ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.
ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ - ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ
ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್ ದಾಳಿ ನಡೆಸಿ ಅಲ್ಲಿನ ಹೈಜೀನ್ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.