ಯುಗಾದಿಗೆ ವಿಶೇಷವೇನೆಂದು ಕೇಳಿದರೆ ಬೇವು-ಬೆಲ್ಲ, ಮಾವಿನಕಾಯಿ ಚಿತ್ರಾನ್ನ, ಹೋಳಿಗೆ… ಎಂಬ ಮಾಮೂಲು ಮೆನುಗಳೇ ದೊರೆಯುತ್ತವೆ ಹೆಚ್ಚಿನ ಕಡೆಗಳಲ್ಲಿ. ಆದರೆ ಈ ಹಬ್ಬಕ್ಕೆ ಬೇರೇನಾದರೂ ವಿಶೇಷವಾಗಿ ಮಾಡುವ ಬಯಕೆಯಿದ್ದು, ಏನು ಮಾಡುವುದು ಎಂಬ ಯೋಚನೆಯೇ? ಇಲ್ಲಿದೆ ಕೆಲವು ರುಚಿಕಟ್ಟಾದ ಹಬ್ಬದಡುಗೆಗಳು. ಮಾಡಿ ಸವಿಯಿರಿ.
ಸುಲಭವಾಗಿ ಮಾಡುವ ಅವಲಕ್ಕಿ ಲಾಡು
ಬೇಕಾಗುವ ವಸ್ತುಗಳು: ದಪ್ಪ ಅವಲಕ್ಕಿ- 1 ಕಪ್, ಪುಡಿ ಸಕ್ಕರೆ- 1 ಕಪ್, ಕೊಬ್ಬರಿ ತುರಿ- 1/2 ಕಪ್, ತುಪ್ಪ- 1/2 ಕಪ್, ಏಲಕ್ಕಿ ಘಮಕ್ಕೆ
ವಿಧಾನ: ಬಾಣಲೆಯಲ್ಲಿ ಅವಲಕ್ಕಿಯನ್ನು ಕೆಂಪಾಗುವವರೆಗೆ ಹುರಿದುಕೊಳ್ಳಿ. ಅದು ಸ್ವಲ್ಪ ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿ. ಇದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ, ಮತ್ತೆ ಮಿಕ್ಸಿಗೆ ಹಾಕಿಕೊಳ್ಳಿ. ಇವೆಲ್ಲವನ್ನೂ ಅಗಲ ಬಾಯಿಯ ಪಾತ್ರೆಗೆ ಹಾಕಿ ತುಪ್ಪ ಸೇರಿಸಿಕೊಳ್ಳಿ. ಈ ಮಿಶ್ರಣ ಬೆಚ್ಚಗಿರುವಾಗಲೇ ಉಂಡೆ ಮಾಡಿ.
ರುಚಿಕರ ಅತಿರಸ
ಬೇಕಾಗುವ ವಸ್ತುಗಳು: ಹಿಟ್ಟು ಮಾಡಿದ ಅಕ್ಕಿ – 1/4 ಕೆ.ಜಿ, ತೆಂಗಿನ ಕಾಯಿ 1/2, ಬೆಲ್ಲ- 1/4 ಕೆಜಿ. ಕರಿಯಲು ಎಣ್ಣೆ
ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಹತ್ತಿಯ ಬಟ್ಟೆಯ ಮೇಲೆ ನೆರಳಿನಲ್ಲಿ ಒಣಗಿಸಿ. ಅದರ ತೇವಾಂಶ ಶೇ. ೭೫ರಷ್ಟು ಹೋಗುತ್ತಲೇ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಇದನ್ನು ಜರಡಿ ಮಾಡಿ, ತರಿಯನ್ನು ತೆಗೆಯಿರಿ. ತೆಂಗಿನ ಕಾಯನ್ನು ಹೆಚ್ಚು ನೀರು ಸೇರಿಸದೆಯೆ ರುಬ್ಬಿ. ಬೆಲ್ಲವನ್ನು ಪಾಕಕ್ಕಿಡಿ. ನೂಲು ಪಾಕ ಬಂದ ಮೇಲೆ ಇದಕ್ಕೆ ರುಬ್ಬಿದ ತೆಂಗಿನ ಕಾಯಿ ಮತ್ತು ಅಕ್ಕಿಯ ನುಣ್ಣನೆಯ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಕಲೆಸಿ. ಸಣ್ಣ ಉಂಡೆಗಳಾಗಿ ಮಾಡಿ ಅಂಗೈಯಲ್ಲೇ ತಟ್ಟಿಕೊಳ್ಳಿ. ಕಾದ ಎಣ್ಣೆಯಲ್ಲಿ ಕರಿಯಿರಿ.
ಕಟ್ಟಿ ನೋಡಿ ಕೊಟ್ಟೆ ಕಡುಬು
ಬೇಕಾಗುವ ವಸ್ತುಗಳು: ಕುಚ್ಚಲಕ್ಕಿ ಅಥವಾ ಇಡ್ಲಿ ಅಕ್ಕಿ- 1 ಕಪ್, ಉದ್ದಿನ ಬೇಳೆ- 1/2 ಕಪ್, ಹಸಿಶುಂಠಿ- ಒಂದಿಂಚು, ಹಸಿಮೆಣಸು- ಖಾರಕ್ಕೆ, ಕರಿಬೇವಿನ ಎಲೆಗಳು- ಸ್ವಲ್ಪ, ಸ್ವಲ್ಪ ಉಪ್ಪು, ಕೊಟ್ಟೆ ಮಾಡುವುದಕ್ಕೆ ಬಾಳೆಲೆ
ವಿಧಾನ: ಅಕ್ಕಿ, ಬೇಳೆಯನ್ನು ಪ್ರತ್ಯೇಕವಾಗಿ ೬ ತಾಸುಗಳ ಕಾಲ ನೆನೆಸಿ. ನಂತರ ಅವುಗಳನ್ನು ಚೆನ್ನಾಗಿ ತೊಳೆದು ಪ್ರತ್ಯೇಕವಾಗಿಯೇ ರುಬ್ಬಿ. ಉದ್ದನ್ನು ನುಣ್ಣಗೆ ರುಬ್ಬಿಕೊಂಡರೆ, ಅಕ್ಕಿಯನ್ನು ತರಿಯಾಗಿ ರುಬ್ಬಿಕೊಳ್ಳಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿ. ಇದಕ್ಕೆ ಹಸಿಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸಣ್ಣಗೆ ಕೊಚ್ಚಿಹಾಕಿ. ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುದುಗು ಬರಿಸಿ. ಬಾಳೆಯಲ್ಲಿ ಸಣ್ಣ ವೃತ್ತಾಕಾರದ ಕೊಟ್ಟೆಗಳನ್ನು ಮಾಡಿ. ಕೆಲವರು ದೊಡ್ಡ ಹಲಸಿನ ಎಲೆಗಳನ್ನೂ ಕೊಟ್ಟೆಗಳನ್ನು ಮಾಡುತ್ತಾರೆ. ಹುದುಗಿದ ಹಿಟ್ಟನ್ನು ಕೊಟ್ಟೆಯಲ್ಲಿ ಹಾಕಿ ಹಬೆಯಲ್ಲಿ ಬೇಯಿಸಿ. ಇದನ್ನು ನಿಮ್ಮಿಷ್ಟದ ಯಾವುದೂ ಕಾಯಿ ಚಟ್ಣಿಯೊಂದಿಗೆ ಸವಿಯಬಹುದು.
ಹಬ್ಬಕ್ಕೊಂದು ಕರುಂಕುರುಂ ಖಾರ ತಿಂಡಿ ಬೇಡವೇ? ಇಲ್ಲಿದೆ ನೋಡಿ.
ಗರಿಗರಿಯಾದ ಕಾಯಿ ವಡೆಗೆ
ಬೇಕಾಗುವ ವಸ್ತುಗಳು: ಅಕ್ಕಿ- 1 ಕಪ್, ಕಾಯಿತುರಿ- 1/2 ಕಪ್, ಜೀರಿಗೆ- 1 ಚಮಚ, ಬ್ಯಾಡಗಿ ಮೆಣಸಿನ ಕಾಯಿ- 5-6, ಉಪ್ಪು ರುಚಿಗೆ, ಚಿಟಿಕೆ ಅರಿಶಿನ, ಕರಿಯಲು ಎಣ್ಣೆ
ವಿಧಾನ: ಅಕ್ಕಿಯನ್ನು ನಾಲ್ಕು ತಾಸುಗಳಷ್ಟು ನೆನೆಸಿ. ಚೆನ್ನಾಗಿ ತೊಳೆದು ಉಳಿದೆಲ್ಲ ಪರಿಕರಗಳನ್ನು ಹಾಕಿ ನುಣ್ಣಗೆ ರುಬ್ಬಿ. ಆದರೆ ರುಬ್ಬುವಾಗ ಹೆಚ್ಚು ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಪುಟ್ಟದಾಗಿ ತಟ್ಟಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ನಾಲ್ಕಾರು ದಿನಗಳವರೆಗೆ ಇದನ್ನು ಕೆಡದಂತೆ ಇಡಬಹುದು.
ಹೋಳಿಗೆ ತಪ್ಪಿದರೂ ಲೊಟ್ಟೆ ಹೊಡೆಯುವಂಥ ಒಬ್ಬಟ್ಟು ಸಾರು ತಪ್ಪಬಾರದು
ಬೇಕಾಗುವ ವಸ್ತುಗಳು: ಬೇಳೆ ಹೋಳಿಗೆ ಮಾಡುವಾಗ ಬಸಿದ ಕಟ್ಟು ಎಷ್ಟಿದ್ದರೂ ತೆಗೆದುಕೊಳ್ಳಿ, ಅದಿಲ್ಲದಿದ್ದರೆ 1/4 ಕಪ್ ಕಡಲೆಬೇಳೆಯನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಮೆತ್ತಗಾಗುವಂತೆ ಬೇಯಿಸಿಕೊಳ್ಳಿ. ಜೊತೆಗೆ, ಬೆಲ್ಲ- 1/4 ಕಪ್, ತೆಂಗಿನ ತುರಿ- 1/4 ಕಪ್, ಏಲಕ್ಕಿ- ನಾಲ್ಕಾರು. ರಸಂ ಪುಡಿ ಮಾಡುವುದಕ್ಕೆ- ಮೆಂತೆ- 1/2 ಚಮಚ, ಜೀರಿಗೆ- 1 ಚಮಚ, ಕೊತ್ತಂಬರಿ- 2 ಚಮಚ, ಬ್ಯಾಡಗಿ ಮೆಣಸಿನ ಕಾಯಿ- 5,6, ಈರುಳ್ಳಿ- 1, ಟೊಮೇಟೊ- 1, ಹುಣಸೆ ಹಣ್ಣಿನ ರಸ- ಸ್ವಲ್ಪ, ಕೊತ್ತಂಬರಿ ಮತ್ತು ಕರಿಬೇವು, ಒಗ್ಗರಣೆಗೆ ತುಪ್ಪ.
ವಿಧಾನ: ರಸಂ ಪುಡಿ ಮಾಡುವುದಕ್ಕೆ ಹೇಳಿದ ವಸ್ತುಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವಿನ ಕೆಲವು ಎಲೆಗಳನ್ನು ಹಾಕಿ ಹುರಿಯಿರಿ. ಇವೆಲ್ಲ ಬಾಡಿದ ಮೇಲೆ ಮಿಕ್ಸಿಗೆ ಹಾಕಿ. ರಸಂಪುಡಿ ಮತ್ತು ತೆಂಗಿನ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಬೇಳೆ ಅಥವಾ ಬೇಳೆ ಕಟ್ಟಿನೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ಉಪ್ಪು, ಬೆಲ್ಲ, ಹುಣಸೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಇದನ್ನು ರಸಂ ಹದಕ್ಕಿಟ್ಟು, ಚೆನ್ನಾಗಿ ಮರಳಿಸಿ. ಇದಕ್ಕೆ ಘಮ್ಮೆನ್ನುವಂತೆ ಇಂಗಿನ ಒಗ್ಗರಣೆ ಹಾಕಿ.