ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಮಗು ಬುದ್ಧಿವಂತನಾಗಲಿ ಅಥವಾ ಬುದ್ಧಿವಂತೆಯಾಗಲಿ ಎಂಬ ಆಸೆಯಿರುತ್ತದೆ. ಮಗು ಮೊದಲ ಬಾರಿಗೆ ಅಮ್ಮಾ ಎಂದು ಕರೆಯುವುದೇ ಹೆತ್ತವರ ಪಾಲಿಗೆ ದೊಡ್ಡ ವಿಚಾರ. ಮೊದಲ ನಗು, ಮೊದಲ ತೊದಲ ಮಾತು, ಮೊದಲ ಹೆಜ್ಜೆ, ಮೊದಲ ದಿನ ಶಾಲೆ ಹೀಗೆ ಹೆತ್ತವರ ಪಾಲಿಗೆ ಮಗುವಿನ ಬೆಳವಣಿಗೆಯ ಒಂದೊಂದು ಹಂತವೂ ಮುಖ್ಯವೇ. ನಿಜವಾದ ಮೈಲುಗಲ್ಲೇ. ಎಲ್ಲರ ಹಾಗೆ ಮಗು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದು ಜವಾಬ್ದಾರಿಯಿಂದ ನಡೆದುಕೊಳ್ಳುವುದು, ಓದಿ ಉತ್ತಮ ಪ್ರಜೆಯಾಗಬೇಕಿರುವುದು ಎಲ್ಲವೂ ಪ್ರತಿಯೊಬ್ಬ ಹೆತ್ತವರೂ ಬಯಸುವ ಸಾಮಾನ್ಯ ಆಕಾಂಕ್ಷೆ. ಆದರೆ, ಮಗು ಇವೆಲ್ಲವನ್ನೂ ಮೀರಿ, ಬುದ್ಧಿವಂತಿಕೆಯಲ್ಲಿ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲಾರಂಭಿಸುವುದೆಂದರೆ ಅದು ಹೆತ್ತವರಿಗೆ ಹೆಮ್ಮೆಯ ವಿಚಾರ.
ಹಾಗಾದರೆ, ಸಹಜವಾಗಿ, ಮಗು ಬುದ್ಧಿವಂತರಾಗಿ ಬೆಳೆಯುವುದು ಹೇಗೆ? ಪೋಷಕರಾಗಿ ಮಗುವಿನ ಚುರುಕುತನ ಹಾಗೂ ಬುದ್ಧಿವಂತಿಕೆಯನ್ನು ಹೆಚ್ಚು ಮಾಡಿಸುವಲ್ಲಿ ನೀಡಬಹುದಾದ ಕಾಣಿಕೆ ಏನು ಎಂಬುದನ್ನು ನೋಡೋಣ.
೧. ಮಗುವಿನ ನಿದ್ದೆಯನ್ನು ಕೆಡಿಸಬೇಡಿ: ಸಂಶೋಧನೆಗಳ ಪ್ರಕಾರ ಮಗುವಿಗೆ ಕೇವಲ ಒಂದು ಗಂಟೆಯ ನಿದ್ದೆ ಕಡಿಮೆಯಾದರೂ ಎರಡು ಅರಿವಿನ ವರ್ಷವನ್ನು ಕಡಿತಗೊಳಿಸಿದಂತೆ ಎನ್ನಲಾಗುತ್ತದೆ. ಮಗುವಿನ ಮಿದುಳಿನ ವಿಕಾಸ ಆಗುವುದೇ ನಿದ್ದೆಯಲ್ಲಿ. ಮಗುವಿನ ಮಿದುಳಿನ ಎಡ ಹಾಗೂ ಬಲ ಭಾಗಕ್ಕಿರುವ ಸಂಪರ್ಕ ಹಾಗೂ ನರಮಂಡಲ ವ್ಯವಸ್ಥೆ ಬಲಗೊಳ್ಳುವುದು ನಿದ್ದೆಯಲ್ಲಾಗಿರುವುದರಿಂದ ಮಗುವಿಗೆ ಆಯಾ ವಯಸ್ಸಿಗೆ ಸಿಗಬೇಕಾದ ನಿದ್ದೆ ಸಿಗಲೇಬೇಕು.
೨. ಮಕ್ಕಳ ಕಾರ್ಯ ಚಟುವಟಿಕೆ ಉತ್ತಮವಾಗಿರಲಿ: ಮಗು ತನ್ನ ವಯಸ್ಸಿಗೆ ಅನುಗುಣವಾಗಿ ಬೆಳೆಯುತ್ತಾ ಹಲವು ಅಡೆತಡೆಗಳನ್ನು ಮೀರುತ್ತಾ ಕೆಲಸಗಳನ್ನು ಕಲಿಯುತ್ತಾ ಸಾಗುತ್ತದೆ. ತುಂಟತನ, ದೈಹಿಕ ಚಟುವಟಿಕೆ, ಆಟ ಎಲ್ಲವೂ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಮಗುವನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯವೆಂದು ಮಗುವಿನ ಆಟಪಾಠಗಳನ್ನು ನಿರ್ಬಂಧಿಸಬಾರದು. ಎಡವಿ ಬಿದ್ದರೆ ಎಂದು ನಡೆಯದಂತೆ ಮಗುವನ್ನು ಕೂರಿಲಾಗುವುದಿಲ್ಲವಲ್ಲ. ಏಳುತ್ತಾ ಬೀಳುತ್ತಾ ನಡೆಯಲು ಕಲಿವಂತೆ ಎಲ್ಲ ಚಟುವಟಿಕೆಗಳಿಗೂ ಮಗುವನ್ನು ತೆರೆದ ಮನಸ್ಸಿನಿಂದ ಬಿಡಬೇಕು. ಹೆಚ್ಚು ಚಟುವಟಿಕೆಯಿಂದಿರುವ ಮಗುವಿನ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಿ ಮಗು ಉತ್ತಮ ಅರೋಗ್ಯ ಪಡೆಯುತ್ತದೆ, ಮಿದುಳಿಗೆ ರಕ್ತಪೂರಣ ಸರಿಯಾಗಿ ಆಗುವುದರಿಂದ ಜ್ಞಾಪಕಶಕ್ತಿ, ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ.
೩. ಸರಿಯಾದ ಸಂಗೀತ ಕೇಳಿಸಿ: ಮಗುವಿಗೆ ಸರಿಯಾದ ಬಗೆಯ ಸಂಗೀತವೂ ಬಹಳ ಮುಖ್ಯ. ಮಿದುಳಿನ ಆರೋಗ್ಯಕ್ಕೆ, ಸರಿಯಾದ ಬೆಳವಣಿಗೆಗೆ ಹಿತವಾದ, ಶಾಂತಿಯಿಂದ ಕೂಡಿದ ಮಧುರವಾದ ಸಂಗೀತ ಒಳ್ಳೆಯದು. ಕರ್ಕಶ, ಅಬ್ಬರದ ಸಂಗೀತ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಮೆದುವಾದ, ಮಧುರವಾದ ಸಂಗೀತದಿಂದ, ಅಮ್ಮ ಮಗುವಿನ ಬಾಂಧವ್ಯವೂ ವೃದ್ಧಿಯಾಗುತ್ತದೆ.
೪. ಮಗುವಿನ ಜೊತೆಗೆ ಮಾತಾಡಿ: ಸಂಶೋಧನೆಗಳ ಪ್ರಕಾರ ಮಗುವಿನ ಜೊತೆಗೆ ಮಾತು ಬಹಳ ಮುಖ್ಯ. ಇದು ಮಗುವಿನ ಮಾತನಾಡುವ ಸಾಮರ್ಥ್ಯ, ಸ್ಪಷ್ಠ ಮಾತು ಹಾಗೂ ಚಿಂತನಶೀಲತೆಯನ್ನು ಹೆಚ್ಚಿಸುತ್ತದೆ. ಮಗುವಿನ್ನೂ ಮಾತನಾಡಲು ಶುರು ಮಾಡಿಲ್ಲ ಎಂದು ಮಗುವಿನ ಕೆಲಸಗಳನ್ನಷ್ಟೇ ಮಾಡಿ ಸುಮ್ಮನೆ ಕೂರುವುದಲ್ಲ. ಸಂವಹನ, ಮಾತನಾಡಿಸುವುದು ಬಹಳ ಮುಖ್ಯ.
೫. ಉತ್ತಮ ಆಹಾರಾಭ್ಯಾಸ: ಮಿದುಳಿನ ಬೆಳವಣಿಗೆಗೆ ಪೂರಕವಾದ ಆಹಾರ ಬಹಳ ಮುಖ್ಯ. ಮಗುವಿನ ಆಹಾರದಲ್ಲಿ ಯಾವಾಗ ಎಂತಹ ಆಹಾರ ಸೇರಿಸಬೇಕು ಎಂಬ ತಿಳುವಳಿಕೆ ಹೆತ್ತವರಿಗೆ ಇರಬೇಕು. ಹಣ್ಣುಗಳು, ಹಸಿರು ತರಕಾರಿ, ಮೊಟ್ಟೆ, ಒಣಹಣ್ಣುಗಳು, ಬೀಜಗಳು, ಧಾನ್ಯಗಳು ಎಲ್ಲವೂ ಮಿದುಳಿನ ಬೆಳವಣಿಗೆಗೆ ಪೂರಕ.
೬. ಸಾಮಾಜಿಕವಾಗಿ ಬೆರೆಯಲಿ: ಅತಿಯಾದ ಮೂಗು ತೂರಿಸುವಿಕೆ ಬೇಡ. ಎಲ್ಲದರಲ್ಲೂ ಕಂಟ್ರೋಲ್ ಮಾಡುವುದು ಒಳ್ಳೆಯದಲ್ಲ. ಸಾಮಾಜಿಕವಾಗಿ ಮಗು ಉತ್ತಮ ಬೆಳವಣಿಗೆ ಕಾಣಬೇಕೆಂದರೆ, ಸಂವಹನವನ್ನು ಕಲಿಯಬೇಕೆಂದರೆ, ಅದು ಹೊರಗಿನ ಪ್ರಪಂಚಕ್ಕೆ, ತನ್ನ ವಯಸ್ಸಿನ ಮಕ್ಕಳೊಂದಿಗೆ ಬೆರೆಯಬೇಕು. ಇತರರ ಜೊತೆಗೆ ಹೇಗೆ ಬೆರೆಯಬೇಕೆಂದು ತಪ್ಪು ಮಾಡುತ್ತಾ ಮಾಡುತ್ತಾ ಮಗು ಕಲಿಯುತ್ತದೆ. ತಪ್ಪಾದಾಗ ತಿದ್ದಿ ಸರಿ ಹಾದಿಯಲ್ಲಿ ನಡೆಯಲು ಮಗುವನ್ನು ಅದರ ಪಾಡಿಗೆ ಬಿಡಬೇಕು.
೭. ರಾತ್ರಿ ಕಥೆ ಹೇಳುವುದು: ಅಯ್ಯೋ, ಮಗುವಿಗೆ ಕಥೆ ಹೇಳುವುದು ಕಷ್ಟ ಎಂದು ನುಣುಚಿಕೊಳ್ಳಬೇಡಿ. ಮಗುವಿಗೆ ಪ್ರತಿನಿತ್ಯ ಕಥೆ ಹೇಳುವುದರಿಂದ ಕೇವಲ ಪೋಷಕರ ಹಾಗೂ ಮಗುವಿನ ನಡುವಿನ ಬಾಂಧವ್ಯ ವೃದ್ಧಿಯಷ್ಟೇ ಅಲ್ಲ, ಮಗುವಿನ ಮಿದುಳು ಸೇರಿದಂತೆ ಸರ್ವಾಂಗೀಣ ಬೆಳವಣಿಗೆಗೂ ಕಥೆ ಬಹಳ ಮುಖ್ಯ.
೮. ಪ್ರಕೃತಿಯ ಜೊತೆ ಬೆರೆಯಲು ಬಿಡಿ: ಮಾನವ ಹಾಗೂ ಪ್ರಕೃತಿಯ ಸಂಬಂಧ ಅನ್ಯೋನ್ಯವಾದದ್ದು. ಮಗು ಪ್ರಕೃತಿಯಲ್ಲಿ ಸಹಜವಾಗಿ ಬೆರೆತು, ಗಿಡಮರ, ಪ್ರಾಣಿ ಪಕ್ಷಿಗಳ ಜೊತೆಗೆ ಸಹೃದಯಿಯಾಗಿ ಸಹಜವಾಗಿ ಬೆರೆತು ಬೆಳೆದರೆ, ಮಿದುಳಿನ ವಿಕಾಸ ಚೆನ್ನಾಗಿ ಆಗುತ್ತದೆ.
೯. ಅವರ ಆಯ್ಕೆಯನ್ನು ಗೌರವಿಸಿ: ಮಗುವಿಗೇನು ಅರ್ಥವಾಗುತ್ತದೆ ಎಂದು ಎಲ್ಲದರಲ್ಲೂ ನಿಮ್ಮ ಆಯ್ಕೆಯನ್ನೇ ಹೇರಬೇಡಿ. ತನ್ನ ಆಯ್ಕೆಯನ್ನು ಮಗು ಮಾಡಿಕೊಳ್ಳಲಿ. ಸಹಜವಾಗಿ ತನ್ನ ಆಸಕ್ತಿಯನ್ನು ಗುರುತಿಸಿಕೊಂಡು, ಆಲೋಚನೆಯನ್ನೂ ಮಾಡಲಿ.
೧೦. ಸ್ತನ್ಯಪಾನ: ಮಗುವಿಗೆ ಹಾಲುಣಿಸುವುದು ಪ್ರಕೃತಿ ಸಹಜ ಕ್ರಿಯೆ. ಅಮ್ಮನ ಹಾಲು ಮಗುವಿಗೆ ಅಮೃತ. ಕನಿಷ್ಟ ಮೊದಲ ಆರು ತಿಂಗಳು ಕಡ್ಡಾಯವಾಗಿ ಮಗುವಿಗೆ ಅಮ್ಮ ಹಾಳುಣಿಸಿದರೆ, ಮಗುವಿನ ಮಿದುಳಿನ ಬೆಳವಣಿಗೆ ಸಹಜವಾಗಿ ಸರಿಯಾಗಿ ಆಗುತ್ತದೆ. ಸುಮಾರು ಎರಡು ವರ್ಷಗಳವರೆಗೂ ಇತರ ಆಹಾರದ ಜೊತೆಗೆ ಅಮ್ಮನ ಹಾಲು ಮಗು ಕುಡಿಯುವುದು ಮಗುವಿನ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು.