವಾಗುತ್ತದೆ.
ಕೆಲವೊಮ್ಮೆ ನಾವು ತರಕಾರಿಯನ್ನು ಹೇಗೆ ಕತ್ತರಿಸುತ್ತೇವೆ ಎಂಬುದರಲ್ಲಿಯೂ ಅದರ ರುಚಿ ಅಡಗಿದೆ. ಕೆಲವಕ್ಕೆ ಬೆಳ್ಳುಳ್ಳಿಯನ್ನು ಹಾಗೆಯೇ ಹಾಕಿದರೆ ರುಚಿಯೆನಿಸಿದರೆ, ಇನ್ನೂ ಕೆಲವಕ್ಕೆ ಕತ್ತರಿಸಿ ಹಾಕಬೇಕು. ಕೆಲವಕ್ಕೆ ಸಣ್ಣದಾಗಿ ಹೆಚ್ಚಿ ಹಾಕಬೇಕು. ಇನ್ನೂ ಕೆಲವಕ್ಕೆ ಪೇಸ್ಟ್ ಮಾಡಿ ಹಾಕಬೇಕು. ಯಾವುದಕ್ಕೆ ಹೇಗಿರಬೇಕೋ ಹಾಗೆಯೇ ಮಾಡಿ. ಬೆಳ್ಳುಳ್ಳಿ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ.
ಬೆಳ್ಳುಳ್ಳಿಯ ಘಮ ಹಾಗೂ ರುಚಿ ಸರಿಯಾಗಿ ಬರಬೇಕೆಂದರೆ ಅದನ್ನು ಯಾವಾಗ ಅಡುಗೆಗೆ ಸೇರಿಸಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಅಡುಗೆಗಳಲ್ಲಿ ಮುಂಚಿತವಾಗಿ ಬೆಳ್ಳುಳ್ಳಿಯನ್ನು ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು ಬೇರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಬೆಳ್ಳುಳ್ಳಿಯ ಕೆಟ್ಟ ವಾಸನೆ ಅಡುಗೆಯಲ್ಲಿ ಮೇಳೈಸುತ್ತದೆ. ಇನ್ನೂ ಕೆಲವಕ್ಕೆ ಒಗ್ಗರಣೆಯೊಂದಿಗೆ ಹುರಿದುಕೊಂಡು ಹಾಕುತ್ತೇವೆ. ಹಾಗಾಗಿ, ಈ ಕ್ರಮವನ್ನು ಸರಿಯಾಗಿಯೇ ಪಾಲಿಸಿ.
ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಹುರದುಕೊಳ್ಳುವಾಗ ಸದಾ ಎಚ್ಚರವಾಗಿರಬೇಕು. ಯಾಕೆಂದರೆ ಹುರಿದದ್ದು ಕಡಿಮೆಯಾಗಲೂಬಾರದು. ಹೆಚ್ಚಾಗಲೂಬಾರದು. ಕಡಿಮೆ ಹುರಿದರೆ ಹಸಿ ವಾಸನೆ ಹೋಗದು. ಹೆಚ್ಚಾದರೆ ಸುಟ್ಟು ಬಿಡುತ್ತದೆ. ಹಾಗಾಗಿ, ಬೆಳ್ಳುಳ್ಳಿಯನ್ನು ಕಪ್ಪಾಗುವವರೆಗೆ ಹುರಿಯಬೇಡಿ. ಅದರ ಪೋಷಕಾಂಶಗಳನ್ನು ಸರಿಯಾಗಿ ಬಳಸಬೇಕೆಂದರೆ ಹದವಾಗಿ ಹುರಿಯಿರಿ.
ಇದನ್ನೂ ಓದಿ: Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!
ಇಡಿಯಾದ ಬೆಳ್ಳುಳ್ಳಿಯನ್ನು ಅಡುಗೆಗೆ ಹಾಗೆಯೇ ಬಳಸಿವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಬೆಳ್ಳುಳ್ಳಿಯಲ್ಲಿರುವ ಎನ್‌ಝೈಮ್‌ಗಳು ಸರಿಯಾಗಿ ಆಹಾರದೊಂದಿಗೆ ಮಿಳಿತವಾಗದು. ಇದಕ್ಕಾಗಿ, ಬೆಳ್ಳುಳ್ಳಿ ಆಹಾರದಲ್ಲಿ ಹಾಗೆಯೇ ಇರಬೇಕೆಂದು ಬಯಸಿದರೆ ಅದನ್ನು ಕತ್ತರಿಸಿ ಹುರಿದುಕೊಳ್ಳಿ. ಕತ್ತರಿಸಿದ ಬೆಳ್ಳುಳ್ಳಿಯಲ್ಲಿ ಬಹುಬೇಗನೆ ಅದರಲ್ಲಿರುವ ಅಲ್ಲಿನಾಸ್ ಎಂಬ ಎನ್‌ಝೈಮ್ ಅಲ್ಲಿನ್ ಆಗಿ ನಂತರ ಅಲ್ಲಿಸಿನ್ ಪರಿವರ್ತನೆಗೊಳ್ಳಲು ಸುಲಭವಾಗುತ್ತದೆ. ಅಲ್ಲಿಸಿನ್ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಹಾಗೂ ರ್ಕತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.