ಕರಿಬೇವಿನ ಒಗ್ಗರಣೆ ಬಿದ್ದ ಚಿತ್ರಾನ್ನ, ಸಾಂಬಾರು, ಪಲ್ಯ ಅಥವಾ ಇನ್ಯಾವುದೇ ಅಡುಗೆಯಿರಲಿ, ಅದರ ರುಚಿ ಹೆಚ್ಚು. ಭಾರತೀಯ ಪಾಕ ಪದ್ಧತಿಯಲ್ಲಿ ಕರಿಬೇವನ್ನು (Curry leaves)ಯಥೇಚ್ಛವಾಗಿ ಬಳಸಲಾಗುತ್ತದೆ. ಅದರ ಪರಿಮಳವೇ ಆಹ್ಲಾದವೆನಿಸುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬ ಒಳ್ಳೆಯದು. ಇದು ಮಧುಮೇಹಿಗಳಿಗೆ ವರದಾನವಾದ ಎಲೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಉತ್ಕರ್ಷಣ ನಿರೋಧಕವಾಗಿದ್ದು, ಉರಿಯೂತ ತಡೆಯುತ್ತದೆ ಎಂದೆಲ್ಲ ನಮಗೆ ಗೊತ್ತು. ಅದರೊಂದಿಗೆ ಕರಿಬೇವು ಕೂದಲಿನ ಆರೋಗ್ಯ (Hair Care)ಕ್ಕೂ ಅತ್ಯುತ್ತಮ. ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲು ಉದುರುವುದನ್ನೂ ತಡೆಯುತ್ತದೆ. ತಲೆಕೂದಲು ಹೊಳೆಯಲು, ಮೃದುವಾಗಲೂ ಕೂಡ ಇದು ಸಹಾಯ ಮಾಡುತ್ತದೆ.
ಕೂದಲಿನ ಆರೋಗ್ಯಕ್ಕಾಗಿ ಏನೇನೆಲ್ಲ ಕಸರತ್ತು ಮಾಡುವವರು ಈ ಕರಿಬೇವಿನ ಪ್ರಯೋಗವನ್ನೂ ಮಾಡಿಬಿಡಿ. ಅಡುಗೆಗೆ ಕರಿಬೇವಿನ ಒಗ್ಗರಣೆ ಹಾಕಿದಂತೆ, ನಿಮ್ಮ ಕೂದಲಿಗೂ ಈ ಎಲೆಯ ‘ಒಗ್ಗರಣೆ’ ಹಾಕಿಬಿಡಿ..ಇಲ್ಲಿದೆ ನೋಡಿ, ಕರಿಬೇವನ್ನು ಹೇಗೇಗೆಲ್ಲ ಬಳಸಿ, ಕೂದಲನ್ನು ಆರೈಕೆ ಮಾಡಬಹುದು ಎಂಬುದಕ್ಕೆ ಒಂದಷ್ಟು ಟಿಪ್ಸ್..
ಕರಿಬೇವಿನ ಎಣ್ಣೆ ಹಾಕಿ
ಕರಿಬೇವಿನ ಎಲೆಯ ಎಣ್ಣೆಯನ್ನು ನೀವು ತಲೆಗೆ ಮಸಾಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ತುಂಬ ಕಷ್ಟಪಡಬೇಕಿಲ್ಲ. ಕರಿಬೇವು ತನ್ನಿ, ಕೊಬ್ಬರಿ ಎಣ್ಣೆ ಬಿಸಿ ಮಾಡಲು ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಎಲೆಗಳನ್ನು ಅದಕ್ಕೆ ಹಾಕಿ ಸರಿಯಾಗಿ ಕುದಿಸಿ. ಕರಿಬೇವಿನ ಎಲೆಗಳು ಕಪ್ಪಗಾಗಿ ಚಿರುಟುತ್ತ ಹೋಗುತ್ತವೆ. ಅದರ ಅಂಶವೆಲ್ಲ ಎಣ್ಣೆಯಲ್ಲಿ ಬಿಟ್ಟುಕೊಳ್ಳುತ್ತದೆ. ಆ ಎಣ್ಣೆಯನ್ನು ಸೋಸಿಕೊಳ್ಳಿ. ತಣ್ಣಗಾದ ಮೇಲೆ ನಿಮ್ಮ ಅಂಗೈಯಿಗೆ ತೆಗೆದುಕೊಂಡು ಕೂದಲು ಬುಡದಿಂದ, ಇಡೀ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಒಂದು ತಾಸು ಹಾಗೇ ಬಿಟ್ಟು ನಂತರ ಸ್ನಾನ ಮಾಡಿ.
ಕರಿಬೇವಿನ ಎಲೆಯ ಪೇಸ್ಟ್ನಿಂದ ಹೇರ್ಪ್ಯಾಕ್
ಕರಿಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ, ಅದನ್ನು ಕೂದಲಿಗೆ ಪ್ಯಾಕ್ ಮಾಡಿಕೊಂಡರೆ ಕೂದಲು ಸೊಂಪಾಗಿ ಬೆಳೆಯುವ ಜತೆ, ಹೊಳಪು ಬರುತ್ತದೆ. ತಾಜಾ ಎಲೆಗಳನ್ನು ಮೊಸರಿನೊಂದಿಗೆ ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಪ್ಯಾಕ್ ಮಾಡಿಕೊಂಡು, ಅರ್ಧಗಂಟೆ ಬಿಟ್ಟು ತೊಳೆಯಬಹುದು.
ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?
ಕರಿಬೇವು-ನೆಲ್ಲಿ ಎಣ್ಣೆ
ನೆಲ್ಲಿಕಾಯಿ ಕೂಡ ಕೂದಲ ಆರೈಕೆಗೆ ಅತ್ಯುತ್ತಮ ಔಷಧ. ಅಂಥ ನೆಲ್ಲಿಕಾಯಿ ಮತ್ತು ಕರಿಬೇವನ್ನು ಸೇರಿಸಿ ಎಣ್ಣೆ ಮಾಡಿಟ್ಟುಕೊಂಡು ನೀವು ಕೂದಲಿಗೆ ಮಸಾಜ್ ಮಾಡುತ್ತ ಬಂದರೆ ಖಂಡಿತ ಫಲಿತಾಂಶ ಪಡೆಯುತ್ತೀರಿ. ನಿಮಗೆ ಬೇಕಾದಷ್ಟು ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ಪೌಡರ್ ಮತ್ತು ಕರಿಬೇವಿನ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ಆರಿದ ಮೇಲೆ ಹಚ್ಚಿಕೊಳ್ಳಿ. ನೀವಿದನ್ನು ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲಿಗೆ ಹಚ್ಚಿಕೊಂಡು, ಮರುದಿನ ಸ್ನಾನ ಮಾಡಬೇಕು.
ಮೆಂತೆ-ಕರಿಬೇವಿನ ಪೇಸ್ಟ್ ಪ್ಯಾಕ್
ಮೆಂತೆ ಕೂಡ ಕೂದಲಿನ ಆರೋಗ್ಯಕ್ಕೆ ಉತ್ತಮ. ನೀವು ಕರಿಬೇವಿನ ಎಲೆಗಳು ಮತ್ತು ಮೆಂತೆಯನ್ನು ಸೇರಿಸಿ ಪೇಸ್ಟ್ ಮಾಡಿ, ಅದನ್ನು ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು. ಮೆಂತೆಯನ್ನು ರಾತ್ರಿಪೂರ್ತಿ ನೆನೆಸಿ. ಮರುದಿನ ಕರಿಬೇವಿನ ಎಲೆಯೊಂದಿಗೆ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ತಲೆ ಸ್ನಾನ ಮಾಡುವ 30 ನಿಮಿಷ ಮೊದಲು ಚೆನ್ನಾಗಿ ಪ್ಯಾಕ್ ಹಾಕಿಕೊಳ್ಳಿ.
(ನಾವಿಲ್ಲಿ ಕರಿಬೇವಿನಿಂದ ಆಗುವ ಸಾಮಾನ್ಯ ಉಪಯೋಗವನ್ನು ಹೇಳಿದ್ದೇವೆ ಅಷ್ಟೇ. ಕೂದಲಿಗೆ ಏನಾದರೂ ಸಮಸ್ಯೆಯಾಗಿದ್ದರೆ, ಆರೋಗ್ಯ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ, ವೈದ್ಯರ ಸಲಹೆ ಪಡೆಯಬೇಕು)