ಆಹಾರ/ಅಡುಗೆ
Rainbow Diet: ಬಣ್ಣದ ಕಾಮನಬಿಲ್ಲು ಡಯಟ್: ಕಲರ್ ಕಲರ್ ತಿನ್ನಿ, ಆರೋಗ್ಯವಾಗಿರಿ!
ರೇನ್‌ಬೋ ಅಥವಾ ಕಾಮನಬಿಲ್ಲು ಡಯಟ್‌ನಲ್ಲಿ (Rainbow Diet) ಏನೇನು ತಿನ್ನಬೇಕು ಅಂತೀರಾ? ಹಾಗೆ ನೋಡಿದರೆ ಇದು ಸರಳ ಆಹಾರ ಪದ್ಧತಿ. ಇಲ್ಲಿ ಏಳು ಬಣ್ಣಗಳಿಗೆ ಹೊಂದುವ ತರಕಾರಿ ಹಣ್ಣುಗಳನ್ನು ನೀವು ನಿಮ್ಮ ತಟ್ಟೆಯಲ್ಲಿರುವಂತೆ ನೋಡಿಕೊಂಡರೆ ಆಯಿತು.
ಸದ್ಯಕ್ಕೆ ಭಾರೀ ಚಾಲ್ತಿಯಲ್ಲಿರುವ ರೈನ್‌ಬೋ ಡಯಟ್ ಅಂದರೆ ಕಾಮನಬಿಲ್ಲು ಡಯಟ್, ಡಯಟ್ ಪ್ರಿಯರ ಪಾಲಿಗೇನೂ ಹೊಸತಲ್ಲ. ಇತ್ತೀಚೆಗೆ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುವ ಈ ಆಹಾರ ಪದ್ಧತಿ ಕಲರ್‌ಫುಲ್. ಇದನ್ನು ಪಾಲಿಸುತ್ತಿರುವ ಮಂದಿ ಇದರ ಫಲವನ್ನು ಪಡೆದು ಹೆಚ್ಚು ಹೆಚ್ಚು ಮಂದಿಗೂ ಈ ಬಗೆಯ ಆಹಾರ ಪದ್ಧತಿ (health tips) ಅನುಸರಿಸಲು ಪ್ರೇರಣೆ ನೀಡುತ್ತಿದ್ದಾರಂತೆ. ಏನಿದು ಕಾಮನಬಿಲ್ಲು ಡಯಟ್ (rainbow diet) ಅಂತೀರಾ? ಕಾಮನಬಿಲ್ಲಿನಲ್ಲಿರುವ ಬಣ್ಣಗಳ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಸೇವಿಸುವುದು!
ದೇಹಕ್ಕೆ ಒಂದೇ ಬಗೆಯ ಪೋಷಕಾಂಶಗಳು ಲಭ್ಯವಾಗುವುದಕ್ಕಿಂತ ಎಲ್ಲ ಬಗೆಯ ವಿಟಮಿನ್ನು, ಖನಿಜಾಂಶಗಳೂ ಲಭ್ಯವಾಗುವುದು ಮುಖ್ಯ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಈ ಆಹಾರ ಪದ್ಧತಿಯೂ ಕೂಡಾ ಅದೇ ತತ್ವದ ತಳಹದಿಯಲ್ಲಿ ನಿಲ್ಲುತ್ತದೆ. ಎಲ್ಲ ಬಗೆಯ ಬಣ್ಣಗಳು ಅಂದರೆ ಪ್ರಕೃತಿಯ ಏಳು ಬಣ್ಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಎಲ್ಲ ಬಗೆಯ ಪೋಷಕಾಂಶಗಳೂ ನಿತ್ಯವೂ ದೇಹಕ್ಕೆ ಸೇರುವಂತೆ ಮಾಡುವುದು ಹಾಗೂ ತೂಕವನ್ನೂ ಸಮತೋಲನದಲ್ಲಿರಿಸುವುದು ಇದರ ಮುಖ್ಯ ಉದ್ದೇಶ.
ಹಾಗಾದರೆ ರೇನ್‌ಬೋ ಅಥವಾ ಕಾಮನಬಿಲ್ಲು ಡಯಟ್‌ನಲ್ಲಿ ಏನೇನು ತಿನ್ನಬೇಕು ಅಂತೀರಾ? ಹಾಗೆ ನೋಡಿದರೆ ಇದು ಸರಳ ಆಹಾರ ಪದ್ಧತಿ. ಇಲ್ಲಿ ಏಳು ಬಣ್ಣಗಳಿಗೆ ಹೊಂದುವ ತರಕಾರಿ ಹಣ್ಣುಗಳನ್ನು ನೀವು ನಿಮ್ಮ ತಟ್ಟೆಯಲ್ಲಿರುವಂತೆ ನೋಡಿಕೊಂಡರೆ ಆಯಿತು.
1. ಕೆಂಪು: ಕಾಮನಬಿಲ್ಲಿನ ಕೆಂಪು ಬಣ್ಣಕ್ಕೆ ಯಾವ ತರಕಾರಿ/ ಹಣ್ಣನ್ನು ಆರಿಸುತ್ತೀರಿ ಯೋಚಿಸಿ. ಟೊಮೇಟೋ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣು ಇತ್ಯಾದಿ ಇತ್ಯಾದಿಗಳ ಪಟ್ಟಿ ಮಾಡಿ. ಪ್ರಕೃತಿಯಲ್ಲಿ ಸಿಗುವ ತರಕಾರಿ ಹಣ್ಣುಗಳ ಪೈಕಿ ಯಾವುದು ಕೆಂಪು ಬಣ್ಣದಲ್ಲಿಯೇ ಲಭ್ಯವಾಗುತ್ತದೆ ಯೋಚಿಸಿ ನೋಡಿ. ಅದರಂತೆ ಯಾವುದಾದರೊಂದು ಕೆಂಪಿ ಬಣ್ಣದ ಹಣ್ಣೋ ತರಕಾರಿಯನ್ನೋ ಆಯ್ಕೆ ಮಾಡಿದರಾಯಿತು. ಆ ದಿನದ ಕೆಂಪು ಬಣ್ಣ ಲಭ್ಯವಾದಂತೆ. ಕೆಂಪು ಬಣ್ಣದ ಇವುಗಳಲ್ಲಿರುವ ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ ಎಂಬುದು ನಂಬಿಕೆ.
2. ಕೇಸರಿ: ಕೇಸರಿ ಅಥವಾ ಕಿತ್ತಳೆ ಬಣ್ಣ ಯಾವೆಲ್ಲ ತರಕಾರಿ ಹಣ್ಣುಗಳಲ್ಲಿವೆ ಎಂದು ಯೋಚಿಸಿ ನೋಡಿ. ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್, ಕ್ಯಾರೆಟ್ ಇತ್ಯಾದಿಗಳು ಸಿಕ್ಕಾವು. ಕೇಸರಿ ಬಣ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯಂತೆ.
3. ಹಳದಿ: ಹಳದಿ ಬಣ್ಣ ಕಣ್ಣಿಗೆ ಒಳ್ಳೆಯದಂತೆ. ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಹಳದಿ ಬಣ್ಣವನ್ನು ಧ್ವನಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಇವು ಒಳ್ಳೆಯದು.
ಇದನ್ನೂ ಓದಿ: Menopause Diet: ಋತುಬಂಧದ ಲಕ್ಷಣ ನಿಭಾಯಿಸಲು ಈ ಆಹಾರ ಸಹಕಾರಿ
4. ಹಸಿರು: ಹಸಿರು ಬಣ್ಣಕ್ಕೆ ಹೇರಳವಾಗಿ ಹಣ್ಣು ತರಕಾರಿಗಳು ಸಿಕ್ಕಾವು. ಮುಖ್ಯವಾಗಿ ಬ್ರೊಕೋಲಿ, ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಈ ವಿಭಾಗಕ್ಕೆ ಬರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಇವೆಲ್ಲ ಒಳ್ಳೆಯದು.
5. ನೀಲಿ ಹಾಗೂ ನೇರಳೆ: ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಗಳಿಗೆ ಇವು ಒಳ್ಳೆಯದು.
6. ಬಿಳಿ: ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಹಾಡು ಹೇಳಿದರೆ ಸಾಲದು. ಬಿಳಿಯ ಬಣ್ಣದ ತರಕಾರಿ ಹಣ್ಣುಗಳನ್ನೂ ಸೇವಿಸಬೇಕು. ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಇತ್ಯಾದಿಗಳನ್ನು ಈ ವಿಭಾಗದಡಿ ಸೇರಿಸಿಕೊಂಡು ಆಹಾರದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು. ಈ ಬಣ್ಣದ ಆಹಾರ ಹಲ್ಲು ಹಾಗೂ ಎಲುಬಿನ ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್‌ಕಟ್: ದಿಢೀರ್ ತೂಕ ಇಳಿಕೆ ಒಳ್ಳೆಯದೇ?
ಆಹಾರ/ಅಡುಗೆ
Kitchen Tips: ಮಿಕ್ಸಿ ಗ್ರೈಂಡರಿನ ಕೆಟ್ಟ ವಾಸನೆ ಹಾಗೂ ಜಿಡ್ಡಿನಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!
ಮಿಕ್ಸಿ, ಗ್ರೈಂಡರ್ ಎಂಬಿತ್ಯಾದಿ ಉಪಕರಣಗಳನ್ನು ತೊಳೆಯಲು (kitchen tips) ಸ್ವಲ್ಪ ಹೆಣಗಾಡಬೇಕಾಗುತ್ತದೆ. ಎಷ್ಟೇ ತೊಳೆದರೂ ಆಹಾರದ ತುಣುಕುಗಳು ಉಳಿದುಕೊಂಡರೆ ವಾಸನೆ ಬೀರುತ್ತದೆ. ಇದರಿಂದ ಮುಕ್ತಿ ಹೇಗೆ?
ಬಹಳಷ್ಟು ಸಾರಿ ಸುಲಭವಾಗಿ ಮಾಡಬಹುದಾದ ಹಲವು ಉಪಕರಣಗಳು ನಮ್ಮ ಅಡುಗೆ ಮನೆಯನ್ನು ಪ್ರವೇಶಿಸಿ ನಮ್ಮ ಜೀವನವನ್ನು ಸರಳವಾಗಿಸಿದೆ (smart kitchen) ನಿಜ. ಆದರೆ, ಅಷ್ಟೇ ಸಂಕೀರ್ಣವನ್ನಾಗಿಸಿದೆ ಎಂಬುದೂ ಅಷ್ಟೇ ನಿಜ. ಹಿಂದಿನ ಕಾಲದ ಹಾಗೆ ರುಬ್ಬುವ ಕಲ್ಲಿನಲ್ಲೀಗ ನಿತ್ಯವೂ ರುಬ್ಬಬೇಕಿಲ್ಲ. ಮಿಕ್ಸಿಗೆ ಹಾಕಿದರೆ, ಎರಡು ನಿಮಿಷದಲ್ಲಿ ಹಿಟ್ಟು ರೆಡಿ. ರುಬ್ಬುವ ಆಯಾಸವಿಲ್ಲ. ಸಮಯವೂ ಉಳಿತಾಯವೇ. ಆದರೆ, ಸಮಸ್ಯೆ ಎದುರಾಗುವುದು ಇಂತಹ ಉಪಕರಣಗಳನ್ನು ತೊಳೆಯುವ ವಿಚಾರ ಬಂದಾಗ.ಮಿಕ್ಸಿ, ಗ್ರೈಂಡರ್ ಎಂಬಿತ್ಯಾದಿ ಉಪಕರಣಗಳನ್ನು ತೊಳೆಯಲು (kitchen tips) ಸ್ವಲ್ಪ ಹೆಣಗಾಡಬೇಕಾಗುತ್ತದೆ. ಎಷ್ಟೋ ಬಾರಿ ಎಷ್ಟು ತೊಳೆದರೂ, ಮಿಕ್ಸಿಯ ಬ್ಲೇಡ್‌ಗಳ ಮಧ್ಯದಲ್ಲೆಲ್ಲೋ ಉಳಿದುಹೋದ ಆಹಾರದ ತುಣುಕುಗಳು ಹೋಗುವುದೇ ಇಲ್ಲ. ಸಿಕ್ಕಿಹಾಕಿಕೊಂಡು, ಅತ್ತ ನಮ್ಮ ಕೈಯಿಂದ ಅದನ್ನು ತೊಳೆಯಲೂ ಆಗದೆ, ಹಾಗೇ ಬಿಡಲೂ ಆಗದೆ ಒದ್ದಾಡುತ್ತೇವೆ. ಜಿಡ್ಡಿನ ವಸ್ತುಗಳನ್ನು ರುಬ್ಬಿದಾಗ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಜಿಡ್ಡು ಅಂಟಿಕೊಂಡು ಉಳಿದುಬಿಡುತ್ತದೆ. ಹಲವು ಬಾರಿ ಆಹಾರದ ವಾಸನೆ ಹಾಗೆಯೇ ಉಳಿದುಕೊಂಡು ಬಿಡುತ್ತದೆ.
ಹಾಗಾದರೆ, ಇಂಥ ಸಮಸ್ಯೆಯಿಂದ ಮುಕ್ತಿ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಮಿಕ್ಸಿಯನ್ನು ಅಥವಾ ಇಂತಹ ಉಪಕರಣಗಳನ್ನು ಸರಿಯಾಗಿ ತೊಳೆಯಬೇಕಾಗುತ್ತದೆ. ಹೀಗೆ ಉಳಿದುಹೋದ ವಾಸನೆ ಹಾಗೂ ಜಿಡ್ಡು, ಆಹಾರ ತುಣುಕುಗಳನ್ನು ಸರಿಯಾಗಿ ಸ್ವಚ್ಛವಾಗಿ ತೊಳೆದುಕೊಳ್ಳಲು ಸಲಹೆಗಳು ಇಲ್ಲಿವೆ.
1. ಲಿಕ್ವಿಡ್ ಡಿಟರ್ಜೆಂಟ್: ಬಹಳ ಸುಲಭ ಹಾಗೂ ಸಾಮಾನ್ಯ ಪ್ರಕ್ರಿಯೆ ಇದು. ಇದು ಆಹಾರದ ಕೊಳೆಯನ್ನು ತೊಳೆಯಲು ಅತ್ಯುತ್ತಮ ಸರಳ ವಿಧಾನ. ಹೋಗದೆ ಉಳಿದ ಜಿಡ್ಡು ಅಥವಾ ಆಹಾರ ಇದ್ದರೆ, ಆಗ ಲಿಕ್ವಿಡ್ ಡಿಟರ್ಜೆಂಟನ್ನು ಆ ಜಾಗಕ್ಕೆ ಹಾಕಿ, ಜಾಗ್ರತೆಯಿಂದ ತೊಳೆಯುವ ಸ್ಪಾಂಜ್‌ನಲ್ಲಿ ಉಜ್ಜಿ ತೊಳೆದು ನೀರಿನಿಂದ ಆಮೇಲೆ ತೊಳೆದುಕೊಳ್ಳಬಹುದು.
2. ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಕೂಡಾ ಹೌದು. ಮಿಕ್ಸಿ ಜಾರಿನಲ್ಲಿ ಬ್ಲೇಡುಗಳ ನಡುವೆ ಸಿಕ್ಕಿ ಹಾಕಿಕೊಂಡ ಆಹಾರ ಅಥವಾ ಹಳೆಯ ಆಹಾರದ ವಾಸನೆ ಇದ್ದಲ್ಲಿ, ನೀರಿನ ಜೊತೆ ಬೇಕಿಂಗ್ ಸೋಡಾ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ರನ್ ಮಾಡಿ. ನಂತರ ಕಲೆಗಳು ಅಥವಾ ಆಹಾರ ಉಳಿದಿದ್ದರೆ ಮೆದುವಾಗಿ ಸ್ಪಾಂಜಿನಿಂದ ಉಜ್ಜಿ ತೊಳೆಯಿರಿ. ಬಿಸಿನೀರು ಹಾಕಿ ತೊಳೆಯಿರಿ. ಎಂಥ ವಾಸನೆಯಿದ್ದರೂ ಹೋಗುತ್ತದೆ.
ಇದನ್ನೂ ಓದಿ: Kitchen Tips: ನಿಂಬೆಹಣ್ಣಿನ ರಸವೇ ನಿಮ್ಮ ಕಿಚನ್ ಕ್ಲೀನರ್: ಸ್ವಚ್ಛ ಅಡುಗೆಮನೆಗೆ ಇಲ್ಲಿವೆ ಟಿಪ್ಸ್!
3. ವಿನೆಗರ್: ಅಸಿಡಿಕ್ ಆಗಿರುವ ವಿನೆಗರ್ ಎಂಬ ದ್ರಾವಣ ಕ್ಲೀನಿಂಗ್ ಏಜೆಂಟ್ ಕೂಡಾ ಹೌದು. ಎರಡು ಚಮಚ ವಿನೆಗರ್ ಅನ್ನು ಒಂದು ಲೋಟ ನೀರಿನ ಜೊತೆ ಮಿಕ್ಸ್ ಮಾಡಿ ಮಿಕ್ಸಿಗೆ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ರನ್ ಮಾಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ಇದೇ ನೀರನ್ನು, ಮಿಕ್ಸಿಯ ಹೊರಮೈಯನ್ನು ಕ್ಲೀನ್ ಮಾಡಿಕೊಳ್ಳಲೂ ಬಳಸಬಹುದು.
4. ನಿಂಬೆಹಣ್ಣಿನ ಸಿಪ್ಪೆ: ನಿಂಬೆಹಣ್ಣು ಬಳಸಿದ ಮೇಲೆ ಸಿಪ್ಪೆಯನ್ನು ಬಿಸಾಡಬೇಡಿ. ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದು ಅತ್ಯುತ್ತಮವಾಗಿ ಕಲೆಗಳನ್ನು ತೆಗೆಯುತ್ತದೆ. ವಾಸನೆಯನ್ನೂ ಹೋಗಲಾಡಿಸುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ಬೇಕಿದ್ದರೆ ಕೊಂಚ ನೀರು ಸೇರಿಸಿ ನಾಲ್ಕೈದು ನಿಮಿಷ ಮಿಕ್ಸಿ ರನ್ ಮಾಡಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಬಿಸಿ ನೀರಿನಲ್ಲಿ ಆಮೇಲೆ ತೊಳೆದುಕೊಳ್ಳಿ. ಮಿಕ್ಸಿಯಲ್ಲಿರುವ ಕೆಟ್ಟ ಹಳೆಯ ವಾಸನೆಯೆಲ್ಲವೂ ಮಾಯವಾಗುತ್ತದೆ.
5. ಆಲ್ಕೋಹಾಲ್: ಮೇಲಿನ ಯಾವ ಉಪಾಯಗಳೂ ಕೆಲಸಕ್ಕೆ ಬಾರದೆ ಇದ್ದರೆ, ಈ ಉಪಾಯವನ್ನು ಟ್ರೈ ಮಾಡಬಹು5ದು. ಆಲ್ಕೋಹಾಲನ್ನು ಮಿಕ್ಸಿಯ ಬ್ಲೇಡ್‌ಗಳಿಗೆ ಹಾಗೂ ಒಳ ಮೈಗೆ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟ ಮೇಲೆ ತೊಳೆದುಕೊಳ್ಳಿ. ಎಂಥ ಕಲೆ ಹಾಗೂ ವಾಸನೆಯಿದ್ದರೂ ಹೋಗುತ್ತದೆ.
ಇದನ್ನೂ ಓದಿ: smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು
ಆರೋಗ್ಯ
Health Tips: ಏರ್ ಫ್ರೈಯರ್‌ನಲ್ಲಿ ಯಾವೆಲ್ಲ ಆಹಾರವನ್ನು ತಯಾರಿಸಬಾರದು ಗೊತ್ತಾ?
ಬಿಸಿ ಗಾಳಿಯನ್ನು ಬಳಸಿ ಅಡುಗೆ ಮಾಡುವ ಏರ್ ಫ್ರೈಯರ್ ಉಪಕರಣ ಕೆಲವು ಬಗೆಯ ಫಾಸ್ಟ್ ಫುಡ್ ಸೇರಿದಂತೆ, ಎಣ್ಣಿರಹಿತ ಅಡುಗೆಯಲ್ಲಿಂದು ಹೆಚ್ಚು ಬಳಕೆಯಾಗುತ್ತಿದೆ. ಆದರೆ ಇದು ಎಲ್ಲ ಅಡುಗೆಗೂ ಸೂಕ್ತವಲ್ಲ.
ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆಯೆಲ್ಲವೂ ಸಾಕಷ್ಟು ವೈವಿಧ್ಯಮಯ ಉಪಕರಣಗಳಿಂದ ತುಂಬಿ ಹೋಗಿವೆ. ಅಡುಗೆಯ ಕೆಲಸ ವೇಗವಾಗಿ, ರುಚಿಯಾಗಿ ಆಗಲು ನಾನಾ ಬಗೆಯ ಉಪಕರಣಗಳಿಂದು ಮನುಷ್ಯನ ನಿತ್ಯದ ಸಾಥಿಯಾಗಿವೆ. ಆದರೆ, ಇವುಗಳಿಂದಾಗಿ ನಮ್ಮ ಹಳೆಯ ಪದ್ಧತಿಗಳ ಮೂಲಕ ಅಡುಗೆ ಮಾಡುವುದು ಬಹುತೇಕ ಕಡಿಮೆಯಾಗಿದೆ. ಹೀಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುವ ಉಪಕರಣಗಳ ಪೈಕಿ ಏರ್ ಫ್ರೈಯರ್ ಕೂಡಾ ಒಂದು. ಏರ್ ಫ್ರೈಯರ್ ಎಂಬ ಪುಟಾಣಿ ಉಪಕರಣ ಬಿಸಿ ಗಾಳಿಯನ್ನು ಬಳಸಿ ಅಡುಗೆ ಮಾಡುವ ಉಪಕರಣವಾಗಿದ್ದು ಇದು ಕೆಲವು ಬಗೆಯ ಫಾಸ್ಟ್ ಫುಡ್ ಸೇರಿದಂತೆ, ಎಣ್ಣಿರಹಿತ ಅಡುಗೆಯಲ್ಲಿಂದು ಹೆಚ್ಚು ಬಳಕೆಯಾಗುತ್ತಿದೆ. ಹೀಗಾಗಿ, ಡಯಟ್ ಪ್ರಿಯರು, ಫಿಟ್‌ನೆಸ್ ಪ್ರಿಯರು ಇದರ ಬಳಕೆಯನ್ನಿಂದು ಹೆಚ್ಚು ಮಾಡಿದ್ದಾರೆ. ಆದರೆ ಇದು ಎಲ್ಲ ಅಡುಗೆಗೂ ಸೂಕ್ತವಲ್ಲ. ಹಾಗಾದರೆ ಬನ್ನಿ, ಏರ್ ಫ್ರೈಯರ್‌ನಲ್ಲಿ ಯಾವ ಬಗೆಯ ಅಡುಗೆಯನ್ನು ನಾವು ಮಾಡಬಾರದು ಎಂಬುದನ್ನು ನೋಡೋಣ.
1. ಪಕೋಡಾ, ಬಜ್ಜಿ ಮಾಡಬೇಡಿ: ನೀರು ಹಾಕಿ ರುಬ್ಬಿಕೊಂಡ ತೇವಯುಕ್ತ ಹಿಟ್ಟುಗಳನ್ನು ಉಪಯೋಗಿಸಿ ಮಾಡುವ ತಿಂಡಿಗಳನ್ನು ಮಾಡಲು ಏರ್ ಫ್ರೈಯರ್ ಬಳಸಬಾರದು. ಅದು ಪಕೋಡಾ ಇರಲಿ, ವಡಾವೇ ಆಗಿರಲಿ, ಗರಿಗರಿಯಾಗಿ ಎಣ್ಣೆ ಕಡಿಮೆ ಹಾಕಿ ಏರ್ ಫ್ರೈಯರ್‌ನಲ್ಲಿ ಮಾಡುತ್ತೇನೆ ಎಂದು ನೀವಂದುಕೊಂಡರೆ ಅದು ಶುದ್ಧ ಮೂರ್ಖತನ. ಯಾಕೆಂದರೆ ಇದು ಎಣ್ಣೆ ಕಡಿಮೆ ಬಳಕೆ ಮಾಡುತ್ತದೆ ಎಂದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು. ಆದರೆ ಖಂಡಿತವಾಗಿಯೂ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದಷ್ಟು ಗರಿಗರಿಯಾಗಿ, ರುಚಿರುಚಿಯಾಗಿ ಏರ್ ಫ್ರೈಯರ್‌ನಲ್ಲಿ ಆಗದು. ಅಷ್ಟೇ ಅಲ್ಲ, ಇದು ಕೊನೆಗೆ ನಿರಾಶೆಯಲ್ಲಿಯೇ ಅಂತ್ಯಗೊಳ್ಳುವುದರಿಂದ ಅಪರೂಪಕ್ಕೊಮ್ಮೆ ಡೀಪ್ ಫ್ರೈಯ ತಿಂಡಿಗಳನ್ನು ತಿನ್ನಬಹುದು ಎಂದು ನಿಮ್ಮನ್ನು ನೀವು ಸಮಾಧಾನಿಸಿಕೊಂಡು ಸಹಜವಾಗಿ ಮಾಡುವ ಬಗೆಯಲ್ಲಿಯೇ ಮಾಡಿ ತಿನ್ನಿ.
2. ಚೀಸ್ ಬಳಕೆ: ಚೀಸ್ ಹಾಕಿ ಮಾಡುವ ತಿನಿಸುಗಳನ್ನು ಏರ್ ಫ್ರೈಯರ್‌ನಲ್ಲಿ ಅದ್ಭುತವಾಗಿ ಮಾಡಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಚೀಸ್ ಏರ್ ಫ್ರೈಯರ್‌ನಲ್ಲಿ ಸರಿಯಾಗಿ ಕರಗದು. ಹಾಗಾಗಿ ಚೀಸ್‌ಗೆ ಮೈಕ್ರೋವೇವ್ ಅವನ್ ಸೂಕ್ತ.
3. ಬ್ರೊಕೊಲಿ: ಬ್ರೊಕೋಲಿಯನ್ನೂ ಏರ್ ಫ್ರೈಯರ್‌ನಲ್ಲಿಡಬಾರದು. ಇದು ಬ್ರೊಕೋಲಿಯನ್ನು ಒಣಕಲಾಗಿಸುತ್ತದೆ. ರುಚಿಹೀನವನ್ನಾಗಿಸುತ್ತದೆ. ಇದರಲ್ಲಿರುವ ತೇವಾಂಶ ಪೂರ್ತಿ ಹೋಗಿ ಇದು ಸೀದು ಹೋಗುವುದೇ ಹೆಚ್ಚು. ಆದರೆ ನಿಮಗೆ ಬ್ರೊಕೋಲಿಯನ್ನು ಏರ್ ಫ್ರೈಯರ್‌ನಲ್ಲಿಡಬೇಕಾದ ಪರಿಸ್ಥಿತಿ ಬಂದರೆ ಸ್ವಲ್ಪ ನೀರು ಚಿಮುಕಿಸಿ ಅಡುಗೆ ಮಾಡಿ.
ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!
4. ಚಿಕನ್: ಇಡಿಯ ಚಿಕನ್ ಅನ್ನು ಏರ್ ಫ್ರೈಯರ್‌ನಲ್ಲಿಟ್ಟು ಬೇಯಿಸಲು ಹೊರಡಬೇಡಿ. ಇದರ ಗಾತ್ರ ದೊಡ್ಡದಿರುವುದರಿಂದ ಸರಿಯಾಗಿ ಇದು ಬೇಯದು. ಒಳಭಾಗದಲ್ಲಿ ಬೇಯದೆ ಹಾಗೇ ಉಳಿಯುವ ಸಂದರ್ಭವೇ ಹೆಚ್ಚು. ಹೊರಗಿನ ಭಾಗ ಹೆಚ್ಚು ಬೆಂದು, ಸೀದು ಒಳಭಾಗ ಬೇಯದೆ ಹಾಗೆ ಉಳಿಯಬಹುದು.
5. ಪಾಪ್‌ಕಾರ್ನ್: ಪಾಪ್‌ಕಾರ್ನ್ ಯಾರಿಗಿಷ್ಟವಿಲ್ಲ ಹೇಳಿ. ಮನೆಯಲ್ಲಿ ಎಲ್ಲರೂ ಜೊತೆಯಾಗಿ ಸಿನಿಮಾ ನೋಡುವಾಗ ಫಟಾಫಟ್ ಪಾಪ್‌ಕಾರ್ನ್ ಮಾಡುತ್ತೇನೆ ಎಂದು ಏರ್ ಫ್ರೈಯರ್‌ನಲ್ಲಿ ಮಾಡುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಮೈಕ್ರೋವೇವ್ ಅವನ್‌ನಲ್ಲಿ ಬೇಗ ಮಾಡಲು ಸಾಧ್ಯವಾಗುವಂತೆ ಇಲ್ಲೂ ಸಾಧ್ಯ ಎಂದು ನೀವು ಅಂದುಕೊಂಡರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಮೈಕ್ರೋವೇವ್ ತಲುಪಬಹುದಾದ ಉಷ್ಣತೆಯ ಮಟ್ಟಕ್ಕೆ ಏರ್ ಫ್ರೈಯರ್ ತಲುಪುವುದಿಲ್ಲ. ಹಾಗೂ, ಪಾಪ್ ಕಾರ್ನ್‌ಗೆ ಹೆಚ್ಚು ಉಷ್ಣತೆಯ ಅಗತ್ಯ ಇರುವುದರಿಂದ ಪಾಪ್ ಕಾರ್ನ್ ಮಾಡಲು ಏರ್ ಫ್ರೈಯರ್‌ನಲ್ಲಿ ಸಾದ್ಯವಾಗುವುದಿಲ್ಲ.
ಇದನ್ನೂ ಓದಿ: Health Tips: ನಿಮ್ಮ ಪ್ರಿಯವಾದ ಅನ್ನವನ್ನು ಬಿಡದೆ, ತೂಕ ಇಳಿಸಿಕೊಳ್ಳಬಹುದು ಗೊತ್ತೇ?
ಆರೋಗ್ಯ
Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!
ಬೇಸಿಗೆಯಲ್ಲಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ, ನಮಗರಿವಿಲ್ಲದಂತೆ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅಂಥ ತಪ್ಪುಗಳನ್ನು ನಿವಾರಿಸಿಕೊಂಡರೆ ಬೇಸಿಗೆಯಲ್ಲಿ ಆರೋಗ್ಯ ಹಿತ.
ಬಹಳಷ್ಟು ಮಂದಿಗೆ ಕೆಲವು ಬಗೆಯ ಆಹಾರಗಳು (summer foods) ಹಾಗೂ ಹಣ್ಣುಹಂಪಲುಗಳನ್ನು ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸೇವಿಸಬೇಕು ಎಂಬುದರಲ್ಲಿ ನಂಬಿಕೆಯಿದೆ. ಆಹಾರದ ಬಗೆಗೆ ನಾವು ಇಟ್ಟುಕೊಂಡಿರುವ ನಂಬಿಕೆಗಳು ಕೆಲವೊಮ್ಮೆ ಸತ್ಯವೂ ಆಗಿರಬಹುದು, ಕೆಲವೊಮ್ಮೆ ಆ ನಂಬಿಕೆಯಲ್ಲಿ ಹುರುಳೇ ಇಲ್ಲದೆಯೂ ಇರಬಹುದು. ಹಾಗಾದರೆ ಬನ್ನಿ ನಮ್ಮ ನಂಬಿಕೆಯ ಸತ್ಯಾಸತ್ಯತೆಯನ್ನೊಮ್ಮೆ ಒರೆಗೆ ಹಚ್ಚಿ ನೋಡೋಣ.
1. ಕೋಲ್ಡ್ ಡ್ರಿಂಕ್‌ಗಳು: ಕಾರ್ಬೋನೇಟೆಡ್ ಡ್ರಿಂಕ್‌ಗಳ ಬಗ್ಗೆ ಮಾತ್ರ ಇಲ್ಲಿ ಹೇಳುತ್ತಿಲ್ಲ. ಎಲ್ಲ ಬಗೆಯ ತಾಜಾ ಜ್ಯೂಸ್‌ಗಳೂ, ಸ್ಮೂದಿಗಳೂ, ಮಿಲ್ಕ್ ಶೇಕ್ ಗಳೂ ಕೂಡಾ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ದೇಹದ ಉಷ್ಣತೆ ಮೇಲೆ ಇವು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಆದರೆ, ಇವು ದೇಹಕ್ಕೆ ಬೇಕಾದ ತಾಜಾ ಅನುಭೂತಿ ನೀಡುತ್ತದೆ ಎಂಬುದು ನಿಜವೇ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಸಂದರ್ಭ ಇವು ದೇಹವನ್ನು ತಣ್ಣಗಿರಿಸಲು ಸಹಾಯ ಮಾಡಬಹುದು. ಆದರೆ, ನೇರವಾಗಿ ದೇಹದ ಉಷ್ಣತೆಯನ್ನು ಕಡಿಮೆಗೆ ತರುವುದಿಲ್ಲ. ಪೆಪ್ಸಿ, ಕೋಲಾದಂತಹ ಕಾರ್ಬೋನೇಟೆಡ್ ಪೇಯಗಳನ್ನು ಬಿಟ್ಟರೆ ಉಳಿದವು ಖಂಡಿತವಾಗಿಯೂ ದೇಹದಲ್ಲಿ ಬೇಸಿಗೆಯಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತವೆ.
2. ಬಿಸಿ ಪೇಯಗಳು: ಹಲವರಿಗೆ ಬೇಸಿಗೆಯಲ್ಲಿ ಬಿಸಿ ಪೇಯಗಳಾದ ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಭಾವನೆಯಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಂಬುವ ಮಂದಿ ಇವರು. ಆದರೆ ಇದು ಸಂಪೂರ್ಣ ತಪ್ಪು ನಂಬಿಕೆ. ಬೇಸಿಗೆಯಲ್ಲಿ ಬಿಸಿಬಿಸಿ ಪೇಯಗಳನ್ನು ಕುಡಿಯುವುದರಿಂದ ಇನ್ಮಷ್ಟು ಸೆಖೆ ಹೆಚ್ಚಾಗುತ್ತದೆ. ತೇವಾಂಶ ಹೆಚ್ಚಿರುವ ಸೆಖೆ ಪ್ರದೇಶಗಳಾದ ಸಮುದ್ರ ತೀರದಲ್ಲಿ ಬಿಸಿ ಬಿಸಿ ಚಹಾ, ಕಾಫಿ ಇನ್ನಷ್ಟು ಬೆವರಿಳಿಸುವಂತೆ ಮಾಡುತ್ತದೆ. ಆದರೆ, ವಾತಾವರಣದಲ್ಲಿ ತೇವಾಂಶ ಕಡಿಮೆ ಇರುವ ಸಮಯದಲ್ಲಿ ಚಹಾ, ಕಾಫಿ ಕುಡಿಯಬಹುದು. ಆದರೆ ಹೆಚ್ಚು ಒಳ್ಳೆಯದಲ್ಲ.
3. ಹಣ್ಣು ಹಂಪಲು: ಹಣ್ಣು ಹಂಪಲುಗಳು ಬೇಸಿಗೆಯಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಮಾವು, ಕಲ್ಲಂಗಡಿ, ಮಾವು, ಚಿಕ್ಕು ಹಲಸು, ದ್ರಾಕ್ಷಿ, ಕಿತ್ತಳೆ, ಬಾಳೆಹಣ್ಣು ಹೀಗೆ ಬಹುತೇಕ ಎಲ್ಲ ಹಣ್ಣುಗಳ ಸೇವನೆಯೂ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಪೂರೈಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
4. ಮಸಾಲೆ ಪದಾರ್ಥಗಳು: ಮೆಣಸು ಹಾಗೂ ಖಾರಯುಕ್ತ ಮಸಾಲೆ ಪದಾರ್ಥಗಳ ಅತಿಯಾದ ಸೇವನೆ ಬೇಸಿಗೆಯಲ್ಲಿ ಒಳ್ಳೆಯದಲ್ಲ.
ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ
5. ಸ್ಪೋರ್ಟ್ಸ್ ಡ್ರಿಂಕ್‌ಗಳು: ಸ್ಪೋರ್ಟ್ಸ್ ಡ್ರಿಂಕ್‌ಗಳಲ್ಲಿ ಹೇರಳವಾಗಿ ಕೆಫೀನ್ ಇರುವುದರಿಂದ ಖಂಡಿತ ಇವು ಒಳ್ಳೆಯದಲ್ಲ. ಶಕ್ತಿವರ್ಧಕ ಪೋಷಕಾಂಶಗಳು ಇದರಲ್ಲಿವೆ ಅಂದುಕೊಂಡು ಬೇಸಿಗೆಯ ದಾಹಕ್ಕೆ ಬಳಸಿಕೊಂಡರೆ ತತ್ ಕ್ಷಣಕ್ಕೆ ಪ್ರಯೋಜನ ಸಿಕ್ಕರೂ ದೀರ್ಘಕಾಲಕ್ಕೆ ಇವು ಒಳ್ಳೆಯದಲ್ಲ.
6. ಎಳನೀರು: ಬೇಸಿಗೆಯಲ್ಲಿ ಕುಡಿಯಬಹುದಾದ ಪೇಯಗಳ ಪೈಕಿ ಅತ್ಯಂತ ಒಳ್ಳೆಯದು ಎಂದರೆ ಎಳನೀರು. ಇದು ಬೇಸಿಗೆಯಲ್ಲಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಖನಿಜಾಂಶಗಳೂ ಇರುತ್ತದೆ. ಇದರಲ್ಲದೆ,ಮಜ್ಜಿಗೆಯನ್ನೂ ಅತ್ಯಂತ ಉತ್ತಮ ಬೇಸಿಗೆಯ ಪೇಯ ಎನ್ನಬಹುದು.
7. ಊಟ ಬಿಡುವುದು: ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮದೂಗಿಸಿಕೊಳ್ಳುವ ಸಲುವಾಗಿ ಕೆಲವರು ಯಾವುದಾದರೊಂದು ಹೊತ್ತು ಊಟ ಬಿಡುವ ಯೋಚನೆ ಮಾಡುತ್ತಾರೆ. ಬಹಳ ಮಂದಿಗೆ ಇಂಥದ್ದೊಂದು ನಂಬಿಕೆಯಿದೆ. ಆದರೆ ಈ ನಂಬಿಕೆಯಲ್ಲಿ ಹುರುಳಿಲ್ಲ. ಕ್ಯಾಲರಿ ಕಡಿಮೆ ತೆಗೆದುಕೊಂಡರೆ ಬೇಸಿಗೆಯಲ್ಲಿ ಒಳ್ಳೆಯದು ನಿಜ. ಆದರೆ, ಇದಕ್ಕೆ ಊಟ ಬಿಡಲು ಹೋದರೆ ತೊಂದರೆ ತಪ್ಪಿದ್ದಲ್ಲ.
ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಬೇಸಿಗೆಯಲ್ಲಿ ಯಾವುದು ಹಿತಕರ?
ಆರೋಗ್ಯ
Weight Loss: ಬೊಜ್ಜು ಕರಗಿಸಲು ಸಕ್ಕರೆ ಬಿಟ್ಟರೆ ಸಿಹಿಗೆ ಪರ್ಯಾಯ ಯಾವುದು!?
ನೈಸರ್ಗಿಕವಿರಲಿ ಅಲ್ಲದಿರಲಿ ಸಕ್ಕರೆ, ಆರೋಗ್ಯಕರವಲ್ಲ ನಿಜವೇ ಆದರೂ, ಸಕ್ಕರೆಗಿಂತ ನೈಸರ್ಗಿಕ ಸಿಹಿಯ ಇತರ ಮೂಲಗಳನ್ನು ಕೆಲವಕ್ಕಾದರೂ ಬಳಸಿ ನಮ್ಮನ್ನು ನಾವು ಸಂತೈಸಿಕೊಳ್ಳಬಹುದು.
ಇಂದಿನ ಜೀವನಪದ್ಧತಿ, ಬೇಕು ಬೇಕಾದ್ದೆಲ್ಲ ನಾಲಿಗೆಗೆ ರುಚಿಯೆನಿಸಿದ್ದನ್ನೇ ಬಯಸಿ ಬಯಸಿ ತಿನ್ನುವುದು, ಒತ್ತಡ, ಕುಳಿತೇ ಮಾಡುವ ಕೆಲಸ, ವ್ಯಾಯಾಮವಿಲ್ಲದ ಏಕತಾನತೆಯ ಜೀವನ, ಹೆಚ್ಚಿದ ಸ್ಕ್ರೀನ್‌ಟೈಮ್ ಸೇರಿದಂತೆ ನಾನಾ ಕಾರಣಗಳಿಂದ ಹಲವರಿಗೆ ಬೊಜ್ಜು ಸಾಮಾನ್ಯ. ಹೊಟ್ಟೆಯ ಸುತ್ತ, ಸೊಂಟದ ಸುತ್ತ ಸಂಗ್ರಹವಾದ ಬೊಜ್ಜಿನಿಂದ ಮುಕ್ತಿ (Weight Loss) ಸುಲಭಕ್ಕೆ ಸಾಧ್ಯವಿಲ್ಲ. ಹಿತಮಿತವಾದ ಆಹಾರ ಸೇವನೆ, ಸಕ್ಕರೆಯ ನಿಯಂತ್ರಣ, ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಶೈಲಿಯ ಜೀವನ ಇತ್ಯಾದಿಗಳಿಂದ ಮತ್ತೆ ಬೊಜ್ಜನ್ನು ಕರಗಿಸಿ (health tips) ಬಳುಕುವ ಬಳ್ಳಿಯಂಥ ದೇಹ ಪಡೆಯಲು ಸಾಧ್ಯವಿದೆ. ಆದರೆ, ಇದನ್ನು ಪಡೆಯಲು, ಶಿಸ್ತು, ಸಂಯಮ ಅಷ್ಟೇ ಅಲ್ಲ, ಗುರಿಯೆಡೆಗೆ ನಡೆವ ಪರಿಶ್ರಮವೂ ಬೇಕಾಗುತ್ತದೆ. ಅದರಲ್ಲೂ ಹೊಟ್ಟೆಯಲ್ಲಿ ಸೇರಿಕೊಳ್ಳುವ ಬೊಜ್ಜನ್ನು ಕಡಿಮೆ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಯಾಕೆಂದರೆ ಇಲ್ಲಿ ಸಂಗ್ರಹವಾಗುವ ಕೊಬ್ಬು ಬಹಳ ಸಮಯದಿಂದ ಉಂಡ ಹೆಚ್ಚು ಕೊಬ್ಬಿನ ಆಹಾರ ಪದಾರ್ಥಗಳಿಂದ ಸಂಗ್ರಹವಾದುದೇ ಆಗಿರುತ್ತದೆ. ಸಕ್ಕರೆಯೂ ಅವುಗಳಲ್ಲಿ ಪ್ರಮುಖವಾದದ್ದು.
ಬಹಳಷ್ಟು ಮಂದಿ ಸಕ್ಕರೆಯನ್ನು ಕಡಿಮೆ ಮಾಡಿ ಎಂದಾಗ ಚಿಂತೆಗೀಡಾಗುವುದು ಸಹಜ. ಒಂದು ಚಹಾ, ಒಂದು ಕಾಫಿ, ಆಗಾಗ ಜಿಹ್ವೆಯ ಚಪಲಕ್ಕೆ ಅಂತ ಒಂದಿಷ್ಟು ಸಿಹಿ ಹೊಟ್ಟೆ ಸೇರುವುದು ಎಲ್ಲರ ಬದುಕಿನ ಅವಿಭಾಜ್ಯ ಅಂಗ. ಸಿಹಿ ಪ್ರಿಯರಿಗಂತೂ ಸಿಹಿ ಬಿಡಿ ಎಂದರೆ ಆಕಾಶವೇ ತಲೆಕಳಚಿ ಬಿದ್ದಂತಾಗುವುದು ಸಹಜ. ಆದರೆ, ನಮ್ಮ ಏರುವ ತೂಕಕ್ಕೆ ಮೂಲ ಕಾರಣವೂ ಈ ಸಿಹಿಯೇ ಎಂದರೆ ಸತ್ಯ ಕಹಿಯಾದರೂ ಒಪ್ಪಲೇಬೇಕು. ನಾವು ತಿಂದ ಹೆಚ್ಚು ಸಕ್ಕರೆಯ ಪ್ರಮಾಣವು ಕೊಬ್ಬಿನ ರೂಪದಲ್ಲಿ ಯಾವಾಗಲೂ ಹೊಟ್ಟೆ ಹಾಗೂ ಹೃದಯದ ಅಕ್ಕಪಕ್ಕ ಸಂಗ್ರಹವಾಗುವುದರಿಂದ ಇದು ಅನಾರೋಗ್ಯಕರ. ಹಾಗಾಗಿ ಮಧುಮೇಹ ಇರಲಿ ಇಲ್ಲದಿರಲಿ, ಸಕ್ಕರೆಯ ನಿಯಂತ್ರಣ ಅತ್ಯಂತ ಅಗತ್ಯ ಹಾಗೂ ಇದರ ಮೂಲಕವಷ್ಟೇ ಬೊಜ್ಜು ಕರಗಿಸುವಲ್ಲಿ ನಾವು ಸಫಲತೆ ಸಾಧಿಸಬಹುದು.
ಹಾಗಾದರೆ, ಸಕ್ಕರೆಯನ್ನು ಬಿಡುವುದು ಹೇಗೆ ಎಂಬ ಸಮಸ್ಯೆ ಹಲವರದ್ದು. ಆರೋಗ್ಯಕರವಾದ ಸಕ್ಕರೆ ಯಾವುದು ಎಂಬ ಶೋಧವನ್ನೂ ನಾವು ನಡೆಸುತ್ತೇವೆ. ನೈಸರ್ಗಿಕವಿರಲಿ ಅಲ್ಲದಿರಲಿ ಸಕ್ಕರೆ, ಆರೋಗ್ಯಕರವಲ್ಲ ನಿಜವೇ ಆದರೂ, ಸಕ್ಕರೆಗಿಂತ ನೈಸರ್ಗಿಕ ಸಿಹಿಯ ಇತರ ಮೂಲಗಳನ್ನು ಕೆಲವಕ್ಕಾದರೂ ಬಳಸಿ ನಮ್ಮನ್ನು ನಾವು ಸಂತೈಸಿಕೊಳ್ಳಬಹುದು. ಹಾಗಾದರೆ ಬನ್ನಿ, ಆಗಾಗ ಸಕ್ಕರೆಯ ಬದಲಿಗೆ ಯಾವ ಸಿಹಿಯನ್ನು ನಾವು ಬಳಸಬಹುದು ಎಂಬುದನ್ನು ನೋಡೋಣ.
1. ಜೇನುತುಪ್ಪ: ಎಲ್ಲರಿಗೂ ಗೊತ್ತಿರುವ ಹಾಗೆ ಜೇನುತುಪ್ಪ ಆರೋಗ್ಯಕರ. ಹಾಗಂತ ಇದನ್ನೇ ಎಲ್ಲದಕ್ಕೂ ಸುರಿಸುರಿದು ತಿನ್ನುತ್ತಿರುವುದು ಒಳ್ಳೆಯದಲ್ಲ. ಹಿತಮಿತವಾಗಿ ಕೆಲವಕ್ಕೆ ಜೇನುತುಪ್ಪ ಬಳಸಬಹುದು. ಸಪ್ಪೆ ಎನಿಸುವ ಜ್ಯೂಸ್‌ಗೆ ಯಾಔಆಗಲಾದರೊಮ್ಮೆ ಒಂದೆರಡು ಚಮಚ ಜೇನುತುಪ್ಪ ಸೇರಿಸಿ ಹೀರಬಹುದು. ಆದರೆ, ನಿತ್ಯವೂ ಅಲ್ಲ.
2. ಬೆಲ್ಲ: ಬೆಲ್ಲ ಕಬ್ಬಿಣಾಂಶವನ್ನು ಸಾಕಷ್ಟು ಹೊಂದಿರುವ ಆಹಾರ. ನಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಇದಕ್ಕಿದೆ. ಹಾಗಾಗಿ ಬೆಲ್ಲವನ್ನು ನಮ್ಮ ಆಹಾರದಲ್ಲಿ ಬಳಸಬಹುದು. ಆದರೆ ಇದಕ್ಕೂ ಮಿತಿಯಿದೆ. ಚಹಾಕ್ಕೆ ಸಕ್ಕರೆಯ ಬದಲು ಬೆಲ್ಲ ಉಪಯೋಗಿಸಿಯೋ ಅಥವಾ ಕೊಂಚ ಪ್ರಪಾಣದಲ್ಲಿ ಸಕ್ಕರೆಯ ಬದಲು ಬೆಲ್ಲ ಬಳಸಬಹುದು.
ಇದನ್ನೂ ಓದಿ: Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್ ಇದೆಯೇ? ಇಲ್ಲಿವೆ ಟಿಪ್ಸ್!
3. ತೆಂಗಿನಕಾಯಿ ಸಕ್ಕರೆ: ಇದೇನಿದು ಎಂದು ಆಶ್ಚರ್ಯವಾದರೆ ಇಲ್ಲಿ ಕೇಳಿ. ತೆಂಗಿನಕಾಯಿ ಹೂವಿನಿಂದ ತೆಗೆಯುವ ಸಕ್ಕರೆ ಇದಾಗಿದ್ದು, ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಇದು ಸಕ್ಕರೆಗೆ ಅತ್ಯುತ್ತಮ ಪರಿಹಾರ. ಸಕ್ಕರೆಯ ಬದಲಿಗೆ ಕೆಲವು ಆಹಾರಗಳಿಗೆ ಇದು ಬಳಸಬಹುದು.
4. ಖರ್ಜೂರ: ಎಲ್ಲರಿಗೂ ತಿಳಿದಿರುವ ಇನ್ನೊಂದು ಸಿಹಿಯಾದ ನೈಸರ್ಗಿಕ ಆಹಾರವಿದು. ಕೇಕ್, ಕುಕ್ಕೀಸ್, ಸ್ಮೂದಿ, ಎನರ್ಜಿ ಬಾರ್ ಮತ್ತಿತರ ತಿನಿಸುಗಳನ್ನು ಸಕ್ಕರೆ ಹಾಕದೆ ಮಾಡುವಾಗ ಬಳಸಬಹುದಾದ ಪರ್ಯಾಯವಿದು. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಇರುವುದರಿಂದ ಇದನ್ನು ಆಹಾರದಲ್ಲಿ ಕೆಲವೊಮ್ಮೆ ಬಳಸಬಹುದು.
5. ಮೇಪಲ್ ಸಿರಪ್: ಮೇಪಲ್ ಮರಗಳಿಂದ ತಯಾರಿಸುವ ನೈಸರ್ಗಿಕ ಸಕ್ಕರೆಯಿದು. ವಿದೇಶಗಳಲ್ಲಿ, ಚಳಿಪ್ರದೇಶಗಳಲ್ಲಿ ಈ ಮರಗಳು ಹೆಚ್ಚಿರುವ ಜಾಗಗಳಲ್ಲಿ ಈ ಸಕ್ಕರೆಯೂ ಸುಲಭವಾಗಿ ಲಭ್ಯವಿರುತ್ತದೆ. ಕೇಕ್, ಸ್ಮೂದಿಗಳು, ಸಲಾಡ್ ಮತ್ತಿತರ ಆಹಾರಗಳಲ್ಲಿ ಸಕ್ಕರೆಯ ಬದಲು ಇದನ್ನು ಬಳಸಬಹುದು.
ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ21 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ21 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ13 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ21 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ11 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕ್ರಿಕೆಟ್24 hours ago
Team India : ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ಭಾರತಕ್ಕೆ ಅಫಘಾನಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ರದ್ದು!
-
ಕರ್ನಾಟಕ22 hours ago
Sulochana Latkar: ಬೆಳಗಾವಿಯಲ್ಲಿ ಹುಟ್ಟಿ ಬಾಲಿವುಡ್ನಲ್ಲಿ ಮಿಂಚಿದ್ದ ನಟಿ ಸುಲೋಚನಾ ಲಾಟ್ಕರ್ ಇನ್ನಿಲ್ಲ