Site icon Vistara News

How to identify processed food: ಆರೋಗ್ಯಕ್ಕೆ ಮಾರಕವಾದ ಸಂಸ್ಕರಿತ ಆಹಾರ ಗುರುತಿಸುವುದು ಹೇಗೆ?

How to identify processed food

ಸಂಸ್ಕರಿಸಿದ ಆಹಾರಗಳನ್ನು ತಿನ್ನಬಾರದು, ಅವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಆಗಾಗ ಕೇಳುತ್ತೇವೆ. ಅವುಗಳನ್ನು ತಿನ್ನುವುದರಿಂದ ಟೈಪ್‌-2 ಮಧುಮೇಹದಿಂದ ಹಿಡಿದು, ಹಲವು ರೀತಿಯ ರೋಗಗಳು ಅಮರಿಕೊಳ್ಳುತ್ತವೆ ಎನ್ನುತ್ತದೆ ವೈದ್ಯವಿಜ್ಞಾನ. ಸಂಸ್ಕರಿತ- ಕೊಬ್ಬು, ಸಕ್ಕರೆ, ಪಿಷ್ಟಗಳನ್ನು ಹೊಂದಿರುವ ಆಹಾರಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದೂ ಹೆಚ್ಚಿನವರಿಗೆ ತಿಳಿದಿರುತ್ತದೆ. ಆದರೆ ನಿಜಕ್ಕೂ ಸಂಸ್ಕರಿಸಿದ ಆಹಾರವೆಂದರೇನು? ಯಾವುದನ್ನು ಹೀಗೆನ್ನಲಾಗುತ್ತದೆ? ಅದು ನಮಗೆ ತಿಳಿಯುವುದು ಹೇಗೆ- ಮುಂತಾದ ಪ್ರಶ್ನೆಗಳು ಕಾಡಬಹುದು. ಈ ಬಗ್ಗೆ (How to identify processed food) ಒಂದಿಷ್ಟು ಮಾಹಿತಿಯಿಲ್ಲಿದೆ.

ಯಾವುದು ಸಂಸ್ಕರಿಸಿದ್ದು?

ದೊಡ್ಡ ಪ್ರಮಾಣದಲ್ಲಿ ಯಂತ್ರಗಳ ಮೂಲಕ ತಯಾರಿಸಲ್ಪಟ್ಟವು, ಹತ್ತು-ಹಲವು ವಸ್ತುಗಳನ್ನು ಹೊಂದಿದವು, ಕೃತಕ ರಾಸಾಯನಿಕಗಳನ್ನು ಸೇರಿಸಿಕೊಂಡವು, ಸಕ್ಕರೆ, ಕೊಬ್ಬು, ಪಿಷ್ಟ, ಸೋಡಿಯಂನ ಪ್ರಮಾಣಗಳು ಅಧಿಕವಿರುವ ತಿನಿಸುಗಳು, ದೀರ್ಘ ಬಾಳಿಕೆಗೆಂದು ಮತ್ತು ರುಚಿ, ಬಣ್ಣ, ಘಮಕ್ಕೆಂದು ರಾಸಾಯನಿಕಗಳನ್ನು ಹೊಂದಿದವು- ಇಂಥವೆಲ್ಲ ಸಂಸ್ಕರಿತ ಆಹಾರಗಳ ಸಾಲಿಗೆ ಸೇರುತ್ತವೆ. ಇಂಥ ಆಹಾರಗಳು ನಾನಾ ರೀತಿಯ ಸಂಸ್ಕರಣೆಗಳಿಗೆ ಒಳಪಡುತ್ತವೆ. ಪ್ರತಿಯೊಂದು ಹಂತದಲ್ಲೂ ತಮ್ಮ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತಾ, ಕಡೆಗೆ ಗ್ರಾಹಕರ ಕೈಗೆ ಬರುವಾಗ ಉಳಿಯುವುದು ಸತ್ವಯುತ ಆಹಾರದ ಪ್ರೇತ!

ಏನಾಗುತ್ತದೆ?

ತಿನ್ನುವುದಕ್ಕೆ ರುಚಿಯಿರುವ, ಕಣ್ಣಿಗೆ ಹಿತವೆನಿಸುವ, ಪರಿಮಳವೂ ಮನಕೊಪ್ಪುವಂಥ ಆಹಾರಗಳು ಸಂಸ್ಕರಿತವಾಗಿದ್ದರೆ ಏನೀಗ? ತಿನ್ನಬಹುದಲ್ಲ ಅದನ್ನೇ? ಎಂದು ವಾದಿಸುವವರೂ ಇರಬಹುದು. ಈ ಕುರಿತು ಬಹಳಷ್ಟು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳ ಪ್ರಕಾರ, ತಮ್ಮ ಆಹಾರದ ಶೇ. 22ರಷ್ಟು ಭಾಗವನ್ನು ಸಂಸ್ಕರಣಗೊಂಡ ತಿನಿಸುಗಳನ್ನು ತಿಂದವರು ಟೈಪ್‌-2 ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳನ್ನು ಎದುರಿಸುವ ಸಾ‍ಧ್ಯತೆ ಉಳಿದೆಲ್ಲರಿಗಿಂತ ಹೆಚ್ಚು.

ಯಾವೆಲ್ಲ ಆಹಾರಗಳು?

ಬೃಹತ್‌ ಪ್ರಮಾಣದಲ್ಲಿ ತಯಾರಾಗಿ ದೇಶದ ಮೂಲೆಮೂಲೆಗಳಿಗೆ ರವಾನೆಯಾಗುವ ಪ್ಯಾಕೆಟ್‌ ಚಿಪ್ಸ್‌, ಕ್ಯಾಂಡಿ ಬಾರ್‌ಗಳು, ಸಿಹಿಭರಿತ ಸೀರಿಯಲ್‌ಗಳು, ಬಣ್ಣ ಮತ್ತು ಘಮ ಹೊಂದಿದ ಪಾಪ್‌ಕಾರ್ನ್‌ಗಳು ಈ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ತಿನ್ನುವುದಕ್ಕೆ ಸಿದ್ಧವಾಗ ಆಹಾರಗಳು, ಬಿಸಿನೀರು ಹಾಕಿದಾಕ್ಷಣ ತಯಾರಾಗುವ ತಿಂಡಿಗಳು, ಫ್ರೀಜ್‌ ಆದ ಆಹಾರಗಳು, ಇನ್ಸ್‌ಟಂಟ್‌ ನೂಡಲ್‌ಗಳು ಸಹ ಇದೇ ಪಟ್ಟಿಯಲ್ಲಿವೆ. ಇವುಗಳಲ್ಲಿ ಸೋಡಿಯಂ ಮತ್ತು ಕೊಬ್ಬಿನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಿರುತ್ತದೆ.

ಪೇಯಗಳು

ಎನರ್ಜಿ ಡ್ರಿಂಕ್‌, ಜ್ಯೂಸ್‌, ಕೋಲಾ ಸೇರಿದಂತೆ ನಾನಾ ರೀತಿಯ ಬಾಟಲಿಯ ಪೇಯಗಳಲ್ಲಿ ಸಕ್ಕರೆಯಂಶ ಅತಿಯಾಗಿರುತ್ತದೆ. ಅದಕ್ಕಿಂತ ಹೆಚ್ಚಿನ ಯಾವುದೇ ಆರೋಗ್ಯಕರ ಅಂಶಗಳು ಇವುಗಳಿಂದ ದೊರೆಯುವುದು ಅಪರೂಪ. ಮ್ಯಾಂಗೊ ಜ್ಯೂಸ್‌ ಎನ್ನುತ್ತಾ ವರ್ಷವಿಡೀ ಮಾರಾಟ ಮಾಡಲಾಗುತ್ತದೆ ಎಂದರೆ ಮಾವಿನಹಣ್ಣು ವರ್ಷವಿಡೀ ದೊರೆಯುವುದಿಲ್ಲವಲ್ಲ. ಹಾಗಾಗಿ ಅದಕ್ಕೆ ಮಾವಿನ ಬಣ್ಣ, ರುಚಿ, ಘಮ ಎಲ್ಲವನ್ನೂ ಕೃತಕವಾಗಿಯೇ ಸೇರಿಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಬೇಕ್‌ ಮಾಡಿದವು

ಪ್ಯಾಕೆಟ್‌ನಲ್ಲಿರುವ ಕೇಕ್‌, ಬಿಸ್ಕಿಟ್‌, ಕುಕಿ ಮುಂತಾದ ಬೇಕ್‌ ಮಾಡಿದ ಆಹಾರಗಳದ್ದೂ ಅದೇ ಹಣೆಬರಹ. ಅವುಗಳಲ್ಲಿರುವ ಮೈದಾ, ಸಕ್ಕರೆ, ಅನಾರೋಗ್ಯಕರ ಕೊಬ್ಬಿನಂಶಗಳು ಉಳಿದ ರಾಸಾಯನಿಕಗಳ ಜೊತೆ ಸೇರಿ ಸಂಪೂರ್ಣ ಗುಜರಿ ಅಂಶಗಳನ್ನೇ ದೇಹಕ್ಕೆ ಸೇರಿಸುತ್ತವೆ. ಈ ಆಹಾರಗಳು ನೋಡುವುದಕ್ಕೆ ಒಪ್ಪಿತವಾಗಿ, ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಈ ರಾಸಾಯನಿಕಗಳ ಬಳಕೆ ಅನಿವಾರ್ಯ. ಆದರೆ ಗ್ರಾಹಕರಿಗೆ ಅದನ್ನೇ ತಿನ್ನಬೇಕೆಂಬ ಅನಿವಾರ್ಯವಿಲ್ಲವಲ್ಲ.

ಮಾಂಸ

ಸಂಸ್ಕರಿಸಿದ ಮಾಂಸಗಳ ಹಣೆಬರಹ ಇದಕ್ಕಿಂತ ಬೇರೆಯಲ್ಲ. ಸಾಕಷ್ಟು ಕೊಬ್ಬು ಹುದುಗಿಸಿಕೊಂಡೇ ಇರುವ ಈ ಆಹಾರಕ್ಕೆ ಇನ್ನಷ್ಟು ಬೇಡದ ವಸ್ತುಗಳನ್ನು ಸೇರಿಸಲಾಗುತ್ತದೆ. ಪಶ್ಚಿಮ ದೇಶಗಳಲ್ಲಂತೂ ಮಾಂಸವನ್ನು ಅತಿ ಹೆಚ್ಚಾಗಿ ಸಂಸ್ಕರಿಸಲಾಗುತ್ತದೆ. ಚಿಕನ್‌ ನಗೆಟ್ಸ್‌, ಹಾಟ್‌ ಡಾಗ್‌, ಫಿಶ್‌ ಸ್ಟಿಕ್‌ ಮುಂತಾದವೆಲ್ಲ ಇದೇ ಸಾಲಿಗೆ ಸೇರಿದಂಥವು.

ಲೇಬಲ್‌ ಓದಿ

ಕೆಲವು ರಾಸಾಯನಿಕಗಳನ್ನು ಸಾಮಾನ್ಯವಾಗಿ ವಸ್ತುಗಳ ಲೇಬಲ್‌ ಅಥವಾ ಹಣೆಪಟ್ಟಿಯ ಮೇಲೆ ಮುದ್ರಿಸಲಾಗುತ್ತದೆ. ಬಿಎಚ್‌ಎ, ಬಿಎಚ್‌ಟಿ, ಸೋಡಿಂ ನೈಟ್ರೇಟ್‌, ಹೈ ಫ್ರಕ್ಟೋಸ್‌ ಕಾರ್ನ್‌ ಸಿರಪ್‌, ಹೈಡ್ರೊಜೆನೇಟೆಡ್‌ ತೈಲಗಳು, ಎಮಲ್ಸಿಫಯರ್‌, ಸ್ಟೆಬಿಲೈಸರ್‌… ಮುಂತಾದ ಅಂಶಗಳನ್ನು ಹೊಂದಿದವು ನಮ್ಮ ಆರೋಗ್ಯಕ್ಕೆ ಬೇಡದಂಥವು. ಸಂಸ್ಕರಿತ ಆಹಾರಗಳನ್ನು ಒಮ್ಮೆಲೇ ಆಹಾರದಿಂದ ಕೈ ಬಿಡಲು ಕಷ್ಟವಾಗಬಹುದು. ಆದರೆ ಕ್ರಮೇಣ ಇವುಗಳನ್ನು ಬಿಸಾಡಿ, ತಾಜಾ ಮತ್ತು ಬಿಸಿ ಆಹಾರವನ್ನೇ ಸೇವಿಸುವ ನಿರ್ಧಾರ ಫಲ ನೀಡಬಹುದು.

ಇದನ್ನೂ ಓದಿ: Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Exit mobile version