ಕೆಲವರಿಗೆ ಈರುಳ್ಳಿ ಹೆಚ್ಚಲೆಂದು ಈರುಳ್ಳಿಯ ಸಿಪ್ಪೆ ಬಿಡಿಸಿದರೆ ಸಾಕು, ಕಣ್ಣಲ್ಲಿ ಧಾರಾಕಾರ ನೀರು ಸುರಿಯಲು ಆರಂಭವಾಗುತ್ತದೆ. ಇನ್ನು ಕತ್ತರಿಸುವ ಮಾತೇಕೆ? ಆದರೆ ಅಡುಗೆ ಮನೆ ಹೊಕ್ಕವರು ಈರುಳ್ಳಿ ಕತ್ತರುಸದೆ ಜಾರಿಕೊಳ್ಳಲು ಸಾಧ್ಯವೇ ಹೇಳಿ? ಸರ್ಕಸ್ಸು ಮಾಡಿ ಮಾಡಿ ಕೊನೆಗೂ ಈರುಳ್ಳಿಯನ್ನು ಕಣ್ಣೀರು ಸುರಿಸುತ್ತಲೇ ಕತ್ತರಿಸುವ ಮಂದಿ ಅನೇಕ. ಯಾಕೆಂದರೆ, ಬಹುತೇಕ ಅಡುಗೆಗಳಿಗೆ ಈರುಳ್ಳಿ ಬೇಕೇಬೇಕು. ಹಾಗಾದರೆ, ಹೆಚ್ಚು ಕಷ್ಟವಾಗದಂತೆ ಈರುಳ್ಳಿ ಹೆಚ್ಚುವ ತಂತ್ರಗಳೇ ಇಲ್ಲವೇ ಎಂದು ನೀವು ಕೇಳಬಹುದು. ಯಾಕಿಲ್ಲ ಹೇಳಿ. ಈರುಳ್ಳಿ ಹೆಚ್ಚಲು ಕಷ್ಟ ಪಡುವ ಮಂದಿಯೆಲ್ಲ, ಈ ಕೆಲವು ಸರಳ ತಂತ್ರಗಳನ್ನು ಅನುಸರಿಸುವ ಮೂಲಕ (Life Hacks) ಹೆಚ್ಚು ಕಷ್ಟಪಡದೆ ಈರುಳ್ಳಿ ಹೆಚ್ಚಬಹುದು.
ಚಕಚಕನೆ ಕೊಚ್ಚಬೇಡಿ
ಈರುಳ್ಳಿಯನ್ನು ಚಕಚಕನೆ ಕೊಚ್ಚಬೇಡಿ. ಬದಲಾಗಿ ಕತ್ತರಿಸಿ. ಇದಕ್ಕೂ ಅದಕ್ಕೂ ಏನು ವ್ಯತ್ಯಾಸ ಎಂದು ಕೇಳಬೇಡಿ. ಈರುಳ್ಳಿಯನ್ನು ಸಣ್ಣದಾಗಿ ಕೊಚ್ಚಿದಾಗಲೆಲ್ಲ ಹೆಚ್ಚು ರಾಸಾಯನಿಕ ಅದರಿಂದ ಹೊರಬಂದು ಹೆಚ್ಚು ಕಣ್ಣೀರು ಬರುವಂತೆ ಮಾಡುತ್ತದೆ. ಅದಕ್ಕೆ ಮೊದಲು ಇದ್ದುದ್ದಕ್ಕೆ ಕತ್ತರುಸಿದ ಮೇಳೆ ಅಡ್ಡಕ್ಕೆ ಕತ್ತರಿಸುತ್ತಾ ಬನ್ನಿ. ಆಗ ಅದರ ಪರಿಣಾಮ ಕಡಿಮೆ.
ಇದನ್ನೂ ಓದಿ: IPL 2024 : ಕೆಕೆಆರ್ ಸೇರಲು ಗಂಭೀರ್ಗೆ ಬ್ಲ್ಯಾಂಕ್ ಚೆಕ್ ಆಫರ್ ಕೊಟ್ಟಿದ್ದ ಶಾರುಖ್ ಖಾನ್!
ಫ್ರಿಡ್ಜ್‌ನಲ್ಲಿ ಇಡಬಾರದು
ಈರುಳ್ಳಿಯನ್ನು ಯಾರೂ ಫ್ರಿಡ್ಜ್‌ನಲ್ಲಿ ಶೇಖರಿಸಿಡುವುದಿಲ್ಲ. ಇಡಲೂಬಾರದು ನಿಜ. ಆದರೆ, ಕತ್ತರಿಸುವ ಸ್ವಲ್ಪ ಹೊತ್ತು ಮೊದಲು ಈರುಳ್ಳಿಯನ್ನು ಸ್ವಲ್ಪ ಹೊತ್ತಿಗಾಗಿ ಫ್ರಿಡ್ಜ್‌ನಲ್ಲಿರಿಸಿ. ಒಂದು ಬೌಲ್ ಐಸ್ ನೀರಿನಲ್ಲಿ ಈರುಳ್ಳಿಯನ್ನು ಅರ್ಧ ಗಂಟೆ ಅಥವಾ ಒಂದು ಗಂಟೆ ಕಾಲ ಇಡಿ. ಅಥವಾ ಫ್ರೀಜರ್‌ನಲ್ಲೂ ಇಡಬಹುದು. ಇದರಿಂದ ನೀವು ಕತ್ತರಿಸುವಾಗ ಕಣ್ಣೀರು ಬರಿಸುವ ರಸಾಯನಿಕ ಬಿಡುಗಡೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಕತ್ತರಿಸುವ ಸಂದರ್ಭ ಕಣ್ಣೀರು ಬರುವುದಿಲ್ಲ.
ಕನ್ನಡಕ ಧರಿಸಿ
ಹೌದು. ಈರುಳ್ಳಿ ಕತ್ತರಿಸುವ ಸಂದರ್ಭ ಕನ್ನಡಕ ಧರಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ. ಈರುಳ್ಳಿಯ ರಾಸಾಯನಿಕ ನೇರವಾಗಿ ಕಣ್ಣಿಗೆ ಪರಿಣಾಮ ಬೀರುವುದು ತಪ್ಪುವುದರಿಂದ ಒಡನೆಯೇ ಕಣೀರು ಸುರಿಯುವುದಿಲ್ಲ. ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತದೆ. ಈರುಳ್ಳಿ ಹೆಚ್ಚುವಾಗ ಧರಿಸಬಹುದಾದ ಕ್ನಡಕಗಳೂ ಮಾರುಕಟ್ಟೆಯಲ್ಲಿವೆ. ಅದನ್ನೂ ಖರೀದಿಸಬಹುದು.
ಇನ್ನೊಂದು ತಂತ್ರ ಹೀಗಿದೆ
ಇನ್ನೂ ತಮಾಷೆಯ ವಿಚಾರವೆಂದರೆ, ಈರುಳ್ಳಿ ಹೆಚ್ಚುವಾಗ ಆಗುವ ಈ ಸಮಸ್ಯೆಯಿಂದ ಪಾರಾಗಲು ಕೆಲವರು ಇನ್ನೂ ಒಂದು ತಂತ್ರ ಪ್ರಯೋಗಿಸುತ್ತಾರೆ. ನಿಮಗೆ ಚೆನ್ನಾಗಿದೆ ಅನಿಸಿದರೆ ನೀವೂ ಟ್ರೈ ಮಾಡಬಹುದು. ಈರುಳ್ಳಿ ಕತ್ತರಿಸುವ ಸಂದರ್ಭದಲ್ಲಿ, ನಿಮ್ಮ ದ್ವಿಚಕ್ರ ವಾಹನದ ಹೆಲ್ಮೆಟ್ ಅನ್ನು ಧರಿಸಬಹುದು. ಇದು ಮುಖವನ್ನು ಸಂಪೂರ್ಣ ಮುಚ್ಚುವುದರಿಂದ ಈರುಳ್ಳಿಯ ರಸಾಯನಿಕ ಮುಖದ ಮೇಲೆ ಯಾವುದೇ ಪರಿಣಾಮ ಬೀರಲಾಗದೆ, ಕಣ್ಣಿನಿಂದ ಹೆಚ್ಚು ನೀರು ಸುರಿಯುವುದಿಲ್ಲ. ಸಾಕಷ್ಟು ಪ್ರಯೋಜನವಾಗುವ ಸುಲಭದ ತಂತ್ರ ಎಂದು ಇದನ್ನು ಅನೇಕರು ಹೇಳುತ್ತಾರೆ.
ನೀರಿನಲ್ಲಿ ಮುಳುಗಿಸಿ ಇಡಿ
ಈರುಳ್ಳಿಯ ಸಿಪ್ಪೆ ಸುಲಿದ ಮೇಲೆ, ನಾಲ್ಕು ತುಂಡುಗಳನ್ನಾಗಿ ಮಾಡಿ ಹರಿಯುವ ನೀರಿಗೆ ಹಿಡಿದು ತೊಳೆದುಕೊಳ್ಳಿ. ಹೀಗೆ ಮಾಡಿದ ಮೇಳೆ ಕತ್ತರಿಸಿ. ಅಥವಾ ಸಿಪ್ಪೆ ಸುಲಿದ ಈರುಳ್ಳಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿಡಿ. ನಂತರ ಕತ್ತರಿಸಿ.