Site icon Vistara News

Smart cooking: ಅಡುಗೆಮನೆಯಲ್ಲೂ ಸ್ಮಾರ್ಟ್‌ ಆಗಲು ಸರಳ ಸುಲಭ ಉಪಾಯಗಳು!

kitchen

ಅಡುಗೆ ಎಂಬುದೊಂದು ಕಲೆ. ಆದರೆ, ಬಹಳ ನಿರ್ಲಕ್ಷ್ಯಕ್ಕೆ ಒಳಗಾದ ಕಲೆ. ನಿತ್ಯವೂ ನಮ್ಮ ಮುಂದೆ ಥರಹೇವಾರಿ ಅಡುಗೆಗಳನ್ನು ಮಾಡಿ ಬಡಿಸುವ ಜೀವಿಗಳೆಲ್ಲ ಕಲಾವಿದರೇ. ಅದು ಹಿಂದಿನ ಕಾಲದ ಅಮ್ಮಂದಿರಿರಬಹುದು, ಈಗಿನ ಮಾಡರ್ನ್‌ಯುಗದಲ್ಲಿ ಸಮಾನವಾಗಿ ಹಂಚಿಕೊಂಡು ಅಡುಗೆ ಮಾಡಿ ಮಕ್ಕಳನ್ನು ಪೊರೆಯುವ ಅಪ್ಪ ಅಮ್ಮಂದಿರಿರಬಹುದು. ಮನೆಯೊಂದನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಎಲ್ಲರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೊಟ್ಟೆಯೆಂಬ ದೇವರಿಗೆ ಅನ್ಯಾಯವಾಗದಂತೆ ನಿತ್ಯವೂ ನೈವೇದ್ಯ ಮಾಡುವುದೇನು ಸುಲಭವೇ ಹೇಳಿ. ಮನೆಯ ಈ ಮುಖ್ಯ ವಿಭಾಗ ಸೋತರೆ ಮನೆಯೇ ಅಲ್ಲೋಲ ಕಲ್ಲೋಲವಾದಂತೆ.

ಇಂದಿನ ಆಧುನಿಕತೆಗೆ ತಕ್ಕಂತೆ, ಮನೆಯ ಇಬ್ಬರೂ ದುಡಿಯುವ ಕಾಲದಲ್ಲಿ, ಗಡಿಬಿಡಿಯ ಧಾವಂತದ ಯುಗದಲ್ಲಿ ಅಡುಗೆ ಮನೆಯೆಂಬುದು ಹಿಂದಿಗಿಂತ ಸರಳವಾಗಿದೆ ನಿಜ. ಸಾಕಷ್ಟು ಸವಲತ್ತುಗಳು ನಮ್ಮ ನಿತ್ಯದ ಕೆಲಸಗಳನ್ನು ಹಗುರ ಮಾಡಿಕೊಟ್ಟಿದೆ ನಿಜ. ಆದರೆ, ಅಡುಗೆಮನೆಯಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದೂ ಕೂಡಾ ಜಾಣತನ. ಬಹಳಷ್ಟು ಸಾರಿ ಕೆಲವು ಸುಲಭ ಉಪಾಯಗಳು ಸಾಕಷ್ಟು ಸಮಯ ಉಳಿತಾಯವನ್ನೂ ಮಾಡಿಕೊಡುತ್ತದೆ. ಅಂತಹ ಕೆಲವು ಸರಳ ಉಪಾಯಗಳು ಇಲ್ಲಿವೆ.

೧. ಬೆಳಗ್ಗೆ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಅದನ್ನು ಹೊಂಬಣ್ಣಕ್ಕೆ ಬರುವಂತೆ ಹುರಿಯುವುದಕ್ಕೆ ಹೆಚ್ಚು ಹೊತ್ತಾಗುತ್ತಿದೆ ಅನಿಸುತ್ತಿದೆಯೇ? ಹಾಗಾದರೆ ಅದಕ್ಕೊಂದು ಸುಲಭ ಉಪಾಯ ಇಲ್ಲಿದೆ. ಈರುಳ್ಳಿಯನ್ನು ಬಾಣಲೆಗೆ ಹಾಕಿ ಉರಿಯು ಸಂದರ್ಭ ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿ. ಬೇಗ ಹೊಂಬಣ್ಣಕ್ಕೆ ತಿರುಗುತ್ತದೆ.

೨. ಹಾಲು ಬಿಸಿ ಮಾಡಲು ಇಟ್ಟು ಅಷ್ಟರೊಳಗೆ ಸ್ನಾನ ಮುಗಿಸಿ ಬರುವೆ ಎಂಬ ಲೆಕ್ಕಾಚಾರದಲ್ಲಿ ಹೋದರೆ, ವಾಪಾಸು ಬಂದಾಗ ಹಾಲೆಲ್ಲ ಉಕ್ಕಿ, ಒಲೆ ಮೇಲೆ ಚೆಲ್ಲಿ ಅದನ್ನು ಒರಸುವುದೇ ದೊಡ್ಡ ಕೆಲಸವಾಗಿಬಿಟ್ಟಿತೇ? ಹಾಲನ್ನು ಬಿಟ್ಟು ಯಾವ ಕೆಲಸವನ್ನೂ ಮಾಡುವಂತಿಲ್ಲ ಅಂದುಕೊಳ್ಳಬೇಡಿ. ಹಾಲು ಕುದಿಯಲು ಇಟ್ಟು ಅದರಲ್ಲೊಂದು ಅಗಲ ಬಾಯಿಯ ಸೌಟನ್ನೇ, ದೊಡ್ಡ ಚಮಚವನ್ನೋ ಓರೆಯಾಗಿ ಇಟ್ಟು ಕುದಿಯಲು ಬಿಡಿ. ಹಾಲು ಉಕ್ಕಿ ಮಗುಚುವುದಿಲ್ಲ.

೩. ನಾವು ಮಾಡು ಚೆನ್ನಾ ಮಸಾಲಕ್ಕೆ ಹೊಟೇಲುಗಳ ರುಚಿ ಯಾಕೆ ಬರುವುದಿಲ್ಲ ಎಂದು ಆಶ್ಚರ್ಯವೇ? ಹಾಗಾದರೆ, ಮುಂದಿನ ಸಲ ಚೆನ್ನಾ ಮಸಾಲ (ಛೋಲೆ) ಮಾಡುವ ಸಂದರ್ಭ ಚಹಾ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ, ಚೆನ್ನಾ ಮಸಲಾ ಕುದಿಯುವಾಗ ಅದರೊಳಗೆ ಹಾಕಿ. ಚೆನ್ನಾಗಿ ಕುದಿದ ಮೇಲೆ ಹೊರತೆಗೆಯಿರಿ. ಈಗ ಅದರ ಸ್ವಾದವೇ ಬೇರೆ. ಚಪ್ಪರಿಸಿಕೊಂಡೂ ತಿನ್ನುವಿರಿ.

೪. ಯಾವುದೋ ಆಫರ್‌ನಲ್ಲಿ ಸಿಕ್ಕಿತೆಂದು ಅಗತ್ಯಕ್ಕಿಂತ ಹೆಚ್ಚು ಒಣಹಣ್ಣು ಹಾಗೂ ಬೀಜಗಳನ್ನು (ಡ್ರೈ ಫ್ರುಟ್ಸ್‌ ಹಾಗೂ ನಟ್ಸ್)‌ ಖರೀದಿಸಿಬಿಟ್ಟಿದೀರಾ? ಈಗ ಅದನ್ನು ಕೆಡದಂತೆ ತಿಂಗಳುಗಟ್ಟಲೆ ಇಡುವುದು ಹೇಗೆ ಎಂದು ಸಮಸ್ಯೆಯಾ? ಹಾಗಾದರೆ ಅವನ್ನು ಗಾಳಿಯಾಡದ ಡಬ್ಬಗಳಲ್ಲಿ, ಅಥವಾ ಝಿಪ್‌ಲಾಕ್‌ ಕವರ್‌ಗಳಲ್ಲಿ ಇಟ್ಟು ಫ್ರೀಜರ್‌ ಒಳಗಿಡಿ. ತಿಂಗಳುಗಟ್ಟಲೆ ತಾಜಾ ಆಗಿ ಇರುತ್ತದೆ.

ಇದನ್ನೂ ಓದಿ: Methi seeds benefits | ಅಡುಗೆಮನೆಯ ಕಾಯಂ ನಿವಾಸಿ ಮೆಂತ್ಯ ಕಾಳಿನ ಬಹುಪಯೋಗಗಳು!

೫. ಅವಸರದಲ್ಲಿ ಅಡುಗೆ ಮಾಡುವಾಗ ಅಗತ್ಯಕ್ಕಿಂತ ಹೆಚ್ಚು ಆಲೂಗಡ್ಡೆ ಹೆಚ್ಚಿ ಬಿಟ್ಟಿರುವಿರಾ? ಈಗ ಅವೆಲ್ಲ ನಿಮಿಷಾರ್ಧದಲ್ಲಿ ಕಪ್ಪಗಾಗುತ್ತದಲ್ಲ ಎಂಬ ಚಿಂತೆಯೇ? ಹಾಗಾದರೆ, ತುಂಡು ಮಾಡಿದ ಆಲೂಗಡ್ಡೆಯನ್ನು ತಂಪಾದ ನೀರಿನಲ್ಲಿ ಮುಳುಗಿಸಿಡಿ. ಆಥವಾ ಉಪ್ಪು ಹಾಕಿದ ನೀರಿನಲ್ಲಿ ಮುಳುಗಿಸಿಡಿ. ಇದನ್ನು ಫ್ರಿಡ್ಜ್‌ ಒಳಗಿಟ್ಟರೆ ಮುಗಿಯಿತು. ಇದರಿಂದ ಕಚೇರಿಯಿಂದ ಸಂಜೆ ಮರಳಿದ ಮೇಲೂ ಆಲೂಗಡ್ಡೆ ಹಾಗೆಯೇ ಇರುತ್ತದೆ. ನಿಶ್ಚಿಂತೆಯಿಂದ ಬೇರೆ ಅಡುಗೆಗೆ ಬಳಸಬಹುದು.

೬. ತಂದ ಬಾಳೆಕಾಯಿ ಬೇಗ ಹಣ್ಣೇ ಆಗುತ್ತಿಲ್ಲವಲ್ಲ ಎಂಬ ಸಮಸ್ಯೆಯೇ? ರಾಸಾಯನಿಕ ವಿಧಾನಗಳಲ್ಲದೆ, ಸುಲಭವಾಗಿ ಬೇಗ ಹಣ್ಣಾಗುವಂತೆ ಮಾಡಲು ಸರಳ ಉಪಾಯ, ಇವನ್ನು ಪೇಪರ್‌ನಲ್ಲಿ ಸುತ್ತಿಡುವುದು.

೭. ತಂದ ಕೊತ್ತಂಬರಿಸೊಪ್ಪು, ಪುದಿನ ಫ್ರಿಡ್ಜ್‌ ಒಳಗಿಟ್ಟರೆ ಎರಡೇ ದಿನದಲ್ಲಿ ಕೊಳೆತು ಹೋಗುತ್ತಿದೆಯೇ? ಹಾಗಾದರೆ, ಅವನ್ನು ಒಂದು ಲೋಟದಲ್ಲಿ ಅದರ ಕಾಂಡಕ್ಕೆ ನೀರು ಸಿಗುವಂತೆ ಆದರೆ ಮುಳುಗದಂತೆ ಇಡಿ. ವಾರದ ತನಕ ಸೊಪ್ಪುಳು ತಾಜಾ ಆಗಿ, ಗಿಡದಿಂದ ಕೊಯ್ದಂತೆ ಇರುತ್ತದೆ.

ಇದನ್ನೂ ಓದಿ: Coriander Benefits | ಕೊತ್ತಂಬರಿ ಬೀಜ ಮತ್ತು ಸೊಪ್ಪು- ಅಡುಗೆಗೆ ರುಚಿ, ಆರೋಗ್ಯಕ್ಕೂ ಹಿತ

Exit mobile version