ಉತ್ತರ ಕರ್ನಾಟಕ ತನ್ನದೇ ಆದ ಮೂಲ ಸ್ವಾದದ ತಿಂಡಿ ತಿನಿಸುಗಳನ್ನು ಹೊಂದಿದೆ. ಮಲೆನಾಡಿನಂತೆ ಇಲ್ಲಿ ಧೋ ಎಂದು ಸದಾ ಮಳೆ ಸುರಿಯುತ್ತಿರುವುದಿಲ್ಲವಾದ್ದರಿಂದ ಇಲ್ಲಿನ ಜನ ತಿಂಗಳುಗಟ್ಟಲೆ ಒಳಗೇ ಕುಳಿತು ಸವಿರುಚಿ ಸವಿಯುವ ಭಾಗ್ಯವನ್ನೇನೂ ಪಡೆದಿಲ್ಲ. ಕಷ್ಟಸಹಿಷ್ಣುಗಳಾದ, ಸದಾ ಹೊಲದಲ್ಲಿರುವ ಇಲ್ಲಿನ ರೈತಾಪಿ ಜನತೆಯ ಊಟ ತಿಂಡಿಗಳೂ ಸ್ವಲ್ಪ ಹೆಚ್ಚಿನ ಮಸಾಲೆ, ಖಾರದಿಂದ ಕೂಡಿರುತ್ತವೆ. ಹೀಗಾಗಿ ಮಳೆಗಾಲದಲ್ಲಿ ಈ ತಿಂಡಿಗಳು (monsoon foods of north karnataka) ಮಜಾ ಕೊಡುತ್ತವೆ. ಬನ್ನಿ ಹಾಗಿದ್ದರೆ, ಉತ್ತರ ಕರ್ನಾಟಕದ ಆ ಸೊಗಸಾದ ಮಳೆಗಾಲದ ಖಾದ್ಯವೈವಿಧ್ಯ (monsoon foods) ಯಾವುದು ನೋಡೋಣ.
ಮಿರ್ಚಿ ಭಜಿ
ಭಜಿ ಒಂದು ವಿಶಿಷ್ಟ ಖಾದ್ಯ. ಸಾಮಾನ್ಯವಾಗಿ ಮಿರ್ಚಿಯನ್ನು (ಹಸಿಮೆಣಸಿನಕಾಯಿ) ಉಪಯೋಗಿಸಿ ಮಾಡುತ್ತಾರಾದರೂ ಈಗೀಗ ಬದನೆಕಾಯಿಯ ಎರಡು ಅಗಲವಾದ ತೆಳು ಹೋಳುಗಳ ಮಧ್ಯೆ ಹಸಿ ಚಟ್ನಿ ಹಚ್ಚಿ ಮಿರ್ಚಿ ಕರಿದು ಕೊಡುವದೂ ಉಂಟು. ಇದೂ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಒಟ್ಟಿನಲ್ಲಿ ಮಿರ್ಚಿಭಜಿ ಉತ್ತರ ಕರ್ನಾಟಕದ ಹೆಮ್ಮೆ. ಮಿರ್ಚಿಯ ಖಾರ ಮತ್ತು ಚಟ್ನಿಯ ಖಾರ ಎರಡೂ ಸೇರಿ ಮಳೆಗಾಲದ ಚಳಿಯನ್ನು ಹೊಡೆದೋಡಿಸುತ್ತವೆ!
ಗಿರ್ಮಿಟ್ಟು
ಉತ್ತರ ಕರ್ನಾಟಕಕ್ಕೆ ಹೋದವರು ಗಿರ್ಮಿಟ್ಟು ತಿನ್ನದೆ ಬಂದರೆ ಪಾಪಿಗಳೇ ಸರಿ. ಚುರುಮುರಿ ಅಥವಾ ಕಳ್ಳೆಪುರಿಗೆ ವಿಶೇಷವಾಗಿ ತಯಾರಿಸಿದ ಗೊಜ್ಜನ್ನು ಸೇರಿಸಿ ಕಲಸಿ ಸ್ವಲ್ಪ ಪುಟಾಣಿ ಹಿಟ್ಟು ಬೆರೆಸಿದರೆ ಗಿರ್ಮಿಟ್ಟು ರೆಡಿ. ಜೊತೆಗೆ, ಮೆಣಸಿನಕಾಯಿ ಭಜಿ ಈದ್ದರೆ ಮತ್ತೂ ಮಜಾ. ಇದೂ ನಾಲಿಗೆಯ ಚುಟುಚುಟುವನ್ನು ನಿವಾರಿಸುತ್ತದೆ!
ಖಡಕ್ ರೊಟ್ಟಿ
ಇಲ್ಲಿನ ಜನ ತಲೆಮಾರುಗಳಿಂದ ಬಳಸುವ ಮುಖ್ಯ ಖಾದ್ಯ ಖಟಕ್ ರೊಟ್ಟಿ. ಈ ಜೋಳದ ರೊಟ್ಟಿ ದೇಹಕ್ಕೂ ಒಳ್ಳೆಯದು, ರುಚಿಯೂ ಹೌದು. ಜೋಳ, ಸಜ್ಜೆ, ಎಳ್ಳು ಮಿಶ್ರಿತ ರೊಟ್ಟಿಯೂ ತುಂಬಾ ರುಚಿಕರವಾಗಿರುತ್ತದೆ. ಮೆತ್ತಗಿನ ರೊಟ್ಟಿಯನ್ನು ಬೆಂಕಿಯಲ್ಲಿ ಹದವಾಗಿ ಸುಟ್ಟು ಗಟ್ಟಿ ಮಾಡುತ್ತಾರೆ. ಇವನ್ನು ಕೆಲವು ತಿಂಗಳವರೆಗೂ ಇಟ್ಟು ತಿನ್ನಬಹುದು. ಜತೆಗೆ ಚಟ್ನಿಪುಡಿ, ಮೊಸರು ಇದ್ದರೆ ಬೇಕಾದಷ್ಟಾಯಿತು.
ಬದನೇಕಾಯಿ ಎಣಗಾಯಿ, ಬಜ್ಜಿ
ರೊಟ್ಟಿಗೆ ಬದನೆಕಾಯಿ ಎಣ್ಣೆಗಾಯಿ ಇಲ್ಲದಿದ್ದರೆ ಸವಿಯಿಲ್ಲ. ಮಸಾಲೆಯನ್ನು ತುಂಬಿ ಸ್ಟಫ್ ಮಾಡಿದ ಬದನೆಯನ್ನು ಬೇಯಿಸಿ ಮಸಾಲೆಯೊಂದಿಗೆ ಸೇರಿಸುವ ಈ ಎಣ್ಣೆಗಾಯಿಯ ರೆಸಿಪಿಯ ಮಂತ್ರ ಬಲ್ಲವರೇ ಬಲ್ಲರು. ಹಾಗೆಯೇ ಬದನೆಕಾಯಿಯನ್ನು ವೃತ್ತಾಕಾರದಲ್ಲಿ ಹೆಚ್ಚಿ ಅದರ ಒಡಲಲ್ಲಿ ಖಾರದ ಮಸಾಲೆ ತುಂಬಿ ಕಡಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಮಾಡುವ ಬಜ್ಜಿ ಕೂಡ ಗದಗಿನಲ್ಲಿ ಜನಪ್ರಿಯ.
ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ಕರಾವಳಿಯ ಜಡಿಮಳೆಗೆ ಅಲ್ಲಿನ ಈ ಆಹಾರಗಳನ್ನು ಸವಿಯಲೇಬೇಕು!
ರಂಜಕ
ಕೆಂಪು ಮೆಣಸಿನಕಾಯಿಯನ್ನು ಒಂದಿಷ್ಟು ಮೆಂತೆಯೊಂದಿಗೆ ರುಬ್ಬಿ ಮಾಡುವ ಚಟ್ನಿ ಇದು. ಇದನ್ನೂ ಕೂಡ ರೊಟ್ಟಿ ಹಾಗು ಅನ್ನದ ಜೊತೆಗೆ ಬಳಸಬಹುದು. ಇದರಲ್ಲಿ ಬಳಸುವ ಮೆಣಸಿನಕಾಯಿಯ ಮೇಲೆ ಇದರ ಖಾರದ ಪ್ರಮಾಣ ನಿರ್ಧಾರವಾಗುತ್ತದೆ. ಅತಿ ಖಾರ ತಿನ್ನುವವರು ರಂಜಕದ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.
ಶೇಂಗಾ ಹೋಳಿಗೆ
ಶೇಂಗಾ ಅಥವಾ ನೆಲಗಡಲೆ ಮತ್ತು ಬೆಲ್ಲದಿಂದ ಮಾಡುವ ಈ ಹೋಳಿಗೆ ಉತ್ತರ ಕರ್ನಾಟಕದ ಬ್ರಾಂಡ್ ಅಂಬಾಸಿಡರ್. ಯಾವುದೇ ಹಬ್ಬಕ್ಕೆ ಇದು ಇರಲೇಬೇಕು. ಮೊದಲೆಲ್ಲ ಶೇಂಗಾ ಹೋಳಿಗೆಯನ್ನು ಶೀಗೆ ಹುಣ್ಣಿಮೆಯಲ್ಲಿ ಹೆಚ್ಚಾಗಿ ಮಾಡುತ್ತಿದ್ದರಾದರೂ ಈಗದು ಎಲ್ಲಾ ಸೀಸನ್‌ಗಳಲ್ಲೂ ಲಭ್ಯವಿರುತ್ತೆ.
ಮಂಡಕ್ಕಿ ಸೂಸಲಾ
ಮಂಡಕ್ಕಿ ಅಥವಾ ಚುರುಮುರಿ ಸುಸ್ಲಾ ಇಲ್ಲಿನ ಸಾಂಪ್ರದಾಯಿಕ ಮಸಾಲೆಯುಕ್ತ ಲಘು ಪಾಕವಿಧಾನ. ಸಾಮಾನ್ಯವಾಗಿ ಸಂಜೆಯ ಲಘು ಆಹಾರವಾಗಿರುತ್ತದೆ. ಅವಲಕ್ಕಿ, ಈರುಳ್ಳಿ, ಟೊಮೆಟೋ ಮತ್ತು ವಿವಿಧ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ.
ಇದನ್ನೂ ಓದಿ: Monsoon Drinks: ಜಿಟಿಜಿಟಿ ಮಳೆಗೆ ಈ ಸಾಂಪ್ರದಾಯಿಕ ಬಿಸಿಬಿಸಿ ಪೇಯಗಳನ್ನು ಮರೆಯದಿರಿ!