ಫಕ್ಕನೆ ನೋಡಿದರೆ, ಹಬ್ಬಕ್ಕೆ ರೆಡಿ ಮಾಡಿದ ಕಳಶದ ತೆಂಗಿನಕಾಯಿ ಎಂದು ಕನ್ಫ್ಯೂಸ್ ಆದರೆ ಅಚ್ಚರಿಯಿಲ್ಲ. ಯಾಕೆಂದರೆ ಅಮೌರಿ ಗುಯ್ಚಾನ್ ಎಂಬ ಪೇಸ್ಟ್ರಿ ಕಲಾವಿದ ಮಾಡುವ ಸಿಹಿತಿಂಡಿ, ಕೇಕ್, ಪೇಸ್ಟ್ರಿಗಳೆಲ್ಲವೂ ಹಾಗೆಯೇ. ನೈಜ ವಸ್ತುವಿಗೂ ಸೆಡ್ಡು ಹೊಡೆಯುವಂಥ ವಿನ್ಯಾಸದಿಂದ ನೋಡುಗರನ್ನು ಅಚ್ಚರಿಗೆ ನೂಕುತ್ತದೆ.
ಥರಹೇವಾರಿ ನಮೂನೆಯ ಕೇಕ್ ಹಾಗೂ ಪೇಸ್ಟ್ರಿಗಳನ್ನು ಮಾಡಿ ಜಗತ್ತಿನ ಮುಂದಿಟ್ಟು ದಂಗುಬಡಿಸುವ ಪೇಸ್ಟ್ರಿ ಕಲಾವಿದ ಗುಯ್ಚಾನ್ ಈಗ ಹೊಸತೊಂದು ಸಿಹಿಯ ಜೊತೆಗೆ ಬಂದಿದ್ದಾರೆ. ಈ ಬಾರಿ ಮಾಡಿದ ಸಿಹಿತಿಂಡಿ ನಿಜವಾದ ತೆಂಗಿನಕಾಯಿಯನ್ನು ಹೋಲುತ್ತಿದ್ದು ಅದನ್ನು ಒಡೆದು ನೋಡಿದರೆ, ಥೇಟ್ ತೆಂಗಿನಕಾಯಿಯ ರಚನೆಯಂತೆಯೇ ಇರುವುದು ಈ ಕೇಕ್ ಕಲಾವಿದನ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.
ಈಗ ಆಹಾರವೆಂದರೆ ಕೇವಲ ಹೊಟ್ಟೆತುಂಬಿಸುವ ಭಾವವಷ್ಟೇ ಅಲ್ಲ. ಅಲ್ಲೂ ಕಲೆಯಿದೆ. ಅಡುಗೆ ಮಾಡುವುದೇ ಒಂದು ಕಲೆ ಎಂಬುದು ಒಪ್ಪಿಕೊಂಡ ಸತ್ಯವೇ ಆಗಿದ್ದರೂ, ಅಡುಗೆಯನ್ನು ಕಲೆಯಂತೆಯೇ ಪರಿಗಣಿಸಿ ನಿಜಾರ್ಥದಲ್ಲಿ ಕಲಾಕೃತಿಯಂಥದ್ದೇ ತಿನಿಸುಗಳನ್ನೇ ಮಾಡಿ, ತಿನ್ನಲೂ ಹಿಂದೆ ಮುಂದೆ ನೋಡುವಷ್ಟು ನೈಜವಾಗಿ ಕಾಣುವಂಥ ತಿನಿಸುಗಳನ್ನು ಲೋಕದ ಮುಂದಿಡುವ ಗುಯ್‌ಚಾನ್‌ನ ಕೇಕ್, ಪೇಸ್ಟ್ರೀ ಕಲೆಗೆ ಮರುಳಾಗದವರಿಲ್ಲ.
ಈಗ ಗುಯ್ಚಾನ್ ತನ್ನ ಇನ್ಸ್‌ಟಾ ಖಾತೆಯಲ್ಲಿ ಸಿಹಿತಿಂಡಿಯೊಂದನ್ನು ಮಾಡಿದ್ದು, ಮಾಡುವ ವಿಧಾನದ ವಿಡಿಯೋದೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ನಡಿದವರು ಖಂಡಿತವಾಗಿ ಕಳಶಕ್ಕಿಟ್ಟ ತೆಂಗಿನಕಾಯಿ ಎಂದು ಭಾವಿಸಿಯಾರು. ಅಷ್ಟು ನೈಜವಾಗಿ ತೆಂಗಿನಕಾಯಿಯನ್ನೇ ಹೋಲುವ ಈ ಸಿಹಿತಿಂಡಿಯ ಮೇಲ್ಭಾವನ್ನು ಕತ್ತರಿಸಿ ಒಡೆದ ತೆಂಗಿನಕಾಯಿಯ ಲುಕ್ ನೀಡಿದ್ದಾರೆ. ಮೇಲಿನಿಂದ ಎಲೆಯ ಅಲಂಕಾರವೂ ಮಾಡಿರುವುದರಿಂದ ಶುಭ ಸಂದರ್ಭಗಳಲ್ಲಿ ಕಳಶದ ಮೇಲಿರುವ ತೆಂಗಿನಕಾಯಿಯಂತೆ ಕಾಣುತ್ತದೆ.
ಇದನ್ನೂ ಓದಿ | Bengaluru Belly | ಬೆಂಗಳೂರು ಬೆಲ್ಲಿ ರೆಸ್ಟೋರೆಂಟ್‌ನಲ್ಲಿ ಏನುಂಟು ಏನಿಲ್ಲ!
ಈತ ಅದೆಷ್ಟು ಪ್ರೀತಿಯಿಂದ ಈ ಸಿಹಿತಿಂಡಿಯನ್ನು ಮಾಡುತ್ತಾರೆಂದು ಆತನ ವಿಡಿಯೋದಲ್ಲೇ ನೋಡಬೇಕು. ಪ್ರತಿಯೊಂದು ಸಣ್ಣ ಸಣ್ಣ ವಿವರಗಳೂ ಈ ವಿಡಿಯೋದಲ್ಲಿ ದಾಖಲಾಗುತ್ತದೆ. ಹೂರಣದಿಂದ ಹಿಡಿದು ತೆಂಗಿನಕಾಯಿಯ ಹೊರಕವಚದವರೆಗೆ ಏನೆಲ್ಲ ವಸ್ತುಗಳನ್ನು ಇದರಲ್ಲಿ ಬಳಸಲಾಗಿದೆ ಎಂಬ ವಿವರಗಳನ್ನು ಈತನ ವಿಡಿಯೋದಲ್ಲಿ ಕಣ್ಣಾರೆ ಕಾಣಬಹುದು. ಇದೆಲ್ಲವನ್ನು ಆತ ಹೇಗೆ ಮಾಡುತ್ತಾನೆಂಬ ಆತನ ಕೈಚಳಕವನ್ನೂ ನೋಡಬಹುದು. ಈ ವಿಡಿಯೋದಲ್ಲಿ ತೋರಿಸಿದ ಹಾಗೆ ತೆಂಗಿನಕಾಯಿ ಆಕಾರದ ಸಿಹಿತಿಂಡಿಯೊಳಗೆ ಬಳಸಿದ ಹೂರಣ ಮಾವಿನಹಣ್ಣು ಹಾಗೂ ಅನಾನಾಸು. ಇದಾದ ಮೇಲೆ ತೆಂಗಿನ ಕಾಯಿಯ ಬಿಳಿಯ ಭಾಗವನ್ನೂ ನೈಜವಾಗಿ ಬರುವಂತೆ ಮಾಡಿದ್ದು ಕೊನೆಯಲ್ಲಿ ಚಾಕೋಲೇಟ್‌ನಿಂದ ಡಿಪ್ ಮಾಡಿ ಅದಕ್ಕೆ ತೆಂಗಿನಕಾಯಿಯ ಒರಟು ಲುಕ್ ಬರುವಂತೆ ಮಾಡಲಾಗಿದೆ. ಮೇಲಿನ ಭಾಗವನ್ನು ಒಡೆದು, ಅದರಲ್ಲಿ ಎಲೆಯಂತಹ ಅಲಂಕಾರವನ್ನು ಮಾಡಲಾಗಿದೆ. ಈ ಇಡೀ ಸಿಹಿ ತಿನಿಸನ್ನು ಮಾವಿನಹಣ್ಣು, ಅನಾನಾಸು, ಪ್ಯಾಷನ್ ಫ್ರುಟ್, ತೆಂಗಿನಕಾಯಿ, ವೆನಿಲ್ಲಾ ಹಾಗೂ ರಮ್ ಬಳಸಿ ಮಾಡಲಾಗಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ, ಸಾಮಾಜಿಕ ಜಾಲತಾಣದಲ್ಲಿ ಇದು ಮಿಲಿಯಗಟ್ಟಲೆ ವೀಕ್ಷಣೆ ಪಡೆದಿದ್ದು, ಈತನ ಕೈಚಳಕಕ್ಕೆ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಜನರು ಫಿದಾ ಆಗಿದ್ದಾರೆ. ಈತನೊಬ್ಬ ಕಲಾಕಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಡುಗೆಯೂ ಒಂದು ಕಲೆ ಎಂದು ಪ್ರತಿನಿತ್ಯವೂ ಸಾಬೀತುಪಡಿಸುವ ಈತನ ಕಲಾನೈಪುಣ್ಯಕ್ಕೆ ಈತನ ಕಲಾಕೃತಿಗಳೇ ಸಾಕ್ಷಿ ಎಂದು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ನೀವು ಯಾವ ಟೈಟಲ್ ಕೊಡುತ್ತೀರಿ ಎಂಬುದನ್ನೂ ನೋಡದೆ, ನಿಮ್ಮ ವಿಡಿಯೋವನ್ನು ಅದನ್ನು ಮಾಡುವ ಬಗೆಯನ್ನು ಪ್ರತಿ ಬಾರಿಯೂ ಕೌತುಕದಿಂದ ವೀಕ್ಷಿಸುತ್ತೇನೆ. ಅದ್ಭುತ ಕಲಾಕೃತಿಯಿದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬಾತ, ನೀವೊಬ್ಬ ಕ್ರಿಯೇಟಿವ್ ಜೀನಿಯಸ್. ಈದನ್ನು ನೋಡಿದರೆ, ತಿಂದು ರುಚಿ ನೋಡಬೇಕೆಂಬ ಆಸೆ ಹೆಚ್ಚಾಗುತ್ತಿದೆ ಎಂದು ಕಾಮೆಂಟಿಸಿದ್ದಾರೆ.
ಇದನ್ನೂ ಓದಿ | Viral video | ಮನಸೆಳೆದ ಈ ಪಿಂಟಾರಾ ಕೇಕ್ ಮಾಡಲು ಐದು ದಿನ!