ಭಾರತ ಪಾಕಶಾಸ್ತ್ರದಲ್ಲಿ (Top 10 Puddings) ಹೆಸರು ಮಾಡಿದ ದೇಶ. ಭಾರತದ ಬಗೆಬಗೆಯ ಆಹಾರಗಳು, ತಿನಿಸುಗಳು, ವೈವಿಧ್ಯಮಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಮಾಡಿದೆ. ದೇಶವಿದೇಶಗಳಿಂದ ಇಲ್ಲಿನ ಆಹಾರ ಸವಿಯಲೆಂದೇ ಪ್ರವಾಸಿಗರು ಬರುತ್ತಾರೆ. ಸಿಹಿತಿಂಡಿ ಇಲ್ಲಿನ ಜನರ ನಿತ್ಯದ ಆಹಾರಾಭ್ಯಾಸ. ಹಬ್ಬಗಳು ಬಂದರಂತೂ ಈ ಸಿಹಿ ತಿನಿಸುಗಳ ಸಡಗರ ಇನ್ನೂ ಹೆಚ್ಚುತ್ತದೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ, ಬೇಋಎ ಬೇರೆ ಆಚರಣೆಗಳನ್ನು ಹೊಂದಿದ ಜನರ ಬಗೆಬಗೆಯ ಆಹಾರಾಭ್ಯಾಸಗಳು, ತಿನಿಸುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿ. ಇದೀಗ, ಭಾರತ ತನ್ನ ಸಿಹಿತಿಂಡಿಯ ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್ ಅಟ್ಲಾಸ್ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್ 10 ರೈಸ್ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಅಕ್ಕಿ ಪಾಯಸ ಅಥವಾ ಖೀರ್ ಮಾಡುವುದು ಸಾಮಾನ್ಯ. ಈ ಅಕ್ಕಿ ಪಾಯಸಕ್ಕೆ ಐದನೇ ಸ್ಥಾನ ಸಿಕ್ಕಿದರೆ, ನಾಲ್ಕನೇ ಸ್ಥಾನದಲ್ಲಿ ಫಿರ್ನಿ ಇದೆ. ಒಂಭತ್ತನೇ ಸ್ಥಾನದಲ್ಲಿ ತಮಿಳುನಾಡಿನ ಪ್ರಸಿದ್ಧ ಸಕ್ಕರೆ ಪೊಂಗಲ್ ಅಥವಾ ಸಿಹಿ ಪೊಂಗಲ್ ಆಯ್ಕೆಯಾಗಿದೆ.
ಸಾಂಪ್ರದಾಯಿಕ ತಿನಿಸು ಫಿರ್ನಿಯನ್ನು ಸಾಮಾನ್ಯವಾಗಿ ಪುಟ್ಟ ಪುಟ್ಟ ಮಣ್ಣಿನ ಮಡಕೆಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ತಿನ್ನುವುದು ರೂಢಿ. ಬೇಸಿಗೆಯಲ್ಲಿ ಐಸ್‌ಕ್ರೀಂನಂತೆ ಹಿತವಾಗಿರುವ ಸಾಂಪ್ರದಾಯಿಕ ಶೈಲಿಯ ಸಿಹಿತಿನಿಸಿದು. ಗುಲಾಬಿ ದಳಗಳು, ಪಿಸ್ತಾ ಬಾದಾಮಿಯ ಚೂರುಗಳಿಂದ ಅಲಂಕರಿಸಿ ಕೊಡಲಾಗುತ್ತದೆ.
ಸಿಹಿಯಾದ ಖೀರು
ಅಕ್ಕಿಯನ್ನು ಬಳಸಿ ಮಾಡಲಾಗುವ ಸಿಹಿಯಾದ ಖೀರು, ಯಾವುದೇ ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಇಡಲು ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಹಾಲು ಹಾಕಿ ಕೇಸರಿಯನ್ನು ಉದುರಿಸಿ ಮಾಡುವ ಸರಳವಾದ ಪಾಯಸವಿದು. ಉತ್ತರ ಭಾರತ, ದಕ್ಷಿಣ ಭಾರತವೆಂಬ ಬೇಧವಿಲ್ಲದೆ, ಈ ಸಿಹಿಯನ್ನು ಎಲ್ಲೆಡೆ ಮಾಡುತ್ತಾರೆ.
ಸಿಹಿ ಪೊಂಗಲ್
ಸಿಹಿ ಪೊಂಗಲ್ ಅಥವಾ ಸಕ್ಕರೆ ಪೊಂಗಲ್ ತಮಿಳುನಾಡಿನ ಪ್ರಖ್ಯಾತ ಸಿಹಿತಿನಿಸು. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ಬೆಲ್ಲ ಹಾಗೂ ತುಪ್ಪ ಹಾಕಿ ಮಾಡುವ ಘಮಘಮಿಸುವ ಸಿಹಿ ಪಾಯಸವಿದು. ಸಾಂಪ್ರದಾಯಿಕ ಹೊಸ ವರ್ಷವಾದ ಪೊಂಗಲ್ ಹಬ್ಬದ ಆಚರಣೆಯ ಸಂದರ್ಭ ಸಿಹಿ ಪೊಂಗಲ್ ಅನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿ, ದೇವರಿಗೆ ಇಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬಹಳ ರುಚಿಯಾದ ಸರಳವಾದ ಪಾಯಸವಿದು.
ಟರ್ಕಿಗೆ ಮೊದಲ ಸ್ಥಾನ
ಈ ಸ್ಪರ್ಧೆಯಲ್ಲಿ, ಮೊದಲ ಸ್ಥಾನದಲ್ಲಿ ಟರ್ಕಿಯ ಫಿರಿನ್ ಸುಟ್‌ಲ್ಯಾಕ್, ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಖಾವೋ ನಿಯಾವೋ ಮಾಮುಅಂಗ್, ಮೂರನೇ ಸ್ಥಾನದಲ್ಲಿ ಶೋಲೆಹ್ ಝರ್ದ್ ಇವೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಫಿರ್ನಿ, ಐದನೇ ಸ್ಥಾನದಲ್ಲಿ ನಮ್ಮ ಖೀರ್ ಇವೆ. ಇವಲ್ಲದೆ, ಡೆನ್ಮಾರ್ಕ್, ಟರ್ಕಿ, ಪೋರ್ಚುಗಲ್‌ನ ಸಿಹಿ ತಿನಿಸುಗಳೂ ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ: Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!