ಚಳಿಗಾಲ ಮೆಲ್ಲಮೆಲ್ಲನೆ ತನ್ನ ಬಾಹುಬಂಧನವನ್ನು ಸಡಿಲಗೊಳಿಸುತ್ತಿರುವ ಹಾಗೆಯೇ ಸೂರ್ಯ ಮೆಲ್ಲಗೆ ಬಿಸಿಯೇರಿಸಲು ಶುರು ಮಾಡುತ್ತಾನೆ. ಪ್ರಕೃತಿಯೂ ಕಾಲಕಾಲಕ್ಕೆ ತಕ್ಕ ಹಾಗೆ ತನ್ನಲ್ಲೇ ಎಂತಹ ಅಚ್ಚರಿಯನ್ನು ಹುದುಗಿಸಟ್ಟಿರುತ್ತದೆ ಎಂಬುದನ್ನು ತಿಳಿಯಲು ದೊಡ್ಡ ಉದಾಹರಣೆಯೇನೂ ಬೇಕಾಗಿಲ್ಲ. ನಮ್ಮ ಕಣ್ಣ ಮುಂದೆಯೇ ಮಾರುಕಟ್ಟೆಗೆ ಲಗ್ಗೆಯಿಡುವ ಹಣ್ಣುಗಳನ್ನು ನೋಡಿದರೂ ಸಾಕು!
ಚಳಿಗಾಲ ಮುಗಿಯುತ್ತಿದ್ದ ಹಾಗೆ ಏರುವ ದಾಹವನ್ನು ತಣಿಸಲು, ಎಳನೀರು, ನಿಂಬೆ, ಖರ್ಬೂಜ, ಕಲ್ಲಂಗಡಿ ಇವೆಲ್ಲ ಮಾರುಕಟ್ಟೆಯನ್ನಾಳಲು ಆರಂಭಿಸುತ್ತವೆ. ಅದರಲ್ಲೂ ಸಿಹಿ ಸಿಹಿಯಾಗಿ, ರಸಭರಿತ ತಾಳೆಹಣ್ಣು (ತಾಟಿಹಣ್ಣು) ಯಾರಿಗೆ ಇಷ್ಟವಿಲ್ಲ ಹೇಳಿ!
ತೆಂಗಿನ ಜಾತಿಗೇ ಸೇರಿದ, ನೋಡಲು ತೆಂಗಿನಕಾಯಿಯಂತೆ ಕಾಣುವ ಇವು ಮರದಲ್ಲಿ ಗೊಂಚಲಾಗಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಎಳೆನೀರನ್ನು ಕೆತ್ತಿದ ಹಾಗೇ ಇದನ್ನೂ ಕೆತ್ತಿದರೆ, ಮೂರು ಕಣ್ಣಿನಂತಹ ರಚನೆಯಲ್ಲಿ ತೊಳೆಗಳು, ಎಳನೀರಿನ ಗಂಜಿಯಂತೆ ತಿನ್ನಲು ಬಲು ರುಚಿ. ದಾಹ ನೀಗಿಸಲು ಇದು ಹೇಳಿ ಮಾಡಿಸಿದ್ದು. ಕೇವಲ ದಾಹವಷ್ಟೇ ಅಲ್ಲ, ತಾಳೆಹಣ್ಣಿನ ಆರೋಗ್ಯಕರ ಉಪಯೋಗಗಳೂ ಅನೇಕ ಇವೆ.
೧. ತಾಳೆಹಣ್ಣು ನೈಸರ್ಗಿಕವಾಗಿ ದೇಹವನ್ನು ತಂಪುಮಾಡುವ ಹಣ್ಣು. ದೇಹದ ಉಷ್ಣತೆ ಏರುವ ಮಂದಿಗೆ ಇದು ಅತ್ಯುತ್ತಮ. ಬೇಸಿಗೆಯಲ್ಲಿ ಬಹುತೇಕರಿಗೆ ಸಾಮಾನ್ಯವಾಗಿ ಕಂಡುಬರುವ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆಗೆ ತಾಳೆಹಣ್ಣು ಅತ್ಯುತ್ತಮ. ಇದೊಂದು ಬಗೆಯ ನೈಸರ್ಗಿಕ ಎಲೆಕ್ಟ್ರೋಲೈಟ್ ರೀತಿಯಲ್ಲಿ ಕೆಲಸ ಮಾಡುತ್ತದೆ.
೨. ತಾಳೆಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಕಬ್ಬಿಣಾಂಶ, ಸೋಡಿಯಂ ಹಾಗೂ ಪೊಟಾಶಿಯಂ ಮತ್ತಿತರ ಖನಿಜ ಲವಣಗಳು ಹೇರಳವಾಗಿದೆ. ನಾರಿನಂಶ ಹೆಚ್ಚಾಗಿರುವ ಇದರಲ್ಲಿ ಅಧಿಕವಾಗಿ ವಿಟಮಿನ್ ಸಿ, ಎ, ಇ, ಹಾಗೂ ಕೆ ಇವೆ. ಹಾಗಾಗಿ ಇದೊಂದು ಪರಿಪೂರ್ಣವಾದ ಆಹಾರ.
೩. ತಾಳೆಹಣ್ಣು ಚರ್ಮದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಬೇಗ ವಯಸ್ಸಾದಂತೆ ಕಾಣುವ ಚರ್ಮದ ಸುಕ್ಕನ್ನು ಇದು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆವರುಸಾಲೆಯಂತಹ ಸಮಸ್ಯೆಗಳಿಗೂ ಇದು ರಾಮಬಾಣ. ಇದರ ಸೇವನೆ ಹಾಗೂ ಹಚ್ಚುವುದು ಎರಡರಿಂದಲೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
೩. ಬೇಸಗೆಯಲ್ಲಿ ರಕ್ತದೊತ್ತಡ ಏರುಪೇರಾಗುವ ಮಂದಿಗೆ ತಾಳೆಹಣ್ಣು ಅತ್ಯುತ್ತಮ. ಇದರಿಂದ ಸುಸ್ತು, ಆಯಾಸ ಪರಿಹಾರವಾಗುತ್ತದೆ.
೪. ತೂಕ ಇಳಿಸಿಕೊಳ್ಳಲು ಇಷ್ಟಪಡುವ ಮಂದಿಗೆ ತಾಳೆಹಣ್ಣು ಒಳ್ಳೆಯದು. ಯಾಕೆಂದರೆ, ಹಣ್ಣಿನಲ್ಲಿ ಅಧಿಕ ನೀರಿನಂಶವಿದ್ದು ಇದು ಹೊಟ್ಟೆ ತುಂಬಿಸಿದ ಭಾವ ಮೂಡಿಸುತ್ತದೆ ಹಾಗೂ ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಕಡಿಮೆ ಕ್ಯಾಲರಿಯ ಆಯ್ಕೆ ಇದಾಗಿದ್ದು, ಅಗತ್ಯವಾದ ಎಲ್ಲ ಪೋಷಕಾಂಶಗಳನ್ನೂ ದೇಹಕ್ಕೆ ಒದಗಿಸುತ್ತದೆ.
೫. ಗರ್ಭಿಣಿಯರಿಗೂ ಇದು ಅತ್ಯಂತ ಒಳ್ಳೆಯದು. ಗರ್ಭಿಣಿಯರಿಗೆ ಈ ಸಂದರ್ಭ ಉಂಟಾಗುವ ಹೊಟ್ಟೆ ತೊಳೆಸಿದಂಥ, ವಾಂತಿಯಂಥ ಅನುಭವವನ್ನು ಇದು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Eye Care | ದೃಷ್ಟಿ ವರ್ಧನೆಗೆ ಪೂರಕವಾದ ಹಣ್ಣುಗಳು ಯಾವವು ಗೊತ್ತೇ?
೬. ಹಾಲುಣಿಸುವ ತಾಯಂದಿರಿಗೂ ತಾಳೆಹಣ್ಣು ಒಳ್ಳೆಯದು. ಇದು ಹಾಲು ವೃದ್ಧಿಯಾಗಲು ಸಹಾಯ ಮಾಡುವುದಲ್ಲದೆ, ಅಗತ್ಯ ಪೌಷ್ಠಿಕಾಂಶವನ್ನು ನೀಡಿ ಎದೆಹಾಲಿನ ಉತ್ಕೃಷ್ಠತೆಯನ್ನು ಹೆಚ್ಚಿಸುತ್ತದೆ.
೭. ಪಿತ್ತಕೋಶದ ಸಮಸ್ಯೆ ಇರುವ ಮಂದಿಗೆ ಇದು ಅತ್ಯಂತ ಒಳ್ಳೆಯದು. ದೇಹದಲ್ಲಿರುವ ವಿಷಕಾರಕಗಳನ್ನು ದೇಹದಿಂದ ಹೊರಕ್ಕೆ ಕಳಿಸಿ ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ.
೮. ತಾಳೆಹಣ್ಣು ದೇಹದ ಕ್ಷಮತೆ ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
೯. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೋಗಲಾಡಿಸಿ, ಮಲಬದ್ಧತೆ, ಹೊಟ್ಟೆ ಉಬ್ಬರಿಸುವಿಕೆ ಮತ್ತಿತರ ಸಮಸ್ಯೆ ಇರುವ ಮಂದಿಗೆ ಇದು ಅತ್ಯುತ್ತಮ ಶಮನಕಾರಿಯಾಗಿಯೂ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯ ಎಲ್ಲ ಸಮಸ್ಯೆಗಳಿಗೂ ಇದು ನೈಸರ್ಗಿಕವಾದ ಉಪಾಯ.
೧೦. ಬೇಸಿಗೆಯಲ್ಲಿ ವಿಪರೀತ, ಆಯಾಸ, ಸುಸ್ತು ಸಮಸ್ಯೆಯಿಂದ ಬಳಲುವವರು, ನಿಶ್ಯಕ್ತಿಯ ಸಮಸ್ಯೆ ಇರುವ ಮಂದಿ ಇದನ್ನು ನಿತ್ಯ ಸೇವನೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಾಣಬಹುದು.
ಇದನ್ನೂ ಓದಿ: Diabetics Fruits | ಮಧುಮೇಹಿಗಳಿಗೆ ಯಾವೆಲ್ಲಾ ಹಣ್ಣುಗಳು ಬೇಡ?