Site icon Vistara News

Hair Care: ಕೂದಲಿಗೆ ಕಂಡೀಷನರ್‌ ಹಚ್ಚುವಾಗ ನೀವು ಈ ತಪ್ಪುಗಳನ್ನು ಮಾಡ್ಬೇಡಿ!

hair care tips

ನಿಮ್ಮ ಕೂದಲು ಯಾವ ಬಗೆಯದ್ದೇ ಆಗಿರಲಿ ಕೂದಲನ್ನು ಕಂಡೀಷನ್‌ ಮಾಡಿಕೊಳ್ಳದಿದ್ದರೆ ಖಂಡಿತವಾಗಿಯೂ ಕೂದಲನ್ನು ನಯವಾಗಿ, ಸುಲಭವಾಗಿ ಬೇಕಾದ ಹಾಗೆ ಬಾಚಿಕೊಳ್ಳಲು ಕಷ್ಟವಾಗುತ್ತದೆ. ಕೂದಲನ್ನು ತಮಗೆ ಬೇಕಾದ ಹಾಗೆ ತೀಡಲು, ಬೇಕಾದ ಹೇರ್‌ಸ್ಟೈಲ್‌ಗೆ ಒಗ್ಗಿಸಿಕೊಳ್ಳಲು, ಕೂದಲು ನಯವಾಗಿ ರೇಶಿಮೆಯಂತೆ ಹೊಳೆಯಲು ಬಹುತೇಕರು ಕಂಡೀಷನರ್‌ ಬಳಸುವುದು ಸಾಮಾನ್ಯ. ಆದರೆ, ಈ ಕಂಡೀಷನರ್‌ ಬಳಸುವಾಗ ಬಹಳಷ್ಟು ಮಂದಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ತಪ್ಪು ಸಣ್ಣದಿರಲಿ ದೊಡ್ಡದಿರಲಿ, ತಪ್ಪಿನ ಪರಿಣಾಮ ಮಾತ್ರ ನಿಮ್ಮದೇ ಕೂದಲು ಮೇಲೆ, ತಲೆಕೂದಲ ಬುಡದ ಚರ್ಮದ ಮೇಲೆ ಆಗುತ್ತದೆ ಎಂಬ ಸತ್ಯವನ್ನೂ ನೀವು ಜೀರ್ಣಿಸಿಕೊಳ್ಳಲು ಸಿದ್ಧರಿರಬೇಕು. ಹಾಗಾದರೆ ಬನ್ನಿ ಕಂಡೀಷನರ್‌ ಹಚ್ಚಿಕೊಳ್ಳುವಾಗ ನೀವು ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ (Hair Care Tips).

1. ಎಲ್ಲ ಕೂದಲಿಗೂ ಒಂದೇ ಮಾದರಿಯ ಕಂಡೀಷನರ್‌ ಸೂಕ್ತವಾಗಿರುವುದಿಲ್ಲ. ಯಾವುದೋ ಒಂದು ಕಂಡೀಷನರ್‌ ಬಳಸಿದರಾಯಿತು ಎಂಬ ಪ್ರವೃತ್ತಿ ಬೇಡ. ನಿಮ್ಮ ಕೂದಲು ಎಂಥದ್ದು ಎಂಬ ಮಾಹಿತಿ ನಿಮಗೆ ತಿಳಿದಿರಲಿ. ನಿಮ್ಮ ಕೂದಲ ಪ್ರಕೃತಿ ಒಣವೋ, ಎಣ್ಣೆಯುಕ್ತವೋ ಅಥವಾ ತುಂಬಾ ಹಾರಾಡುವ ಅಲೆಅಲೆಯಾಗಿರುವ ಕೂದಲೋ ಹೀಗೆ ನಿಮ್ಮ ಕೂದಲ ಬಗ್ಗೆ ಅರಿಯಲು ಪ್ರಯತ್ನಿಸಿ. ಜೊತೆಗೆ ಅದಕ್ಕೆ ಸೂಕ್ತವಾದ ಕಂಡೀಷನರ್‌ ಆಯ್ಕೆ ಮಾಡಿ.

2. ಕಂಡೀಷನರ್‌ ಬಳಸುವಾಗ ಎಲ್ಲರೂ ಮಾಡುವ ತಪ್ಪು ಎಂದರೆ ಒಂದಿಷ್ಟು ಕೈಯಲ್ಲಿ ತೆಗೆದುಕೊಂಡು ಹಾಗೆಯೇ ಹಾಕಿ ಬಿಡುವುದು. ಕಂಡೀಷನರ್‌ ಹಾಕುವಾಗ ಕೂದಲ ಎಲ್ಲ ಭಾಗಗಳಿಗೂ ಸಮನಾಗಿ ಹಂಚಿಹೋಗುವಂತೆ ಹಚ್ಚಿಕೊಳ್ಳುವುದು ಒಳ್ಳೆಯದು. ಬಹಳಷ್ಟು ಮಂದಿ, ಕೈಯ ಬೆರಳಲ್ಲೇ ಹಚ್ಚಿಕೊಳ್ಳುವುದೂ ಕೂಡಾ ಸಾಮಾನ್ಯ. ಆದರೆ, ಗುಂಗುರು ಅಥವಾ ಅಲೆಅಲೆಯಾಗಿರುವ ಕೂದಲ ಮಂದಿಗೆ ಇದು ಕಷ್ಟವಾಗಬಹುದು. ಅದಕ್ಕಾಗಿ ಅಗಲ ಹಲ್ಲಿನ ಬಾಚಣಿಗೆಯ ಸಹಾಯದಿಂದ ಕೂದಲ ಎಲ್ಲ ಭಾಗಕ್ಕೂ ಕಂಡೀಷನರ್‌ ತಲುಪುವಂತೆ ಬಾಚಿಕೊಂಡು ಹದವಾಗಿ ಮಸಾಜ್‌ ಮಾಡಿಕೊಳ್ಳುವುದು ಉತ್ತಮ ವಿಧಾನ.

3. ಬಹಳಷ್ಟು ಮಂದಿ ಕಂಡೀಷನರ್‌ ಬಳಸುತ್ತಾರೇನೋ ನಿಜವೇ ಆದರೂ, ಬಳಸಿದ ಮೇಲೆ ಅಷ್ಟೇ ವೇಗವಾಗಿ ತೊಳೆದುಕೊಂಡು ಬಿಡುತ್ತಾರೆ. ಹೀಗೆ ಮಾಡುವುದರಿಂದ ಕಂಡೀಷನರ್‌ನ ನಿಜವಾದ ಉಪಯೋಗ, ಫಲ ನಿಮ್ಮ ಕೂದಲಿಗೆ ಸಿಗುವುದಿಲ್ಲ. ಹಾಗಾಗಿ ಕಂಡೀಷನರ್‌ ಹಚ್ಚಿಕೊಂಡರೆ ಸಾಲದು. ಅದು ಫಲ ಪಡೆಯಲು ಕನಿಷ್ಟ ಅದು ನಿಮ್ಮ ಕೂದಲ ಜೊತೆಗೆ ಇರಲು ಮೂರರಿಂದ ಐದು ನಿಮಿಷವಾದರೂ ಹಾಗೆಯೇ ಬಿಡಬೇಕು. ಆಮೇಲೆ ತೊಳೆದುಕೊಳ್ಳಬೇಕು.

ಇದನ್ನೂ ಓದಿ: Hair Care: ಕೂದಲನ್ನು ಸೊಂಪಾಗಿಸುವ ಕೆಲವು ಮಾರ್ಗಗಳಿವು

4. ಇನ್ನೂ ಕೆಲವರು ಕಂಡೀಷನ್‌ ಮಾಡಿಕೊಳ್ಳುವ ಭರದಲ್ಲಿ ಯದ್ವಾತದ್ವಾ ಕಂಡೀಷನರ್‌ ಬಳಕೆ ಮಾಡುವುದುಂಟು. ಕಂಡೀಷನರ್‌ ಕೂದಲಿಗೆ ಹೆಚ್ಚಾದರೆ ಕೂದಲು ಹಾಳಾಗುತ್ತದೆ. ಹಾಗಾಗಿ ಕಂಡೀಷನರ್‌ ಬಳಕೆ ಕೂದಲಿಗೆ ಅತಿಯಾಗದಂತೆ ನೋಡಿಕೊಳ್ಳುವುದೂ ಕೂಡಾ ಮುಖ್ಯವೇ. ಒಂದು ನಾಣ್ಯದ ಗಾತ್ಯದಷ್ಟು ಕಂಡೀಷನರ್‌ ಒಮ್ಮೆ ಬಳಸಬಹುದು. ಅದಕ್ಕಿಂತ ಹೆಚ್ಚಾದರೆ ಕೂದಲಿಗೆ ತೊಂದರೆಯಾಗುತ್ತದೆ ಎಂಬುದನ್ನು ನೆನಪಿಡಿ.

5. ಕಂಡೀಷನ್‌ ಮಾಡಿದ ಕೂದಲನ್ನು ಹಾಗೆಯೇ ಕೆಳಗೆ ಬಿಡುವುದರಿಂದ ಕಂಡೀಷನರ್‌ನ ಅಂಶ ಚರ್ಮದ ಮೇಲೆ ಹರಡಿಕೊಂಡು ಚರ್ಮದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ. ಕಂಡೀಷನರ್‌ ಹಚ್ಚಿಕೊಂಡ ಕೂದಲನ್ನು ಬಹಳ ಹೊತ್ತು ಕುತ್ತಿಗೆ, ಬೆನ್ನಿನ ಮೇಲೆ ಇಳಿಬಿಡಬೇಡಿ. ಕಂಡೀಷನರ್‌ ಹಚ್ಚಿಕೊಂಡು ಅದನ್ನು ಚರ್ಮಕ್ಕೆ ತಾಗದ ಹಾಗೆ ಎತ್ತಿ ಕ್ಲಿಪ್‌ ಹಾಕಿ. ಆಮೇಲೆ ಐದು ನಿಮಿಷದ ನಂತರ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.

ಇದನ್ನೂ ಓದಿ: Hair Care: ಬೊಕ್ಕತಲೆ, ಕೂದಲ ಸಮಸ್ಯೆ ಹೆಚ್ಚಾಗುತ್ತಿದ್ದರೆ ಈ ಆಹಾರಗಳಿಂದ ದೂರವಿರಿ!

Exit mobile version