Site icon Vistara News

Friendship: ನೆನಪಿಡಿ, ಹಳಸಿದ ಗೆಳೆತನ ಕಾಪಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ!

friendship

ಬಹಳಷ್ಟು ಸಾರಿ ಪ್ರೀತಿಯ ಬಗೆಗೆ ಆರಂಭದಲ್ಲಿ ಸಾಕಷ್ಟು ಲೆಕ್ಕಾಚಾರಗಳನ್ನು ಹಾಕುತ್ತೇವೆ. ಆದರೆ, ಗೆಳೆತನದ (Friendship) ವಿಷಯದಲ್ಲಿ ಹಾಗಲ್ಲ. ಗೆಳೆತನಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ಅದರದ್ದೇ ಆದ ಸ್ಥಾನವಿದೆ. ಗೆಳೆಯರಿಲ್ಲದೆ ಇದ್ದರೆ ಜೀವನ ನಿರಾಶಾದಾಯಕವಾಗಿ ಸತ್ವಹೀನವಾಗಿಯೂ ಕಾಣಬಹುದು. ನಮ್ಮೆಲ್ಲಾ ಜವಾಬ್ದಾರಿಗಳು, ದುಗುಡ ದುಮ್ಮಾನಗಳನ್ನು ಸೈಡಿಗಿಟ್ಟು ಆರಾಮವಾಗಿ ಕೂತು ಮಾತನಾಡಲು, ಹೃದಯ ಹಗುರ ಮಾಡಿಕೊಳ್ಳಲು ಗೆಳೆಯರು ಬೇಕೇ ಬೇಕು. ಹಾಗಾಗಿ ಎಷ್ಟೋ ಸಾರಿ ಗೆಳೆತನಕ್ಕಾಗಿ ಎಂಥ ಅಪಾಯ ಎದುರು ಹಾಕಿಕೊಳ್ಳಲೂ ಕೂಡಾ ಬಹಳಷ್ಟು ಮಂದಿ ರೆಡಿಯಾಗಿರುತ್ತಾರೆ.

ಆದರೆ ನೆನಪಿಡಿ, ಗೆಳೆತನದ ವಿಷಯದಲ್ಲೂ ತೀರಾ ಅಡ್ಜಸ್ಟ್‌ಮೆಂಟ್‌ ಸಲ್ಲ. ಎಲ್ಲಿ ನಮ್ಮ ಗೆಳೆತನ ಬೇರೆ ದಾರಿ ಹಿಡಿಯುತ್ತಿದೆ ಅನಿಸಿತೋ ಅಲ್ಲಿಗೆ ಅದಕ್ಕೊಂದು ಪೂರ್ಣವಿರಾಮ ಇಡಲೇ ಬೇಕಾಗುತ್ತದೆ. ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ಅನುಭವಿಸಿಕೊಂಡೇ ಇರುವುದು ಸಾಧ್ಯವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಾಗಾದರೆ ಎಂತಹ ಸಂದರ್ಭ ಬಂದಾಗ ನಾವು ನಮ್ಮ ಗೆಳೆತನ ಹಳಸಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದನ್ನು ನೋಡೋಣ.

1. ನಮ್ಮೊಳಗಿನ ಗೆಳೆತನ ಮೊದಲಿನ ಹಾಗಿಲ್ಲ ಅನಿಸಲು ಶುರುವಾಗಿದೆಯೇ ಗಮನಿಸಿ. ಎಲ್ಲವೂ ಕೊನೆಯ ತನಕ ಉಳಿಯುತ್ತದೆ ಎಂಬ ಭಾವನೆ ಬೇಡ. ಕೆಲವೊಂದು ಸಂಬಂಧಗಳು ಶುರುವಾದಷ್ಟೇ ವೇಗವಾಗಿ ಕೊನೆಗೊಳ್ಳುತ್ತವೆ ಕೂಡಾ. ಒಮ್ಮೆ ಗಟ್ಟಿಯಾಗಿದೆ ಅನಿಸಿದ್ದು ಎಲ್ಲ ಬಾರಿಯೂ ಹಾಗೆಯೇ ಅನಿಸಬೇಕಿಲ್ಲ. ಮೊದಲಿನ ಬಂಧ ಉಳಿಸಿಕೊಂಡಿಲ್ಲ ಎಂದು ಅನಿಸಿದರೆ, ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಸಾಧ್ಯವಾಗುತ್ತಿಲ್ಲ ಅನಿಸಿದರೆ ಅಂಥಾ ಗೆಳೆತನಕ್ಕೆ ತಿಲಾಂಜಲಿ ಬಿಡಬಹುದು.

2. ಗೆಳೆತನದಲ್ಲಿ ಒಂದು ಹಂತದಲ್ಲಿ, ಇದು ಇಬ್ಬರನ್ನೂ ಒಂದೇ ಸಮನಾಗಿ ಇರುವ ಸ್ನೇಹವೇ ಅಥವಾ ತನಗೊಬ್ಬನಿ/ಳಿಗೆ ಮಾತ್ರ ಬೇಕಾದ ಸಂಬಂಧವೇ ಎಂಬ ವಿಚಿತ್ರ ಅನುಮಾನ ಬರಲು ಆರಂಭವಾಗುತ್ತದೆ. ಇಷ್ಟರವರೆಗೆ ಸರಾಗವಾಗಿ ಸಾಗುತ್ತಿದ್ದ ಸ್ನೇಹ ಇದ್ದಕ್ಕಿದ್ದಂತೆ ನಿಮ್ಮ ಬಳಿ ಇಂಥದ್ದೊಂದು ಗೊಂದಲ ಹುಟ್ಟು ಹಾಕಿದೆ ಎಂದಾದಲ್ಲಿ ಖಂಡಿತವಾಗಿಯೂ ನಿಮ್ಮ ಗೆಳೆತನದಲ್ಲೇನೋ ಕೊರತೆಯಿದೆ ಇದೆ ಎಂದೇ ಅರ್ಥ. ಇನ್ನೂ ಕೆಲ ಕಾಲ ಕೊಟ್ಟು ನಿಮ್ಮ ಈ ಅನುಮಾನ ನಿಜವೇ ಎಂದು ಪರೀಕ್ಷಿಸಬಹುದು. ಹೌದು ಅನಿಸಿದರೆ, ಖಂಡಿತವಾಗಿಯೂ ನೀವು ಮೂವ್‌ ಆನ್‌ ಆಗಬಹುದು.

3. ನಂಬಿಕೆಗೆ ಬೆಂಕಿ ಬಿದ್ದಾಗ ವಿಶ್ವಾಸದ್ರೋಹವಾಗುತ್ತದೆ. ಸ್ನೇಹದಲ್ಲಿ ವಿಶ್ವಾಸಘಾತುಕತನ ಅರಗಿಸಿಕೊಳ್ಳಲಾಗದಂಥದ್ದು. ನಂಬಿಕೆ ಎಂಬುದು ಬಹಳ ಸೂಕ್ಷ್ಮವಾದ್ದು. ಗೆಳೆತನ ನಂಬಿಕೆಯ ತಳಹದಿಯ ಮೇಲೆ ನಿಂತಿರುತ್ತದೆ. ಅಂತಹ ನಂಬಿಕೆಯ ಗೋಡೆಯೇ ಅಲ್ಲಾಡಿದಾಗ ಖಂಡಿತವಾಗಿಯೂ ಗೆಳೆತನ ಮುಂದುವರಿಸಿ ಪ್ರಯೋಜನವಿಲ್ಲ. ದಾಕ್ಷಿಣ್ಯಕ್ಕೆ ಬಿದ್ದು, ಸಹಾನುಭೂತಿ ತೋರಿ ಅಂತಹ ಗೆಳೆತನದಿಂದಹೊರಗೆ ಬರಲಾಗದೆ ಅನುಭವಿಸಕೊಂಡಿರುವುದು ಮೂರ್ಖರ ಲಕ್ಷಣ. ನೇರವಾಗಿ, ಧೈರ್ಯವಾಗಿ ಹೇಳುವುದೂ ಇಲ್ಲಿ ಮುಖ್ಯ.‌

4. ಗೆಳೆಯರು ಯಾಕಿರುತ್ತಾರೆ ಹೇಳಿ. ನಮ್ಮ ಕಷ್ಟಸುಖಗಳಲ್ಲಿ ಪರಸ್ಪರ ಭಾಗಿಯಾಗಿ ಸಹಕಾರಿಯಾಗಿರುವುದು ಒಳ್ಳೆಯ ಗೆಳೆತನದ ಲಕ್ಷಣ. ಗೆದ್ದಾಗ ಖುಷಿಪಟ್ಟು, ಸೋತಾಗ ಸಮಾಧಾನ ಮಾಡಿ ಜೊತೆಗಿದ್ದೇವೆ ಎಂಬ ಸಾಂತ್ವನ ಗೆಳೆಯ/ತಿ ನೀಡಿದಲ್ಲಿ ಅಂಥ ಗೆಳೆತನ ನಿಜವಾದದ್ದು ಎಂದು ನಂಬಬಹುದು. ಆದರೆ, ಪ್ರತಿ ಬಾರಿಯೂ ನಿಮ್ಮ ಖುಷಿಯಲ್ಲಿ ಕೊಂಕು ನುಡಿವ ಗೆಳೆಯರು, ಗೆಳತಿಯರು ಇದ್ದರೆಷ್ಟು ಬಿಟ್ಟರೆಷ್ಟು ಎಂಬುದನ್ನು ಅರಿತುಕೊಳ್ಳುವ ಜಾಣ್ಮೆ ನಮಗಿರಬೇಕು. ಅಂಥ ನೆಗೆಟಿವ್‌ ಮನೋಭಾವ ಹಂಚುವ ಗೆಳೆಯರನ್ನು ದೂರವೇ ಇಡುವುದು ಒಳ್ಳೆಯದು.‌

ಇದನ್ನೂ ಓದಿ: Motivational story | ಬೆಲೆಯೇ ಇಲ್ಲದ ಮುತ್ತಿನ ಹಾರ ಮತ್ತು ಬೆಲೆ ಕಟ್ಟಲಾಗದ ಗೆಳೆತನದ ಬೆಂಗಾವಲಿನ ಕಥೆ

5. ಇಬ್ಬರಿಗೂ ಒಬ್ಬರಿಗೊಬ್ಬರು ಹಂಚಿಕೊಳ್ಳುವಂಥದ್ದು, ಮಾತನಾಡಿಕೊಳ್ಳುವಂಥದ್ದೂ ಅಂಥದ್ದೇನಿಲ್ಲ ಅನಿಸಲು ಶುರುವಾದರೂ ಅಂಥ ಗೆಳೆತನ ತನ್ನ ಕೊನೆಯುಸಿರೆಳೆಯಲು ತಲುಪಿದೆ ಎನ್ನಬಹುದು. ಅಂಥ ಸಂದರ್ಭ ಅದಕ್ಕೆ ಮುಕ್ತಿ ನೀಡುವುದೇ ಒಳ್ಳೆಯದು ಅಥವಾ ದೂರವಿಟ್ಟರೂ ಇಡಬಹುದು.

6. ಕಾಳಜಿಯನ್ನು ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನಿಸಿದರೆ, ಅಲ್ಲೂ ನಿಜವಾದ ಗೆಳೆತನ ಮಾಯವಾಗುತ್ತಿದೆ ಎಂದೇ ಅರ್ಥ. ಗೆಳೆಯ ಅಥವಾ ಗೆಳತಿ ಕಷ್ಟದಲ್ಲಿದ್ದಾಗ ಅಥವಾ ಹಾದಿ ತಪ್ಪುತ್ತಿದ್ದಾರೆ ಅನಿಸಿದಾಗ ಅವರನ್ನು ತಪ್ಪು ತಿಳಿದುಕೊಳ್ಳದೆ ಅವರ ವ್ಯಕ್ತಿತ್ವವನ್ನು ಅಳೆಯದೆ, ಗೆಳೆತನಕ್ಕೆ ಯಾವ ಧಕ್ಕೆಯೂ ಬರದಂತೆ ಕಾಳಜಿ ವ್ಯಕ್ತಪಡಿಸುವುದು ಗೆಳೆಯರ ಕರ್ತವ್ಯ. ಅಂಥ ಕಾಳಜಿಯನ್ನು ಅರ್ಥ ಮಾಡಿಕೊಂಡರೆ ಆತ/ಕೆ ಗೆಲ್ಲುತ್ತಾನೆ/ಳೆ. ಇಲ್ಲದಿದ್ದರೆ, ಗೆಳೆತನ ಕೊನೆಯ ದಿನಗಳಲ್ಲಿದೆ ಎನ್ನಬಹುದು.

ಇದನ್ನೂ ಓದಿ: ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

Exit mobile version