Site icon Vistara News

Halloween week | ಇದು ʼದೆವ್ವಮಾನವʼರ ಹಬ್ಬ!

Halloween

ಅಕ್ಟೋಬರ್‌ ಬಂದರೆ ಸಾಕು, ಪಾಶ್ಚಿಮಾತ್ಯ ದೇಶಗಳ ರಸ್ತೆಗಳು ಹಾಗು ಗಲ್ಲಿಗಳು ಬೇರೆ ರೂಪವನ್ನೇ ಪಡೆದುಕೊಳ್ಳುತ್ತವೆ. ಎಲ್ಲಿ ಕಣ್ಣು ಹಾಯಿಸಿದರೂ ಜೇಡರ ಬಲೆ, ಝೋಂಬಿಗಳು ಹಾಗು ಭೂತ-ಪ್ರೇತಗಳೇ ಕಾಣಸಿಗುತ್ತವೆ. ಇದು ತಿಂಗಳ ಕೊನೆಯಲ್ಲಿ ಬರುವ “ಹ್ಯಾಲೋವೀನ್‌” ಹಬ್ಬದ ಸಿದ್ಧತೆ.

ಜಗತ್ತಿನಾದ್ಯಂತ ವ್ಯಾಪಕವಾಗಿ ಆಚರಿಸಲ್ಪಡುತ್ತಿರುವ ಹ್ಯಾಲೋವೀನ್‌ ಆಚರಣೆ ಮೊದಲು ಯೂರೋಪ್‌ನಲ್ಲಿ ಆರಂಭವಾಯಿತು. ಸೆಲ್ಟ್‌ ಜನರ ಸೋಯಿನ್‌ ಹಾಗು ಕ್ರಿಶ್ಚಿಯನ್ನರ ಆಲ್‌ ಸೇಂಟ್ಸ್‌ ದಿನಗಳು ಇದರ ಮೂಲ ಎಂದು ಹೇಳಲಾಗುತ್ತದೆ. ಈ ದಿನಗಳ ಹಿಂದಿನ ಸಂಜೆಯನ್ನು “ಆಲ್‌ ಹ್ಯಾಲೋ ಈವ್” ಎಂದು ಆಚರಿಸಲಾಗುತ್ತಿತ್ತು. ಸೆಲ್ಟ್‌ ಜನರು ಈ ದಿನದಂದು ಮನೆಗಳಿಂದ ದುಷ್ಟ ಶಕ್ತಿಗಳನ್ನು ಓಡಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಆ ದುಷ್ಟ ಶಕ್ತಿಗಳಿಂದ ಪಾರಾಗಲು ವಿವಿಧ ವೇಷ-ಭೂಷಣಗಳನ್ನು ಧರಿಸುತ್ತಿದ್ದರು. ಅಲ್ಲದೇ, ಯೂರೋಪ್‌ನ ಸುಗ್ಗಿಕಾಲ ಮತ್ತು ಬೇಸಿಗೆಯ ಅಂತ್ಯವನ್ನು ಈ ದಿನಗಳು ಸೂಚಿಸುತ್ತವೆ.

ಹ್ಯಾಲೋವೀನ್‌ಗೆ ಸಮನಾಗಿ ಮೆಕ್ಸಿಕೋದಲ್ಲಿ “Dia de los Muertos”‌ ಅಥವಾ “ಡೇ ಆಫ್‌ ಡೆಡ್”‌ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸ್ವರ್ಗ ಮತ್ತು ಭೂಮಿಯ ನಡುವೆ ಸೇತುವೆ ಮೂಡುತ್ತದೆ ಹಾಗು ಈ ಸೇತುವೆಯ ಮೂಲಕ ಪೂರ್ವಜರ ಆತ್ಮಗಳು ಭೂಮಿಗೆ ಬರುತ್ತವೆ ಎಂದು ನಂಬಲಾಗಿದೆ. ಹೀಗೆ ಬಂದ ಆತ್ಮಗಳು ತೃಪ್ತರಾಗಲಿ ಎಂದು ಮನೆಯ ಮುಂದೆ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಇಡಲಾಗುತ್ತದೆ.

ಈ ಎರಡು ಸಂಪ್ರದಾಯಗಳ ಸಮಾಗಮವೇ ಈಗಿನ ಅಮೇರಿಕನ್ ಹ್ಯಾಲೋವೀನ್‌ ಆಚರಣೆ. ಅಕ್ಟೋಬರ್‌ 31ರ ಸಂಜೆ ಆರಂಭವಾಗುವ ಈ ಹಬ್ಬಕ್ಕೆ ಒಂದು ತಿಂಗಳು ಮೊದಲಿನಿಂದಲೇ ಸಿದ್ಧತೆ ಮಾಡಲಾರಂಭಿಸುತ್ತಾರೆ. ಎಲ್ಲೆಡೆ ಕಾಣುವ ಚಿತ್ರ-ವಿಚಿತ್ರ ಅಲಂಕಾರಗಳು ಹಾಗು ಅಷ್ಟೇ ಚಿತ್ರ-ವಿಚಿತ್ರವಾಗಿ ಕಾಸ್ಟ್ಯೂಮ್‌ ಹಾಕಿರುವ ಜನರು ಈ ಹಬ್ಬದ ಆಕರ್ಷಣೆ.

ಜಾಕ್‌-ಒʼ-ಲ್ಯಾಂಟರ್ನ್‌
ದುಷ್ಟ ಶಕ್ತಿಗಳನ್ನು ಓಡಿಸಲು ಐರಿಷ್‌ ಜನರು ಕುಂಬಳಕಾಯಿಯನ್ನು ಒಳಗಿನಿಂದ ಕೊರೆದು ಭಯಾನಕವಾದ ಮುಖಗಳನ್ನು ಕೆತ್ತುತ್ತಿದ್ದರು. ಇದರೊಳಗೆ ದೀಪಗಳನ್ನು ಇಡಲಾಗುತ್ತಿತ್ತು. ಇದೇ ಸಂಪ್ರದಾಯ ಈಗಲೂ ಮುಂದುವರೆದು ಬಂದಿದೆ. ಆದರೆ ಇತ್ತೀಚೆಗೆ ಎಲೆಕ್ಟ್ರಿಕ್‌ ದೀಪಗಳನ್ನು ಬಳಸಲಾಗುತ್ತದೆ.

“ಟ್ರಿಕ್‌ ಆರ್‌ ಟ್ರೀಟ್”
ಮಕ್ಕಳಿಗಾಗಿ “ಟ್ರಿಕ್‌ ಆರ್‌ ಟ್ರೀಟ್‌” ಎಂದು ನಡೆಸಲಾಗುತ್ತದೆ. ವಿಭಿನ್ನ ವೇಷಗಳನ್ನು ಧರಿಸಿದ ಮಕ್ಕಳು ಹ್ಯಾಲೋವೀನ್‌ಗೆಂದು ಸಜ್ಜಾದ ಮನೆಗಳಿಗೆ ಹೋಗಿ ಚಾಕ್‌ಲೇಟ್‌ ಮತ್ತು ಕ್ಯಾಂಡಿಗಳನ್ನು ಕೇಳಿ ಪಡೆಯುತ್ತಾರೆ. ಇದನ್ನು ಟ್ರೀಟ್‌ ಎಂದು ಕರೆಯುತ್ತಾರೆ. ಟ್ರೀಟ್‌ ಕೊಡದ ಮನೆಗಳ ಮೇಲೆ ಏನಾದರೊಂದು ಪ್ರ್ಯಾಂಕ್‌ ಮಾಡಿ ಟ್ರಿಕ್‌ ಎನ್ನುತ್ತಾರೆ.

ಕಮರ್ಶಿಯಲ್‌ ಆದ ಹ್ಯಾಲೋವೀನ್
ಸುಗ್ಗಿ ಸಮಯದಲ್ಲಿ ಪೂರ್ವಜರನ್ನು ನೆನೆಯಲು ಆಚರಿಸತ್ತಿದ್ದ ಹ್ಯಾಲೋವೀನ್‌ ಹಬ್ಬ ಇತ್ತೀಚೆಗೆ ಕಮರ್ಶಿಯಲ್‌ ಆಗುತ್ತಿದೆ.‌ ಕ್ರಿಸ್‌ಮಸ್‌ ನಂತರ ಜನರು ಅತೀ ಹೆಚ್ಚು ಶಾಪಿಂಗ್‌ ಮಾಡುವುದೇ ಈ ಹಬ್ಬಕ್ಕೆ. ಕಾಸ್ಟ್ಯೂಮ್‌, ಡೆಕೋರೇಶನ್‌ ಎಂದು ಈ ಹಬ್ಬದಂದು ಅಮೇರಿಕದಲ್ಲಿ ವರ್ಷಕ್ಕೆ ಕೋಟಿಗಟ್ಟಲೆ ವ್ಯವಹಾರವಾಗುತ್ತದೆ.‌ ಅಲ್ಲದೇ ಜನರು “scary house”ಗಳಿಗೆ ಭೇಟಿ ಕೊಟ್ಟು ಹಣ ನೀಡಿ ಭಯ ಬೀಳುತ್ತಾರೆ.

ಇದನ್ನೂ ಓದಿ | ಮಕ್ಕಳ ಕಥೆ | ಬಡ ಸುಗುಣಿಯ ಮನೆಗೆ ಸಿರಿವಂತಿಕೆ ಬಂದದ್ದು ಹೇಗೆ?

Exit mobile version