ನಿದ್ದೆಗೆಡುವುದಕ್ಕೆ ನಮಗೆ ಅಯಾಚಿತ ಕಾರಣಗಳು ಇರುತ್ತವೆ. ಆದರೆ ನಿದ್ದೆ ಮಾಡುವುದಕ್ಕೆ…? ಯಾವೆಲ್ಲ ಕಾರಣಕ್ಕೆ ನಮ್ಮ ನಿದ್ದೆ ಹಾಳಾಗುತ್ತದೆಯೋ, ಅವೇ ಕಾರಣಗಳನ್ನು ಆಚರಿಸುತ್ತಾ, ʻಏನ್ ಮಾಡಿದ್ರೂ ನಿದ್ದೆಯಿಲ್ಲʼ ಎಂದು ಗೋಳಾಡುತ್ತೇವೆ. ಅಷ್ಟೇ ಪ್ರಯತ್ನವನ್ನು ನಿದ್ದೆ ಸರಿಮಾಡಿಕೊಳ್ಳುವುದಕ್ಕೆ ಹಾಕಿದರೆ, ನಿದ್ರಾಹೀನತೆಯ ಸಮಸ್ಯೆಯೇ ಇರುವುದಿಲ್ಲ. ಅದೇ ಉದ್ದೇಶದಿಂದ ಕೆಲವರು ದೇಹದಲ್ಲಿ ಮೆಲಟೋನಿನ ಹೆಚ್ಚಿಸುವ ಮಾತ್ರೆಗಳನ್ನು ಸೇವಿಸುತ್ತಾರೆ. ಇದರಿಂದ ದೇಹ ವಿಶ್ರಾಂತ ಸ್ಥಿತಿಗೆ ಬಂದು ನಿದ್ದೆ ಆವರಿಸುತ್ತದೆ. ಆದರೆ ಆಹಾರದ ಮೂಲಕವೂ ಮೆಲಟೋನಿನ್ ಹೆಚ್ಚಿಸಿಕೊಳ್ಳಬಹುದೆಂಬುದು ಗೊತ್ತೇ? ಅಂದರೆ ಕೆಲವು ಆಹಾರಗಳನ್ನು ತಿನ್ನುವುದರಿಂದ ನಿದ್ದೆಯನ್ನೂಐ ಹೆಚ್ಚಿಸಿಕೊಳ್ಳಬಹುದು. ಯಾವುದು ಆ (Melatonin Rich Foods) ಆಹಾರಗಳು?
ನೈಸರ್ಗಿಕವಾಗಿ ಮೆಲಟೋನಿನ್ ಹೆಚ್ಚಿಸಿಕೊಳ್ಳುವುದರಿಂದ ಹಲವು ರೀತಿಯ ಲಾಭಗಳಿವೆ. ದೂರ ದೇಶಗಳಿಗೆ ಪ್ರಯಾಣ ಮಾಡಿದಾಗ ಆಗುವ ಸಮಯದ ವ್ಯತ್ಯಾಸದಿಂದ ನಿದ್ದೆ ಹಾಳಾಗುವುದಿದೆ. ಅದರಲ್ಲೂ ಹಗಲು-ರಾತ್ರಿಗಳೇ ವ್ಯತ್ಯಾಸವಾದಾಗ ಆರೋಗ್ಯವೂ ಏರುಪೇರಾಗಬಹುದು. ಇಂಥ ಸಂದರ್ಭಗಳಲ್ಲಿ ಮೆಲಟೋನಿನ್‌ಯುಕ್ತ ಆಹಾರಗಳಿಂದ ಪ್ರಯೋಜನವಾಗಬಹುದು. ಇದಲ್ಲದೆ, ಮಕ್ಕಳಲ್ಲಿ ನಿದ್ದೆಯನ್ನು ಸುಧಾರಿಸುವುದಕ್ಕೆ, ಆರೋಗ್ಯ ಸಮಸ್ಯೆ ಇರುವವರಲ್ಲಿ ನಿದ್ದೆ ಹೆಚ್ಚಿಸುವುದಕ್ಕೆ, ವೃದ್ಧರಲ್ಲಿ ನಿದ್ದೆಯನ್ನು ವೃದ್ಧಿಸುವುದಕ್ಕೆ- ಹೀಗೆ ಹಲವಾರು ಸನ್ನಿವೇಶಗಳಲ್ಲಿ ಉಪಯೋಗಕ್ಕೆ ಬರುವಂಥ ಆಹಾರಗಳಿವು.
ಬೀಜಗಳು
ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜಗಳಂಥ ಹೆಚ್ಚು ಮೆಗ್ನೀಶಿಯಂ ಇರುವ ತಿನಿಸುಗಳಿಂದ ಮೆಲಟೋನಿನ್ ಮಟ್ಟವನ್ನು ಹೆಚ್ಚಿಸಬಹುದು. ಕೆಲವು ಆರೋಗ್ಯ ಸಮಸ್ಯೆಗಳು ದೇಹದಲ್ಲಿ ಮೆಲಟೋನಿನ್ ಮಟ್ಟವನ್ನು ಕುಂಠಿತ ಮಾಡುತ್ತವೆ. ಆಗ ಇಂಥ ಆಹಾರಗಳ ಸೇವನೆಯಿಂದ ಆರೋಗ್ಯವೂ ವೃದ್ಧಿ, ಮೆಲಟೋನಿನ್ ಪ್ರಮಾಣವೂ ವೃದ್ಧಿ. ದೇಹ ವಿಶ್ರಾಂತ ಸ್ಥಿತಿಗೆ ಜಾರುವುದರಿಂದ ನಿದ್ದೆಯ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.
ಮೊಟ್ಟೆ ಮತ್ತು ಮೀನುಗಳು
ಹೆಚ್ಚು ಕೊಬ್ಬಿರುವ ಮೀನುಗಳಲ್ಲೂ ಅತಿ ಹೆಚ್ಚಿನ ಪ್ರಮಾಣದ ಮೆಲಟೋನಿನ್ ದೇಹಕ್ಕೆ ದೊರೆಯುತ್ತದೆ. ಇವುಗಳಿಂದ ದೇಹಾರೋಗ್ಯ ಸುಧಾರಣೆಗೆ ಅಗತ್ಯವಾಗ ಒಮೇಗಾ ೩ ಕೊಬ್ಬಿನಾಮ್ಲವೂ ದೊರೆತು, ಹೃದಯದ ಆರೋಗ್ಯ ವರ್ಧಿಸುತ್ತದೆ. ಹಾಗಾಗಿ ಬಾರದೆ ಸತಾಯಿಸುವ ನಿದ್ದೆಗೆ ಮತ್ಸಾಹಾರ ಸೇವನೆಯಿಂದಲೂ ಮದ್ದರೆಯಬಹುದು. ಹಾಗೆಯೇ, ಮೊಟ್ಟೆಗಳ ಸೇವನೆಯಿಂದಲೂ ಮೆಲಟೋನಿನ್ ಪ್ರಮಾಣವನ್ನು ಹೆಚ್ಚಿಸಬಹುದು ಎನ್ನುತ್ತವೆ ಅಧ್ಯಯನಗಳು. ಇದರಿಂದ ಸಹ ದೇಹಕ್ಕೆ ಬಹಳಷ್ಟು ರೀತಿಯ ಪೋಷಕಾಂಶಗಳು ದೊರೆಯುತ್ತವೆ
ಹಣ್ಣುಗಳು
ಮಾವು, ಚೆರ್ರಿ, ಅನಾಸನ್ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಮೆಲಟೋನಿನ್ ದೊರೆಯುತ್ತದೆ. ಮಾವಿನ ಕಾಯಿ ಅಥವಾ ಹಣ್ಣು ಚೆನ್ನಾಗಿ ತಿಂದು, ಮಲಗಿ ಗೊರೆಯುವವರನ್ನು ನೋಡಿರಬಹುದು. ಸ್ವಲ್ಪ ಹುಳಿ ರುಚಿಯ ಚೆರ್ರಿ ಸಹ ನಿದ್ದೆಯನ್ನು ಉತ್ತೇಜಿಸುತ್ತದೆ. ಹುಳಿ ಟೊಮೇಟೊದಲ್ಲೂ ಮೆಲಟೋನಿನ್ ಹೆಚ್ಚಿಸುವ ಗುಣವಿದೆ.
ಹಾಲು
ಇಂದಿಗೂ ಬಹಳಷ್ಟು ಮನೆಗಳಲ್ಲಿ ರಾತ್ರಿ ಮಲಗುವಾಗ ಉಗುರು ಬಿಸಿಯಾದ ಹಾಲನ್ನು ಮಕ್ಕಳಿಗೆ ನೀಡುವ ವಾಡಿಕೆ ಇದೆ. ತಾಯಿಯ ಹಾಲು ಸೇರಿದಂತೆ ಯಾವುದೇ ಪ್ರಾಣಿಜನ್ಯ ಹಾಲಿನಲ್ಲಿ ಮೆಲಟೋನಿನ್ ಅಂಶವಿದೆ. ಅದರಲ್ಲೂ ರಾತ್ರಿ ಮಲಗುವ ಸಮಯದಲ್ಲಿ ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ದೆಯನ್ನು ದೀರ್ಘ ಮತ್ತು ಗಾಢವಾಗಿಸಬಹುದು.
ಕಾಳುಗಳು, ಅಣಬೆ
ಕೆಲವು ಬಗೆಯ ಅಣಬೆಗಳಲ್ಲಿ ಮೆಲಟೋನಿನ್ ಹೆಚ್ಚಿಸುವ ಸಾಮರ್ಥ್ಯವಿದೆ. ಕೆಲವು ಮೊಳಕೆಯೊಡೆದ ಕಾಳುಗಳು ಸಹ ಶರೀರವನ್ನು ವಿಶ್ರಾಂತ ಸ್ಥಿತಿಗೆ ದೂಡಬಲ್ಲವು. ಹೀಗೆ ನೈಸರ್ಗಿಕವಾಗಿ ಮೆಲಟೋನಿನ್ ಹೆಚ್ಚಿಸುವಂಥ ಆಹಾರಗಳು ಹಲವಾರಿದ್ದು, ನಿದ್ದೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ನೆರವಾಗುತ್ತವೆ.
ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು