Site icon Vistara News

Winter Food: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಮನೆಯಲ್ಲೇ ಚಿಕ್ಕಿಗಳನ್ನು ಮಾಡಿ!

Winter Food

ಚಳಿಗಾಲದಲ್ಲಿ (winter food) ಸಾಮಾನ್ಯವಾಗಿ, ದೇಹವನ್ನು ಬಿಸಿ ಮಾಡುವ ಉಷ್ಣ ಪ್ರಕೃತಿಯ ಕೆಲವು ಆಹಾರಗಳನ್ನು ಸೇವಿಸುವುದು ವಾಡಿಕೆ. ಪರ್ವತ ಪ್ರದೇಶಗಳಲ್ಲಿ, ಅಥವಾ ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಚಳಿಗಾಲ ಬರುತ್ತಿದ್ದ ಹಾಗೆಯೇ, ಚಳಿಗಾಲಕ್ಕೆ ಸಂಬಂಧಿಸಿದಂತೆ ಜೀವನಕ್ರಮವೇ ಬದಲಾಗುತ್ತದೆ. ಆಹಾರದಿಂದ ಹಿಡಿದು, ಧರಿಸುವ ಬಟ್ಟೆಗಳು, ಮಾಡುವ ವೃತ್ತಿ ಎಲ್ಲವೂ ಬದಲಾಗುತ್ತದೆ. ಉಳಿದೆಡೆಗಳಲ್ಲಿ ಚಳಿಗಾಲ ಅಂಥ ತೀವ್ರತೆಯಲ್ಲಿ ಇರದಿದ್ದರೂ, ಜನರು ತಮ್ಮ ಜೀವನಕ್ರಮದಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕೊಂಚ ಮಟ್ಟಿನ ಬದಲಾವಣೆಯನ್ನಾದರೂ ಮಾಡಿಯೇ ಮಾಡುತ್ತಾರೆ. ಮುಖ್ಯವಾಗಿ ಆಹಾರ ಕ್ರಮ ಹಾಗೂ ಬಟ್ಟೆಬರೆಯ ವಿಚಾರದಲ್ಲಿ. ಇಂಥ ಸಂದರ್ಭ, ವಾತಾವರಣದಲ್ಲಿ ಉಷ್ಣತೆಯು ಇಳಿಯುತ್ತಿದ್ದ ಹಾಗೆಯೇ ನಮ್ಮ ದೇಹವೂ ಕೂಡಾ ತನ್ನನ್ನು ತಾನು ಬೆಚ್ಚಗೆ ಇರಿಸಿಕೊಳ್ಳಲು ಕೆಲವು ಉಷ್ಣ ಪ್ರಕೃತಿಯ ಆಹಾರವನ್ನು ಬೇಡುತ್ತದೆ. ಪ್ರಕೃತಿಯೂ ಕೂಡಾ ತಾನೇತಾನಾಗಿ, ಆಯಾ ವಾತಾವರಣಕ್ಕೆ ಅನುಗುಣವಾಗಿಯೇ ಆಹಾರವನ್ನು ನೀಡುವುದರಿಂದ ಆಹಾರದ ಆಯ್ಕೆಯಲ್ಲಿ ನಾವೂ ಹೆಚ್ಚು ಕಷ್ಟಪಡಬೇಕಾಗಿಲ್ಲ. ಒಣಹಣ್ಣು, ಬೀಜಗಳು, ಹಸಿರು ತರಕಾರಿಗಳು, ಬೆಲ್ಲ, ಸೇರಿದಂತೆ, ಹಲವು ಬಗೆಯ ತರಕಾರಿಗಳು, ಕಷಾಯಗಳು ದೇಹವನ್ನು ಬಿಸಿ ಮಾಡುವ ಜೊತೆಗೆ, ಚಳಿಗಾಲದಲ್ಲಿ ಸುಲಭವಾಗಿ ಕಾಡುವ ಶೀತ, ನೆಗಡಿ, ಜ್ವರ, ಕೆಮ್ಮಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳೂ ನಮ್ಮನ್ನು ಬಾಧಿಸದಂತೆ ರಕ್ಷಿಸುವ ಕೆಲಸವನ್ನೂ ಮಾಡುತ್ತವೆ. ಇಂಥ ಚಳಿಗಾಲದ ಆಹಾರಗಳ ಪೈಕಿ ಚಿಕ್ಕಿಯೂ ಒಂದು. ಎಳ್ಳು, ನೆಲಗಡಲೆ ಸೇರಿದಂತೆ, ಒಣ ಬೀಜಗಳನ್ನೂ ಹಾಕಿ ಮಾಡುವ ಚಿಕ್ಕಿ ಚಳಿಗಾಲದಲ್ಲಿ ಎಲ್ಲೆಡೆ ದೊರೆಯುವ ಸರಳವಾದ ಸಿಹಿತಿನಿಸು.

Indian traditional sweets Mithai Gajjak Gur Gajjak

ರುಚಿಯಾದ ತಿನಿಸು

ಉತ್ತರ ಭಾರತದಲ್ಲಿ, ಹಿಮಾಲಯದ ಪ್ರಾಂತ್ಯಗಳಲ್ಲಿ ಗಜ್ಜಕ್‌ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸಿಹಿತಿನಿಸು, ಸಾಮಾನ್ಯರ ಭಾಷೆಯಲ್ಲಿ ಚಿಕ್ಕಿ. ಕಟ್ಲೀಸ್‌ ಎಂಬ ಹೆಸರಿನಿಂದಲೂ ಕೆಲವೆಡೆ ಕರೆಯಲ್ಪಡುತ್ತದೆ. ಬೆಲ್ಲದ ಪಾಕದಲ್ಲಿ ನೆಲಗಡಲೆಯನ್ನೋ, ಎಳ್ಳನ್ನೋ ಹಾಕಿ ಗಟ್ಟಿಯಾದ ತುಂಡುಗಳನ್ನಾಗಿ ಕತ್ತರಿಸಿ ಮಾಡು ತಿನಿಸು ಇದು. ನೆಲಗಡಲೆ, ಎಳ್ಳು, ಬೆಲ್ಲ ಎಲ್ಲವೂ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಮಾಡುವ ಉಷ್ಣ ಪ್ರಕೃತಿಯ ಆಹಾರಗಳು. ಅಷ್ಟೇ ಅಲ್ಲ, ಕ್ಯಾಲ್ಶಿಯಂ, ಕಬ್ಬಿಣಾಂಶ, ಪ್ರೊಟೀನುಗಳೂ ಸಾಕಷ್ಟು ಇರುವ ಆಹಾರ. ದೇಹವನ್ನು ಗಟ್ಟಿಗೊಳಿಸಿ, ಬೆಚ್ಚಗೂ ಇರಿಸಿ, ರೋಗ ನಿರೋಧಕತೆಯನ್ನೂ ಹೆಚ್ಚು ಮಾಡಿಸುವ ಸಮೃದ್ಧ ಆಹಾರವಿದು. ಚಳಿಗಾಲ ಬಂದಾಗ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸುಲಭವಾಗಿ ಮಾಡಬಹುದಾದ ಹಾಗೂ ಮಾಡಿ ತಮ್ಮ ಮಕ್ಕಳಿಗೂ ತಿನ್ನಿಸಲೇ ಬೇಕಾದ ಆಹಾರ ಇದು. ಬನ್ನಿ, ಪರ್ಫೆಕ್ಟ್‌ ಚಿಕ್ಕಿ ಮಾಡಲು ಕೆಲವು ಟಿಪ್ಸ್‌ಗಳು ಇಲ್ಲಿವೆ.

ಮಾಡುವ ವಿಧಾನ

ಮೊದಲು ನೆಲಗಡಲೆಯನ್ನು ಹುರಿದುಕೊಳ್ಳಿ. ಸ್ವಲ್ಪ ಅವನ್ನು ಕ್ರಷ್‌ ಮಾಡಿ. ತೀರಾ ಪುಡಿಪುಡಿಯಾಗಿಸುವುದು ಬೇಡ. ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಬೆಲ್ಲವನ್ನು ಹಾಕಿ. ಅದು ಪಾಕವಾಗಲು ಬಿಡಿ. ಬೆಲ್ಲವೆಲ್ಲ ಕರಗಿ ಪಾಕವಾದ ಮೇಲೆ, ಅದು ಪಾಕದ ಹದಕ್ಕೆ ಕೊಂಚ ಗಟ್ಟಿಯಾಗಲು ಹಾಗೆಯೇ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಪಾಕ ಸರಿಯಾದ ಹದಕ್ಕೆ ಬಂದಿದೆಯೇ ಎಂದು ಪರೀಕ್ಷಿಸಲು ಒಧೆರಡು ಹನಿ ಚಿಮುಕಿಸಿ ನೋಡಬಹುದು. ಈಗ ಕ್ರಷ್‌ ಮಾಡಿದ ನೆಲಗಡಲೆಯನ್ನು ಸೇರಿಸಿ. ನೆಲಗಡಲೆ ಅಲ್ಲದಿದ್ದರೆ, ಯಾವುದರ ಚಿಕ್ಕಿ ಮಾಡುತ್ತೀರೋ ಅವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಒಂದು ಟ್ರೇಯಲ್ಲಿ ತುಪ್ಪ ಸವರಿ, ಈ ಮಿಶ್ರಣವನ್ನು ಹರಡಿ. ಇದು ಸಂಪೂರ್ಣ ತಣ್ಣಗಾದ ಮೇಲೆ ಇವನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ. ರುಚಿಯಾದ ಚಿಕ್ಕಿ ತಿನ್ನಲು ರೆಡಿ! ಚಳಿಗಾಲದಲ್ಲಿ ಊಟದ ನಂತರ ತಿನ್ನಲು ಆರೋಗ್ಯಕರ ಸಿಹಿತಿನಿಸಿದು.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

Exit mobile version