ಬಲ್ಲವನೆ ಬಲ್ಲ ಬೆಲದ ರುಚಿಯ ಎಂಬ ಮಾತಿದೆ. ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲೂ ಬೆಲ್ಲ ಹೊತ್ತು ತರುವ ಪೋಷಕಾಂಶಗಳು ಅನೇಕ. ನಿತ್ಯ ನಮ್ಮ ದೇಹಕ್ಕೆ ಬೆಲ್ಲ ನೀಡುವ ಮ್ಯಾಜಿಕ್ ಸ್ಪರ್ಶ ಅಂತಿಂಥದ್ದಲ್ಲ. ಹಾಗಾದರೆ, ನಿತ್ಯವೂ ಬೆಲ್ಲವನ್ನು ನಮ್ಮ ದೇಹಕ್ಕೆ ಸೇರುವಂತೆ ಏನು ಮಾಡಬಹುದು ಎಂಬುದನ್ನು ನೋಡೋಣ.
೧. ಹುರಿಗಡಲೆಯೂ ಬೆಲ್ಲವೂ: ಹುರಿಗಡಲೆಯಲ್ಲಿರುವ ಪ್ರೊಟೀನು, ಬೆಲ್ಲದಲ್ಲಿರುವ ಕಬ್ಬಿಣಾಂಶ ಹಾಗೂ ಇತರ ಖನಿಜಾಂಶಗಳು ಜೊತೆಯಾಗಿ ಸಿಗಬೇಕೆಂದರೆ ಹೀಗೆ ಮಾಡಬಹುದು. ಹಸಿವಾದಾಗ ತಿನ್ನಲು ಒಳ್ಳೆಯ ಸ್ನ್ಯಾಕ್. ಬೆಲ್ಲದಲ್ಲಿರುವ ಪೊಟಾಶಿಯಂ, ಕಬ್ಬಿಣಾಂಶ ಹಾಗೂ ಕಡಲೆಯ್ಲಿರುವ ಪ್ರೊಟೀನ್ ಹೊಟ್ಟೆ ಸೇರಿ ಕಡಿಮೆ ಕ್ಯಾಲರಿಯಲ್ಲಿ ಹೊಟ್ಟೆ ತುಬಿದಂತಾಗುತ್ತದೆ ಕೂಡಾ, ಕಚೇರಿಯಲ್ಲಿ ಕೆಲಸದ ನಡುವೆ ಊಟಕ್ಕೂ ಮೊದಲು ಹಸಿವಾದರೆ ತಿನ್ನಬಹುದಾದ ಅತ್ಯುತ್ತಮ ಆರೋಗ್ಯಕರ ಆಯ್ಕೆ. ಹಲ್ಲಿನ ಆರೋಗ್ಯಕ್ಕೆ, ಮಾಂಸಖಂಡಗಳ ಬಲವರ್ಧನೆಗೆ ಅತ್ಯುತ್ತಮ.
೨. ಬೆಲ್ಲವೂ ನೆಲಗಡಲೆಯೂ: ಈ ಕಾಂಬಿನೇಶನ್ನಿನಲ್ಲಿ ಚಿಕ್ಕಿ ತಿಂದು ನಿಮಗೆ ಗೊತ್ತಿರಬಹುದು. ನೆಲಗಡಲೆ ಹಾಗೂ ಬೆಲ್ಲ ಹಾಕಿದ ಚಿಕ್ಕಿ ಒಳ್ಳೆಯ ಹಸಿವು ನಿವಾರಕ ಆರೋಗ್ಯಕರ ಸಿಹಿತಿನಿಸು. ಕ್ಯಾಲ್ಶಿಯಂ, ಕಬ್ಬಿಣಾಂಶ, ಫೋಲಿಕ್ ಆಸಿಡ್ ಮತ್ತಿತರ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ. ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಶಕ್ತಿ ನೀಡುವ ಹಾಗೂ ಹೊಟ್ಟೆನೋವು, ಸೊಂಟನೋವಿನ ತೊಂದರೆಗಳನ್ನು ಶಮನಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ. ಚಳಿಗಾಲದಲ್ಲಿ ದೇಹವಚನ್ನು ಬೆಚ್ಚಗಿಡಲು ಅತ್ಯುತ್ತಮ ಆಹಾರ ಕೂಡಾ ಇದೇ. ದೇಹದಿಂದ ವಿಷಕಾರಕಗಳನ್ನು ಹೊರಗೆ ಕಳಿಸುವ ಇದು ಮಲಬದ್ಧತೆಯನ್ನೂ ನಿವಾರಿಸುತ್ತದೆ.
೩. ಬೆಲ್ಲವೂ ಅರಿಶಿನವೂ: ಪುರಾತನ ಕಾಲದ ಮನೆಮದ್ದು ಇದು. ಬೆಲ್ಲದ ಪುಡಿ ಹಾಗೂ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ಉಂಡೆಕಟ್ಟಿ ದಿನವೂ ಬೆಳಗ್ಗೆ ಸೇವಿಸುತ್ತಾ ಬಂದಲ್ಲಿ, ಶಕ್ತಿಹೀನರು ಶಕ್ತಿ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದು ಉತ್ತಮ ಶಕ್ತಿವರ್ಧಕ. ಇದು ದೇಹದಲಿರುವ ಕಲ್ಮಶಗಳನ್ನೆಲ್ಲ ಹೊರಗೆ ಕಳಿಸಿ ದೇಹ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಆಗಾಗ ಹವಾಮಾನ ಬದಲಾವಣೆಯಿಂದಾಗುವ ಆರೋಗ್ಯ ವೈಪರೀತ್ಯಗಳಿಂದಲೂ ಇದು ಕಾಪಾಡುತ್ತದೆ.
ಇದನ್ನೂ ಓದಿ: Jaggery Tea Benefits: ಬೆಲ್ಲದ ಚಹಾ ಸದ್ಗುಣಗಳು ಗೊತ್ತೇ?
೪. ಬಿಸಿನೀರು ಹಾಗೂ ಬೆಲ್ಲ: ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಕುಡಿಯುವುದರಿಂದ ದೇಹವೆಲ್ಲ ಒಮ್ಮೆ ಶುದ್ಧವಾಗಿ, ಮುಂದಿನ ಕೆಲಸ ಮಾಡಲು ಚುರುಕಾಗುವ ಅನುಭವ ನೀಡುತ್ತದೆ. ಈ ಬಿಸಿನೀರಿಗೆ ಕೊಂಚ ಬೆಲ್ಲದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ಪಚನಕ್ರಿಯೆ ವೇಗವನ್ನು ಪಡೆಯುತ್ತದೆ. ಕೆಲಸ ಚುರುಕಾಗಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯದು.
೫. ತುಪ್ಪವೂ ಬೆಲ್ಲವೂ: ಬೆಲ್ಲ ಹಾಗೂ ತುಪ್ಪದ ಕಾಂಬಿನೇಶನ್ ಬಹಳ ಪ್ರಸಿದ್ಧವಾದ ಕಾಂಬಿನೇಶನ್. ಸೆಲೆಬ್ರಿಟಿ ಆಹಾರ ತಜ್ಞೆಯಾಗಿ ಹೆಸರು ಪಡೆದಿರುವ ರುಜುತಾ ದಿವೇಕರ್ ಕೂಡಾ ಇದನ್ನು ಸಲಹೆ ಮಾಡುತ್ತಾರೆ. ದೇಹದಲ್ಲಿರುವ ಕಲ್ಮಶವನ್ನು ಹೊರಕ್ಕೆ ಕಳಿಸಿ, ಅಸಿಡಿಟಿಯ ಸಮಸ್ಯೆ ಇದ್ದವರಿಗೆ ಅದರಿಂದಲೂ ಮುಕ್ತಿ ನೀಡುವ ಸರಳ ಉಪಾಯವಿದು. ಬೆಲ್ಲ ಹಾಗೂ ಅರಿಶಿನ ಪುಡಿಯನ್ನು ಮುದ್ದೆ ಮಾಡಿ ಪುಟಾಣಿ ಉಂಡೆ ಮಾಡಿ ಬಾಯಿಗಿಳಿಸಿದರೆ ಸಾಕು. ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ತೂಕವನ್ನೂ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!