ಕಲಬೆರಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇತ್ತೀಚೆಗೆ ದೇಶದ (Food Tips Kannada) ರಾಜಧಾನಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಸುಮಾರು 15 ಟನ್‌ಗಳಷ್ಟು ಪ್ರಮಾಣದ ನಕಲಿ ಮತ್ತು ಕಲಬೆರಕೆಯ ಮಸಾಲೆ ಅಥವಾ ಸಾಂಬಾರ ಪದಾರ್ಥಗಳ ಸುದ್ದಿ ಬಹಳಷ್ಟನ್ನು ತಿಳಿಸುತ್ತದೆ. ಕೊಳೆತ ಎಲೆಗಳು, ಹುಳು ಹಿಡಿದ ಧಾನ್ಯಗಳು, ಮರದ ಪುಡಿ ಮುಂತಾದ ವಸ್ತುಗಳನ್ನು ಕಲಬೆರೆಕೆಗೆಂದು ಇರಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ನಾವೆಷ್ಟು ಅಜಾಗ್ರತೆ ಮಾಡುತ್ತೇವೆ ಎಂಬುದಕ್ಕೆ ಹಿಡಿದ ಕನ್ನಡಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ?
ಕಲಬೆರಕೆ ಎಂದರೆ
ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಆದರೆ ಇದನ್ನು ಮೂಲ ವಸ್ತುವಿನ ಬೆಲೆಗೆ ಮತ್ತು ಗುಣಮಟ್ಟದ ಖಾತ್ರಿಗೆ ಮಾರಲಾಗುತ್ತದೆ. ಇದಕ್ಕಾಗಿ ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ಬಗ್ಗೆ ವಿಸ್ತೃತವಾದ ಮಾಹಿತಿ ಇಲ್ಲಿದೆ.
ಅಗ್ಗದ ವಸ್ತುಗಳನ್ನು ಸೇರಿಸುವುದು
ಹಾಲಿಗೆ ನೀರು ಸೇರಿಸಿದಷ್ಟೇ ಲೀಲಾಜಾಲವಾಗಿ ಹಿಟ್ಟಿಗೆ ಸೀಮೆಸುಣ್ಣದ ಪುಡಿ ಬೆರೆಸುವುದು, ಅಚ್ಚ ಖಾರದ ಪುಡಿಗೆ ಅಥವಾ ಅರಿಶಿನ ಪುಡಿಗೆ ಬಣ್ಣ ಬರುವಂಥ ರಾಸಾಯನಿಕಗಳನ್ನು ಸೇರಿಸುವುದು, ದುಬಾರಿ ಬೆಲೆಯ ಆಲಿವ್ ಎಣ್ಣೆಗೆ ಅಗ್ಗದ ಯಾವುದೋ ಎಣ್ಣೆ ಬೆರೆಸುವುದು, ಅಂದರೆ ದುಬಾರಿ ಬೆಲೆಯ ವಸ್ತುವಿಗೆ ಅದರಂತೆಯೇ ಕಾಣುವ ಅಗ್ಗದ ಯಾವುದಾದರೂ ವಸ್ತುವನ್ನು ಸೇರಿಸಬಹುದು.
ಇದನ್ನೂ ಓದಿ: Job Alert: ಟೆಕ್ಸ್‌ಟೈಲ್ಸ್ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್
ಸತ್ವಹೀನ ಮಾಡುವುದು
ವಸ್ತುಗಳ ಸತ್ವಗಳನ್ನು ತೆಗೆದು ಅವುಗಳನ್ನು ಹೊಸ ಹೆಸರಿನಲ್ಲಿ ಮಾರಾಟ ಮಾಡುವುದು. ಅಂದರೆ ಹಾಲಿನ ಕೊಬ್ಬಿನಂಶವನ್ನೆಲ್ಲ ತೆಗೆದು, ಅದನ್ನು ಪ್ರತ್ಯೇಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ, ಜೊತೆಗೆ ʻಸ್ಕಿಮ್ ಮಿಲ್ಕ್ʼ ಹೆಸರಿನಲ್ಲಿ ಕೊಬ್ಬು ರಹಿತ ಹಾಲನ್ನೂ ಮಾರಾಟ ಮಾಡಲಾಗುತ್ತದೆ. ಇದು ಮಾತ್ರವಲ್ಲ, ಹಲವಾರು ಮಸಾಲೆಗಳ ತೈಲದಂಶವನ್ನು ತೆಗೆಯುವುದು ಸಹ ಇದೇ ಸಾಲಿಗೆ ಸೇರಿಸಲಾಗುತ್ತದೆ.
ರಾಸಾಯನಿಕಗಳ ಬೆರಕೆ
ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಹಲವು ರೀತಿಯ ಅನಾರೋಗ್ಯಕರ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಈ ಪೈಕಿ ರಸಗೊಬ್ಬರಗಳು, ಕೀಟನಾಶಗಳು ಮುಂತಾದ ರಾಸಾಯನಿಕಗಳನ್ನು ಕಲಬೆರಕೆಗೆ ಬಳಸಲಾಗುತ್ತದೆ. ಕೆಲವನ್ನು ʻಕಲರ್-ಬೆರಕೆʼಯ ಉದ್ದೇಶದಿಂದ ಮಾಡಲಾಗುತ್ತದೆ.
ಮಾಲಿನ್ಯದ ಸಮಸ್ಯೆ
ಆಹಾರಕ್ಕೆ ಕೀಟಗಳು, ಬ್ಯಾಕ್ಟೀರಿಯಗಳು, ಟಾಕ್ಸಿನ್‌ಗಳು, ಭಾರೀ ಖನಿಜಗಳು ಸಹ ಸೇರಬಹುದು. ಇವುಗಳಲ್ಲಿ ಎಲ್ಲವೂ ಉದ್ದೇಶಪೂರ್ವಕವಾಗಿ ಬೆರಕೆಯಾಗುತ್ತವೆ ಎಂದೇನಿಲ್ಲ. ಕೆಲವೊಂದು ಅರಿವಿಲ್ಲದೆಯೇ ಶುದ್ಧ ಆಹಾರಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ.
ಕೃತಕ ಮಾಗಿಸುವಿಕೆ
ಬಾಳೆಗೊನೆ ತುರ್ತಾಗಿ ಹಣ್ಣಾಗಬೇಕೆ? ಎಥಿಲೀನ್ ಸೋಕಿದರಾಯ್ತು, ಬಲುಬೇಗ ಗೊನೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಾವು ಹಣ್ಣಾಗಬೇಕೆ? ಕ್ಯಾಲ್ಶಿಯಂ ಕಾರ್ಬೈಡ್ ಇದೆಯಲ್ಲ. ಹೀಗೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಿ, ಕಾಯಿಗಳನ್ನು ಮಾಗಿಸಿ ಹಣ್ಣಾಗಿಸಲಾಗುತ್ತದೆ. ಹಿಂದೆಯೂ ಇಂಥ ಕ್ರಮಗಳು ಬಳಕೆಯಲ್ಲಿದ್ದರೂ, ಅವುಗಳನ್ನು ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ. ಬದಲಿಗೆ ಹುಲ್ಲಿನಲ್ಲಿ ಹುದುಗಿಸುವುದು, ಪೆಟ್ಟಿಗೆಯನ್ನು ಉಬ್ಬೆ ಹಾಕುವಂಥ ಕ್ರಮಗಳು ಚಾಲ್ತಿಯಲ್ಲಿದ್ದವು.
ಆರೋಗ್ಯಕ್ಕೇನು ತೊಂದರೆ?
ಆಹಾರದ ಕಲಬೆರಕೆಯಿಂದ ಹೊಟ್ಟೆಯ ಆರೋಗ್ಯ ಬುಡಮೇಲಾಗಬಹುದು. ವಾಂತಿ, ಅತಿಸಾರ ಗಂಟಾಗಬಹುದು. ಹಣ್ಣುಗಳನ್ನು ಮಾಗಿಸಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂಬ ಆರೋಪವಂತೂ ಇದ್ದೇಇದೆ. ಬೇಗ ಬೆಳೆಯಲೆಂದು ಕೃತಕ ಹಾರ್ಮೋನುಗಳನ್ನು ನೀಡುವುದರಿಂದ, ಅವು ಗರ್ಭಕೋಶದ ಕ್ಯಾನ್ಸರ್‌ಗೆ ಎಷ್ಟರಮಟ್ಟಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
ಪೌಷ್ಟಿಕಾಂಶಗಳ ಕೊರತೆ
ಮೂಲ ಆಹಾರಕ್ಕೆ ಕಳಪೆ ವಸ್ತುಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ. ಶುದ್ಧ ಅಡುಗೆ ಎಣ್ಣೆಗೆ ಕಲುಷಿತ ಎಣ್ಣೆಗಳನ್ನು ಸೇರಿಸುವುದರಿಂದ ಅಗತ್ಯ ಸತ್ವಗಳ ಕೊರತೆ ಕಾಡುವುದು ಸಾಮಾನ್ಯ. ಮಾತ್ರವಲ್ಲ, ಕೆಟ್ಟ ಕೊಬ್ಬಿನ ಅಂಶವೂ ದೇಹದಲ್ಲಿ ಹೆಚ್ಚಾಗಿ, ಜೀವನಶೈಲಿಯ ರೋಗಗಳೆಲ್ಲ ಬೆನ್ನು ಬೀಳುತ್ತವೆ.
ಅಲರ್ಜಿಗಳು
ಪ್ಯಾಕೇಜಿಂಗ್ ಮೇಲೆ ಆಯಾ ವಸ್ತುಗಳಲ್ಲಿ ಏನೇನನ್ನು ಸೇರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯ. ಆದರೆ ಕಲಬೆರಕೆ ವಸ್ತುಗಳಲ್ಲಿಇಂಥ ಮಾಹಿತಿಗಳು ಇರುವುದಿಲ್ಲ, ಇದ್ದರೂ ಅದು ಸುಳ್ಳಾಗಿರುತ್ತದೆ. ಇದರಿಂದ ಅಲರ್ಜಿಗಳು ಕಾಣಬಹುದು. ಮುಖ, ಕಣ್ಣು ಅಥವಾ ತುಟಿಗಳು ಊದಿಕೊಳ್ಳಬಹುದು. ತುರಿಕೆ, ಮೈಮೇಲೆಲ್ಲ ಗುಳ್ಳೆಗಳು ಕಾಣಬಹುದು, ಉಸಿರಾಟದ ತೊಂದರೆಗಳು ಬರಬಹುದು.