ಎಂಥಾ ಡಯಟ್‌ನಲ್ಲಿದ್ದರೂ ಬೇಸಿಗೆಯಲ್ಲಿ ಮಾವಿನಹಣ್ಣು (mango season) ತಿನ್ನದೆ ಹೇಗಿರಲಿ ಎಂದು ಪ್ರಶ್ನೆ ಮಾಡುವ ಮಂದಿ ಅನೇಕ. ಡಯಟ್‌ನ ತಲೆಬಿಸಿಯಲ್ಲಿರುವ ಮಂದಿ ಬೇರೆ ಆಹಾರವನ್ನಾದರೂ ಬಿಟ್ಟೇವು ಮಾವಿನಹಣ್ಣಿಗೆ ನೋ ಹೇಳೋದು ಹೇಗೆ ಎಂಬ ಉಭಯ ಸಂಕಟವನ್ನು ಬಿಚ್ಚಿಡುತ್ತಾರೆ. ಮಾವಿನಹಣ್ಣಿನ ಸೆಳೆತವೇ ಅಂಥದ್ದು. ಅದಕ್ಕಾಗಿಯೇ ಬಿರುಬೇಸಿಗೆಯ ಝಳವನ್ನೂ ನಾವು ಸಹಿಸಿಕೊಳ್ಳುತ್ತೇವೆ. ಮಾವು ತಿಂದು ಬೇಸಿಗೆಯ ಕಷ್ಟವನ್ನು ಮರೆಯುತ್ತೇವೆ ಕೂಡಾ.
ಇಂಥ ಮಾವು ಪ್ರಿಯರಿಗೆಲ್ಲರಿಗೂ ಸಂತಸದ ಸುದ್ದಿಯಿದೆ. ಮಾವು ತಿಂದರೆ ತೂಕ ಹೆಚ್ಚಾಗುತ್ತದೆ, ಮಾವು ಒಳ್ಳೆಯದಲ್ಲ ಎಂದು ವಾದ ಮಂಡಿಸುತ್ತಿದ್ದವರ ಎದುರು ಮಾವು ಪ್ರಿಯರು ಎದೆತಟ್ಟಿ ನಿಲ್ಲಬಹುದು. ಯಾಕೆಂದರೆ, ಮಾವು ಒಂದು ಸಂಪೂರ್ಣ ಆಹಾರವಂತೆ. ಮಾವಿನಲ್ಲಿ ಇಲ್ಲದ ಪೋಷಕಾಂಶಗಳೇ ಇಲ್ಲ (mango benefits). ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣೆಂದರೆ ಅದು ಮಾವು ಎನ್ನುತ್ತಾರೆ. ಖ್ಯಾತ ಪೋಷಕಾಂಶ ತಜ್ಞೆ ರುಜುತಾ ದಿವೇಕರ್.
ಹೌದು. ಮಾವು ಹಣ್ಣುಗಳ ರಾಜ ಎಂದು ಕರೆಯಲ್ಪಡುವುದು ಕೇವಲ ರುಚಿಯಾಗಿದೆ ಎಂಬ ಕಾರಣಕ್ಕಲ್ಲ. ಮಾವಿನಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಹೇರಳವಾಗಿವೆ. ಹಾಗಾಗಿ ಮಾವಿನಹಣ್ಣನ್ನು ಬೇಸಿಗೆಯಲ್ಲಿ ಯಾವೆಲ್ಲ ಕಾರಣಗಳಿಗಾಗಿ ನಾವು ತಿನ್ನಲೇಬೇಕು ಎಂಬುದನ್ನು ತಮ್ಮ ಇನ್ಸ್‌ಟಾಗ್ರಾಂ ಪೋಸ್ಟ್ ಒಂದರಲ್ಲಿ ವಿವರವಾಗಿ ವಿವರಿಸಿದ್ದಾರೆ.
ಬಹಳಷ್ಟು ಸಂಸ್ಥೆಗಳು ತಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳ ಪಟ್ಟಿಯನ್ನೇ ಆಹಾರದ ಪ್ಯಾಕ್‌ನ ಹೊರ ಭಾಗದಲ್ಲಿ ಮುದ್ರಿಸುತ್ತವೆ. ದೇಹಕ್ಕೆ ನಾರಿನಂಶದ ಅಗತ್ಯವಿದೆ ಎಂದರೆ ಓಟ್ಸ್ ತಿನ್ನಿ, ಪಾಲಿ ಫಿನಾಲ್ಸ್ ಬೇಕೆಂದರೆ ಗ್ರೀನ್ ಟೀ ಕುಡಿಯಿರಿ, ಹಾಗೂ ಆಂಟಿ ಆಕ್ಸಿಡೆಂಟ್ ಬೇಕೆಂದಾದರೆ ಡಾರ್ಕ್ ಚಾಕೋಲೇಟ್ಸ್ ತಿನ್ನಿ ಎಂದು ಸಲಹೆ ಮಾಡುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಮಾವಿನಹಣ್ಣಿನಲ್ಲಿ ಇವೆಲ್ಲವೂ ಇವೆ ಎಂದರೆ ನಂಬುತ್ತೀರಾ? ಮಾವಿನಹಣ್ಣು ತಿಂದರೆ, ನಾರಿನಂಶವೂ ದಕ್ಕುತ್ತದೆ, ಪಾಲಿ ಫಿನಾಲ್ಸ್ ಹಾಗೂ ಸಾಕಷ್ಟು ಆಂಟಿ ಆಕ್ಸಿಡೆಂಟ್ಸ್‌ಗಳೂ ದೇಹಕ್ಕೆ ಲಭ್ಯವಾಗುತ್ತವೆ. ಮಾವಿನ ಹಣ್ಣಿನಲ್ಲಿ ಇವೆಲ್ಲ ಇವೆ ಎಂದು ಜಾಹಿರಾತು ಮುಖಪುಟದಲ್ಲಿ ಹಾಕುವುದು ರೈತರಿಗೆ ಸಾಧ್ಯವಿಲ್ಲವಲ್ಲ! ಹಾಗಾಗಿ ಮಾವಿನ ಹಣ್ಣಿಗೆ ನೋ ಅನ್ನಬೇಡಿ ಎಂದು ವಿವರಿಸುತ್ತಾರೆ ಅವರು.
ಹಾಗಾದರೆ ಈ ಬೇಸಿಗೆಯಲ್ಲಿ ಖಂಡಿತವಾಗಿಯೂ ಮಾವಿನಹಣ್ಣಿನಿಂದ ಮಾಡಿದ ಅಮೃತದಷ್ಟು ರುಚಿಕರವಾದ ಈ ಕೆಳಗಿನ ತಿನಿಸುಗಳನ್ನು ಖಂಡಿತಾ ತಿನ್ನದೇ ಇರಬೇಡಿ!
1. ಮ್ಯಾಂಗೋ ಫಿರ್ನಿ: ಬೇಸಿಗೆಯಲ್ಲಿ ಊಟ ಉಂಡು ಮುಗಿಸಿದ ಮೇಲೆ ತಟ್ಟೆಯಲ್ಲೊಂದು ಮಾವು ಇದ್ದರೆ, ಆಹಾ ಎನಿಸುತ್ತದಲ್ಲವೇ? ಅಂತಹ ಮಾವು ಪ್ರಿಯ ಮನಸ್ಸುಗಳು, ಊಟದ ನಂತರ ಮ್ಯಾಂಗೋ ಫಿರ್ನಿಯನ್ನು ತಿನ್ನಲು ಮರೆಯಬೇಡಿ.
2. ಮ್ಯಾಂಗೋ ಐಸ್‌ಕ್ರೀಂ: ಬೇಸಿಗೆಗೂ ಐಸ್‌ಕ್ರೀಂಗೂ ಎಲ್ಲಿಲ್ಲದ ನಂಟು. ಈ ನಂಟಿನಲ್ಲೊಂದು ಅದ್ಭುತ ಗಳಿಗೆಯನ್ನು ಸೃಷ್ಟಿ ಮಾಡುವ ಸಾಮರ್ಥ್ಯ ಮ್ಯಾಂಗೋ ಐಸ್‌ಕ್ರೀಂಗಿದೆ. ಹಾಗಾಗಿ, ಬೇಸಿಗೆಯಲ್ಲಿ ಮ್ಯಾಂಗೋ ಐಸ್‌ಕ್ರೀಂ ತಿನ್ನುವುದನ್ನು ಮಾತ್ರ ಮರೆಯುವ ಕೆಲಸ ಮಾಡಬಾರದು.
3. ಮಾವಿನಕಾಯಿ ಚಟ್ನಿ: ದಕ್ಷಿಣ ಭಾರತೀಯ ಇಡ್ಲಿ ದೋಸೆ ಪ್ರಿಯ ಮಂದಿಗೆ ಚಟ್ನಿಯ ಜೊತೆಗೂ ಗಳಸ್ಯ ಕಂಠಸ್ಯ ಭಾವ. ಬಗೆಬಗೆಯ ಚಟ್ನಿಗಳ ಪೈಕಿ ಮಾವಿನ ಕಾಲ ಬಂದಾಗ ಮಾವಿನಕಾಯಿ ಚಟ್ನಿ ಮಾಡದಿದ್ದರೆ ಬೇಸಿಗೆ ಹೇಗೆ ಸಂಪನ್ನವಾದೀತು ಹೇಳಿ. ಮಾವಿನಕಾಯಿ ಚಟ್ನಿ ಮಾಡಿ ತಿನ್ನಲು ಎಂದಿಗೂ ಮರೆಯಬೇಡಿ.
4. ಮಾವಿನಹಣ್ಣಿನ ಹಪ್ಪಳ: ಹಣ್ಣನ್ನು ಕಿವುಚಿ ಹಿಂಡಿದ ರಸವನ್ನೇ ಒಣಗಿಸಿ ಮಾಡುವ ಹಪ್ಪಳ ಅಥವಾ ಮಾಂಬಳ ಮಾಡಿ ಕೂಡಿಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಈಗ ಅದು ಕಡಿಮೆಯಾಗಿದೆ ನಿಜ. ಆದರೂ, ಹಣ್ಣಿನ ಹಪ್ಪಳದ ರುಚಿಯನ್ನು ಹೇಗೆ ಮರೆತೇವು ಹೇಳಿ! ಹಾಗಾಗಿ ಬೇಸಗೆಯಲ್ಲೊಮ್ಮೆಯಾದರೂ ಹಣ್ಣಪ್ಪಳ ಮಾಡಿ ತಿನ್ನಬೇಕು!
ಇದನ್ನೂ ಓದಿ: Mango Benefits: ಮಾವಿನಹಣ್ಣು ತಿನ್ನುವ ಮೊದಲು ಒಂದೆರಡು ಗಂಟೆ ನೀರಲ್ಲಿ ನೆನೆಹಾಕಲೇ ಬೇಕು!