Site icon Vistara News

Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

Weight Loss Tips

ಕಪ್ಪು ಬಣ್ಣ ಎಂದರೆ ಹಲವರು ಮೂಗು ಮುರಿಯುತ್ತಾರೆ. ಅದೇನೋ ಅಶುಭ, ಅಪಶಕುನ ಎಂದೆಲ್ಲಾ ಭಾವಿಸಿ ದೂರ ಸರಿಯುತ್ತಾರೆ. ಆದರೆ ತೂಕ ಇಳಿಸುವ ಉದ್ದೇಶವಿದ್ದವರಿಗೆ ಕಪ್ಪು ಬಣ್ಣ ಹೇಗೆ ಅನುಕೂಲ ಎಂಬುದು ತಿಳಿದಿದ್ದರೆ ಅನುಕೂಲ. ಅಂದರೆ ಕಪ್ಪು ಬಟ್ಟೆ ಹಾಕಿದರೆ ತೂಕ ಇಳಿಯುತ್ತದೆಂದೋ ಅಥವಾ ಕಪ್ಪು ಹರಳು ಧರಿಸಿದರೆ ತೆಳ್ಳಗಾಗುವರೆಂದೋ ಭ್ರಮಿಸಬೇಕಿಲ್ಲ. ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಆಹಾರಗಳ ಬಗ್ಗೆ. ಹೌದು, ವಿಚಿತ್ರ ಎನಿಸಿದರೂ, ಕಪ್ಪು ಬಣ್ಣದ ಆಹಾರಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಾಂದ್ರವಾಗಿದ್ದು, ಕೊಬ್ಬು ಕತ್ತರಿಸುವಲ್ಲಿ ನೆರವಾಗುತ್ತವೆ. ಇಲ್ಲಿದೆ (Weight Loss Tips) ವಿವರಗಳು.

ಏನಿವು?

ಕಪ್ಪು ಬಣ್ಣದ ಆಹಾರಗಳೆಂದರೆ ಸೀದು ಕಪ್ಪಾಗಿ ಕೂತವಲ್ಲ. ನೈಸರ್ಗಿಕವಾಗಿ ಕಡು ಬಣ್ಣದ, ಅದರಲ್ಲೂ ಕಪ್ಪು ಬಣ್ಣದ ಆಹಾರಗಳು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಸತ್ವಗಳು ಅಧಿಕವಾಗಿರುತ್ತವೆ. ಜೊತೆಗೆ ಬೇಗನೇ ಹೊಟ್ಟೆ ತುಂಬಿದ ಅನುಭವ ನೀಡಿ, ದೀರ್ಘ ಕಾಲದವರೆಗೆ ಹಸಿವನ್ನು ಮುಂದೂಡಿ, ದೇಹದ ಚಯಾಪಚಯವನ್ನು ಹೆಚ್ಚಿಸುತ್ತವೆ. ಅಂದರೆ ಶರೀರವನ್ನು ಬಳಲಿಸದೆಯೆ, ಶಕ್ತಿಯನ್ನು ಕುಂದಿಸದೆಯೆ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತವೆ. ಯಾವ ಆಹಾರಗಳು ಎಂಬುದನ್ನು ಈಗ ತಿಳಿಯೋಣ. ಅದಕ್ಕೂ ಮುನ್ನ, ಅವುಗಳಲ್ಲಿ ಇರುವುದೇನು ಎಂದು ನೋಡಿದರೆ- ಕಡು ಬಣ್ಣದ ಆಹಾರಗಳಲ್ಲಿ ಆಂಥೋಸಯನಿನ್‌ ಎಂಬ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುತ್ತವೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರವಾಗಿ ಇರಿಸುವುದಕ್ಕೆ ಇದು ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆಯಂಶ ಸ್ಥಿರವಾಗಿ ಇದ್ದಷ್ಟೂ ತಿನ್ನಬೇಕೆಂಬ ಬಯಕೆ ಬರುವುದನ್ನು ತಡೆಯಬಹುದು. ಏರಿಳಿತ ಹೆಚ್ಚಾದರೆ ತಿನ್ನುವುದೂ ಹೆಚ್ಚಬಹುದು. ಜೊತೆಗೆ, ಈ ಕಪ್ಪು ಆಹಾರಗಳಲ್ಲಿ ನಾರಿನಂಶವೂ ಅಧಿಕ. ಹಾಗಾಗಿ ಕಳ್ಳ ಹಸಿವನ್ನು ತಡೆಯುವ ಮೂಲಕ ಇದೂ ತೂಕ ಇಳಿಕೆಗೆ ಅನುಕೂಲ ಒದಗಿಸುತ್ತದೆ.

ಯಾವುವು?

ಕಪ್ಪು ಬಣ್ಣದ ಆಹಾರಗಳೆಂದರೆ ಯಾವುದು? ಪ್ರಯತ್ನಿಸಿದರೂ ಅಂಥವು ನೆನಪಾಗುತ್ತಿಲ್ಲವೇ? ಚಿಂತೆಯಿಲ್ಲ, ಪಟ್ಟಿ ಇಲ್ಲಿದೆ-

ಕಪ್ಪು ಬೀನ್ಸ್‌

ಕಡು ಕಪ್ಪು ಬಣ್ಣದ ಈ ಕಾಳುಗಳಲ್ಲಿ ಪ್ರೊಟೀನ್‌ ಹೇರಳವಾಗಿದೆ. ಜೊತೆಗೆ, ನಾರು ಹಾಗೂ ಉತ್ಕರ್ಷಣ ನಿರೋಧಕಗಳು ಸಹ ತುಂಬಿಕೊಂಡಿವೆ. ಸಾಮಾನ್ಯವಾಗಿ ಯಾರೆಲ್ಲ ಕಾಳುಗಳನ್ನು ಹೊಂದಿದ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೊ ಅವರಿಗೆ ಕೊಬ್ಬು ಶೇಖರವಾಗುವುದು, ಅದರಲ್ಲೂ ಹೊಟ್ಟೆ ಮತ್ತು ಸುತ್ತಲಿನ ಭಾಗಗಳಲ್ಲಿ ಕೊಬ್ಬು ಜಮೆಯಾಗುವುದು ಕಡಿಮೆ ಎನ್ನುತ್ತವೆ ಅಧ್ಯಯನಗಳು

ಕಪ್ಪು ಅಕ್ಕಿ

ಇದೂ ಸಹ ಆಂಥೋಸಯನಿನ್‌ಗಳು ವಿಫಲವಾಗಿರುವಂಥ ಆಹಾರ. ಬಿಳಿ ಅಕ್ಕಿಗೆ ಹೋಲಿಸಿದಲ್ಲಿ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ಮಧುಮೇಹಿಗಳಿಗೆ ಬಿಳಿಯಕ್ಕಿಗಿಂತ ಇದು ಉತ್ತಮವಾದ ಆಹಾರ. ದೇಹದಲ್ಲಿ ಉರಿಯೂತವನ್ನು ಶಮನ ಮಾಡಿ, ತೂಕ ಇಳಿಸಲು ನೆರವಾಗುತ್ತದೆ ಈ ಆಹಾರ.

ಬ್ಲ್ಯಾಕ್‌ಬೆರ್ರಿ

ಆಂಥೋಸಯನಿನ್‌ಗಳು ತೀರಾ ಸಾಂದ್ರವಾಗಿರುವ ಆಹಾರಗಳ ಪೈಕಿ ಇದು ಮುಂಚೂಣಿಯಲ್ಲಿದೆ. ಇದರಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಕ್ಯಾಲರಿ ಹೆಚ್ಚಿಸದೆಯೇ ಹೊಟ್ಟೆ ತುಂಬಿಸುತ್ತದೆ. ಈ ಎಲ್ಲ ಕಾರಣಗಳಿಗಾಗಿ ಈ ಹಣ್ಣು ಅತ್ಯಂತ ಆರೋಗ್ಯಕರ ಎನಿಸಿದ್ದು, ತೂಕ ಇಳಿಸುವವರಿಗೆ ಇದು ಸಹಕಾರಿ.

ಕಪ್ಪು ಚಿಯಾ ಬೀಜ

ಯಾವುದೇ ಬೀಜಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಿ, ಪ್ರೊಟೀನ್‌ ಮತ್ತು ನಾರನ್ನು ಹೇರಳವಾಗಿ ಒದಗಿಸುತ್ತವೆ. ಅವುಗಳಲ್ಲಿ ಚಿಯಾ ಬೀಜವೂ ಒಂದು. ಇದರಲ್ಲಿ ಕಪ್ಪು ಬಣ್ಣದ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಇನ್ನಷ್ಟು ಅಧಿಕವಾಗಿರುತ್ತವೆ. ದೇಹಕ್ಕೆ ಬೇಕಾದ ಪೋಷಣೆಯನ್ನು ನೀಡಿ, ತೂಕ ಇಳಿಸಲು ಪೂರಕವಾಗಿವೆ.

ಕರಿ ಎಳ್ಳು

ಎಳ್ಳಿನಲ್ಲಿರುವ ತೈಲದಂಶ ದೇಹಕ್ಕೆ ಹಿತವಾಗುವಂಥದ್ದು. ಅದರಲ್ಲೂ ಸ್ನಾಯುಗಳನ್ನು ಬೆಳೆಸುವಂಥ ಯಾವುದೇ ಆಹಾರಗಳು ದೇಹದ ಚಯಾಪಚಯವನ್ನು ಹೆಚ್ಚಿಸುವಂಥವು. ಕರಿ ಎಳ್ಳಿನಲ್ಲಿರುವ ಕೊಬ್ಬಿನಂಶವು ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯಬಲ್ಲದು. ಈ ಮೂಲಕ ತೂಕ ಇಳಿಕೆಗೂ ಉಪಯುಕ್ತ ಆಗಬಲ್ಲದು.

ಇದನ್ನೂ ಓದಿ: Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

Exit mobile version