ಪಿಜ್ಜಾ! ಹೆಸರೆತ್ತಿದರೆ ಸಾಕು, ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಬಾಯಿ ಬಿಡುವವರೇ. ಪಿಜ್ಜಾ ಎಂಬುದು ಜಗತ್ತಿನ ಅತ್ಯಂತ ಪ್ರಸಿದ್ಧ ಆಹಾರಗಳ ಪೈಕಿ ಒಂದೆನಿಸಿದೆ. ಸಣ್ಣ ಮಗುವಿನಿಂದ ಹಿಡಿದು ಮುದುಕರವರೆಗೂ ಬಾಯಿ ಚಪ್ಪರಿಸುವ ಈ ತಿನಿಸು ಇದೀಗ ಬೇರೆಬೇರೆ ಬಗೆಗಳಲ್ಲಿ ಬೇರೆ ಬೇರೆ ಟಾಪಿಂಗ್‌ಗಳಲ್ಲಿ ಲಭ್ಯವಿದೆ. ಅದರ ಮೇಲೆ ಇರುವ ಚೀಸ್‌ನಲ್ಲೂ ವೆರೈಟಿಗಳಿವೆ. ನಿತ್ಯವೂ ಅಥವಾ ಆಗಾಗ ಪಿಜ್ಜಾ ತಿನ್ನುವುದು ಆರೋಗ್ಯಕ್ಕೆ ಒಳ್ಲೆಯದಲ್ಲ ಎಂಬುದು ಗೊತ್ತಿದ್ದರೂ, ಪಿಜ್ಜಾ ತಿನ್ನದೆ ಇರುವುದು ಹೇಗೆ ಎಂಬ ಪ್ರಶ್ನೆಯನ್ನು ಖಂಡಿತಾ ಎಲ್ಲರೂ ಕೇಳಿಯೇ ಇರುತ್ತಾರೆ. ಅಷ್ಟು ಶಹಬ್ಬಾಸ್‌ಗಿರಿ ಗಿಟ್ಟಿಸಿದರೆ, ಯುವ ಮನಸ್ಸುಗಳ ಅಕ್ಕರೆಯ ಆಹಾರವಿದು. ಪಾಶ್ಚಾತ್ಯ ತಿನಿಸಾದರೂ ವಿಶ್ವದಾದ್ಯಂತ ಹರಡಿ ಎಲ್ಲರ ಮನಗೆದ್ದ ಈ ಪಿಜ್ಜಾಕ್ಕೂ ಒಂದು ದಿನವಿದೆ. ಅದು ಫೆಬ್ರವರಿ 9. ಈ ಪಿಜ್ಜಾ ದಿನದಂದು (Pizza Day) ಪಿಜ್ಜಾದ ಬಗೆಗೆ ತಿಳಿಯೋಣ.
ಸಾವಿರ ವರ್ಷಗಳ ಇತಿಹಾಸ
ಹಾಗೆ ನೋಡಿದರೆ, ಇತಿಹಾಸ ಕೆದಕಿದರೆ, ಪಿಜ್ಜಾಕ್ಕೆ ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಕಾಣಸಿಗುತ್ತದೆ. 997ರಲ್ಲಿ ಮೊದಲ ಪಿಜ್ಜಾ ಮಾಡಲಾಯಿತು ಎಂಬ ಉಲ್ಲೇಖಗಳೂ ಸಿಗುತ್ತವೆ. ಇಟಲಿಯ ಕ್ಯಾಂಪೇನಿಯಾ ಗಡಿಯ ಗೇಟಾ ಎಂಬ ಪ್ರದೇಶದಲ್ಲಿ ಪಿಜ್ಜಾ ತಯಾರಿಸಲಾಗಿತ್ತು ಎಂದು ಹೇಳಲಾಗುತ್ತದೆ. ಹಾಗಾಗಿ ನೆಪೋಲಿಟನ್ ಪಿಜ್ಜಾವೇ ಜಗತ್ತಿನ ಪಿಜ್ಜಾಗಳಿಗೆಲ್ಲ ಅಪ್ಪನ ಹಾಗೆ. ಈ ಭಾಗದ ರಾಫೆಲ್ ಎಸ್ಪೊಸಿಟೋ ಎಂಬವರನ್ನು ಇಂದಿನ ಪಿಜ್ಜಾದ ಜನಕ ಎಂಬಂತೆ ಆಗಾಗ ಉದಾಹರಿಸಲಾಗುತ್ತದೆ. ಅಂದರೆ, ಆಧುನಿಕವಾಗಿ ಪಿಜ್ಜಾ ತಯಾರಿಸಲು ಆರಂಭಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂಬ ಉಲ್ಲೇಖವಿದೆ.
ಯುನೆಸ್ಕೊ ಪಟ್ಟಿಯಲ್ಲಿ ಸ್ಥಾನ
ನೆಪೋಲಿಟನ್ ಪಿಜ್ಜಾವನ್ನು ಈಗ ಸಾಂಪ್ರದಾಯಿಕ ಪಿಜ್ಜಾ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿರುವುದಷ್ಟೇ ಅಲ್ಲ, 2017ರಲ್ಲಿ ಇದನ್ನು ಮಾಡುವ ಕಲೆಯೇ ಯುನೆಸ್ಕೋನ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಕೂಡಾ. ಹೀಗಾಗಿ ಪಿಜ್ಜಾಗೆ ಸಾಕಷ್ಟು ಹಳೆಯ ಹೆಸರೇ ಇದೆ. ನಮಗೆ ಇದು ಇತ್ತೀಚೆಗಿನ ಕೆಲವು ದಶಕಗಳ ನಂಟಾದರೂ, ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಆಹಾರ ಯುರೋಪಿಯನ್ನರಿಗೆ, ಅಷ್ಟೇ ಅಲ್ಲ, ಪ್ರಮುಖವಾಗಿ ಇಟಲಿಯನ್ನರಿಗೆ ನಿತ್ಯಾಹಾರ ಕೂಡಾ.
ಫ್ಲ್ಯಾಟ್‌ಬ್ರೆಡ್ ಮೇಲೆ ಟಾಪಿಂಗ್ಸ್ ಹಾಕಿ ತಿನ್ನುವ ರೂಡಿ ಪಾಶ್ಚಾತ್ಯರ ಪೈಕಿ ಮೊದಲೇ ಈಜಿಪ್ಟಿಯನ್ನರು, ರೋಮನ್ನರು, ಗ್ರೀಕರಿಗಿತ್ತು. ಇಂಥ ಸಂದರ್ಭ 1889ರಲ್ಲಿ ಇಟಲಿಯ ಕ್ಯಾಂಪೇನಿಯಾ ಪ್ರದೇಶದಲ್ಲಿ ಈ ಮಾರ್ಗರಿಟಾ ಪಿಜ್ಜಾದ ಉದಯವಾಯಿತು ಎಂಬ ಕತೆಯೂ ಸಿಗುತ್ತದೆ. ರಾಜ ಉಂಬರ್ತೋ 1 ಹಾಗೂ ರಾಣಿ ಮಾರ್ಗರೀಟಾರಿಗೆ ತಿಂದದನ್ನೇ ತಿಂದು ತಿಂದು ಬೇಸರವಾಗಿ ಮಾಡಿದ ಪ್ರಯೋಗದಿಂದ ಹುಟ್ಟಿಕೊಂಡದ್ದು ಈ ಮಾರ್ಗರೀಟಾ ಪಿಜ್ಜಾ. ನಿತ್ಯವೂ ಫ್ರೆಂಚ್ ಆಹಾರವನ್ನೇ ತಿಂದು ತಿಂದು ಬೇಸರ ಬಂದಾಗ ಮೋಸರಿಲ್ಲಾ ಚೀಸ್, ಒಂದಿಷ್ಟು ಟೊಮ್ಯಾಟೋ, ಬೇಸಿಲ್‌ಗಳ ಟಾಪಿಂಗ್ ಹಾಕಿ ಮಾಡಿದ ಹೊಸ ಬಗೆ ಮುಂದೆ ಅದೇ ರಾಣಿಯ ಹೆಸರಿನಲ್ಲಿಯೇ ಜನಪ್ರಿಯವಾಯಿತು ಎನ್ನಲಾಗುತ್ತದೆ.
ಹಳ್ಳಿ ಹಳ್ಳಿಗಳಲ್ಲಿಯೂ ಈಗ ಲಭ್ಯ
ಇಟಲಿಯ ಪಿಜ್ಜಾ ಇಂದು ದೇಶ ಕಾಲವೆನ್ನದೆ ಹಳ್ಳಿಹಳ್ಳಿಯಲ್ಲಿಯೂ ಸಿಗುತ್ತಿದೆ. ಪ್ರತಿ ಪಿಜ್ಜಾ ಶಾಪ್‌ಗಳಲ್ಲೂ ಮಾರ್ಗರಿಟಾ ಪಿಜ್ಜಾ ಕೂಡಾ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ. ಕೇವಲ ಇವಿಷ್ಟೇ ಟಾಪಿಂಗ್‌ಗಳಲ್ಲದೇ, ಮಾಂಸಾಹಾರದಲ್ಲೂ, ಸಸ್ಯಾಹಾರದಲ್ಲೂ ಬಗೆಬಗೆಯ ಟಾಪಿಂಗ್‌ಗಳಲ್ಲಿ ಈಗ ಲಭ್ಯವಿವೆ. ಪ್ರತಿ ಬೀದಿಯಲ್ಲೂ ಪಿಜ್ಜಾ ಅಂಗಡಿಗಳು ಬಂದಿವೆ. ಬಗೆಬಗೆಯ ಬ್ರ್ಯಾಂಡ್‌ಗಳು, ಬಗೆಬಗೆಯ ರುಚಿಯ, ಭಾರತೀಯ ಶೈಲಿಯ, ಇಟಾಲಿಯನ್ ಶೈಲಿಯ, ತೆಳ್ಳಗಿನ, ದಪ್ಪದ, ಹೆಚ್ಚು ಕ್ರಿಸ್ಪೀ ಇರುವ, ಹೀಗೆ ಬಗೆಬಗೆಯ ಶೈಲಿಯ ಪಿಜ್ಜಾಗಳು ಇವೆ. ಅವರವರ ಇಚ್ಛೆಗನುಗುಣವಾಗಿ ಇದರಲ್ಲಿ ತಮಗೆ ಬೇಕಾದ ಶಾಪ್‌ಗಳನ್ನು ಕಂಡುಕೊಂಡು ಹೊಟ್ಟೆ ತುಂಬಿಸಿಕೊಂಡು ಕೃತಾರ್ಥರಾಗಬಹುದು. ಇಂದು ಮತ್ತೆ ಪಿಜ್ಜಾ ತಿನ್ನಲು ಈ ಪಿಜ್ಜಾ ಡೇಯ ನೆಪ ಖಂಡಿತ ಸಾಕಾಗಬಹುದು. ಹೋಗಿ ಪಿಜ್ಜಾ ತಿನ್ನಿ!