Site icon Vistara News

Rainbow Diet: ಬಣ್ಣದ ಕಾಮನಬಿಲ್ಲು ಡಯಟ್‌: ಕಲರ್‌ ಕಲರ್‌ ತಿನ್ನಿ, ಆರೋಗ್ಯವಾಗಿರಿ!

rainbow diet

ಸದ್ಯಕ್ಕೆ ಭಾರೀ ಚಾಲ್ತಿಯಲ್ಲಿರುವ ರೈನ್‌ಬೋ ಡಯಟ್‌ ಅಂದರೆ ಕಾಮನಬಿಲ್ಲು ಡಯಟ್‌, ಡಯಟ್‌ ಪ್ರಿಯರ ಪಾಲಿಗೇನೂ ಹೊಸತಲ್ಲ. ಇತ್ತೀಚೆಗೆ ತನ್ನ ಕ್ರೇಜ್‌ ಹೆಚ್ಚಿಸಿಕೊಳ್ಳುತ್ತಿರುವ ಈ ಆಹಾರ ಪದ್ಧತಿ ಕಲರ್‌ಫುಲ್.‌ ಇದನ್ನು ಪಾಲಿಸುತ್ತಿರುವ ಮಂದಿ ಇದರ ಫಲವನ್ನು ಪಡೆದು ಹೆಚ್ಚು ಹೆಚ್ಚು ಮಂದಿಗೂ ಈ ಬಗೆಯ ಆಹಾರ ಪದ್ಧತಿ (health tips) ಅನುಸರಿಸಲು ಪ್ರೇರಣೆ ನೀಡುತ್ತಿದ್ದಾರಂತೆ. ಏನಿದು ಕಾಮನಬಿಲ್ಲು ಡಯಟ್‌ (rainbow diet) ಅಂತೀರಾ? ಕಾಮನಬಿಲ್ಲಿನಲ್ಲಿರುವ ಬಣ್ಣಗಳ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಸೇವಿಸುವುದು!

ದೇಹಕ್ಕೆ ಒಂದೇ ಬಗೆಯ ಪೋಷಕಾಂಶಗಳು ಲಭ್ಯವಾಗುವುದಕ್ಕಿಂತ ಎಲ್ಲ ಬಗೆಯ ವಿಟಮಿನ್ನು, ಖನಿಜಾಂಶಗಳೂ ಲಭ್ಯವಾಗುವುದು ಮುಖ್ಯ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಈ ಆಹಾರ ಪದ್ಧತಿಯೂ ಕೂಡಾ ಅದೇ ತತ್ವದ ತಳಹದಿಯಲ್ಲಿ ನಿಲ್ಲುತ್ತದೆ. ಎಲ್ಲ ಬಗೆಯ ಬಣ್ಣಗಳು ಅಂದರೆ ಪ್ರಕೃತಿಯ ಏಳು ಬಣ್ಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಎಲ್ಲ ಬಗೆಯ ಪೋಷಕಾಂಶಗಳೂ ನಿತ್ಯವೂ ದೇಹಕ್ಕೆ ಸೇರುವಂತೆ ಮಾಡುವುದು ಹಾಗೂ ತೂಕವನ್ನೂ ಸಮತೋಲನದಲ್ಲಿರಿಸುವುದು ಇದರ ಮುಖ್ಯ ಉದ್ದೇಶ.

ಹಾಗಾದರೆ ರೇನ್‌ಬೋ ಅಥವಾ ಕಾಮನಬಿಲ್ಲು ಡಯಟ್‌ನಲ್ಲಿ ಏನೇನು ತಿನ್ನಬೇಕು ಅಂತೀರಾ? ಹಾಗೆ ನೋಡಿದರೆ ಇದು ಸರಳ ಆಹಾರ ಪದ್ಧತಿ. ಇಲ್ಲಿ ಏಳು ಬಣ್ಣಗಳಿಗೆ ಹೊಂದುವ ತರಕಾರಿ ಹಣ್ಣುಗಳನ್ನು ನೀವು ನಿಮ್ಮ ತಟ್ಟೆಯಲ್ಲಿರುವಂತೆ ನೋಡಿಕೊಂಡರೆ ಆಯಿತು.

1. ಕೆಂಪು: ಕಾಮನಬಿಲ್ಲಿನ ಕೆಂಪು ಬಣ್ಣಕ್ಕೆ ಯಾವ ತರಕಾರಿ/ ಹಣ್ಣನ್ನು ಆರಿಸುತ್ತೀರಿ ಯೋಚಿಸಿ. ಟೊಮೇಟೋ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣು ಇತ್ಯಾದಿ ಇತ್ಯಾದಿಗಳ ಪಟ್ಟಿ ಮಾಡಿ. ಪ್ರಕೃತಿಯಲ್ಲಿ ಸಿಗುವ ತರಕಾರಿ ಹಣ್ಣುಗಳ ಪೈಕಿ ಯಾವುದು ಕೆಂಪು ಬಣ್ಣದಲ್ಲಿಯೇ ಲಭ್ಯವಾಗುತ್ತದೆ ಯೋಚಿಸಿ ನೋಡಿ. ಅದರಂತೆ ಯಾವುದಾದರೊಂದು ಕೆಂಪಿ ಬಣ್ಣದ ಹಣ್ಣೋ ತರಕಾರಿಯನ್ನೋ ಆಯ್ಕೆ ಮಾಡಿದರಾಯಿತು. ಆ ದಿನದ ಕೆಂಪು ಬಣ್ಣ ಲಭ್ಯವಾದಂತೆ. ಕೆಂಪು ಬಣ್ಣದ ಇವುಗಳಲ್ಲಿರುವ ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ ಎಂಬುದು ನಂಬಿಕೆ.

2. ಕೇಸರಿ: ಕೇಸರಿ ಅಥವಾ ಕಿತ್ತಳೆ ಬಣ್ಣ ಯಾವೆಲ್ಲ ತರಕಾರಿ ಹಣ್ಣುಗಳಲ್ಲಿವೆ ಎಂದು ಯೋಚಿಸಿ ನೋಡಿ. ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್‌, ಕ್ಯಾರೆಟ್‌ ಇತ್ಯಾದಿಗಳು ಸಿಕ್ಕಾವು. ಕೇಸರಿ ಬಣ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯಂತೆ.

3. ಹಳದಿ: ಹಳದಿ ಬಣ್ಣ ಕಣ್ಣಿಗೆ ಒಳ್ಳೆಯದಂತೆ. ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಹಳದಿ ಬಣ್ಣವನ್ನು ಧ್ವನಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಇವು ಒಳ್ಳೆಯದು.

ಇದನ್ನೂ ಓದಿ: Menopause Diet: ಋತುಬಂಧದ ಲಕ್ಷಣ ನಿಭಾಯಿಸಲು ಈ ಆಹಾರ ಸಹಕಾರಿ

4. ಹಸಿರು: ಹಸಿರು ಬಣ್ಣಕ್ಕೆ ಹೇರಳವಾಗಿ ಹಣ್ಣು ತರಕಾರಿಗಳು ಸಿಕ್ಕಾವು. ಮುಖ್ಯವಾಗಿ ಬ್ರೊಕೋಲಿ, ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಈ ವಿಭಾಗಕ್ಕೆ ಬರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಇವೆಲ್ಲ ಒಳ್ಳೆಯದು.

5. ನೀಲಿ ಹಾಗೂ ನೇರಳೆ: ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಗಳಿಗೆ ಇವು ಒಳ್ಳೆಯದು.

6. ಬಿಳಿ: ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಹಾಡು ಹೇಳಿದರೆ ಸಾಲದು. ಬಿಳಿಯ ಬಣ್ಣದ ತರಕಾರಿ ಹಣ್ಣುಗಳನ್ನೂ ಸೇವಿಸಬೇಕು. ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಇತ್ಯಾದಿಗಳನ್ನು ಈ ವಿಭಾಗದಡಿ ಸೇರಿಸಿಕೊಂಡು ಆಹಾರದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು. ಈ ಬಣ್ಣದ ಆಹಾರ ಹಲ್ಲು ಹಾಗೂ ಎಲುಬಿನ ಆರೋಗ್ಯಕ್ಕೆ ಒಳ್ಳೆಯದು. 

ಇದನ್ನೂ ಓದಿ: Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್‌ಕಟ್:‌ ದಿಢೀರ್‌ ತೂಕ ಇಳಿಕೆ ಒಳ್ಳೆಯದೇ?

Exit mobile version