ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಂಡ್‌ಲೂಮ್ ಸೀರೆಗಳು ವೃತ್ತಿಪರ ಮಹಿಳೆಯರನ್ನು ಸೆಳೆಯುತ್ತಿವೆ.
ನೋಡಲು ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುವ ಈ ಸೀರೆಗಳು ಇದೀಗ ರಾಜಕೀಯ ಕ್ಷೇತ್ರದ ಮಹಿಳೆಯರನ್ನು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ವೃತ್ತಿಪರ ಮಹಿಳೆಯರನ್ನು ಆಕರ್ಷಿಸಿದ್ದು, ವಾರ್ಡ್ರೋಬ್‌ನ ಸೀರೆಗಳ ಲಿಸ್ಟ್‌ಗೆ ಸೇರಿವೆ.
ಆಕರ್ಷಕ ಹ್ಯಾಂಡ್‌ಲೂಮ್ ಸೀರೆಗಳು
ಸಿಲ್ಕ್ ಇಲ್ಲವೇ ಕಾಟನ್‌ನಲ್ಲಿ ಸಿದ್ಧಪಡಿಸಲಾಗುವ ಹ್ಯಾಂಡ್‌ಲೂಮ್ ಸೀರೆಗಳು ನಮ್ಮ ರಾಷ್ಟ್ರದ ಪುರಾತನ ಸೀರೆ ಸಂಸ್ಕೃತಿಯಲ್ಲಿ ಸೇರಿವೆ. ಆಯಾ ರಾಜ್ಯಗಳಲ್ಲಿ ಹ್ಯಾಂಡ್‌ಲೂಮ್‌ನಲ್ಲಿ ತಯಾರಾಗುವ ಸೀರೆಗಳಿಗೂ ಒಂದೊಂದು ಕಥೆಯಿದೆ. ಸಂಸ್ಕೃತಿಯಿದೆ. ಬನಾರಸಿ ಸಿಲ್ಕ್, ಮೈಸೂರ್ ಸಿಲ್ಕ್, ಕಶೀದಾ, ಕಸೂತಿ, ಚಂದೇರಿ, ತಂತ್, ಕಾಂಚೀವರಂ ಸಿಲ್ಕ್ಸ್, ಬಾಟಿಕ್ ಪ್ರಿಂಟ್, ಟುಸ್ಸಾರ್ ಸಿಲ್ಕ್ಸ್, ಅಸ್ಸಾಮ್ ಮುಗಾ ಸಿಲ್ಕ್ಸ್, ಡಾಕೈ ಜಮ್ದಾನಿ, ಪೊಚಂಪಲ್ಲಿ, ಕಾಟನ್, ಲೆನಿನ್, ಜೂಟ್ ಸೇರಿದಂತೆ ಸಾಕಷ್ಟು ಬಗೆಯವು ಹ್ಯಾಂಡ್‌ಲೂಮ್ ಸೀರೆಗಳಲ್ಲಿ ಸೇರುತ್ತವೆ. ಆಯಾ ಕ್ಷೇತ್ರದ ಸಂಸ್ಕೃತಿಯನ್ನು ಬಿಂಬಿಸುವ ಇವು ಸ್ಥಳೀಯ ವಿನ್ಯಾಸವನ್ನು ಎತ್ತಿಹಿಡಿಯುತ್ತವೆ ಎನ್ನುತ್ತಾರೆ ಹ್ಯಾಂಡ್‌ಲೂಮ್ ಕೇಂದ್ರವೊಂದರ ಮಾರಾಟಗಾರರು.
ವೆರೈಟಿ ಹ್ಯಾಂಡ್‌ಲೂಮ್ ಸೀರೆ
ಹ್ಯಾಂಡ್‌ಲೂಮ್ ಸೀರೆ ಪ್ರೇಮಿ ಹಾಗೂ ಡಿಸೈನರ್ ರೇಣುಕಾ ಪ್ರಕಾಶ್ ಗೌಡ ಪ್ರಕಾರ, ಪಟ್ಟೆದ ಅಂಚು, ಗಜೇಂದ್ರಘಢ ಸೀರೆ, ಇಳ್ಕಲ್, ಮೊಳಕಾಲ್ಮೂರು, ಜಗತ್‌ಸಿಂಗಾಪುರ್ ಕಾಟನ್, ಹಬಾಸ್‌ಪುರಿ, ಸಾಂಬಾಲ್‌ಪುರಿ, ಇಕ್ಕಟ್, ಉಡುಪಿ ಕಾಟನ್, ಯಕ್ಷ ಸೀರೆ, ಚೆಟ್ಟಿನಾಡು, ಖಾನ, ಅದಮ್‌ಪಲ್ಲಿ, ಮಂಗಲಗಿರಿ, ಹುಬ್ಬಳ್ಳಿ ಸೀರೆಗಳು ಇದೀಗ ಹೆಚ್ಚು ಚಾಲ್ತಿಯಲ್ಲಿದ್ದು, ಇತ್ತೀಚೆಗೆ ಕಾರ್ಪೋರೇಟ್ ಕ್ಷೇತ್ರದ ಸ್ತ್ರೀಯರನ್ನು ಬರಸೆಳೆಯುತ್ತಿವೆ. ನಮ್ಮ ರಾಷ್ಟ್ರದಲ್ಲಿ ಹ್ಯಾಂಡ್‌ಲೂಮ್ ಸೀರೆಗಳಿಗೂ ಇತಿಹಾಸವಿದ್ದು, ಇವು ನಮ್ಮ ಸಂಸ್ಕೃತಿಯ ವಸ್ತ್ರವೈಭವವನ್ನು ಪ್ರತಿಬಿಂಬಿಸುತ್ತವೆ. ಇಂತಹ ಸೀರೆಗಳನ್ನು ಕೊಂಡು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎನ್ನುತ್ತಾರೆ.
ಪ್ರದರ್ಶನಗಳಲ್ಲಿ ವೆರೈಟಿ ಹ್ಯಾಂಡ್‌ಲೂಮ್ ಸೀರೆಗಳು
ನಿಮಗೆ ಸಾಕಷ್ಟು ವೆರೈಟಿ ಹಾಗೂ ಪ್ರಿಂಟ್ಸ್ ಇರುವಂತಹ ಹ್ಯಾಂಡ್‌ಲೂಮ್ ಸೀರೆಗಳು ಬೇಕಾದಲ್ಲಿ ಆಗಾಗ್ಗೆ ನಡೆಯುವ ಹ್ಯಾಂಡ್‌ಲೂಮ್ ಪ್ರದರ್ಶನಗಳಿಗೆ ಭೇಟಿ ನೀಡುವುದು ಉತ್ತಮ. ಯಾಕೆಂದರೆ, ಇಲ್ಲಿ ತರೇವಾರಿ ಸೀರೆಗಳು ಮಾತ್ರವಲ್ಲ, ರಾಷ್ಟ್ರಾದಾದ್ಯಂತ ಇರುವ ಹ್ಯಾಂಡ್‌ಲೂಮ್ ಸೀರೆ ಮಾರಾಟಗಾರರು ನೇರವಾಗಿ ಭಾಗವಹಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಜೊತೆಗೆ ಹೊಸ ವಿನ್ಯಾಸದ ಟ್ರೆಂಡಿ ಸೀರೆಗಳನ್ನು ನೇರ ತಯಾರಕರಿಂದಲೇ ಖರೀದಿಸಬಹುದು ಎನ್ನುತ್ತಾರೆ ಹ್ಯಾಂಡ್‌ಲೂಮ್ ಸೀರೆ ಮಾರಾಟ ಪ್ರದರ್ಶನದ ಆಯೋಜಕರು.
ಹ್ಯಾಂಡ್‌ಲೂಮ್ ಕೇಂದ್ರಗಳು
ಅಂದಹಾಗೆ, ಹರಿಯಾಣದ ಪಾಣಿಪತ್ ಅನ್ನು ಹ್ಯಾಂಡ್‌ಲೂಮ್ ಹಬ್ ಎನ್ನಲಾಗುತ್ತದೆ. ಪಶ್ಚಿಮ ಬಂಗಾಲ ಕೂಡ ಹ್ಯಾಂಡ್‌ಲೂಮ್ ಸೀರೆ ತಯಾರಿಕೆಯಲ್ಲಿ ಮುಂದಿದೆ. ಆಲ್ ಇಂಡಿಯಾ ಹ್ಯಾಂಡ್‌ಲೂಮ್ ಸೆನ್ಸಸ್ (೨೦೧೯-೨೦೨೦)ಪ್ರಕಾರ, ಸರಿ ಸುಮಾರು ೨೬,೭೩,೮೯೧ ಹ್ಯಾಂಡ್‌ಲೂಮ್ ನೇಯ್ಗೆಗಾರರಿದ್ದು, ೮, ೪೮,೬೨೧ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆನ್ನಲಾಗಿದೆ.
ಇನ್ನು ಗುಜರಾತ್‌ನ ಸೂರತ್ ಕೇವಲ ಡೈಮಂಡ್‌ಗಳಿಗೆ ಮಾತ್ರವಲ್ಲ, ಟೆಕ್ಸ್‌ಟೈಲ್ ಇಂಡಸ್ಟ್ರಿಗಳೊಂದಿಗೆ ಹ್ಯಾಂಡ್‌ಲೂಮ್ ಸೀರೆ ತಯಾರಿಕೆಗೂ ಖ್ಯಾತಿ ಗಳಿಸಿದೆ. ಕರ್ನಾಟಕದ ಇಳಕಲ್, ಮೊಳಕಾಲ್ಮೂರು ಹಾಗೂ ಉಡುಪಿ ಕಾಟನ್ ಸೇರಿದಂತೆ ಸಾಕಷ್ಟು ಹ್ಯಾಂಡ್‌ಲೂಮ್ ಸೀರೆಗಳು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿವೆ.
ಹ್ಯಾಂಡ್‌ಲೂಮ್ ಸೀರೆ ಖರೀದಿಸುವ ಮುನ್ನ :
- ನಿರ್ವಹಣೆ ಹೇಗೆ ಎಂಬುದನ್ನು ತಿಳಿದುಕೊಳ್ಳಿ.
- ಯಾವ ಬಗೆಯ ಸೀರೆ ಎಂಬುದು ನಿಮಗೆ ತಿಳಿದಿರಲಿ.
- ಆದಷ್ಟೂ ಹ್ಯಾಂಡ್‌ಲೂಮ್ ಪ್ರದರ್ಶನಗಳಲ್ಲಿ ಖರೀದಿಸಿ.
ಇದನ್ನೂ ಓದಿ| Saree draping | ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ