ಬೇಸಿಗೆ ಬರುತ್ತಿದ್ದ ಹಾಗೆ ಬಹುಮುಖ್ಯವಾಗಿ ಭೂಮಿಯ ಮೇಲಿನ ವಸ್ತುಗಳ ಪೈಕಿ ಪ್ರಿಯವಾಗುವುದು ಐಸ್‌ಕ್ರೀಂ. ಬೇಸಿಗೆಯ ಬಿಸಿಲಿಗೆ ಮೈಯಲ್ಲಿ ಬೆವರ ಮಳೆ ಸುರಿಯುತ್ತಿದ್ದರೆ ಐಸ್‌ಕ್ರೀಂ (Ice cream) ಸಿಕ್ಕರೆ ಆಹಾ ಎಂಬ ಸ್ವರ್ಗ ಸುಖ. ಲೋಕದಲ್ಲಿ ಲಭ್ಯವಿರುವ ಐಸ್‌ಕ್ರೀಂಗಳ ಪೈಕಿ ದಿನವೂ ಒಂದೊಂದು ರುಚಿಯ, ಬಗೆಯ ಐಸ್‌ಕ್ರೀಂ ರುಚಿ ನೋಡಿದರೂ ಬೇಸಿಗೆ ಪೂರ್ತಿ ಮುಗಿದರೂ ಐಸ್‌ಕ್ರೀಂಗಳ ವೆರೈಟಿ ಮುಗಿಯಲಿಕ್ಕಿಲ್ಲ. ಅದರಲ್ಲೂ ಐಸ್‌ಕ್ರೀಂ ಪ್ರಿಯರು ಐಸ್‌ಕ್ರೀಂ ಜೊತೆಗೆ ವಿವಿಧ ಬಗೆಯ ಸಿಹಿತಿಂಡಿಗಳನ್ನು ಸವಿದು ಐಸ್‌ಕ್ರೀಂ ಜುಗಲ್‌ಬಂದಿಯ ಸವಿಯನ್ನೂ ಅನುಭವಿಸುವುದುಂಟು. ಐಸ್‌ಕ್ರೀಂ ಪ್ರಿಯರು ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ಗಳಸ್ಯ ಕಂಠಸ್ಯ ಐಸ್‌ಕ್ರೀಂ ಜೋಡಿ ಕಾಂಬಿನೇಶನ್‌ಗಳು ಇಂತಿವೆ.
1. ವೆನಿಲ್ಲಾ ಐಸ್‌ಕ್ರೀಂ ಹಾಗೂ ಗುಲಾಬ್ ಜಾಮೂನು: ಗುಲಾಬ್ ಜಾಮೂನನ್ನು ಹಾಗೆಯೇ ತಿನ್ನುವ ಬದಲು ಅದರ ಮೇಲೊಂದು ಸ್ಕೂಪ್ ವೆನಿಲ್ಲಾ ಐಸ್‌ಕ್ರೀಂ ಸುರುವಿಕೊಂಡು ತಿಂದರೆ ಅದು ಸ್ವರ್ಗ ಸುಖ. ಬಿಸಿಯಾದ ಗುಲಾಬ್ ಜಾಮೂನಿನ ಮೇಲೆ ತಣ್ಣಗಿನ ಐಸ್‌ಕ್ರೀಂ ಬೆಣ್ಣೆಯ ಹಾಗೆ ಕರಗುತ್ತಿದ್ದರೆ, ಇವೆರಡೂ ನಮ್ಮ ಬಾಯಿಯಲ್ಲಿ ಹಾಲು ಜೇನಿನಂತೆ ಒಂದಾಗುತ್ತಿದ್ದರೆ ನಿಜವಾದ ಮಜಾ ಸಿಗುವುದು ನಮಗೆ! ಜಾಮೂನಿನ ಸಕ್ಕರೆಯ ಪಾಕದ ಜೊತೆ ಐಸ್‌ಕ್ರೀಂ ಜೋಡಿಯಾಗುವ ರಸಮಯ ಗಳಿಗೆಯೇ ಅದ್ಭುತ. ಐಸ್‌ಕ್ರೀಂ ಪ್ರಿಯರೆಲ್ಲರೂ ಮರೆಯದೆ ರುಚಿ ನೋಡಲೇಬೇಕಾದ ಕಾಂಬಿನೇಶನ್ ಇದು.
2. ಕುಲ್ಫಿ ಮತ್ತು ಜಿಲೇಬಿ: ಬೇಸಿಗೆ ಬರುತ್ತಿದ್ದ ಹಾಗೆ ಕುಲ್ಫಿಯೊಂದನ್ನು ಬಾಯಿಗಿಟ್ಟು ಸಮುದ್ರ ಕಿನಾರೆಯಲ್ಲಿ ನಡೆಯುತ್ತದ್ದರೆ ಆ ಸಮಯ ಆನಂದಮಯ. ಅದನ್ನು ಇನ್ನಷ್ಟು ರಸಮಯವನ್ನಾಗಿ ಮಾಡಬೇಕೆಂದರೆ ಕುಲ್ಫಿಯ ಜೊತೆಗೆ ಜಿಲೇಬಿಯನ್ನೂ ಕೊಂಡುಕೊಳ್ಳಬೇಕು. ಆಗಷ್ಟೇ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕದಲ್ಲದ್ದಿದ ಬಿಸಿಬಿಸಿ ಜಿಲೇಬಿಗೆ ಚಳಿ ಚಳಿ ಕುಲ್ಫಿ ಜೊತೆಯಾದರೆ ಈ ಜೋಡಿ ಸ್ವರ್ಗದಲ್ಲೇ ನಿಶ್ಚಯವಾದ ಜೋಡಿಯಂತೆ. ಈ ಋಣಾನುಬಂಧವನ್ನು ತಪ್ಪಿಸಲು ನಾವ್ಯಾರು ಎಂದು ತಿನ್ನುವುದಷ್ಟೇ ನಿಮಗಿರುವ ದಾರಿ.
3. ಪಿಸ್ತಾ ಐಸ್‌ಕ್ರೀಂ ಹಾಗೂ ರಸಮಲೈ: ಮೆದುವಾದ ಬಾಯಿಗಿಟ್ಟರೆ ಹತ್ತಿಯಂತೆ ಹಗುರಾಗಿ ನೀರಾಗುವ ರಸಮಲೈಯ ಕೇಸರಿಯ ಘಮಕ್ಕೆ ಮಾರುಹೋಗದವರ್ಯಾರು ಹೇಳಿ! ಇಂತಹ ರಸಮಲೈ ಜೊತೆಗೆ ಎಂದರಾದರೂ ಪಿಸ್ತಾ ಐಸ್‌ಕ್ರೀಂ ಸವಿದಿದ್ದೀರಾ? ಇವೆರಡೂ ಎಂಥ ಅದ್ಭುತ ಕಾಂಬಿನೇಶನ್ ಎಂದರೆ, ನೀವು ನಿಜವಾಗಿಯೂ ಐಸ್‌ಕ್ರೀಂ ಪ್ರಿಯರಾಗಿದ್ದಲ್ಲಿ ಈ ಕಾಂಬಿನೇಶನ್ನನ್ನು ಟ್ರೈ ಮಾಡಲೇಬೇಕು.
4. ಸ್ಟ್ರಾಬೆರಿ ಐಸ್‌ಕ್ರೀಂ ಹಾಗೂ ರಸಗುಲ್ಲ: ರಸಗುಲ್ಲದ ಜೊತೆಗೆ ಎಂದಾದರೂ ಸ್ಟ್ರಾಬೆರಿ ಐಸ್‌ಕ್ರೀಂ ಟ್ರೈ ಮಾಡಿದ್ದೀರಾ? ಮಾಡದೆ ಇದ್ದರೆ ಖಂಡಿತ ಮಾಡಿ. ಯಾಕೆಂದರೆ, ಇವೆರಡೂ ಒಂದಕ್ಕೊಂದು ಎಷ್ಟು ಹೊಂದಿಕೊಳ್ಳುತ್ತವೆ ಎಂದರೆ, ತಿಂದ ಮೇಲೆ, ಅರೆ, ಇದೊಂದು ಅದ್ಭುತ ಜೋಡಿಯನ್ನು ಮೊದಲೇ ಏಕೆ ಟ್ರೈ ಮಾಡಲಿಲ್ಲ ಎಂದು ಅನಿಸೀತು.
5. ಕಾಜು ಬರ್ಫಿ ಹಾಗೂ ಕಸಟ್ಟಾ: ಕಸಟ್ಟಾ ಎಂಬ ಐಸ್‌ಕ್ರೀಂ ಬಗೆಯನ್ನು ನೀವು ಸವಿದಿದ್ದರೆ ಮುಂದಿನ ಬಾರಿ ಅದರ ಜೊತೆಗೆ ಕಾಜು ಬರ್ಫಿಯನ್ನೂ ಸೇರಿಸಿ ತಿನ್ನಿ. ಸ್ಪಾಂಜ್ ಕೇಕ್‌ನ ಜೊತೆಗಿರುವ ಈ ಕಸಟ್ಟಾಗೆ ಕಾಜು ಬರ್ಫಿ ಅತ್ಯಂತ ಸುಂದರ ಜೋಡಿ. ಮಕ್ಕಳಿಗೂ ಇಷ್ಟವಾಗುವ ಡೆಸರ್ಟ್ ಇದು.
6. ವೆನಿಲ್ಲಾ ಐಸ್‌ಕ್ರೀಂ ಹಾಗೂ ಜಿಲೇಬಿ: ಎಲ್ಲ ಟ್ರೈ ಮಾಡಿ ಇದನ್ನೇ ಮಾಡದಿದ್ದರೆ ಹೇಗೆ ಹೇಳಿ! ಹೌದು, ಬಿಸಿಬಿಸಿ ಜಿಲೇಬಿಯ ಮೇಲೆ ವೆನಿಲ್ಲಾ ಐಸ್‌ಕ್ರೀಂ ಸುರಿದರೆ ಅದರ ರುಚಿಯೇ ಪರಮಾದ್ಭುತ. ಇವೆರಡರನ್ನು ಜೊತೆಯಾಗಿ ತಿನ್ನದಿದ್ದರೆ ನೀವು ಐಸ್‌ಕ್ರೀಂ ಪ್ರಿಯರಾಗಿದ್ದಕ್ಕೂ ನ್ಯಾಯ ದೊರಕದು. ಬೇಸಗೆಯಲ್ಲಿ ಬರೀ ನೀರಸ ಐಸ್‌ಕ್ರೀಂ ತಿನ್ನುತ್ತಾ ಕಾಲ ಕಳೆಯದಿರಿ. ಇಂತಹ ಬಗೆಬಗೆಯ ಐಸ್‌ಕ್ರೀಂ ಜೋಡಿಗಳನ್ನು ಟ್ರೈ ಮಾಡಿ ಬೇಸಿಗೆಯನ್ನು ಸುಮಧುರವಾಗಿರಿಸಿ!
ಇದನ್ನೂ ಓದಿ: Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!